ಯಾವ ನಂಬಿಕೆಯ ಮೇಲೆ ನನ್ನ ಮಗಳನ್ನ ಶಾಲೆಗೆ ಕಳುಹಿಸಲಿ ಹೇಳಿ?

ಡಿಯರ್ ಪೇರೆಂಟ್ಸ್

ತುಂಬಾ ಆತಂಕದಿಂದ ಈ ಪತ್ರ ಬರೆಯುತ್ತಿದ್ದೇನೆ. ಶಾಲೆ ಶುರುವಾಗಬೇಕು ಅಂತ ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರವೂ ಅದೇ ದಾರಿಯಲ್ಲಿ ಚಿಂತೆ ಮಾಡ್ತಿದೆ ಅಂತ ಓದಿದೆ. ತಜ್ಞರಿಗೇನು ತಲೆ ಕೆಟ್ಟಿದೆಯಾ? ಕೊರೋನಾ ಹಬ್ಬುತ್ತಿರುವ ಪರಿ ನೋಡಿದ್ರೆ ಮಕ್ಕಳನ್ನು ಯಾರಾದರೂ ಶಾಲೆಗೆ ಕಳುಹಿಸಲು ಸಾಧ್ಯಾನಾ? ಯಾರ ಮೇಲೆ ನಂಬಿಕೆ ಇಟ್ಟು ಮಕ್ಕಳನ್ನು ಶಾಲೆಗೆ ಕಳಿಸೋದು? ಸರ್ಕಾರದ ಮೇಲಾ? ಶಾಲೆಗಳ ಆಡಳಿತ ಮಂಡಳಿ ಮೇಲಾ?

ನನಗೆ ಈ ಎರಡರ ಮೇಲೂ ನಂಬಿಕೆ ಇಲ್ಲ.

ಪ್ರಿಯರೆ, ನಿಮ್ಮೆಲ್ಲರ ಮನೆಗಳಲ್ಲಿ ಮಕ್ಕಳಿದ್ದ ಹಾಗೆ ನನ್ನ ಮನೆಯಲ್ಲೂ ಒಬ್ಬಳು ಪುಟ್ಟ ದೇವತೆ ಇದಾಳೆ. ನಾಲ್ಕನೇ ತರಗತಿಯಲ್ಲಿ ಓದುತಿದ್ದಾಳೆ. ಕೊರೋನಾ ಶುರುವಾದಾಗಿನಿಂದ  ಅವಳದ್ದು ಒಂದೇ ವರಾತ. ‘ಅಪ್ಪಾ ಶಾಲೆ ಯಾವಾಗ ಶುರುವಾಗುತ್ತೆ?’ ಅಂತ.  ನಾನು ಅವಳಿಗೆ very clear ಆಗಿ ಹೇಳಿದ್ದೇನೆ. ಮಗಳೇ, ಆನ್ ಲೈನ್ ಕ್ಲಾಸ್ ನಿಂದ ಏನು ಉಪಯೋಗ ಇದೆಯೋ ಇಲ್ಲವೋ ಗೊತ್ತಿಲ್ಲ. ಅಟೆಂಡ್ ಮಾಡು ಅಷ್ಟೆ. ಅಟ್ ಲೀಸ್ಟ್ ಅದು ನಿನ್ನ ಏಕತಾನತೆಯನ್ನ, ಬೇಸರವನ್ನ ನೀಗಿಸಿ ಸ್ವಲ್ಪ ಹೊತ್ತು ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತೆ.  ಆದ್ರೆ ಶಾಲೆಯನ್ನ ಸರ್ಕಾರ ರಿಓಪನ್ ಮಾಡಲು ಪರ್ಮಿಷನ್ ಕೊಟ್ಟರೂ ನೀನು ಮಾತ್ರ ಶಾಲೆಗೆ ಹೋಗುವುದು ಬೇಡ.

ಅರೆ…ಯಾವ ನಂಬಿಕೆಯ ಮೇಲೆ ನನ್ನ ಮಗಳನ್ನ ಶಾಲೆಗೆ ಕಳುಹಿಸಲಿ ಹೇಳಿ?

ನೀವು ಹೇಗೆ ಕಳುಹಿಸುತ್ತೀರಿ?

ನನಗೆ ಗೊತ್ತಿದೆ ನೀವೂ ಇದನ್ನೆ ಯೋಚನೆ ಮಾಡ್ತಿರುತ್ತೀರಿ ಅಂತ. ನಿಮ್ಮ ಧಾವಂತ ನನಗೆ ಅರ್ಥವಾಗುತ್ತೆ. ಭಯ ಅರ್ಥವಾಗುತ್ತೆ. ನನ್ನ ಕೆಲವು ಸ್ನೇಹಿತರ ಜೊತೆ ಈ ಬಗ್ಗೆ ಮಾತಾಡಿದಾಗ ‘ಅಯ್ಯೋ ಒಂದು ವರ್ಷ ಎಜುಕೇಷನ್ ಹಾಳಾಗಲ್ವ’ ಅಂತ ರಾಗ ಎಳೆದಿದ್ದರು. ಅವರಿಗೆ ನಾನು ಅತ್ಯಂತ ಖಾರವಾಗಿಯೇ ಉತ್ತರ ಕೊಟ್ಟಿದ್ದೇನೆ. ಒಂದು ವರ್ಷ ಶಾಲೆಗೆ ಹೋಗದಿದ್ರೆ ಪ್ರಾಣ ಏನೂ ಹೋಗೋದಿಲ್ವಲ್ಲ. ಆದ್ರೆ ಶಾಲೆಗೆ ಹೋದ್ರೆ ಮಕ್ಕಳ ಪ್ರಾಣ ಹೋಗುವ ಆತಂಕ ಇದೆ, ಹುಷಾರ್.

ನೀವು ಗಮನಿಸಿರುತ್ತೀರಿ ಅಂದುಕೊಂಡಿದ್ದೇನೆ. ಒಂದು ತರಗತಿಯಲ್ಲಿ ಮೂವತ್ತರಿಂದ ಮೂವತ್ತೈದು ಮಕ್ಕಳಿರುತ್ತವೆ. ಆ ವಿಷಯದಲ್ಲಿ ಯಾವ ಶಾಲೆಯೂ ಸರ್ಕಾರದ ರೂಲ್ಸನ್ನ ಫಾಲೋ ಮಾಡೋದಿಲ್ಲ. ಮಕ್ಕಳು ಒಂದಕ್ಕೊಂದು ಅಂಟಿಕೊಂಡೇ ಕೂತಿರುತ್ತವೆ. ಹಾಗೆ ಅಕ್ಕಪಕ್ಕ ಕೂರೋದು,ತಮಾಷೆ ಮಾಡೋದು, ಆಟ ಆಡೋದು ಅವಕ್ಕೆ ಖುಷಿಯೇನೋ ನಿಜ. ಆದ್ರೆ ಶಾಲೆಯನ್ನ ರೀಓಪನ್ ಮಾಡಿದ ಮೇಲೆ ಮಕ್ಕಳನ್ನು ಹಾಗೆ ಹತ್ತಿರ ಹತ್ತಿರ ಕೂರಲು ಬಿಡೋದಕ್ಕೆ ಆಗಲ್ಲ. ಒಂದು ಮಗುವಿಗೂ ಇನ್ನೊಂದು ಮಗುವಿಗೂ ಆರು ಅಡಿ ಅಂತರ ಇರಬೇಕಾಗುತ್ತೆ. ಅದನ್ನು ಹೇಗೆ ಪಾಲಿಸ್ತೀರಿ? ತಜ್ಞರು ಬ್ಯಾಚ್ ವೈಸ್ ಮಕ್ಕಳನ್ನ ಶಾಲೆಗೆ ಕಳಿಸಿ ಅಂತಾರೆ. ಬ್ಯಾಚ್ ವೈಸ್ ಮಾಡಿದ್ರೆ ಕೊರೋನಾ ಬರಲ್ವಾ ತಜ್ಞರೆ?

ಒಂದು ವಿಷಯ ನಿಮಗೆ ಗೊತ್ತಿರಲಿ. ಈ ಆರು ಅಡಿ ಡಿಸ್ಟೆನ್ಸ್ ಮೇಂಟೇನ್ ಮಾಡಬೇಕು ಅನ್ನೋ ರೂಲ್ಸ್ ಏನಿದೆ ಅದು ಕೂಡ ಸೈಂಟಿಫಿಕ್ ಆಗಿ ಸರಿಯಿಲ್ಲ. ಆರು ಅಡಿ ದೂರದಲ್ಲಿದ್ದರೂ ಕೊರೋನಾ ಸೋಂಕು ತಗಲುವ ಛಾನ್ಸಸ್ ಇದೆ ಅಂತ ಈಗಾಗಲೇ ಹಲವಾರು ಮೆಡಿಕಲ್ ಎಕ್ಸ್ ಪಟ್ಸ್ಟ್ ಗಳು ಎಚ್ಚರಿಕೆ ನೀಡಿದ್ದಾರೆ.

ಡಿಸ್ಟೆನ್ಸ್ ಮೇಂಟೇನ್ ಮಾಡಿದ್ರೂನೂ ಒಂದು ತರಗತಿಯಲ್ಲಿ ಹತ್ತರಿಂದ ಹದಿನೈದು ಮಕ್ಕಳು ಮಾತ್ರ ಕೂರಬಹುದು ಅಷ್ಟೆ. ಕೆಲವು ಶಾಲೆಗಳಲ್ಲಂತೂ ಅದೂ ಅಸಾಧ್ಯ. ಕಿಷ್ಕಿಂಧೆಯಂತಿವೆ. ಇದನ್ನೂ ಹೇಗೋ ಮಾಡ್ತಾರೆ ಅಂತಿಟ್ಟುಕೊಳ್ಳಿ. ಬೇರೆ ಮೂಲಗಳಿಂದ ಸೋಂಕು ಬರೋದಿಲ್ವಾ? ಗೊತ್ತಿರಲಿ ಇದು ಅತ್ಯಂತ ಯಾಮಾರಿಸುವ ಕಾಯಿಲೆ. ಮೋಸದ ಕಾಯಿಲೆ. ಯಾವುದೋ ಒಂದು ಮೂಲೆಯಿಂದ ಶತ್ರು ಬರುತ್ತಾನೆ ಅಂದ್ರೆ ಹೇಗೋ ತಡೆಗಟ್ಟಬಹುದು. ಕೊರೋನಾ ಮುಟ್ಟಿದರೂ ಬರುತ್ತೆ. ಮುಟ್ಟದಿದ್ದರೂ ಬರುತ್ತೆ.

ಯಾವುದೋ ಒಂದು ಮಗುವಿಗೆ ಜ್ವರ ಇದೆ. ಆ ಮಗುವಿನ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವವರು. ಔಷಧಿ ಕುಡಿಸಿ ಶಾಲೆಗೆ ತಂದು ಬಿಟ್ಟುಹೋಗ್ತಾರೆ. ಆ ಮಗುವಿಗೆ ಕೊವಿಡ್ ಸೋಂಕು ಇದ್ದಲ್ಲಿ ಅದು ಉಳಿದ ಎಲ್ಲಾ ಮಕ್ಕಳಿಗೂ ಹಬ್ಬೋದಿಲ್ವೆ? ನಾವು ಚೆಕ್ ಮಾಡ್ತೀವಿ, ಮಾಸ್ಕ್ ಕಂಪಲ್ಸರಿ ಮಾಡ್ತೀವಿ ಅಂತೆಲ್ಲಾ ಶಾಲಾ ಆಡಳಿತ ಮಂಡಳಿ ಹೇಳಬಹುದು. asymptomatic ಆಗಿದ್ರೆ ಏನು ಮಾಡ್ತೀರಿ? ಏನೇ ಡಿಸಿನ್ಫೆಕ್ಟ್ ಮಾಡ್ತೀವಿ, ಸ್ಯಾನಿಟೈಸ್ ಮಾಡ್ತೀವಿ, safety measures ತಗೊಳ್ತೀವಿ ಅಂದುಕೊಂಡರು ಶಾಲೆಗೆ ಬರುವ ಸಾವಿರಾರು ಮಕ್ಕಳ ಆರೋಗ್ಯದ ಬಗ್ಗೆ ಗಮನ ಇಡೋದು ಅಷ್ಟು ಸುಲಭದ ವಿಷಯವಲ್ಲ. ಒಂದೇ ಒಂದು ಮಗುವನ್ನ ಚೆಕ್ ಮಾಡದೆ ಬಿಟ್ಟರೂ ಒಬ್ಬರೇ ಒಬ್ಬರು ಟೀಚರ್ಸನ್ನ ಚೆಕ್ ಮಾಡದೆ ಬಿಟ್ಟರೂ ಒಬ್ಬ ಆಯಾ ಜ್ವರ ಬಂದಾಗಲೂ ಹೊಟ್ಟೆಪಾಡಿಗಾಗಿ ಮರೆಮಾಚಿ ಶಾಲೆಗೆ ಬಂದರೂ, ಒಬ್ಬ ಡ್ರೈವರ್ asymptomatic ಇದ್ದು ಬಸ್ ಓಡಿಸಿದರೂ ಕಥೆ ಮುಗೀತು. ಪರಿಣಾಮವನ್ನ ಇಡೀ ಶಾಲೆಯ ಮಕ್ಕಳು ಎದುರಿಸಬೇಕಾಗುತ್ತದೆ.

ಇನ್ನೊಂದು ವಿಷಯ ನಮ್ಮ ಶಾಲೆಗಳು ‘ಸಿಸಿಟಿವಿ’ಗೆ ಪ್ರಿಫರೆನ್ಸ್  ಕೊಟ್ಟಷ್ಟು, ಫೀಸ್ ಕಲೆಕ್ಟ್ ಮಾಡಲು ಪ್ರಿಫರೆನ್ಸ್ ಕೊಟ್ಟಷ್ಟು ಕ್ಲೀನ್ಲಿನೆಸ್ ಗೆ ಯಾವತ್ತೂ ಪ್ರಿಫರೆನ್ಸ್ ಕೊಟ್ಟಿಲ್ಲ. ಕೇಳಿ ನೋಡಿ, ಸಾವಿರಾರು ಮಕ್ಕಳು ಹೊಗೋ ಕಡೆ ಇನ್ನೇಗಿರುತ್ತೆ ಅನ್ನೋ ಉಡಾಫೆ ಉತ್ತರ ಮೇಲ್ವಿಚಾರಕರಿಂದ ಬರುತ್ತೆ.

ಇತ್ತೀಚೆಗೆ ನನ್ನ ಮಗಳ ಶಾಲೆಯಿಂದ ಫೋನ್ ಬಂದಿತ್ತು.

‘ಸರ್ ಸೆಕೆಂಡ್ ಇನ್ ಸ್ಟಾಲ್ಮೆಂಟ್ ಫೀಸ್ ಕಟ್ಟಿ’.

ನಾನು ಹೇಳಿದೆ.

‘ಸರ್ಕಾರ ಹೇಳಿರೋದು ಒಂದು ಇನ್ ಸ್ಟಾಲ್ಮೆಂಟ್ ಮಾತ್ರ ತಗೊಳಿ ಅಂತ ಅಲ್ವ. ನೀವ್ಯಾಕೆ ಸೆಕೆಂಡ್ ಇನ್ ಸ್ಟಾಲ್ಮೆಂಟ್ ನ ಈಗಲೇ ಕೇಳ್ತಿದ್ದೀರ?’

‘ಇದು ಮ್ಯಾನೇಜ್ಮೆಂಟ್ ಡಿಸಿಷನ್ ಸರ್’.

‘ಹಾಗಾದ್ರೆ ಸರ್ಕಾರದ ಆದೇಶಕ್ಕೆ ಕವಡೆ ಕಿಮ್ಮತ್ತಿಲ್ವ’.

ಆ ಕಡೆಯಿಂದ ಫೋನ್ ಕಟ್ಟಾಯಿತು.

ಸರ್ಕಾರ ಹೇಳಿದ ಆದೇಶವನ್ನೇ ಪಾಲಿಸದವರು ಶಾಲೆಯಲ್ಲಿ ಮಕ್ಕಳನ್ನು ಹೇಗೆ ಕೊರೋನಾ ಸೋಂಕಿನಿಂದ ಕಾಪಾಡುತ್ತಾರೆ ಅನ್ನೋದು ನನ್ನ ಬೇಸಿಕ್ ಕ್ವೆಶ್ಚನ್? ಸರ್ಕಾರ ವಿಧಿಸಿದ ಕಟ್ಟು ನಿಟ್ಟಿನ ಕ್ರಮಗಳನ್ನ ಶಾಲೆಗಳು ನಿಜವಾಗಿಯೂ ಪಾಲಿಸುತ್ತವೆಯೇ? ನಮ್ಮ ಆಡಳಿತ ಮಂಡಳಿ ಡಿಸಿಷನ್ ಇದು ನೀವ್ಯಾರು ಕೇಳೋದಕ್ಕೆ ಅಂದರೆ ಪೇರೆಂಟ್ಸ್ ಏನು ಮಾಡಬೇಕು?

ಶತಾಯಗತಾಯ ಶಾಲೆಗಳನ್ನ ಶುರುಮಾಡಬೇಕು ಅಂತ ಪ್ರೈವೆಟ್ ಶಾಲೆಗಳು ಸರ್ಕಾರದ ಮೇಲೆ ಒತ್ತಡ ಹೇರ್ತಿವೆ ನಿಜ. ಈ ಒತ್ತಾಯಕ್ಕೆ ಸರ್ಕಾರ ಏನಾದ್ರೂ ಮಣಿಯಿತೋ ನಿಜಕ್ಕೂ ಶಾಲೆಗಳು ಕೊರೋನಾ ಸೆಂಟರ್ ಗಳಾಗೋದ್ರಲ್ಲಿ ನೋ ಡೌಟ್.

ನನ್ನ ಮಗು ಆನ್ ಲೈನ್ ನಲ್ಲೇ ಕಲಿಯಲಿ. ಕಲಿಯದಿದ್ದರೂ ಓಕೆ. ಅದೂ ಅಲ್ಲದೆ ಒಂದು ವರ್ಷ ಓದದಿದ್ರೂ ಅದರಿಂದ ಏನೂ ನಷ್ಟ ಆಗಲ್ಲ.

ನನಗೆ ನನ್ನ ಮಗಳು ಮುಖ್ಯ.

ನಿಮ್ಮ ಮಗು ಜೋಪಾನ!

                                                                                 ರವಿ ಅಜ್ಜೀಪುರ

 

Please follow and like us: