ವಿಮಾನದಲ್ಲಿ ಕುಳಿತಿದ್ದ ಆತ ಅಮಿತಾಬ್‌ನನ್ನು ಗುರುತಿಸಲೇ ಇಲ್ಲ: ಆದರೆ…..

ಖಾಸ್‌ಬಾತ್:

ವಿಮಾನದಲ್ಲಿ ಕುಳಿತಿದ್ದ ಆತ ಅಮಿತಾಬ್‌ನನ್ನು ಗುರುತಿಸಲೇ ಇಲ್ಲ: ಆದರೆ…..

 

ಇವತ್ತು ಅದೆಲ್ಲ ಯಾಕೆ ನೆನಪಾಗುತ್ತಿದೆಯೋ ಗೊತ್ತಿಲ್ಲ.

ಅವೆಲ್ಲ ನೆನಪುಗಳನ್ನು ಪಕ್ಕಕ್ಕೆ ಸರಿಸಿ ಮತ್ತೊಂದೇನನ್ನೋ ಹೇಳ್ತೀನಿ ಇರಿ. ಇತ್ತೀಚೆಗೆ ನಾನು ಇದನ್ನು ಎಲ್ಲೋ ಓದಿದೆ. ಈಗೇನು ಏನನ್ನು ಬೇಕಾದರೂ ಮೊಬೈಲ್‌ನಲ್ಲಿ ಓದಬಹುದು. ನನ್ನ ಅತ್ಯಂತ ಪ್ರೀತಿಯ ಓದುಗರೊಬ್ಬರು ನನಗೆ ಮೆಸೇಜ್ ಕಳಿಸಿದ್ದರು. ‘‘ರವೀ, ಇಂಥಾ ಫೇಸ್‌ಬುಕ್‌ನ ಯುಗದಲ್ಲೂ ನನ್ನ ಫೇಸ್‌ನ ನಿನ್ನ ಬುಕ್‌ನೆಡೆಗೆ ತಿರುಗುವಂತೆ ಮಾಡಿಟ್ಟುಕೊಂಡಿದ್ದೀಯಲ್ಲ. ನೀನು ಜಾಣ ಕಣೋ. ಕೇವಲ ಎಂಬತ್ತೊಂಬತ್ತು ಪುಸ್ತಕ ಬರೆದಿದ್ದೇನೆ ಅಂತ ಅಹಂಕಾರದಿಂದ ಬೀಗಬೇಡ. ನಾನು ಕೂಡ ನಿನ್ನ ಎಂಬತ್ತೊಂಬತ್ತು ಪುಸ್ತಕಗಳನ್ನೂ ಓದಿದ್ದೇನೆ. ಎಷ್ಟು ಸಲ ಓದಿದ್ದೇನೆ ಆ ಲೆಕ್ಕ ನನಗೂ ಮರೆತು ಹೋಗಿದೆ.” ಇಂತಹುದೊಂದು ಸಂದೇಶ ಓದಿದಾಗ ಇತ್ತೀಚೆಗೆ ನಾನು ಓದಿದ ಆ ಘಟನೆ ನೆನಪಾಯಿತು. ಅದೊಂದು ವಿಮಾನ. ವಿಮಾನದಲ್ಲಿ ನಿಮಗೇ ಗೊತ್ತಿರುವಂತೆ ನನ್ನಂತಹ, ನಿಮ್ಮಂತಹ ಸಾಮಾನ್ಯ ಮಂದಿ ಎಕಾನಮಿ ಕ್ಲಾಸ್‌ನಲ್ಲಿ ಕೂತು ಪ್ರಯಾಣಿಸುತ್ತೇವೆ. ಆದರೆ ತುಂಬ ಶ್ರೀಮಂತರು? ತುಂಬ ಪ್ರಖ್ಯಾತರು? ಅವರಿಗೆ ದುಪ್ಪಟ್ಟು ಬೆಲೆಯ ಬ್ಯುಸಿನೆಸ್ ಕ್ಲಾಸ್ ಇರುತ್ತದೆ. ಆ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಇರುವುದು ಕೆಲವೇ ಸೀಟು. ಅದರೊಳಗೆ ಕಾಲಿಟ್ಟ ತಕ್ಷಣ ನಿಮ್ಮ ಕೋಟು ತೆಗೆದು ಹ್ಯಾಂಗರಿಗೆ ಹಾಕಲಿಕ್ಕೆ ಒಬ್ಬ ಪ್ರತ್ಯೇಕ ಗಗನಸಖಿ ಇರುತ್ತಾಳೆ. ಅವಳು ನೀವು ಕೇಳದೇನೆ ಕಾಫಿ ಕೊಡುತ್ತಾಳೆ, ತಿಂಡಿ ಕೊಡುತ್ತಾಳೆ, ಒಂಚೂರು ವೈನ್ ಕೊಡುತ್ತಾಳೆ. ಶ್ರೀಮಂತರೆಂದರೇನು ಸುಮ್ಮನೇನಾ? ಅನೇಕ ವರ್ಷಗಳ ಹಿಂದೆ ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಅಂತಹುದೊಂದು ವಿಮಾನವನ್ನು ಹತ್ತಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಳಿತದ್ದು ಜಗದ್ವಿಖ್ಯಾತ ನಟ ಅಮಿತಾಬ್ ಬಚ್ಚನ್. ಅವನ ಪಕ್ಕದಲ್ಲಿ ಅರ್ಧ ತೋಳಿನ ಸಾಮಾನ್ಯ ಅಂಗಿ, ಅಷ್ಟೇ ಸಾಮಾನ್ಯವಾದುದೊಂದು ಪ್ಯಾಂಟ್ ಧರಿಸಿ ಒಬ್ಬ ಹಿರಿಯ ಕುಳಿತಿದ್ದ. ಆತ ತನ್ನ ಪಾಡಿಗೆ ತಾನು ದಿನಪತ್ರಿಕೆ ಓದುತ್ತಾ ಕುಳಿತಿದ್ದ. ಅಮಿತಾಬ್‌ಗೆ ಆಶ್ಚರ್ಯ. ನನ್ನಂತಹ ನಾನು ಪಕ್ಕಕ್ಕೆ ಬಂದು ಕುಳಿತರೂ ಗ್ರೀಟ್ ಮಾಡುವುದು ಹಾಗಿರಲಿ, ಈತ ಮಾತನಾಡಿಸುತ್ತಲೂ ಇಲ್ಲವಲ್ಲ ಅಂದುಕೊಂಡ. ಅಷ್ಟು ಹೆಸರಾಂತ ನಟನಿಗೆ ಕೊಂಚ ಮಟ್ಟಿಗೆ ಅಸಮಾಧಾನ ಉಂಟಾಗಿದ್ದರೂ ಉಂಟಾಗಿತ್ತು. It is natural. ಅಷ್ಟರಲ್ಲಿ ಗಗನಸಖಿ ಇಬ್ಬರಿಗೂ ಕಾಫಿ ಕೊಟ್ಟಳು. ಕಾಫಿ ಕಪ್ ಕೈಗೆತ್ತಿಕೊಂಡ ಸೀಟಿನಾತ ತುಂಬ ಕ್ಯಾಷುಯಲ್ ಆಗಿ ಅಮಿತಾಬ್‌ನತ್ತ ನೋಡಿ ಮುಗುಳ್ನಗೆ ಬೀರಿದ.

‘‘ನೀವು ಸಿನೆಮಾ ನೋಡುವುದಿಲ್ಲವೇ?” ಕೇಳಿದ ಅಮಿತಾಬ್. ಪಕ್ಕದ ಸೀಟಿನಾತ

‘‘ತುಂಬ ವರ್ಷಗಳ ಹಿಂದೆ ಒಂದ್ಯಾವುದೋ ಸಿನೆಮಾ ನೋಡಿದ್ದೆ. ಇತ್ತೀಚೆಗಂತೂ ನಾನು ಸಿನೆಮಾ ನೋಡಿಯೇ ಇಲ್ಲ” ಅಂದ.

‘‘ಹಾಗಾ ಸರಿ. ನಾನು ಚಿತ್ರಗಳಲ್ಲಿ ನಟಿಸುತ್ತೇನೆ. ನನ್ನ ಹೆಸರು ಅಮಿತಾಬ್ ಬಚ್ಚನ್” ಅಂದ. ಪಕ್ಕದ ಸೀಟಿನಾತ ‘‘ಹೌದ, ಬಹಳ ಸಂತೋಷ” ಅಂದವನು ಕಪ್‌ನಲ್ಲಿದ್ದ ಕಾಫಿಯಷ್ಟು ಕುಡಿದು ತನ್ನ ಪಾಡಿಗೆ ತಾನು ದಿನಪತ್ರಿಕೆ ಓದಲಾರಂಭಿಸಿದ. ಅಮಿತಾಬ್ ಕೂಡ ಚಿಲ್ಲರೆ ಮನುಷ್ಯನೇನಲ್ಲ. ಗುರುತಿಸದಿದ್ದರೇನಂತೆ ಯಾರೋ ಗುರುತಿಸದಿದ್ದರೆ ನನ್ನ ಖ್ಯಾತಿ ಏನು ಕಡಿಮೆಯಾಗುತ್ತದಾ ಅಂದುಕೊಂಡು ಸುಮ್ಮನೆ ಕುಳಿತ. ಅದರ ನಂತರ ಅವರಿಬ್ಬರ ಮಧ್ಯೆ ಮತ್ತೇನೂ ಮಾತುಕತೆ ನಡೆಯಲಿಲ್ಲ. ವಿಮಾನ ಮುಂಬೈಗೆ ಬಂದಿಳಿಯಿತು. ಪಕ್ಕದ ಸೀಟಿನಾತ ಅಮಿತಾಬ್‌ಗೆ ಕಣ್ಣಲ್ಲೇ ಪುಟ್ಟದೊಂದು ನಮಸ್ಕಾರ ಹೇಳಿ ತನ್ನ ಪಾಡಿಗೆ ತಾನು ಇಳಿದು ಹೋದ. ಅದೊಂದು ರೀತಿಯ ಚಡಪಡಿಕೆಗೆ ಬಿದ್ದ ಅಮಿತಾಬ್ ಧಡಧಡನೆ ಆತನ ಹಿಂದೆಯೇ ಮೆಟ್ಟಿಲಿಳಿದು ಹೋಗಿ

‘‘ಒಂದ್ನಿಮಿಷ, ತಾವು ತಮ್ಮ ಹೆಸರೇ ಹೇಳಲಿಲ್ಲ. ನಾನು ತಿಳಿದುಕೊಳ್ಳಬಹುದೇ” ಅಂದ.

ಪಕ್ಕದ ಸೀಟಿನಾತ ಅಮಿತಾಬ್‌ನತ್ತ ನೋಡಿ ತುಂಬ ನೆಮ್ಮದಿಯ ದನಿಯಲ್ಲಿ

I am sorry. ನನ್ನ ಹೆಸರು ಜೆ.ಆರ್.ಡಿ.ಟಾಟಾ. ನಿಮ್ಮ ಪರಿಚಯವಾಗಿದ್ದು ಸಂತೋಷವಾಯಿತು” ಅಂದವನೇ ಅಮಿತಾಬ್‌ನ ಕೈ ಕುಲುಕಿ ತನ್ನ ಪಾಡಿಗೆ ತಾನು ಹೊರಟು ಹೋದ.

ಅಂತಹುದೊಂದು ಸಜ್ಜನಿಕೆ ಅಮಿತಾಬ್‌ನಂಥವರನ್ನೂ ಕೂಡ ಬೆಚ್ಚಿಬೀಳಿಸುತ್ತದೆ. Humble ಆಗಿರುವುದು ಅಂದರೆ ಅದು. ಆ ತರಹದ ಸಜ್ಜನಿಕೆಯನ್ನು ನಾನು ಗಿರೀಶ್ ಕಾರ್ನಾಡ್‌ರಲ್ಲಿ ನೋಡಿದ್ದೇನೆ. ಅವರು ಯಾವತ್ತೂ ಕೂಡ ಫೋನ್ ಎತ್ತಿಕೊಂಡು ‘‘ನಾನು ಗಿರೀಶ್ ಕಾರ್ನಾಡ್ ಮಾತಾಡ್ತಿದ್ದೇನೆ ಅಂತಿರಲಿಲ್ಲ. ತುಂಬ ಮೆಲುದನಿಯಲ್ಲಿ ‘‘ನಾನು ಗಿರೀಶ್ ಕಾರ್ನಾಡ್ ಅಂತ ಮಾತಾಡ್ತಿದ್ದೇನೆ” ಅನ್ನುತ್ತಿದ್ದರು. ನಾನು ಅದನ್ನು ಅವರಿಂದಲೇ ಕಲಿತೆ. ನಾನು ಯಾರಿಗಾದರೂ ಫೋನ್ ಮಾಡಿದರೆ

‘‘ನಾನು ರವಿ ಬೆಳಗೆರೆ ಅಂತ ಮಾತಾಡ್ತೀನಿ” ಅನ್ನುತ್ತೇನೆ. ಏಕೆಂದರೆ ಸಮಸ್ತ ಪ್ರಜಾ ಕೋಟಿಗೆ ನಾನು ಗೊತ್ತಿರುತ್ತೇನೆ ಅಂತ ಯಾಕೆ ಅಂದುಕೊಳ್ಳಬೇಕು. ‘ಬಿಗ್‌ಬಾಸ್’ಗೆ ಹೋಗಿ ಬಂದ ಮೇಲೆ ನನಗೆ ರಸ್ತೆಗಳಲ್ಲಿ, ಸಿಗ್ನಲ್‌ಗಳಲ್ಲಿ, ಸಾರ್ವಜನಿಕ ಲಿಫ್ಟ್‌ಗಳಲ್ಲಿ ಜನ ಗುರುತಿಸುವುದು ಗೊತ್ತಾಗುತ್ತದೆ. ಅವರು ನಮಸ್ಕಾರ ಅನ್ನುತ್ತಾರೆ. ‘ಬಿಗ್‌ಬಾಸ್’ನಲ್ಲಿ ತುಂಬ ಚೆನ್ನಾಗಿ ಮಾತನಾಡಿದ್ದೀರಿ ಅನ್ನುತ್ತಾರೆ. ನೀವು ಮಾತನಾಡಿದ್ದು ನಮ್ಮ ತಾಯಿಗೆ ತುಂಬ ಇಷ್ಟವಾಯಿತು ಅನ್ನುತ್ತಾರೆ. ಅದೆಲ್ಲವೂ ನನಗೆ ಸಂತೋಷ ನೀಡುತ್ತವೆ ಅಷ್ಟೆ. ಅವು ನನ್ನಲ್ಲಿ ನಯಾಪೈಸೆಯ ಅಹಂಕಾರವನ್ನೂ ಉಂಟು ಮಾಡುವುದಿಲ್ಲ. I remain humble. ಆಗಿರುವುದು ಅಂದರೆ ಅದು ನಮ್ಮ ಬಲಹೀನತೆ ಅಂತ ನಾವಂದುಕೊಳ್ಳಬಾರದು. Being humble is a strength. ನನ್ನ ಮಕ್ಕಳಿಗೆ, ತುಂಬ ಆಪ್ತ ಸ್ನೇಹಿತರಿಗೆ, ನನ್ನೊಂದಿಗೆ ಕೆಲಸ ಮಾಡುವವರಿಗೆ ಇದನ್ನು ನಾನು ಗೊತ್ತಿದ್ದೋ, ಗೊತ್ತಿಲ್ಲದೆಯೋ  ಕಲಿಸಿ ಕೊಟ್ಟಿದ್ದೇನೆ. ಚೇತನಾ ನನ್ನೊಂದಿಗೆ ಮಾತನಾಡುವಾಗಲೆಲ್ಲ ‘‘Appa you have thought us to be humble. Thank you for that” ಅನ್ನುತ್ತಿರುತ್ತಾಳೆ. ನನ್ನ ನಾಲ್ಕೂ ಮಕ್ಕಳಿಗೆ ಒಂದು ನಯಾಪೈಸೆಯಷ್ಟೂ ಅಹಂಕಾರವಿಲ್ಲ. ನನ್ನ ಮಾತು ಬಿಡಿ, ನನಗೆ ಅಹಂಕಾರವೆಂಬುದು ಗೊತ್ತೇ ಇಲ್ಲ. ಇಷ್ಟಾಗಿ ಯಾವ ಕಾರಣಕ್ಕೆ ನಾನು ಅಹಂಕಾರ ಪಡಬೇಕು? ಅದೇನು ಬರೆದರೂ ನಾನು ನನ್ನ ಸಂತಸಕ್ಕಾಗಿ ಬರೆದಿದ್ದೇನೆ. ನನ್ನ ಓದುಗರಿಗೆ ನಾನು ಮೋಸ ಮಾಡಬಾರದು ಎಂಬ ಎಚ್ಚರಿಕೆ ಇಟ್ಟುಕೊಂಡು ಬರೆದಿದ್ದೇನೆ. ಓದುಗರಿಗೆ ನಾನು ತುಂಬ ವಿಶೇಷವಾದ್ದುದೇನನ್ನೋ ಹೇಳಬೇಕೆಂಬ ಹಪಹಪಿಗೆ ಬಿದ್ದು ಕಾರ್ಗಿಲ್‌ನಿಂದ ವರದಿ ಮಾಡಿದ್ದೇನೆ. ಗುಜರಾತ್‌ನ ಭೂಕಂಪದ ವರದಿ ಮಾಡಿದ್ದೇನೆ. ಒಡಿಸ್ಸಾದ ಚಂಡಮಾರುತವನ್ನು ನೋಡಿ ಬಂದಿದ್ದೇನೆ. ಪಾಕಿಸ್ತಾನದಂತಹ ದೇಶಕ್ಕೆ ಹೋಗಿ ಬಂದಿದ್ದೇನೆ. ದುಬೈಗೆ, ದೋಹರ್‌ಗೆ, ಕತಾರ್‌ಗೆ, ಇಸ್ರೇಲ್‌ಗೆ, ಉಗಾಂಡಕ್ಕೆ, ತಾಂಝೇನಿಯಾಕ್ಕೆ, ಅಲ್ಲೆಲ್ಲಿಯದೋ ಕಾಂಗೋಕ್ಕೆ ಹೋಗಿ ಬಂದಿದ್ದೇನೆ. ಇದೆಲ್ಲ ಬಿಡಿ, ಮೊನ್ನೆ ಮೊನ್ನೆ ಬಾಂಬು ಸಿಡಿದಾಗ ಅದರ ಮರುದಿನವೇ ಪುಲ್ವಾಮಾಕ್ಕೆ ಹೋಗಿ ಬಂದಿದ್ದೇನೆ. ಇಷ್ಟಾಗಿ ಎಂಬತ್ತೊಂಬತ್ತು ಪುಸ್ತಕ ಬರೆದರೂ ಕೂಡ ನನಗೆ ನಾನೊಬ್ಬ ಮಹಾನ್ ಪತ್ರಕರ್ತನೆಂಬ ಅಥವಾ ಬಹು ದೊಡ್ಡ ಲೇಖಕನೆಂಬ ಅಹಂಕಾರ ಬಂದಿಲ್ಲ. ಇದನ್ನು ಏಕೆ ಹೇಳಿದೆನೆಂದರೆ ಮೊನ್ನೆ ನನ್ನ ಪ್ರೀತಿಯ ಲೇಖಕ ವಸುಧೇಂದ್ರನ ‘ತೇಜೋ ತುಂಗಭದ್ರಾ’ ಅಕ್ಕರೆಯಿಂದ ತರಿಸಿಕೊಂಡೆ. ಪುಸ್ತಕವನ್ನು ನೋಡಿದ ತಕ್ಷಣ ನನಗೆ ಆಶ್ಚರ್ಯವಾಯಿತು. ಅವನು ನನ್ನ ಊರಿನ ಹುಡುಗ. ನಿಮಗೆ ಆಶ್ಚರ್ಯವಾಗಬಹುದು. ನನ್ನ ಪಕ್ಕದ ಮನೆಯ ಹುಡುಗ (ಅದನ್ನು ಅವನೇ ನನಗೆ ಹೇಳಿದ್ದ.) ವಯಸ್ಸಿನಲ್ಲಿ ನನಗಿಂತ ಚಿಕ್ಕವನು. ಅವನ ಪುಸ್ತಕ ನೋಡುತ್ತಿದ್ದಂತೆಯೇ ನನ್ನ ಸಂತಸ ತಡೆಯಲಾಗದೇ ಅವನಿಗೆ ಫೋನ್ ಮಾಡಿ

‘‘ವಸೂ, ಅದೆಷ್ಟು ಒಳ್ಳೆ ಮನುಷ್ಯನಯ್ಯಾ ನೀನು. You are so humble. ಪುಸ್ತಕದ ಮುಖಪುಟದ ಮೇಲೆ ನಿನ್ನ ಹೆಸರೇ ಹಾಕಿಕೊಂಡಿಲ್ಲವಲ್ಲಯ್ಯಾ. I love you for that” ಅಂದೆ. ಅದಕ್ಕೆ ಅವನು

‘‘ನೀನು ಫೋನ್ ಮಾಡಿದ್ದು ಭಾರಿ ಸಂತೋಷ ಆಯ್ತು. ಹೆಸರಿಂದೇನದೆ, ಒಳಗೆಲ್ಲಾರ ಇರತದ. ನೀನು ಪುಸ್ತಕ ಓದಿ ಫೋನ್ ಮಾಡು. ನನಗೆ ಖರೇ ಸಂತೋಷ ಆಗ್ತದ” ಅಂದ.

Once again ನನಗೆ ಸಂತೋಷವಾಯ್ತು. ಅನೇಕರಿಗೆ ಅದರಲ್ಲೂ ಬರಹಗಾರರಿಗೆ ಹೀಗೆ humble ಆಗಿರುವುದು ಸಾಧ್ಯವಿಲ್ಲ. ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಪ್ರಿಂಟ್ ಮಾಡಿಲ್ಲ ಎಂಬ ಕಾರಣಕ್ಕೆ ಸಿಡಿಮಿಡಿಗೊಳ್ಳುವ ಅನೇಕ ಲೇಖಕರನ್ನು ನಾನು ನೋಡಿದ್ದೇನೆ. ಅದನ್ನೆಲ್ಲ ನೋಡಿದ ಮೇಲೆ ನನ್ನಲ್ಲಿ ಉದ್ಭವವಾಗುವ ಪ್ರಶ್ನೆಯೆಂದರೆ ಎಂದೋ ಒಂದು ದಿನ ಕಸದ ಬುಟ್ಟಿಗೆ ಬೀಳುವ ನಮ್ಮ ಸಾಹಿತ್ಯ ಮತ್ತು ನಾವು ಅದೇಕೆ humble ಆಗಿರುವುದನ್ನು ಕಲಿಯುವುದಿಲ್ಲ?

ನಿಮ್ಮವನು, ಆರ್.ಬಿ.

Please follow and like us: