ಸೈಡ್‌ವಿಂಗ್ : ನಿಮ್ಮದೊಂದು ವ್ಯಕ್ತಿಚಿತ್ರ ನೀವೇ ಬರೆದು ನೋಡಿ!

ಸೈಡ್‌ವಿಂಗ್ :
ಅದೊಂದು ಛಾಲೆಂಜು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮೇಜಿನ ಮೇಲೆ ಹಾಳೆ ಹರವಿಕೊಂಡು ಚಿಕ್ಕದಾಗಿ ನಿಮ್ಮದೊಂದು ವ್ಯಕ್ತಿಚಿತ್ರ ನೀವೇ ಬರೆದಿಟ್ಟುಕೊಳ್ಳಿ, ನೋಡೋಣ.

ನಾನು ಅಂತಲೇ ಆರಂಭವಾಗುತ್ತದದು. ‘ನಾನು ತುಂಬ ಆಕಾಂಕ್ಷೆಗಳ ಮನುಷ್ಯ’ ಎಂದು ಶುರು ಮಾಡುತ್ತೀರಿ. ಅಥವಾ ‘ನಾನು ಯಾವುದಕ್ಕೂ ಕೆಲಸಕ್ಕೆ ಬಾರದ ಅಯೋಗ್ಯ!’ ಅಂತ ಆರಂಭಿಸುತ್ತೀರಿ. ನಿಮಗೆ ಗೊತ್ತು: ಅದು ನಿಮ್ಮ ಡೈರಿ ಅಲ್ಲ. ಅದು ಆತ್ಮಕಥನ ಮೊದಲೇ ಅಲ್ಲ. ಯಾವತ್ತಿಗೂ ಯಾರೂ ಅದನ್ನು ಪ್ರಿಂಟು ಮಾಡುವುದಿಲ್ಲ. ಅಸಲು ಇನ್ನೊಬ್ಬರು ಅದನ್ನು ಓದುವುದೂ ಇಲ್ಲ. ಆದರೂ ನಿಮ್ಮ ಬಗ್ಗೆ ನೀವು ಹೇಗೆ ಬರೆಯುತ್ತೀರೋ, ಬರೆಯಿರಿ ನೋಡೋಣ.

ಇಂಥ ವ್ಯಕ್ತಿಚಿತ್ರಗಳನ್ನು ಇನ್ನೊಬ್ಬರ ಬಗ್ಗೆ ಬರೆಯುವುದು ತುಂಬ ಸುಲಭದ ಕೆಲಸ. ಪತ್ರಕರ್ತರಿಗೆ, ಅಂಕಣಕಾರರಿಗಂತೂ ಅದು ಲೀಲಾಜಾಲ. ಇಂಥ ತಾರೀಕಿಗೆ ಹುಟ್ಟಿದ ಎಂಬುದರಿಂದ ಹಿಡಿದು, ಇವನು ಹೀಗ್ಹೀಗೆ ಬದುಕಿ ಇಂತಿಷ್ಟು ಸಾಧಿಸಿ ಹಾಗೆಲ್ಲ ಅಧಿಕಾರದಲ್ಲಿದ್ದು ಇಷ್ಟೆಲ್ಲ ತಿಂದು ಕಡೆಗೆ ಹೀಗೆ ಸತ್ತ ಅಂತ ಒಂದು strokeನಲ್ಲಿ ಎಲ್ಲವನ್ನೂ ಹೇಳಿ ಮುಗಿಸಿಬಿಡುತ್ತಾರೆ. ಇವನು ಹೀಗಿರುವ ಬದಲಿಗೆ, ಕೊಂಚ ಹಾಗಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅಂತ (ಸತ್ತು ಹೋದವನಿಗೊಂದು) ಸಜೆಷನ್ನೂ ಕೊಡುತ್ತಾರೆ. ಅಂಥವನನ್ನು ತಾವು ಹೇಗೆ ಅರ್ಥ ಮಾಡಿಕೊಂಡಿದೀವಿ ನೋಡಿ ಎಂದು ತಮ್ಮೆಲ್ಲ ಪಾಂಡಿತ್ಯವನ್ನೂ ಕೆಲವೇ ಅಕ್ಷರಗಳಲ್ಲಿ ತೋರ್ಪಡಿಸಿರುತ್ತಾರೆ. ರಾಜಕಾರಣಿಗಳ ಬಗ್ಗೆ, ನಟನಟಿಯರ ಬಗ್ಗೆ, ನಾಯಕರ ಬಗ್ಗೆ, ಕಲಾವಿದರ ಬಗ್ಗೆ, ಲೇಖಕರ ಬಗ್ಗೆ ‘ಇದಮಿತ್ಥಂ’ ಎಂಬಂತೆ ವ್ಯಕ್ತಿ ಚಿತ್ರಣಗಳನ್ನು ಬರೆದು ಬಿಸಾಡುವವರು ಪ್ರತಿ ನ್ಯೂಸ್ ಪೇಪರ್ ಆಫೀಸಿಗೂ ಒಬ್ಬೊಬ್ಬರು ಸಿಗುತ್ತಾರೆ.

ಆದರೆ, ಅವರಿಗೇ ಹೇಳಿ ನೋಡಿ. ಅವರು ತುಂಬ ಕಷ್ಟಪಟ್ಟರೂ ತಮ್ಮದೊಂದು ಪ್ರಾಮಾಣಿಕ ವ್ಯಕ್ತಿಚಿತ್ರವನ್ನು ತಾವೇ ಬರೆದಿಟ್ಟುಕೊಳ್ಳಲಾರರು.

But, ಬರೆದಿಟ್ಟುಕೊಳ್ಳುವುದು ರೂಢಿ ಮಾಡಿಕೊಳ್ಳಬೇಕು. ಅದರಲ್ಲಿ ನಾವು ಮಾಡಿದ ತಪ್ಪು-ಒಪ್ಪುಗಳ ನಿವೇದನೆಗಳಿರಬೇಕಿಲ್ಲ. ನಮ್ಮನ್ನು ನಾವು ಹೇಗೆ ನೋಡಿಕೊಂಡಿದ್ದೇವೆ, ಹೇಗೆ ಅರ್ಥ ಮಾಡಿಕೊಂಡಿದ್ದೇವೆ ಎಂಬುದನ್ನು ಅರಿತುಕೊಳ್ಳಲು ನೆರವಾಗುವ ದಾಖಲೆಯದು. ‘ನಾನು ಪರಮ ಧೀರನಂತೆ ಕಂಡರೂ ಕೊಂಚ ಪುಕ್ಕಲ. ಎಲ್ಲ ಯೋಗ್ಯತೆಯಿದ್ದೂ, ತಲುಪಲಾಗದ ಎತ್ತರಕ್ಕೆ ಯಾಕೆ ತಲುಪಲಾಗಲಿಲ್ಲವೆಂದರೆ, ನಾನು ಮೂಲತಃ ಸೋಮಾರಿ. ನಂಗೆ ‘ಹೊಟ್ಟೆಕಿಚ್ಚು’ ಎಂಬ ದೊಡ್ಡ ಬಲಹೀನತೆಯಿದೆ. ನಾನು ತುಂಬ ನೇರವಂತ ಅನ್ನಿಸಿಕೊಂಡಿದ್ದೇನೆ. ಆದರೆ ಅದು ಕೂಡ ನನ್ನ ಒಂದು ಮುಖವಾಡ. ನಂಗೆ ವಿಪರೀತ ಚಿಲ್ರೆಯೆನಿಸುವಂಥ ಆಸೆಗಳಿವೆ. ಆದರೆ ಹೇಳಿಕೊಳ್ಳಲು ಸಂಕೋಚ. ಅಂಥ ಚಿಲ್ರೆ ಆಸೆಗಳು ಇನ್ನೊಬ್ಬರಲ್ಲಿ ಕಂಡಾಗ ಮಾತ್ರ ತುದಿಗಾಲ ಮೇಲೆ ನಿಂತು ಅವರನ್ನು ಖಂಡಿಸಿ, ಗೇಲಿ ಮಾಡುತ್ತೇನೆ. ನನ್ನದು ಎಡಬಿಡಂಗಿ ಮನಸ್ಸು. ಒಳ್ಳೆಯವನಾಗಬೇಕು ಎಂಬ ಸುಳ್ಳೇ ಹಂಬಲಕ್ಕೆ ಬಿದ್ದು ನನಗೆ ಒಲ್ಲದ ಒಳ್ಳೆ ಕೆಲಸಗಳನ್ನು ಮಾಡುತ್ತಿರುತ್ತೇನೆ. ಸತ್ಯ ಸಂಗತಿಯೇನೆಂದರೆ, ನಂಗೆ ನನ್ನ ಪಾಡಿಗೆ ನಾನು ಕೆಟ್ಟವನಾಗಿರೋಕೆ ಇಷ್ಟ! ‘ ಹೀಗೆ ನೇರಾನೇರವಾಗಿ ಕನ್ನಡಿಯೆದುರು ನಿಂತು ಅದರೊಳಗಿನ ನಮ್ಮೊಂದಿಗೆ ನಾವು ಮಾತಾಡಿದಂತೆ ಬರೆದುಕೊಂಡು ಬಿಡಬೇಕು.

ಆಮೇಲೆ ನಾಲ್ಕುದಿನ ಬಿಟ್ಟು, ನಾವೇ ಬರೆದಿಟ್ಟ ನಮ್ಮ ವ್ಯಕ್ತಿಚಿತ್ರದೊಳಗಿನ negative ಅಂಶಗಳನ್ನೆಲ್ಲ ಕೆಂಪು ಇಂಕಿನಲ್ಲಿ ಅಂಡರ್‌ಲೈನ್ ಮಾಡಿಡಬೇಕು. ಒಂದು ತಿಂಗಳು ಬಿಟ್ಟು, ಅವೆಲ್ಲ negative ಅಂಶಗಳನ್ನೂ ನಮ್ಮ ವ್ಯಕ್ತಿತ್ವದಿಂದ ತೊಲಗಿಸಿಕೊಳ್ಳಲು ನಿರ್ಧರಿಸಬೇಕು. ಅದಾದ ಒಂದು ವರ್ಷದ ನಂತರ, ಇನ್ನೊಮ್ಮೆ ನಮ್ಮ ವ್ಯಕ್ತಿಚಿತ್ರವನ್ನು ನಾವೇ ಕೂತು ಬರೆಯಬೇಕು. ಮೊದಲು ಬರೆದದ್ದರೊಂದಿಗೆ ಅದನ್ನು ಕಂಪೇರ್ ಮಾಡಿಕೊಳ್ಳಬೇಕು. ಅವತ್ತಿಗೂ ಇವತ್ತಿಗೂ ಬದಲಾವಣೆ ಕಾಣಿಸಿತಾ? That’s fine.

ಕಾಣಲಿಲ್ಲವಾ?

ವ್ಯಕ್ತಿಚಿತ್ರವನ್ನು ಬರೆಯುವ ಮೂರ್ಖತನಕ್ಕೆ ಇನ್ನೊಮ್ಮೆ ಕೈ ಹಾಕಬಾರದು.

ಒಂದು ವರ್ಷದ ನಂತರ ಈ ಬಗ್ಗೆ ಮಾತಾಡೋಣವಾ?

                                    -ರವೀ

Please follow and like us:

Leave a Reply