ನಮ್ಮ ಬದುಕನ್ನ ಸಹ್ಯವನ್ನಾಗಿಸಿದವರನ್ನೆಲ್ಲಾ ನಾವು ಸ್ಮರಿಸಿಕೊಳ್ಳದಿದ್ರೆ ಹೇಗೆ!

ಸಂಜೆ ಕತ್ತಲಾಗ್ತಿದ್ದಹಾಗೆ ಫಟ್ ಅಂತ ಸ್ವಿಚ್ ಆನ್ ಮಾಡ್ತೀವಿ. ಬಗ್ಗನೆ ಬಲ್ಬ್ ಹೊತ್ತಿಕೊಳ್ಳುತ್ತೆ. ಕತ್ತಲು ದೂರಾಗಿ ಇಡೀ ಮನೆ ಬೆಳಗುತ್ತದೆ. ಥಾಮಸ್ ಎಡಿಸನ್ ನೆನಪಾಗ್ತಾನಾ? ಫೋನ್ ಬಂದಕೂಡಲೇ ಅಮ್ಮನೋ ಅಪ್ಪನೋ ಮಾಡಿದ್ದಾರೆ ಅಂತ ಖುಷಿಯಿಂದ ರಿಸೀವ್ ಮಾಡ್ತೀವಿ. ಎಷ್ಟೇ ದೂರದಲ್ಲಿದ್ರೂ ಹತ್ತಿರದಲ್ಲೇ ಇದ್ದಾರೇನೋ ಅನ್ನೋ ಭಾವ. ಅಕ್ಕರೆ. ಪ್ರೀತಿ ವಾತ್ಸಲ್ಯ ಎಲ್ಲಾ ಎಲ್ಲೆಲ್ಲಿಂದಲೋ ನಮ್ಮ ಹೃದಯಕ್ಕೆ ಸಿಂಪಲ್ ಆಗಿ ಹರಿದು ಬರುತ್ತೆ. ಅಲೆಕ್ಸಾಂಡರ್ ಗ್ರಹಾಂ ಬೆಲ್ ನೆನಪಾಗ್ತಾನಾ? ರೇಡಿಯೋ ಹಾಕೊಂಡು ಗಂಟೆಗಟ್ಟಲೆ ಕಿವಿಗೆ ಸುಖ ನೀಡ್ತೀವಿ. ಮಾರ್ಕೊನಿ ನೆನಪಾಗ್ತಾನಾ? ಸೈಕಲ್ ಮೇಲೆ ಕುಳಿತಾಗ ಯಾವತ್ತಾದ್ರೂ ಮಾಡರ್ನ್ ಬೈಸಿಕಲ್ ಜನಕ  ಜಾನ್ ಕೆಂಪ್ ಸ್ಟೇರ್ಲಿ ನೆನಪಾಗಿದ್ದಿದೆಯಾ? ಪೆನ್ಸಿಲಿನ್  ಕಂಡುಹಿಡಿದು ಜಗತ್ತಿನ ಕೋಟಿ ಕೋಟಿ ಜನರ ಜೀವ ಉಳಿಸಿದ ಅಲೆಕ್ಸಾಂಡರ್ ಫ್ಲೆಮಿಂಗ್ ನ ಯಾರಾದ್ರೂ ನೆನಪು ಮಾಡಿಕೊಳ್ತೀವಾ? ಅಷ್ಟೇ ಯಾಕೆ ದಿನ ಉಸಿರಿಗಿಂತ ಹೆಚ್ಚು ಹತ್ತಿರವಾಗಿರುವ ಮೊಬೈಲ್ ಫೋನ್ ಕಂಡು ಹಿಡಿದ ಮಾರ್ಟಿನ್ ಕೂಪರ್ ನ ಒಂದೇ ಒಂದು ಸಲ ನೆನಪಿಸಿಕೊಂಡಿದ್ದೀವಾ? ಇಪ್ಪತ್ತನಾಲ್ಕು ಗಂಟೆಯೂ ಕಣ್ಣು ಕೀಲಿಸಿಕೊಂಡು ನೋಡುವ ಟೀವಿಯನ್ನ ಕಂಡುಹಿಡಿದ ಫಿಲೊ ಟೇಲರ್ ಫ್ರಾನ್ಸ್ ವರ್ತ್ ಹೆಸರಾದ್ರೂ ಯಾರಿಗೆ ಗೊತ್ತು?

ನಾವು ಅವರನ್ನೆಲ್ಲಾ ಸ್ಮರಿಸಿಕೊಳ್ಳುವುದೇ ಇಲ್ಲ.

ಅಷ್ಟೆಲ್ಲಾ ದೂರ ಬೇಡ. ಕೊವಿಡ್-19 ಬಂದು ವಕ್ಕರಿಸಿದ ಮೇಲೆ ಜಗತ್ತಿನ ಎಲ್ಲರ ಮುಖದ ಮೇಲೆ ಇರೋ ಏಕೈಕ ವಸ್ತುವೆಂದರೆ N95 ಮಾಸ್ಕ್. ಅದನ್ನ ಕಂಡುಹಿಡಿದ ಪುಣ್ಯಾತ್ಮ ಯಾರು ಅಂತ ಯಾವತ್ತಾದ್ರೂ ಗೂಗಲ್ ಮಾಡಿದ್ದೀರಾ? ತಿಳಿದುಕೊಳ್ಳಲು ಟ್ರೈ ಮಾಡಿದ್ದೀರಾ?

ನೆವರ್.

ನೆನಪಿರಲಿ ಎನ್ 95 ಮಾಸ್ಕ್ ಕಂಡುಹಿಡಿದಾತನ ಹೆಸರು ಪೀಟರ್ ತ್ಸಾಯ್.

ಪೀಟರ್ ತ್ಸಾಯ್ ಮೂಲ ತೈವಾನ್.  ಯೂನಿವರ್ಸಿಟಿ ಆಫ್ ಟೆನ್ನೆಸ್ಸೀಯಲ್ಲಿ ಪ್ರೊಫೆಸರ್ ಆಗಿದ್ದವರು. ಮೆಕ್ಯಾನಿಕಲ್ ಇಂಜಿನಿಯರ್ ಆಗಿರೋ ಪೀಟರ್ ಹಲವು ಸಂಶೋಧನೆಗಳ ಜನಕ. 1995ರಲ್ಲೇ N95 ಮಾಸ್ಕ್ ಕಂಡುಹಿಡಿದು ಅದನ್ನ ಪೇಟೆಂಟ್ ಮಾಡಿಸಿಕೊಂಡಿದ್ದರು. ಬೇಸಿಕಲಿ N95 ಮಾಸ್ಕ್ ಕೈಗಾರಿಕೆಗಳಿಗೋಸ್ಕರ ತಯಾರಾದ ಮಾಸ್ಕ್.

ಕೊವಿಡ್ ಶುರುವಾಗೋ ಅಷ್ಟರಲ್ಲಿ ಪೀಟರ್ ರಿಟೈರ್ ಆಗಿದ್ದರು. ಹಾಗಿದ್ರೂ ಜನ ಫೋನ್ ಮಾಡಿ ನಿಮ್ಮ N95 ಮಾಸ್ಕನ್ನ ಕೊವಿಡ್ ವೈರಸ್ ತಡೆಗಟ್ಟುವಂತೆ ರೂಪಿಸಿ. ಮರುಬಳಕೆ ಮಾಡುವಂತೆ ಮಾಡಿ ಅಂತ ರಿಕ್ವೆಸ್ಟ್ ಮಾಡಿಕೊಂಡರಂತೆ. ಜನ ಅಷ್ಟೆಲ್ಲಾ ಕೇಳಿಕೊಳ್ಳುವಾಗ 68 ವರ್ಷದ  ಪ್ರೊಫೆಸರ್ ಗೆ ನಿದ್ರೆ ಹೇಗೆ ಬರಬೇಕು. ಬರೋಬ್ಬರಿ ಎರಡು ತಿಂಗಳು ನಿದ್ರೆ ಕೂಡ ಸರಿಯಾಗಿ ಮಾಡದೆ ಹಗಲು ರಾತ್ರಿ ಸಂಶೋಧನೆ ಮಾಡಿ ಬಳಸಿ ಬಿಸಾಡುವಂತೆ ಇದ್ದ N95 ಮಾಸ್ಕ್ ನ ಮರುಬಳಕೆ ಆಗುವಂತೆ ರೂಪಿಸಿದ್ರು. ಕೊವಿಡ್ ವೈರಸ್ ಬ್ಲಾಕಿಂಗ್ ಟೆಕ್ನಾಲಜಿಯನ್ನ ಮಾಸ್ಕ್ ನಲ್ಲಿ ಅಳವಡಿಸಿ ಹೆಚ್ಚು ಸ್ಟ್ರಾಂಗ್ ಮಾಡಿದ್ರು. ಹಗುರವಾಗಿರುವಂತೆ ಮಾಡಿದ್ರು. ಉಸಿರಾಟ ಸರಾಗವಾಗಿ ಆಗುವಂತೆ ಮಾಡಿದ್ರು.

ಇಷ್ಟಕ್ಕೂ ಆ ಮಾಸ್ಕ್ ಗೆ N95 ಅಂತ ಯಾಕೆ ಹೆಸರಿಟ್ಟರು ಗೊತ್ತಾ?

‘N’ ಅಂದ್ರೆ non-resistance to oil ಅಂತ. 95 ಅಂದ್ರೆ 95 ಪರ್ಸೆಂಟ್  airborne particles ನ ಫಿಲ್ಟರ್ ಮಾಡುತ್ತೆ ಅಂತ ಅರ್ಥ.

ಈಗ ಬಿಡಿ ಮಾಸ್ಕ್ ಗಳಲ್ಲೇ N95 ಮಾಸ್ಕ್ ಕಿಂಗ್ ಇದ್ದಹಾಗೆ. ‘ಮಾಸ್ಕ್ಗಳ ರಾಜ’ ಅನ್ನಬಹುದೇನೋ! ಕೊವಿಡ್ ಹಾವಳಿ ಹೆಚ್ಚಿದ ಮೇಲೆ ಎಂಥೆಂಥದೋ ಮಾಸ್ಕ್ ಗಳು ಮಾರ್ಕೆಟ್ ನಲ್ಲಿ ಬಂದರೂ N95ಗೆ ಹೆಚ್ಚಿನ ಡಿಮ್ಯಾಂಡ್. ಜಗತ್ತಿನ ಆರೋಗ್ಯ ಸೇವಾ ಕಾರ್ಯಕರ್ತರು N95 ಮಾಸ್ಕನ್ನೆ ಹೆಚ್ಚು ಬಳಸುತ್ತಾರೆ.

ಈಗ ಹೇಳಿ ನಮ್ಮ ಬದುಕನ್ನ ಸಹ್ಯವನ್ನಾಗಿಸಿದ ಇಂಥವರನ್ನೆಲ್ಲಾ ನಾವು ಸ್ಮರಿಸಿಕೊಳ್ಳಬೇಕು ತಾನೆ!

ಸ್ಮರಿಸಿಕೊಳ್ಳಲ್ಲ ಅನ್ನುವುದೇ ದೊಡ್ಡ ಬೇಸರ.

                                                                     ರವಿ ಅಜ್ಜೀಪುರ

 

Please follow and like us: