ಸಮಾಧಾನ: ನನ್ನ ಮಧುಮೇಹಿ ಗಂಡ ಹೀಗೇಕೆ ಮಾಡುತ್ತಾನೆ?

ರವಿ ಬೆಳಗೆರೆಯವರಿಗೆ ನಮಸ್ಕಾರಗಳು.

ನಾನು ಮೂವತ್ತೆಂಟರ ಗೃಹಿಣಿ. ಹೆಸರು ಹೇಳಿಕೊಳ್ಳಲು ಮುಜುಗರವಾಗುತ್ತಿದೆಯಾದ್ದರಿಂದ disclose ಮಾಡಿಕೊಳ್ಳುತ್ತಿಲ್ಲ. ನನ್ನ ಮದುವೆಯಾಗಿ ಹದಿನೆಂಟು ವರ್ಷಗಳಾದವು. ಹದಿನೈದು ವರ್ಷದ ಮಗಳಿದ್ದಾಳೆ. ನನಗೆ ಮದುವೆಯಾದಾಗ ಕೇವಲ ಹತ್ತೊಂಬತ್ತು ವರ್ಷ. ಮಗಳು ಹುಟ್ಟಿದಾಗ ನನಗೆ ಇಪ್ಪತ್ಮೂರು. ಅಲ್ಲಿಗೆ ನಮ್ಮ ದಾಂಪತ್ಯ ಕೊನೆಯಾಯಿತು. ನನ್ನ ಗಂಡ ನನಗಿಂತ ಹತ್ತು ವರ್ಷಕ್ಕೆ ದೊಡ್ಡವರು. ಅವರ ಬಗ್ಗೆ ಏನಂತ ಬರೆಯಲಿ? ಅವರೊಬ್ಬ ಯಶಸ್ವೀ ವ್ಯಾಪಾರಿ, ಮದ್ಯವ್ಯಸನಿ, ಶೀಘ್ರಕೋಪಿ, ಮಧುಮೇಹಿ, ಬೇಜವಾಬ್ದಾರಿಯ, ತಮಾಷೆ ಪ್ರವೃತ್ತಿಯ ಮನುಷ್ಯ. ನನಗೂ ನನ್ನ ಮಗಳಿಗೂ ಅವರು ಒದಗಿಸಿರುವ ಬದುಕು, ಸವಲತ್ತುಗಳಿಗೆ ನಾನು ಋಣಿ. ಹೊರಜಗತ್ತಿನ ದೃಷ್ಟಿಯಲ್ಲಿ ನನ್ನ ಗಂಡ ತುಂಬ ಯಶಸ್ವಿಯಾದ, ಒಳ್ಳೆಯ ಮನುಷ್ಯ.

ಆದರೆ, ಮಗು ಹುಟ್ಟಿದಾಗಿನಿಂದ ಆತ ಮನೆಗೆ ತಡವಾಗಿ, ಕುಡಿದು ಬರತೊಡಗಿದರು. ಅವರಿಗೆ ಲೈಂಗಿಕತೆಯಲ್ಲಿ ಆಸಕ್ತಿಯಿರುತ್ತಿರಲಿಲ್ಲ, ತುಂಬ ಸುಸ್ತಾಗಿರುತ್ತಿದ್ದರು. ಕೇಳಿದರೆ, ಏನೋ ಒಂದು ಕಾರಣ ಹೇಳುತ್ತಿದ್ದರು. ಅದನ್ನೆಲ್ಲ ನಂಬಿದ ನಾನು ಅನೇಕ ವರ್ಷಗಳನ್ನು ‘ಎಲ್ಲ ಸರಿಹೋದೀತು’ ಎಂಬ ನಿರೀಕ್ಷೆಯಲ್ಲಿ ಕಳೆದೆ. ಏನು ಹೇಳಿದರೂ ನನ್ನ ಪತಿ ಕೌನ್ಸೆಲಿಂಗ್‌ಗೆ ಬರುವುದಿಲ್ಲ. ಅದು ಕೇವಲ ಮನೋರೋಗಿಗಳಿಗೆ ಎಂಬ ಹಟಮಾರಿ ನಂಬಿಕೆ ಅವರದು. ‘ನೀವೊಬ್ಬರೇ ಕೌನ್ಸೆಲಿಂಗ್‌ಗೆ ಬಂದರೆ ಉಪಯೋಗವಾಗದು’ ಅಂತ ಡಾಕ್ಟರುಗಳು ಹೇಳುತ್ತಾರೆ. ಈ ಹದಿನೈದು ವರ್ಷಗಳಲ್ಲಿ ನನ್ನ ಪತಿ ಮಾನಸಿಕ ಸ್ಥಿಮಿತ ಕಳೆದುಕೊಂಡು ನನ್ನನ್ನು ತುಂಬ ಸಲ ಹೊಡೆದಿದ್ದಾರೆ. ತಮ್ಮ ಆರೋಗ್ಯ ಹಾಳಾದುದಕ್ಕೆ, ದುಶ್ಚಟಗಳಿಗೆ, ಇಸ್ಪೀಟಿಗೆ, ಲೈಂಗಿಕ ನಿರಾಸಕ್ತಿಗೆಎಲ್ಲದಕ್ಕೂ ನಾನೇ ಕಾರಣ ಅಂತ ಆಪಾದಿಸುತ್ತಾರೆ. ಸಂಜೆ ಕಚೇರಿ ಮುಗಿದ ಮೇಲೆ ಅವರು ಗೆಳೆಯರೊಂದಿಗೆ ಕುಡಿಯುತ್ತಾರೆ, ಇಸ್ಪೀಟಾಡುತ್ತಾರೆ.  ಹದಿನೆಂಟು ವರ್ಷಗಳಾದವು ಮದುವೆಯಾಗಿ: ಅವರು ಯಾರೊಂದಿಗಾದರೂ ಸಂಬಂಧವಿರಿಸಿಕೊಂಡಿರಬಹುದಾ? ನನಗದು ಗೊತ್ತಿಲ್ಲ. ಯಾರೂ ಇರಲಿಕ್ಕಿಲ್ಲ ಅನಿಸುತ್ತದೆ. ಕಳೆದ ಹದಿಮೂರು ವರ್ಷಗಳಿಂದ ಅವರ ಮಧುಮೇಹ ನಿಯಂತ್ರಣಕ್ಕೆ ಬಂದಿಲ್ಲ. ಅವರಿಗೆ ಯಾರಾದರೂ ಪುರುಷ(ಸಲಿಂಗಿ) ಗೆಳೆಯರಿದ್ದಾರೇನೋ ಅಂತ ಕೆಲವು ಸಲ ಅನ್ನಿಸುತ್ತದೆ. Not very sure. ಒಟ್ಟಾರೆಯಾಗಿ ನಾನು ಗೊಂದಲದಲ್ಲಿದ್ದೇನೆ. ಈ ವಿವಾಹ ಬಂಧ, ಈ ಕುಟುಂಬ ಇದರಲ್ಲಿ ನಾನು ಮುಂದುವರೆಯಬೇಕಾ?

ಮಗಳಿಗೋಸ್ಕರ ಜೀವಿಸುತ್ತಿದ್ದೇನಾದರೂ, ಕೆಲವು ಸಲ ತುಂಬ ಬೇಸರಗೊಳ್ಳುತ್ತೇನೆ. ಆತ ನನ್ನನ್ನು ಡಿವೋರ್ಸ್ ಮಾಡಲಿಕ್ಕೂ ಒಪ್ಪುತ್ತಿಲ್ಲ. ಸಮಾಜಕ್ಕಾಗಿಯಾದರೂ ಆತನಿಗೆ ನಾನು ಬೇಕು. ನಿಜ ಹೇಳಬೇಕೆಂದರೆ, ಈ ಮದುವೆಯಲ್ಲಿ ನಾವಿಬ್ಬರೂ ಸುಖವಾಗಿಲ್ಲ. ಆತ ಈ ಸಂಗತಿಯನ್ನು ಒಪ್ಪಲು ತಯಾರಿಲ್ಲ. ‘ಎಲ್ಲ ಅನುಕೂಲ ಮಾಡಿಕೊಟ್ಟಿದ್ದೇನಲ್ಲ ಇನ್ನೇನು?’ ಅಂತ ಕೇಳುತ್ತಾರೆ. ಮೊದಲೆಲ್ಲ ನಾನು ಅವರಿಗೋಸ್ಕರ ಕಾಯುತ್ತಿದ್ದೆ, ಅವರನ್ನು ಬಯಸುತ್ತಿದ್ದೆ, ಜಗಳವಾಡುತ್ತಿದ್ದೆ. ಆದರೆ ಇಷ್ಟೆಲ್ಲ ವರ್ಷಗಳಾದ ಮೇಲೆ ನನಗೆ ಆಸಕ್ತಿಯೇ ಹೊರಟು ಹೋದಂತಿದೆ. ಇದರ ಪರಿಣಾಮ ನಮ್ಮ ಮುದ್ದಾದ, ಸೂಕ್ಷ್ಮ ಮನಸ್ಸಿನ ಮಗಳ ಮೇಲೂ ಆಗಿದೆ. ಬಾಲ್ಯದ ಅಮಾಯಕತೆಯೆಲ್ಲ ಕಳೆದು ಹೋಗಿ, ವಯಸ್ಸಿಗೆ ಮೀರಿದ ಪ್ರೌಢತೆ ಅವಳಿಗೆ ಬಂದುಬಿಟ್ಟಿದೆ. ಅವಳ ಓದಿನ ಮೇಲೂ ದುಷ್ಪರಿಣಾಮವಾಗಿದೆ. ನನ್ನ ಪತಿ ತುಂಬ ಒರಟಾಗಿ, ಕ್ರೂರವಾಗಿ ವರ್ತಿಸಿದಾಗ ಕೆಲವು ದಿನಗಳ ಮಟ್ಟಿಗೆ ನಾನು ಆತನಿಂದ ದೂರವಿದ್ದುದುಂಟು. ಮಗಳನ್ನೂ ಕರೆದುಕೊಂಡು ಹೊರಟುಹೋಗಿದ್ದೆ. ಆದರೆ ‘ಇನ್ನೊಮ್ಮೆ ಹಾಗೆ ಮಾಡುವುದಿಲ್ಲ’ ಎಂದು ಭರವಸೆ ನೀಡಿ ವಾಪಸು ಕರೆತಂದರು. ಯಾವುದೂ ಬದಲಾಗಲಿಲ್ಲ.

ಕೆಲಸಕ್ಕೆ ಸೇರೋಣವೆಂದುಕೊಂಡರೆ, ನನಗೆ ಯಾವುದೇ ಅನುಭವವಿಲ್ಲ. ನಾನು ಸದಾ ಒಬ್ಬ ಒಳ್ಳೆಯ ಗೃಹಿಣಿ, ಒಳ್ಳೆಯ ಹೆಂಡತಿ, ಒಳ್ಳೆಯ ತಾಯಿಯಾಗಿರಬೇಕೆಂದು ಬಯಸಿದ್ದೆ. ಯಾವುದೂ ಆಗಲಿಲ್ಲ. ನನ್ನ ಪತಿ sadistನಂತೆ ಚಿತ್ರವಿಚಿತ್ರವಾದ ಹಿಂಸೆಗಳನ್ನು ನನಗೂ ನನ್ನ ಮಗಳಿಗೂ ಕೊಟ್ಟಿದ್ದಾರೆ. ಹೇಳಿಕೊಳ್ಳಲಿಕ್ಕೆ ನಾಚಿಕೆಯಾಗುತ್ತದೆ. ಮರುದಿನ ಕೇಳಿದರೆ ‘ನನಗೆ ಯಾವುದೂ ನೆನಪಿಲ್ಲ. ನಾನು ಏನೂ ಮಾಡಿಲ್ಲ’ ಅಂತ ವಾದಿಸುತ್ತಾರೆ. ಅವರು ನಿಜಕ್ಕೂ ಮರೆತು ಹೋಗಿರುತ್ತಾರಾ? ಆತನ ಒಳ್ಳೆಯತನ, ನನಗೆ ನೀಡಿದ ಸವಲತ್ತು ಮುಂತಾದವು ನೆನಪಾದಾಗ ಆತನೊಂದಿಗೆ ಇರಬಯಸುತ್ತೇನೆ. ಆದರೆ ಆತ ಕೊಡುವ ಚಿತ್ರಹಿಂಸೆ ಅನುಭವಿಸುವಾಗ ನನ್ನ ಬದುಕೇ ಹೀಗಾಗಿ ಹೋಯಿತಾ? ಮಾಡಿದ ತ್ಯಾಗಕ್ಕೆ ಅರ್ಥವೇ ಇಲ್ಲವಾ? ಅನ್ನಿಸುತ್ತದೆ. ‘ಬಿಟ್ಟು ಹೋಗುತ್ತೇನೆ’ ಅಂದಾಗಲೆಲ್ಲ ಆತ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಹೆದರಿಸುತ್ತಾರೆ. ನನಗೆ ಕೌನ್ಸೆಲಿಂಗ್ ಮಾಡಿದ ಮನೋವೈದ್ಯರು ‘ಆತನನ್ನು ಬಿಟ್ಟುಬಿಡಿ’ ಅನ್ನುತ್ತಾರೆ. ಬಂಧುಮಿತ್ರರ ನಡುವೆ ತುಂಬ ಸಹೃದಯಿ, jovial ಮತ್ತು ಸಭ್ಯನಂತೆ ವರ್ತಿಸುವ ನನ್ನ ಗಂಡ ನಮ್ಮನ್ನೇಕೆ ಹೀಗೆ ಹಿಂಸಿಸುತ್ತಾರೆ? ಸಮಾಜದ ದೃಷ್ಟಿಯಲ್ಲಿ ನಾವು ತುಂಬ ಸಂತೋಷವಾಗಿರುವ ದಂಪತಿಗಳಾಗಿ ಚಲಾವಣೆಯಾಗುತ್ತಿದ್ದೇವೆ. ವಕೀಲರನ್ನು ಕೇಳಿದರೆ ‘ನೀವೇ ಒಂದು ದೃಢವಾದ ನಿರ್ಣಯಕ್ಕೆ ಬನ್ನಿ’ ಅನ್ನುತ್ತಾರೆ. ನಾನು ಎಲ್ಲಿ ತಪ್ಪು ಮಾಡಿದೆ ಅಂತ ನನಗೆ ಅರ್ಥವಾಗುತ್ತಿಲ್ಲ. ತುಂಬ useless ಆಗಿಬಿಟ್ಟೆ ಅನ್ನಿಸುತ್ತದೆ. ದಯವಿಟ್ಟು ನನಗೂ, ನನ್ನ ಮಗಳಿಗೂ ನಿಮ್ಮನ್ನೊಮ್ಮೆ ಭೇಟಿ ಮಾಡುವ ಅವಕಾಶ ಕೊಡಿ.

ಎಂ

ಪ್ರೀತಿಯ ಮೇಡಂ,

ನಿಮ್ಮ ಶತ್ರು ಪಡೆಯ ವಿವರ ಕೇಳಿ ಭಯವೇ ಆಯಿತು. ಸಂತೋಷ ಮತ್ತು ಸಮಾಧಾನದ ಸಂಗತಿಯೆಂದರೆ, ನಿಮ್ಮ ಶತ್ರುಗಳ ಪಟ್ಟಿಯಲ್ಲಿ ನಿಮ್ಮ ಗಂಡ ಇಲ್ಲ. ಆ ಪಟ್ಟಿಯಲ್ಲಿ ಬಡತನವಿಲ್ಲ. ಹದಿನೈದು ವರ್ಷ ಒಂದು private hellನಲ್ಲಿ ನರಳಿದ್ದೀರಿ. ಈ ಪತ್ರವನ್ನು ಹದಿನೈದು ವರ್ಷಕ್ಕೆ ಮುಂಚೆಯೇ ನೀವು ಬರೆದಿದ್ದು, ಹದಿನೈದು ವರ್ಷಗಳ ಹಿಂದೆ ಇಂಥದೊಂದು ಉತ್ತರ ಕೊಡುವಷ್ಟು ಬುದ್ಧಿವಂತಿಕೆ ನನಗಿದ್ದಿದ್ದರೆ ಓಹ್ ಬಿಡಿ.

ಈಗ ಶತ್ರುಗಳದೊಂದು ಚಿಕ್ಕ ಪಟ್ಟಿ ಮಾಡೋಣ. ನಿಮ್ಮ ಮೊದಲ ಶತ್ರು, ನಿಮ್ಮ ಗಂಡನ ಕುಡಿತ. ಎರಡನೆಯದು, ಅವರ ಡಯಾಬಿಟೀಸು. ಮೂರನೆಯದು ನಿಮ್ಮ ನಿರಾಶಾಭಾವ. ನಾಲ್ಕನೆಯದು ನಿಮ್ಮ ಗಿಲ್ಟು. ಸಮಾಧಾನದ ಸಂಗತಿಯೆಂದರೆ, ಒಂದು ಕುಟುಂಬ ಈ ಎಲ್ಲ ಸಮಸ್ಯೆಗಳಿಂದಲೂ ಹೊರಬರಬಹುದು. ಚೇತರಿಸಿಕೊಳ್ಳಬಹುದು. ‘ಹೆಣ್ಣು ಮಕ್ಕಳು ಮತ್ತು ಕುಡಿತ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಬಯಸುತ್ತೇನೆ. ಮೊದಲೆಲ್ಲ ಮಡಿವಂತ ಕುಟುಂಬಗಳಲ್ಲಿ ಬೆಳೆದ ಹೆಣ್ಣುಮಕ್ಕಳಿಗೆ ತಮ್ಮ ಗಂಡ ಕುಡಿಯುತ್ತಾನೆ ಅಂತ ಗೊತ್ತಾದರೇನೇ ಅದೊಂದು ಆಘಾತವೆನಿಸುತ್ತಿತ್ತು. ಈಗ ‘ಹುಡುಗನಿಗೆ ಆಗೊಂದ್ಸಲ ಈಗೊಂದ್ಸಲ ಫ್ರೆಂಡ್ಸ್ ಜೊತೆ ಕುಡಿಯೋ ಅಭ್ಯಾಸವಿದೆ’ ಅಂತ ಗೊತ್ತಾಗಿಯೂ ಆ ಹುಡುಗನನ್ನು ಮದುವೆಯಾಗುವ ಕಾಲ. Of course, ಮಧ್ಯಮ ವರ್ಗದ ಮನೆಗಳಲ್ಲೂ ಕುಡಿತಕ್ಕೆ ಒಂದು ಅಕ್ಸೆಪ್ಟೆನ್ಸ್ ಸಿಕ್ಕಿದೆ.  ‘ನನ್ನ ಗಂಡ ಆಗೊಮ್ಮೆ ಈಗೊಮ್ಮೆ ಕುಡಿಯುತ್ತಾನೆ, ಪರವಾಗಿಲ್ಲ ಬಿಡು’ ಅಂತ ಅಕ್ಸೆಪ್ಟ್ ಮಾಡಿಕೊಳ್ಳುವ ಗೃಹಿಣಿ ‘ಅವನು ಎಷ್ಟು ಕುಡೀತಿದಾನೆ?’ ಅನ್ನೋದನ್ನ ಗಮನಿಸುವುದೇ ಇಲ್ಲ. ಇದು ಅತಿ ದೊಡ್ಡ ತಪ್ಪು. ಗಂಡನ ಊಟ, ಅವನ ಜೇಬು, ಅವನ ಆರ್ಥಿಕ ಪರಿಸ್ಥಿತಿ, ಗುಂಡಿಗೆ ಅಂಟಿದ ಯಾರದೋ ಕೂದಲು, ಲಿಪ್‌ಸ್ಟಿಕ್ ಮಾರ್ಕು ಎಲ್ಲವನ್ನೂ ಗಮನಿಸುವ ಹೆಣ್ಣುಮಕ್ಕಳು ಕೂಡ ‘ನಿನ್ನೆ ರಾತ್ರಿ ನನ್ನ ಗಂಡ ಎಷ್ಟನೇ ಪೆಗ್ಗಿಗೆ ಪಾರ್ಟಿ ಮುಗಿಸಿದ?’ ಅಂತ ಗಮನಿಸುವುದಿಲ್ಲ. ಹೀಗೆ ಗಮನಿಸದೆ ಇದ್ದಾಗ, ಎರಡು ಪೆಗ್ಗಿಗೇ ಮೊದಲು ಪಾರ್ಟಿ ಮುಗಿಸಿ ಏಳುತ್ತಿದ್ದ ಭೂಪ ಒಂಬತ್ತನೇ ಪೆಗ್ಗಾದರೂ ಮುಂದುವರೆಯುತ್ತಲೇ ಇರುತ್ತಾನೆ. ಅವನ ಕೆಪ್ಯಾಸಿಟಿ ದಿನದಿಂದ ದಿನಕ್ಕೆ, ತಿಂಗಳಿಂದ ತಿಂಗಳಿಗೆ, ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಾ ಹೋಗುತ್ತದೆ. ಎಷ್ಟು ಕುಡಿದರೂ normal ಆಗೇ ಕಾಣಿಸುವ ಗಂಡ ವಿಪರೀತ ವಾಂತಿ ಮಾಡತೊಡಗಿದಾಗ, ಜಾಂಡೀಸ್‌ಗೆ ತುತ್ತಾದಾಗ, ನೌಕರಿ ಕಳೆದುಕೊಂಡಾಗ, ಅಪಘಾತ ಅಥವಾ ಅನಾಹುತ ಮಾಡಿಕೊಂಡಾಗ, ಮನೆಯಲ್ಲಿ ವಿನಾಕಾರಣದ ಜಗಳ, ದೈಹಿಕ ಹಿಂಸೆ ಆರಂಭಿಸಿದಾಗ ಮತ್ತು ಅನುಮಾನಿಸತೊಡಗಿದಾಗ `ಓ… ನನ್ನ ಗಂಡ ಕುಡುಕನಾಗಿ ಹೋದ !` ಅಂತ ಬೊಬ್ಬೆ ಹೊಡೆಯುತ್ತಾರೆ ಹೆಂಗಸರು.

ನೀವು ನಿಮ್ಮ ಗಂಡನ drinkingನ ಅಕ್ಸೆಪ್ಟ್ ಮಾಡಿದ್ದೇ ಆದರೆ, ಆತ ಎಷ್ಟು ಕುಡಿಯುತ್ತಿದ್ದಾನೆ ಅನ್ನೋದನ್ನ monitor ಮಾಡುವ, ಅದನ್ನು ಆರಂಭದಿಂದಲೇ ಹಿಡಿತದಲ್ಲಿಟ್ಟುಕೊಳ್ಳುವ ಜವಾಬ್ದಾರಿಯನ್ನೂ ಅಕ್ಸೆಪ್ಟ್ ಮಾಡಬೇಕು. ಪ್ರತಿದಿನದ ಹಾಗೆ ಇವತ್ತೂ ಕುಡಿದು ಬಂದಿದ್ದಾನೆ ಬಿಡು ಅಂತ ಸುಮ್ಮನಾದಾಗ, ಗಂಡನ ಕುಡಿತ ಆತನಿಗೂ ಗೊತ್ತಿಲ್ಲದಂತೆ ವಿಸ್ತಾರಗೊಳ್ಳುತ್ತ ಹೋಗಿ, ಕಡೆಗೊಂದು ದಿನ ಸಮಸ್ಯೆಯಾಗುತ್ತದೆ. ನಿಮ್ಮನ್ನು ನಾನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸುತ್ತಿಲ್ಲ. ಆದರೆ ಆಗಿರುವುದೇ ಇದು.

ಹೊರಗೆ ತುಂಬ ಜೋವಿಯಲ್ ಆಗಿ, ಚಿಯರ್‌ಫುಲ್ ಆಗಿ ಕಾಣುವ ಹಾಗೂ ವರ್ತಿಸುವ ಗಂಡಸು, ಮನೆಯಲ್ಲಿ (ಕೆಲವು ಸಲ ಮಾತ್ರ) ರಾಕ್ಷಸನಂತೆ, sadistನಂತೆ ವರ್ತಿಸುವುದನ್ನು ನಾನು ನೋಡಿದ್ದೇನೆ. ಅದು ಅನೇಕ ಸಲ ಗಂಡಸಿನ ಲೈಂಗಿಕತೆಗೆ, ಲೈಂಗಿಕ ನ್ಯೂನತೆಗೆ ಸಂಬಂಧಪಟ್ಟ ವರ್ತನೆಯಾಗಿರುತ್ತದಾದರೂ, once again ಕುಡಿತವೇ ಅಲ್ಲೂ ತಪ್ಪಿತಸ್ಥನ ಸ್ಥಾನಕ್ಕೆ ಬಂದು ನಿಲ್ಲುತ್ತದೆ. ಲೈಂಗಿಕ ಅಶಕ್ತಿ ಮನುಷ್ಯನನ್ನು ಕೀಳರಿಮೆಯಿಂದ ನರಳುವಂತೆ ಮಾಡಬಹುದು. ಹಾಗೇನೇ ವಿಪರೀತವಾದ ದೌರ್ಜನ್ಯಗಳಿಗೆ ತೊಡಗಿಸಲೂಬಹುದು. ಸ್ವಭಾವತಃ ಒಳ್ಳೆಯವರಾದ, ಜೋವಿಯಲ್ ಆದ, ಹಾಸ್ಯಪ್ರವೃತ್ತಿಯ ನಿಮ್ಮ ಪತಿಗೆ ವಿಪರೀತ ಕುಡಿದಾಗ ಈ ಲೈಂಗಿಕತೆಯ ಸಮಸ್ಯೆ ನೆನಪಾಗಿ, ಅದು ಮನಸಿನ ಹಿನ್ನೆಲೆಯಲ್ಲಿ ಕೆಲಸ ಮಾಡುವುದರಿಂದ ಹಾಗೆ ದೌರ್ಜನ್ಯಕ್ಕೆ ಇಳಿಯುತ್ತಿರಬಹುದು.

ನಿಮ್ಮ ಇನ್ನೊಂದು ಶತ್ರು, ಗಂಡನ ಡಯಾಬಿಟೀಸು! ಲೈಂಗಿಕ ಆಸಕ್ತಿಯನ್ನು ಬಹುತೇಕ ಮಟ್ಟಿಗೆ ಕ್ಷೀಣಿಸುವಂತೆ ಮಾಡುವ ಖಾಯಿಲೆ ಅದು. ಆದರೆ ವೈದ್ಯ ವಿಜ್ಞಾನ ಎಷ್ಟು ಮುಂದುವರೆದಿದೆಯೆಂದರೆ, ಡಯಾಬಿಟಿಸ್‌ನ ಆರಂಭದಿಂದಲೇ ಲೈಂಗಿಕ ಆಸಕ್ತಿಯನ್ನು ಕಾಯ್ದಿರಿಸುವುದಕ್ಕೂ ಚಿಕಿತ್ಸೆ ನೀಡಲಾಗುತ್ತದೆ. ಡಯಾಬಿಟಿಸ್‌ನಿಂದಾಗಿ ಅಕ್ಷರಶಃ ಲೈಂಗಿಕವಾಗಿ ನಿಷ್ಕ್ರಿಯರಾಗಿ ಹೋದ ಪುರುಷರನ್ನು ಕೆಲವು ಸರಳ ಚಿಕಿತ್ಸೆಗಳು, ಮಾತ್ರೆಗಳು ಮತ್ತು ಆಪರೇಷನ್ನುಗಳು ಮತ್ತೆ ಯೌವ್ವನವಂತರನ್ನಾಗಿ ಮಾಡುತ್ತವೆ. ಕುಡಿತ ಮತ್ತು ಇಸ್ಪೀಟು ಸಂಪೂರ್ಣವಾಗಿ ಆ ವ್ಯಕ್ತಿಯನ್ನು ಆವರಿಸಿಕೊಂಡಿರುವುದರಿಂದ, ಲೈಂಗಿಕವಾಗಿ ಸಕ್ರಿಯನಾಗದೇನೇ ಬದುಕಿಬಿಡಬಹುದು ಅಂತ ಅವರು ತೀರ್ಮಾನಿಸಿರುತ್ತಾರೆ. ಲೈಂಗಿಕವಾಗಿ ಸಕ್ರಿಯರಾಗುವುದು ಅಂದರೆ, ಫ್ಯಾಂಟಮ್ ಥರಾ ಅಥವಾ ಹೊಚ್ಚ ಹೊಸ ಪೋಲಿ ಸಿನೆಮಾದ ಹೀರೋ ಥರಾ ಹಾಸಿಗೆಯಲ್ಲಿ ವರ್ತಿಸಬೇಕು ಅಂತಲ್ಲ. ಮನುಷ್ಯನಲ್ಲಿ desire ಸೃಷ್ಟಿಯಾಗಬೇಕು. ಕುಡಿತ ಹಾಗೂ ಡಯಾಬಿಟಿಸ್‌ ಎರಡೂ ಪಕ್ಕಕ್ಕೆ ಸರಿದರೆ ಅಲ್ಲಿ ಸಹಜವಾಗಿಯೇ desire ಸೃಷ್ಟಿಯಾಗುತ್ತದೆ. With needed medical help, ನಿಮ್ಮ ಪತಿಯಲ್ಲಿ ಮತ್ತೆ ಲೈಂಗಿಕ ಚೈತನ್ಯ ಉಂಟಾಗುತ್ತದೆ.

ಇದೆಲ್ಲ ಸರಿ, ಆದರೆ ಕೌನ್ಸೆಲಿಂಗ್‌ಗೆ ವೈದ್ಯರ ಬಳಿಗೆ ಬರಲಿಕ್ಕೇ ಒಲ್ಲದ ಗಂಡನನ್ನು ಹೇಗೆ ಸರಿಪಡಿಸಬೇಕು ಅನ್ನೋದು ನಿಮ್ಮ ಪ್ರಶ್ನೆಯಲ್ಲವೇ? Fine. ಒಬ್ಬ ಮಧುಮೇಹಿ ಮದ್ಯವ್ಯಸನಿ (ಆದರೆ ವ್ಯಾಪಾರದಲ್ಲಿ ಯಶಸ್ವಿ) ಪುರುಷನೊಂದಿಗೆ ಇಷ್ಟು ವರ್ಷ ಬದುಕಿದ ಮೇಲೆ, ನೀವೊಬ್ಬ ಒಳ್ಳೆಯ nurse ಕೂಡ ಆಗಿರುತ್ತೀರಿ ಎಂಬುದನ್ನು ಮರೆಯಬೇಡಿ. ನಿಮ್ಮ ಪತಿ ಕುಡಿದಾಗ ಕೆಟ್ಟದಾಗಿ ವರ್ತಿಸುತ್ತಾರೆ ಎಂಬುದನ್ನು ಬಿಟ್ಟರೆ, ಸ್ವಭಾವತಃ ಕೆಟ್ಟವರಲ್ಲ. ಅವರ ಮೂಡು ಬೆಳಗ್ಗೆ ಎದ್ದಾಗ ಚೆನ್ನಾಗಿರುತ್ತದಾ? ನೋಡಿಕೊಳ್ಳಿ. ಆಗ ಕರಾರುವಾಕ್ಕಾಗಿ, ಯಾವ ಕಾರಣಕ್ಕೂ ತಪ್ಪಿಸದೆ ನೀವು ಅಥವಾ ನಿಮ್ಮ ಮಗಳು, ಅವರ ಬ್ಲಡ್ ಷುಗರ್ ಚೆಕ್ ಮಾಡಿ. ಮನೆಯಲ್ಲಿ ಗ್ಲುಕೋಮೀಟರ್ ಇಟ್ಟುಕೊಳ್ಳಿ. ಮದ್ಯವ್ಯಸನಿಯಾದ ಮಧುಮೇಹಿಗೆ ಬೆಳಗ್ಗೆ ನೋಡಲು ಸಿಗುವ ಈ ಬ್ಲಡ್ ರಿಪೋರ್ಟು ನಿಜಕ್ಕೂ ಥ್ರೆಟೆನಿಂಗ್ ಆಗಿರುತ್ತದೆ. ಸಕ್ಕರೆ ಹಿಡಿತದಲ್ಲಿಲ್ಲ ಅಂತ ಪದೇಪದೆ ಗೊತ್ತಾದಾಗ, ಅವರು ಸಹಜವಾಗಿಯೇ ತಮ್ಮ ಡಯಾಬಿಟಾಲಜಿಸ್ಟ್ ಬಳಿಗೆ ಓಡುತ್ತಾರೆ. ಅವರು ಹಾಗೆ ಹೋಗುವುದಕ್ಕೆ ಮುಂಚೆಯೇ, ನೀವು ಖಾಸಗಿಯಾಗಿ, ಪ್ರತ್ಯೇಕವಾಗಿ ಅವರ ಡಯಾಬಿಟಾಲಜಿಸ್ಟ್‌ನನ್ನು ಭೇಟಿಯಾಗಿ. ನನಗೆ ಹೇಳಿದಷ್ಟು ವಿವರವಾಗಿ ಅಲ್ಲದಿದ್ದರೂ, ನಿಮ್ಮ ಪತಿಯ ಮದ್ಯವ್ಯಸನ ಮತ್ತು ಅವರ ಕಟುವರ್ತನೆಗಳನ್ನು ಕುರಿತು ಡಯಾಬಿಟಾಲಜಿಸ್ಟ್‌ಗೆ ತಿಳಿಸಿ. `ಇನ್ನು ಮೇಲೆ ನೀವು ಕುಡಿಯುವುದನ್ನು ಬಿಡಲೇಬೇಕು ಅಂತ ನನ್ನ ಪತಿಯನ್ನು ಹೆದರಿಸಿ, ಆ ಮೂಲಕ ಮದ್ಯ ಬಿಡುವಂತೆ motivate ಮಾಡಿರಿ` ಎಂದು ಆ ವೈದ್ಯರನ್ನು ಕೇಳಿಕೊಳ್ಳಿ. ಕುಡಿತವನ್ನು ಕೂಡ ನಿಮ್ಮ ಪತಿ ಕೆಲವು ಔಷಧಿಗಳ ನೆರವಿನಿಂದ ಬಿಡಬಲ್ಲರು. ‘ಬಿಡಲೇ ಬೇಕು’ ಅಂತ ಖಡಾಖಂಡಿತವಾಗಿ ಅವರಿಗೆ ಹೇಳುವವರೊಬ್ಬರು ಬೇಕು. ಅದಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಡಯಾಬಿಟಾಲಜಿಸ್ಟ್!

ವ್ಯಾಪಾರದಲ್ಲಿ, ನೌಕರಿಯಲ್ಲಿ ಯಶಸ್ವಿಯಾದ ಮನುಷ್ಯನಿಗೆ ತನ್ನ ಇತರೆ ಬಲಹೀನತೆಗಳು ಕಾಣಿಸುವುದಿಲ್ಲ. ಕಂಡರೂ, ‘ನಾನು ದುಡಿದು ಹಾಕುತ್ತೀನಲ್ಲ, ಏನೀಗ?’ ಎಂಬ ಅಹಂಕಾರ, ಹಟಮಾರಿತನ ಬೆಳೆದುಬಿಟ್ಟಿರುತ್ತದೆ. ದುಡಿದು ಹಾಕುವುದು ಹೆಂಡತಿ-ಮಕ್ಕಳಿಗೇ ಆದ್ದರಿಂದ ಅವರ ಮೇಲೆಯೇ ದೌರ್ಜನ್ಯವೂ ನಡೆಯುತ್ತಿರುತ್ತದೆ. ನಿಮ್ಮ ವಿಷಯದಲ್ಲಿ ಆಗಿರುವುದೂ ಇದೆ. ದುರಂತವೆಂದರೆ ಡಯಾಬಿಟಿಸ್ ಮತ್ತು ಕುಡಿತ ಎರಡೂ ಹಂತ ಹಂತವಾಗಿ, ಜೊತೆಜೊತೆಯಲ್ಲೇ ಬೆಳೆಯುವ ಖಾಯಿಲೆಗಳು. ಕುಡಿತ ಬಿಡದ ಹೊರತು ಡಯಾಬಿಟಿಸ್ ಕಂಟ್ರೋಲಿಗೆ ಬರುವುದಿಲ್ಲ. ಎರಡನ್ನೂ ತಹಬಂದಿಗೆ ತಂದುಕೊಳ್ಳದ ಹೊರತು ಲೈಂಗಿಕವಾಗಿ ಸಕ್ರಿಯರಾಗಿರುವುದು ಸಾಧ್ಯವಿಲ್ಲ. ಲೈಂಗಿಕ ನಿಷ್ಕ್ರಿಯತೆಯ ಪರಿಣಾಮದಿಂದಾಗಿ ದೌರ್ಜನ್ಯ ಎಸಗುವಿಕೆ, ಅನುಮಾನಿಸುವಿಕೆ (ಅದಿನ್ನೂ ನಿಮ್ಮ ಪ್ರಕರಣದಲ್ಲಿ ಕಾಣಿಸಿಕೊಂಡಂತಿಲ್ಲ) ಮುಂತಾದವು ಆರಂಭವಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇದು ವಿಷವಲಯ. ಕುಡಿತ ಬಿಡುವುದರೊಂದಿಗೆ ಈ ವಿಷವರ್ತುಲ break ಆಗಬೇಕು. ನಿಮ್ಮ ಪತಿಗೆ ಮದುವೆಯಾಚೆಗಿನ ಸಂಬಂಧಗಳಾಗಲೀ, ಸಲಿಂಗ ಸಂಬಂಧಗಳಾಗಲೀ ಇದ್ದಂತಿಲ್ಲ.

ಇನ್ನು ಕೊನೆಯದಾಗಿ, ನಿಮ್ಮ ಆಖೈರು ಶತ್ರು ನಿಮ್ಮ ಗಿಲ್ಟು. ಅದರಿಂದ ಹೊರಬನ್ನಿ. ನಿಮಗಿನ್ನೂ ಮೂವತ್ತೆಂಟೇ ವರ್ಷ ವಯಸ್ಸು. ಇವತ್ತಿನಿಂದಲೂ ಹೊಸ ಬದುಕು ಆರಂಭಿಸಬಹುದು. ನಿಮ್ಮ ಪತಿ ತಮ್ಮ ಡಯಾಬಿಟಿಸ್‌ಗೆ ಹೆದರುವಂತೆ ಮಾಡಿ. ಅವರಿಗೆ ಆ ಕುರಿತಾದ ಪುಸ್ತಕ, ಲೇಖನ ಮುಂತಾದವುಗಳನ್ನು ನೆಮ್ಮದಿಯ moodನಲ್ಲಿದ್ದಾಗ ಕೊಡಿ. ನಿಮ್ಮ ಹಳೆಯ ನೋವು, ಜಗಳ, ಬೇಸರಗಳನ್ನು ಅವರ ಮುಂದೆ ಪದೇಪದೆ ಪ್ರಸ್ತಾಪಿಸಬೇಡಿ. ಅವರಿಗೆ ಆತ್ಮೀಯರಾಗಿರುವವರ ಮೂಲಕ ಅವರನ್ನು ಹೆಲ್ತ್ ಕಾನ್ಷಿಯಸ್ ಆಗಿ ಮಾಡಿ. ಗಂಡಸು ತುಂಬ ವಿಚಿತ್ರವಾದ ರೀತಿಯಲ್ಲಿ ಮಿಡ್‌ ಲೈಫ್ ಕ್ರೈಸಿಸ್‌ಗೆ ಒಳಗಾಗುತ್ತಾನೆ. ಆಗ ಇಂಥದ್ದೆಲ್ಲ ವರ್ತನೆಗಳು ಕಾಣಿಸಿಕೊಳ್ಳುತ್ತವೆ. ಕೊಂಚ ಸಹನೆಯಿಂದ ಇದನ್ನು ಎದುರಿಸಿ. ಡಿವೋರ್ಸ್ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ.

ಆರ್.ಬಿ.

Please follow and like us:
ನನ್ನ ಮಧುಮೇಹಿ ಗಂಡ ಹೀಗೇಕೆ ಮಾಡುತ್ತಾನೆ? 10
Sending
User Review
3.5 (4 votes)

Leave a Reply