ಪತ್ರಿಕೋದ್ಯಮದ ಪ್ರಯೋಗಕಾರರ ಪೈಕಿ ಇವರೂ ಒಬ್ಬರು

  •  ಮರೆಯಲಿ ಹ್ಯಾಂಗ:
  •  ಕನ್ನಡದ ಬಹುತೇಕ ಲೇಖಕರ ಹಾಗೆ ಅವರೂ ಬಡತನದ ಹಿನ್ನೆಲೆಯವರು. ಹೆಚ್ಚಿನ ಕಾಲ ಸಾಹಿತ್ಯದ ಗಂಧವೇ ಇಲ್ಲದ ಪರಿಸರದಲ್ಲಿ ಬೆಳೆದವರು. ಜೀವನೋಪಾಯಕ್ಕೆ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡವರು. ಇವುಗಳ ಮಧ್ಯೆಯೇ ಅಪಾರ ಅಧ್ಯಯನ, ತಿರುಗಾಟ, ಬರಹಗಳಿಗೆ ತೆರೆದುಕೊಂಡವರು.
  • ಅವರು ಪಾ ವೆಂ ಆಚಾರ್ಯ.
  • ಪಾಡಿಗಾರು ವೆಂಕಟರಮಣ ಆಚಾರ್ಯರು ಉಡುಪಿಯವರು. ಶಾಲೆಯ ಓದು ಮುಗಿಸಿದ ಮೇಲೆ ಜೀವನಕ್ಕಾಗಿ ಅಂಗಡಿಯ ಲೆಕ್ಕ ಬರೆಯುವ ಕೆಲಸ ಹಿಡಿದರು. ವ್ಯಾಪಾರ ಸಂಸ್ಥೆಯ ಪಾರುಪತ್ತೆದಾರರಾಗಿ, ಶಾಲೆಯ ಉಪಾಧ್ಯಾಯ ರಾಗಿಯೂ ಕೆಲಕಾಲ ದುಡಿದರು. ಅವೆಲ್ಲ ಅವತಾರದ ನಂತರ ಅವರು ಪ್ರವೇಶಿಸಿದ್ದು ಪತ್ರಿಕೋದ್ಯಮಕ್ಕೆ.
  • ಕರ್ಮವೀರ ಪತ್ರಿಕೆಯ ಉಪಸಂಪಾದಕರಾಗಿ, ಕಸ್ತೂರಿ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡ ಬಳಿಕ ಅವರಿಂದ ಆದ ಕನ್ನಡ ಕೆಲಸ ಅಗಾಧವಾದದ್ದು. ಆ ಎರಡು ಪತ್ರಿಕೆಗಳಲ್ಲಿನ ಅವರ ನೇತೃತ್ವ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕನ್ನು ಕಲ್ಪಿಸುತ್ತಾ ಹೋಯಿತು. ಇಂಗ್ಲಿಷಿನ ಹಲವು ವಿಶಿಷ್ಟ ಮಾದರಿಗಳು ಅವರನ್ನು ಪ್ರಭಾವಿಸಿದ್ದವು. ಅವುಗಳನ್ನು ನಮ್ಮಲ್ಲೂ ತರುವ ಸಾಹಸಕ್ಕೆ, ಪ್ರಯೋಗಕ್ಕೆ ಕೈಹಾಕಿ ಆಚಾರ್ಯರು ಯಶಸ್ವಿಯಾದರು. ಕಸ್ತೂರಿ ಪತ್ರಿಕೆ ಕನ್ನಡದ ರೀಡರ್ಸ್ ಡೈಜೆಸ್ಟ್ ಅನ್ನುವ ಮಟ್ಟಿಗೆ ತನ್ನ ವೈವಿಧ್ಯ, ವ್ಯಾಪ್ತಿಗಳನ್ನು ವಿಸ್ತರಿಸಿಕೊಂಡಿತ್ತು.
  • ಕಸ್ತೂರಿ ಪತ್ರಿಕೆಯಲ್ಲಿ ಲಾಂಗೂಲಾಚಾರ್ಯ ಅನ್ನುವ ಹೆಸರಲ್ಲಿ ಪ್ರಕಟವಾಗುತ್ತಿದ್ದ ಅವರ ಹಾಸ್ಯಲೇಖನಗಳು ಆ ಕಾಲದ ಕಲ್ಚರ್ಡ್ ಹ್ಯೂಮರ್‌ಗಳಲ್ಲಿ ಒಂದು. ಆಚಾರ್ಯಾರ ಹಾಸ್ಯ ಬರಹಗಳೇ ಸುಮಾರು ಸಾವಿರ ಸಂಖ್ಯೆಯಲ್ಲಿವೆ. ಇನ್ನೊಂದು ಪ್ರತೀತಿಯ ಪ್ರಕಾರ, ಕಸ್ತೂರಿ ಪತ್ರಿಕೆಯ ಬಹುತೇಕ ಪುಟಗಳಲ್ಲಿ ಪ್ರಕಟವಾಗುತ್ತಿದ್ದದ್ದು ಆಚಾರ್ಯರ ಬರಹಗಳೇ : ಬೇರೆ ಬೇರೆ ಹೆಸರುಗಳಲ್ಲಿ. ಆ ಕಾರಣಕ್ಕೆ ಅವರು ಹತ್ತಾರು ಗುಪ್ತನಾಮಗಳಲ್ಲಿ ಬರೆಯುತ್ತಿದ್ದರು ಎಂಬ ಮಾತೂ ಇದೆ.
  • ‘ಪದಾರ್ಥ ಚಿಂತಾಮಣಿ’ ಅವರ ಜೀವಮಾನದ ದೊಡ್ಡ ಅವಧಿಯನ್ನು ಬಯಸಿದ ಗ್ರಂಥ. ಪದಗಳ ಮೂಲವನ್ನು ವಿಶ್ಲೇಷಿಸಿ, ಅವುಗಳ ಹಿನ್ನಲೆಯನ್ನು ವಿಚಾರಿಸಿ, ಅವುಗಳ ಅರ್ಥವನ್ನು ವಿವರಿಸುವ ಶಬ್ದಕೋಶ ಅದು. ಯಾವುದೇ ಭಾಷೆಯಲ್ಲಿ ಆ ಥರದ ಗ್ರಂಥ ಪ್ರಕಟವಾದರೆ, ಅದು ಭಾಷೆಯ ಭಾಗ್ಯ ಅನ್ನುವುದು ಭಾಷಾತಜ್ಞರ ಅಭಿಪ್ರಾಯ.
  • ಇಂತಿಪ್ಪ ಪಾ ವೆಂ ಆಚಾರ್ಯರಿಗೆ ಭಾರತೀಯ ಪತ್ರಿಕೋದ್ಯಮದ ಮಹತ್ವದ ಪ್ರಶಸ್ತಿಯಾದ ಗೊಯೆಂಕಾ ಪುರಸ್ಕಾರ ಲಭ್ಯವಾಯಿತು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಜ್ರಮಹೋತ್ಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳಿಗೂ ಅವರು ಪಾತ್ರರಾದರು.
  • ಅವರಾಗ ಹಾಗಿದ್ದರು, ನಾವೀಗ ಹೀಗಿದ್ದೇವೆ.
  • ಸೂರಜ್ ನಾರಾಯಣ

Please follow and like us: