Title

.ಅರವಿಂದ ಚೊಕಾಡಿ ಎಂಬ ಮಾರ್ಗದರ್ಶಿ

ಒಂದು ಕಾವ್ಯಾನುಸಂಧಾನ

.

Uday Kumar Habbu ಸರ್,

"ಓಹ್, ಭಾವ ಪರಿಮಳದಲ್ಲಿ ಲುಪ್ತ ನೆನಪುಗಳ ಲಕೋಟೆಯನ್ನು ರೇಷಿಮೆಯಂಥ ಮೃದುವಾದ ನಿಮ್ಮ ಬೆರಳುಗಳಿಂದ ನೀವು ತೆರೆದುಬಿಟ್ಟಿರಿ". ಇಲ್ಲಿ ನನ್ನ ಸುತ್ತ ಮುತ್ತಲೂ ಈಗ ಸುಗಂಧ ಹರಡಿಕೊಂಡಿದೆ. ಗಾಳಿ ಈಗ ಹೊಸ ಲಯ ಕಂಡುಕೊಂಡಿದೆ. ಅದು ಲಹರಿ ಲಹರಿಯಾಗಿ ಹರಿಯುತ್ತಿದೆ. ಲಕೋಟೆಯಿಂದ ಹೊಮ್ಮಿದ ಭಾವ ಸುಗಂಧ ಅದರ ಹೃದಯ ಸೇರಿರಬೇಕು; ಅದೀಗ ಮಧುರವಾಗಿ ಹಾಡುತ್ತಿದೆ. ನನ್ನ ಹೃದಯ,ಮನಸ್ಸು ಮತ್ತು ಆತ್ಮ ತಂಗಾಳಿ ಸೂಸಿ ಸಾಗುವ ಪರಿಮಳಯುಕ್ತ ಗಾನ ಲಹರಿಯ ಗಾರುಡಿಗೆ ಸೋತು ಮಾಧುರ್ಯ ಪಡೆದುಕೊಳ್ಳುತ್ತಿವೆ.

ಮನಸ್ಸು ಮುದಗೊಂಡಿದೆ. ಅದು ನಾದಮಯ, ಭಾವ ಪ್ರಪಂಚದಲ್ಲಿ ಪುಟ್ಟ ಮಗುವಿನಂತೆ ನರ್ತಿಸುತ್ತಿದೆ. ಹೃದಯದಲ್ಲಿ ಭಾವನೆಗಳ ಝರಿಯೊಂದು ಜಿನುಗುತ್ತದೆ. ಅದು ಜುಳು ಜುಳು ಮಂಜುಳ ನಿನಾದ ಮಾಡುತ್ತಾ ಹರಿಯುವ ಜೀವ ನದಿಯ ರೂಪ ತಳೆಯುತ್ತದೆ. ನಾನು ಪರ್ವತಗಳ ನೆತ್ತಿಯ ಮೇಲಿನಿಂದ ಹಾಡಾಗಿ ಹರಿಯುತ್ತೇನೆ. ರುದ್ರ ರಮಣೀಯ ಜಲಪಾತವಾಗಿ ಆಳವಾದ ಕಣಿವೆಗಳಿಗೆ ವೈಭವದಿಂದ ಧುಮುಕುತ್ತೇನೆ. ನಾನು ಬೆಟ್ಟ, ಗುಡ್ಡ, ಗಿರಿ, ಶಿಖರಗಳ ಕಲ್ಲು ಹೃದಯಗಳನ್ನು ಸೋಕಿ, ಅವುಗಳನ್ನು ಮೃದುವಾಗಿಸಿ, ಪ್ರತಿಧ್ವನಿಯಾಗಿ ಮಾರ್ದನಿಗೊಳ್ಳುತ್ತೇನೆ.

ನಾನು ಹುಲ್ಲು ಗಾವಲುಗಳಿಗಿಳಿದು ಹಸಿರಾಗುತ್ತೇನೆ. ಗಿಡ, ಮರ,ಬಳ್ಳಿಗಳ ಜೀವ ಸಂಚಾರದಲ್ಲಿ ಬೆರೆತು ಹಸಿರುಸಿರಾಗುತ್ತೇನೆ. ಹೂವುಗಳಾಗಿ ಅರಳುತ್ತೇನೆ. ಪರಿಮಳವಾಗಿ ಹೊಮ್ಮುತ್ತೇನೆ. ಮಾರ್ದವತೆಯ ಭಾಗವಾಗಿ ನಿಮ್ಮ ಹೃದಯದಲ್ಲಿ ಭಾವ ಸಂಜೀವಿನಿಯಾಗಿ ಮಿಡಿಯುತ್ತೇನೆ.

‌ಈ ಮಾತ್ರ ಪ್ರಕೃತಿಯು ತನ್ನೆಲ್ಲಾ ಸೌಂದರ್ಯವನ್ನು ಧಾರೆ ಎರೆದು ನನ್ನನ್ನು ಹಸು ಗೂಸಿನಂತೆ ಸಲುಹುತ್ತದೆ. ನಾನು ಈ ಅಖಂಡ ನಿಸರ್ಗದ ಭಾಗವಾಗಿ ಮೈ ದಳೆಯುತ್ತೇನೆ. ನನ್ನ ದುರಹಂಕಾರ, ದುರಭಿಮಾನಗಳು ನಾಶವಾಗುತ್ತವೆ. ಪ್ರೀತಿ, ದಯೆ, ಕರುಣೆ, ಮಮತೆ, ವಾತ್ಸಲ್ಯಗಳು ನನ್ನ ಸಂಗಾತಿಗಳಾಗುತ್ತವೆ. ನಾನು ಹೇಗೆ ಬದುಕಬೇಕು ಎಂದು ಹೂವುಗಳು ನನಗೆ ಹೇಳಿಕೊಡುತ್ತವೆ. ಪರಿಮಳವು ನನ್ನ ಸಂವೇದನೆಗಳನ್ನು ಸವರಿ ನಾನು ಹೇಗೆ ಮಾತಾಡಬೇಕೆಂದು ಕಲಿಸಿಕೊಡುತ್ತವೆ. ಶೃತಿ, ಸ್ವರ, ಲಯ, ರಾಗ, ತಾಳಗಳನ್ನು ಮೇಳೈಯಿಸಿ ಹೇಗೆ ಹಾಡಬೇಕೆಂದು ಹಕ್ಕಿಗಳು ಉಲಿದು ತಿಳಿಸುತ್ತವೆ. ಪಾರಿವಾಳಗಳು ಶಾಂತಿಯ ಮಂತ್ರವನ್ನು ಬೋಧಿಸುತ್ತವೆ. ನಾನು ಸಂತೋಷದಿಂದ ಹೇಗೆ ಬದುಕಬೇಕು ಎಂದು ಕಲಿಯುತ್ತೇನೆ. ದುಃಖವನ್ನು ತೊಡೆಯುವುದು ಹೇಗೆಂದು ಅರಿಯುತ್ತೇನೆ. ಜನರಿಂದಲೇ ತುಂಬಿರುವ ಈ ಸಮಾಜದಲ್ಲಿ ನಾನು ಇತರೊಂದಿಗೆ ಹೇಗೆ ಬದುಕಬೇಕು ಮತ್ತು ಸ್ವತಃ ನನ್ನೊಂದಿಗೆ ಹೇಗೆ ಬದುಕಬೇಕು ಎಂದು ಕಲಿಯುತ್ತೇನೆ.

ನಾನು ಪ್ರೀತಿಯ ಕಲೆಯನ್ನು ಕರಗತ ಮಾಡಿಕೊಳ್ಳುವುದು ಮತ್ತು ಈ ಜನ್ಮ ಭೂಮಿಯನ್ನು ಹೇಗೆ ಪ್ರೀತಿಸಬೇಕೆಂದು ಕಲಿಯುತ್ತೇನೆ. ನಾನು ಋತುಗಳ ಭಾಗವಾಗಿ ಅವುಗಳನ್ನು ಪ್ರತಿ ಋತು ಋತುವಿನಲ್ಲಿ ಹೇಗೆ ಪ್ರೀತಿಸಬೇಕೆಂದು ಕಲಿಯುತ್ತೇನೆ. ಅನು ದಿನದ ಅನು ಕ್ಷಣವನ್ನು, ಹಸಿರು ಗರಿಕೆಯ ನೆತ್ತಿಯ ಮೇಲಿನ ಹಿಮ ಮಣಿಗಳು, ಸೂರ್ಯೋದಯ, ಸೂರ್ಯಾಸ್ತ, ಕಾಮನಬಿಲ್ಲಿನ ಸಪ್ತ ವರ್ಣಗಳ ಮನೋಹರತೆ, ಬಿಸಿಲು, ಮಳೆ ಮತ್ತು ಕತ್ತಲೆಯಿಂದ ಹೇಗೆ ಪ್ರೀತಿಸಬೇಕೆಂದು ಕಲಿಯುತ್ತೇನೆ. ನಾನು ಈ ಅಸೀಮ ಪ್ರಕೃತಿಯ ಭಾಗವಾಗುತ್ತಾ ಪ್ರೀತಿ ಮತ್ತು ವಿಸ್ಮಯ ಒಂದೇ ಎಂದು ಅರಿಯುತ್ತೇನೆ. ನಾನು ನಾಟ್ಯವನ್ನು ಕಲಿಯುವಾಗ ಸಮುದ್ರದ ಅಲೆಗಳೊಂದಿಗೆ ಆಡುತ್ತೇನೆ. ಒಲವಿನ ಸಂದೇಶಗಳಿಗಾಗಿ ನಾನು ಗಾಳಿಗೆ ಕಿವಿಯಾಗುತ್ತೇನೆ. ಹಾಲು ಬೆಳದಿಂಗಳ ಹೊನಲು, ನಕ್ಷತ್ರ, ತಾರೆಗಳ ಹೊಳಪು, ತಾರಾ ಪುಂಜಗಳ ತೇಜಸ್ಸು ಮತ್ತು ಮೋಡಗಳ ಮಾಯೆಯಿಂದ ನಾನು ನಿಮ್ಮೊಂದಿಗೆ ನಲಿಯುವುದನ್ನು ಕಲಿಯುತ್ತೇನೆ. ಕಾಲದ ಚಲನೆಯೊಂದಿಗೆ ನಾನು ನಿಮ್ಮ ಹೆಜ್ಜೆಯೊಂದಿಗೆ ಹೆಜ್ಜೆ ಬೆರೆಸಿ ಜೊತೆ ಜೊತೆಯಲ್ಲಿ ಸಾಗುತ್ತೇನೆ. ನನ್ನ ಬದುಕು ಮತ್ತು ಸಾಹಿತ್ಯಿಕ ಪಯಣ ಆರಂಭವಾಗುತ್ತದೆ.

ನನ್ನ ಸಾಹಿತ್ಯಿಕ ಪಯಣದಲ್ಲಿ Aravinda Chokkadi ಅವರು ಜೊತೆ ಗೂಡುತ್ತಾರೆ. ಅರಿಯದ ದಾರಿಯಲ್ಲಿ ಹೆಜ್ಜೆ ಹಾಕಿ ಹೊರಟ ನನಗೆ ಬದುಕಿನ ಅದ್ಯಾವುದೋ ತಿರುವಿನಲ್ಲಿ ಅಕಸ್ಮಿಕವಾಗಿ ಅವರ ಭೇಟಿಯಾಗುತ್ತದೆ. ಹತ್ತು ಹೆಜ್ಜೆ ಜೊತೆ ಜೊತೆಯಾಗಿ ಸಾಗುತ್ತಿದ್ದಂತೆ ಪರಸ್ಪರ ಪರಿಚಯವಾಗುತ್ತದೆ. ಯಾವುದೋ ಜನ್ಮದ ಅನುಬಂಧ ಇರಬೇಕು; ಪರಿಚಯ ಸ್ನೇಹದಲ್ಲಿ ಬದಲಾಗುತ್ತದೆ. ನಮ್ಮಿಬ್ಬರ ಹೆಜ್ಜೆಗಳು ಬೆರೆಯುತ್ತವೆ. ಮನಸ್ಸು ಒಂದಾಗುತ್ತವೆ. ಹೃದಯಗಳು ಮಾತಿಗಿಳಿಯುತ್ತವೆ. ಕಣ್ಣ ಮುಂದೆ ಭಾವಮಯ ದಾರಿಯೊಂದು ತೆರೆದುಕೊಳ್ಳುತ್ತದೆ. ಕನಸುಗಳು ಗರಿಗೆದರುತ್ತವೆ. ಭಾವನೆಗಳು ಹಕ್ಕಿಗಳ ಹಾಡಿನ ಲಯ ಕಂಡುಕೊಳ್ಳುತ್ತವೆ. ಅಕ್ಷರಗಳು ಹೊನಲಾಗುತ್ತವೆ. ನಾನು ಕನಸುಗಳ ಲೋಕದಲ್ಲಿ ವಿಹರಿಸತೊಡಗುತ್ತೇನೆ. ಅವರು ಭಾವಮಯತೆಯಿಂದ ನಗುತ್ತಾರೆ. ಭಾವನಾ ಜಗತ್ತಿನಿಂದ ವಾಸ್ತವದ ಲೋಕಕ ಇಳಿಸಿ, ಸತ್ಯದ ದರ್ಶನ ಮಾಡಿಸುತ್ತಾರೆ. ಗಮ್ಯ ಯಾವುದೆಂದು ಅರಹುತ್ತಾರೆ. ಅದನ್ನು ತಲುಪುವ ದಾರಿಯನ್ನು ತೋರಿ ಮುನ್ನಡೆಸುತ್ತಾರೆ.

ನನ್ನೊಳಗೆ ಭಾವಮಯತೆ, ಭಾವಗೀತಾತ್ಮಕತೆ, ಕಾವ್ಯ ಸುಧಾಮಯತೆ, ಕಾವ್ಯಾತ್ಮಕತೆ, ಭಾವ ಲಾಲಿತ್ಯ, ಭಾವ ಸುಧಾಮಯತೆ, ನಾದಮಯತೆ, ನಾದ ಮಾಧುರ್ಯತೆ, ತಾಲ್ಲೀನ್ಯತೆ ಮತ್ತು ತಾದ್ಯಾತ್ಮತೆಯ ಬೀಜಾಂಕುರವಾಗುತ್ತದೆ. ಅದು ಚಿಗುರೊಡೆಯುತ್ತದೆ. ರೆಂಬೆ-ಕೊಂಬೆಗಳಾಗಿ ಟಿಸಿಲೊಡೆಯುತ್ತದೆ. ಹೆಮ್ಮರವಾಗಿ ಬೆಳೆದು, ಬೇರು ಬಿಟ್ಟು ಗಟ್ಟಿಯಾಗಿ ನಿಲ್ಲುತ್ತದೆ. ಆ ಮರದಲ್ಲಿ ಕವಿತೆಗಳು, ಕಾವ್ಯಗಳು, ಗದ್ಯ, ಪ್ರಬಂಧಗಳು ಹೂವಾಗಿ ಅರಳುತ್ತವೆ. ಪರಿಮಳ ಬೀರುತ್ತವೆ. ಸುತ್ತಮುತ್ತಲಿನ ವಾತಾವರಣ ಸುಗಂಧದಿಂದ ತುಂಬುತ್ತದೆ. ಭ್ರಮರಗಳು ಮಧುರವಾಗಿ ಝೇಂಕರಿಸುತ್ತವೆ. ಜೇನ್ನೊಣಗಳು ಕವಿತೆ ಓದುತ್ತವೆ. ಹಕ್ಕಿಗಳು ಕಲರವಿಸುತ್ತವೆ. ಆ ಲೇಖನಗಳು, ಕವಿತೆಗಳು ದುಂಬಿಗಳ ಗುಂಜಾರವದಲ್ಲಿ, ಹಕ್ಕಿಗಳ ಉಲಿಯಲ್ಲಿ, ಜೇನ್ನೊಣಗಳ ಝೇಂಕಾರದಲ್ಲಿ ಹೊಮ್ಮಿ, ನಿಮ್ಮ ಹೃದಯ ವರೆಗೆ ಸಾಗುತ್ತವೆ. ಹೃದಯದ ಕದ ತೆರೆದು ಅಲ್ಲೊಂದು ಪ್ರಿಯವಾದ ಸ್ಥಾನ ಪಡೆದುಕೊಳ್ಳುತ್ತವೆ.

ಓಹ್... ಅದೊಂದು ರಮ್ಯ ಲೋಕ. ಅದು ರಮಣೀಯತೆಯ ಅನನ್ಯ ತಾಣ. ಈ ಜಾಗದ ವಿಳಾಸವನ್ನು ಆತ್ಮೀಯ ಗೆಳೆಯ ಅರವಿಂದ ಚೊಕ್ಕಾಡಿಯವರು ನನಗೆ ನೀಡಿದ್ದು. ಅವರ ಪ್ರೀತಿ ಅಪಾರ. ಇದೆಲ್ಲಾ ಅವರದೇ ಕೊಡುಗೆ. ಅವರಿಗಾಗಿಯೇ ಮೀಸಲಾಗಿರುತ್ತದೆ. ನನಗೆ ಮತ್ತೇನೂ ಬೇಡ ನಿಮ್ಮಂತಹ ಸಜ್ಜನರ ಹೃದಯದಲ್ಲಿ ಒಂದು ಪುಟ್ಟ ಜಾಗ ಸಾಕು.

‌ ಈ ಭಾವ ಸುಮಗಳ ಸುಂದರ ಹೂ ಮಾಲೆಯನ್ನು ಅರವಿಂದರಿಗೇ ಸಮರ್ಪಿಸುತ್ತಾ, ಎದೆಯ ಮೂಲೆಯಲ್ಲಿ ಸುಪ್ತವಾಗಿ ಮಲಗಿದ್ದ ನನ್ನ ಭಾವನೆಗಳನ್ನು ಅಪ್ಯಾಯತೆಯಿಂದ ಸೋಕಿ, ಮಾತನಾಡಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಪ್ರೀತಿಯ ಉದಯ ಕುಮಾರ್ ಹಬ್ಬು ಸರ್❤🙏

ಖಾದರ್ ಮೊಹಿಯೊದ್ದೀನ್. ಕೆ.ಎಸ್

#ಖಾದರ್_ಮೊಹಿಯೊದ್ದೀನ್_ಕೆ_ಎಸ್

ಚಿತ್ರ ಸಾಂಕೇತಿಕ:-

More Literatures

" ಬದುಕು ಒಂದು ಕನಸಿನಂತೆ.

ಸ ... Read More

ನೋವು ಕಾಡುವಾಗ

ನೋವು ನುಂಗ ... Read More

.ಅರವಿಂದ ಚೊಕಾಡಿ ಎಂಬ ಮಾರ್ಗದರ್ಶ ... Read More

ದೇವರಿದ್ದಾನೆಯೇ!!!?

ಹಸಿವು ಹೈ ... Read More

ವಿಠ್ಠಲ ಮೂರ್ತಿ ಸರ್,

ಸಾಗರದವ ... Read More