Title

ನೋವು ಕಾಡುವಾಗ

ನೋವು ನುಂಗಿ ನಗುವುದು ಹೇಗೆ? ಎಂದು ನಿಮಗೆ
ವಿವರಿಸಲಾರೆ

ನಾವೆಲ್ಲಾ ಒಂದಿಲ್ಲಾ ಒಂದು ಕಾರಣಕ್ಕೆ ನೋವಿನ ತೋಳ
ತೆಕ್ಕೆಗೆ ಜಾರಿ ಅದರಿಂದ ಬಿಡಿಸಿಕೊಂಡು ನಗು ನಗುತ್ತಾ
ಜೀವನವನ್ನು ಎದುರಿಸಿದವರು

ಹೊಂಚು ಹಾಕಿ, ಸಮಯ ನೋಡಿ ಸಂಚು ಮಾಡಿ
ಸಂತಸದಲ್ಲಿ ಇರುವವರನ್ನು, ಸಂಭ್ರಮದಲ್ಲಿ ಮೈ ಮರೆತವರನ್ನು ಹುಡುಕಿ ತೆಗೆದು ಪೀಡಿಸುವುದೆಂದರೆ
ಅದಕ್ಕೆ ಬಲು ಹಿಗ್ಗು

ನೋವಿಗೆ ಜೀವಿಗಳೆಂದರೆ ಅಚ್ಚು ಮೆಚ್ಚು, ಅವುಗಳ ಜೀವನದೊಳಗೆ ಪ್ರವೇಶ ಮಾಡಲು ಅದಕ್ಕೆ ಆತುರ

ಸಂತಸದ ಅಂಚನ್ನು ಅರಸಿ ಬೆಳಗುವ ಕಂಗಳು
ಒಲವಿನಾಸರೆಗಾಗಿ ಮಿಡಿಯುವ ಹೃದಯಗಳು,
ಗಮ್ಯವನ್ನು ಗರಿಯಾಗಿಸಿ ಯೋಜಿಸುವ ಮನಸ್ಸುಗಳು
ಅದರ ಲಕ್ಷ್ಯ

ನೋವು ಯಾಕಾದಾರೂ ಬರುತ್ತದೆ? ಎಂದು ನಿಮಗೆ
ವಿವರಿಸಲಾರೆ
ನೋವು ಮತ್ತು ಸಂತಸ ಅವಳಿ ಮಕ್ಕಳು, ಒಂದನೊಂದು
ಬಿಟ್ಟಿರಲಾರದ ಬಂಧ ಅವುಗಳ ನಡುವೆ
ಸಂತಸ ಇರುವ ವರೆಗೆ ಅದು ಅದರ ಸಂಗಾತಿಯಾಗಿಯೇ ಇರುತ್ತದೆ

ನೋವು ಸಂತಸವನ್ನು ತಬ್ಬಿದರೆ ಅದು ನಲಗುತ್ತದೆ
ಸಂತಸ ನೋವನ್ನು ಅಪ್ಪಿದರೆ ಅದು ನಲಿಯುತ್ತದೆ
ಇದು ಅವುಗಳ ನಡುವಿನ ಅನುಸಂಧಾನ

ನೋವಿನ ಸಾಗರವನ್ನು ದಾಟಿ ಸಂತಸದ ತಟ ಸೇರಲು
ಯುಗ ಯುಗಗಳೇ ಬೇಕು ಎಂದು ಕೆಲವೊಮ್ಮೆ ಅನ್ನಿಸಿ ದಿಗಿಲು ಮೂಡಲೂ ಬಹುದು

ಹಗಲು ಮತ್ತು ರಾತ್ರಿಗಳ ಹಾಗೆ, ಬಿಸಿಲು ಮತ್ತು ನೆರಳಿನ ಹಾಗೆ, ನೋವು ನಲಿವುಗಳೆರೆಡೂ ಪ್ರಕೃತಿಯ ಚಿತ್ತ ಸೌಂದರ್ಯದ ಭಾಗ

ಹೀಗಾಗಿ,
ನಾವು ಸಂತಸವನ್ನು ಲಕ್ಷ್ಯವಾಗಿಸಿ ಮುಂದಡಿ ಇಡೋಣ
ನೋವು ನಮ್ಮ ಹಿಂದೆ ಇರುವಂತೆ ಅದಕ್ಕೆ ಬೆನ್ನು ತೋರಿಸಿ
ಮುಂದೆ ಸಾಗೋಣ

ನಾವು ಮುಂದೆ ಮುಂದೆ ಸಾಗುತ್ತಾ, ನೋವನ್ನು ಹಿಂದೆ ಹಾಕುತ್ತಾ, ಸಂತಸ ಸಮ್ಮುಖದಲ್ಲಿ ನಿಂತಾಗ ವರ ಪಡೆದವರಂತೆ ಅದನ್ನು ತೆರೆದ ಹೃದಯದಿಂದ ಬರ ಮಾಡಿಕೊಳ್ಳೋಣ

ನಮಗಿರುವುದು ಇದೊಂದೇ ಬದುಕು, ಇರುವಷ್ಟು ದಿನ ಅನುನಯದಿ, ಅನುರಾಗದಿ, ಪ್ರೀತಿಸುತ್ತಾ, ಪ್ರೀತಿಯನ್ನು ಹಂಚುತ್ತಾ, ನಗುತ್ತಾ, ನಗಿಸುತ್ತಾ ಸಂತಸದಿಂದ ಬದುಕೋಣ

ಖಾದರ್ ಮೊಹಿಯೊದ್ದೀನ್. ಕೆ.ಎಸ್
#ಖಾದರ್_ಮೊಹಿಯೊದ್ದೀನ್_ಕೆ_ಎಸ್

More Literatures

" ಬದುಕು ಒಂದು ಕನಸಿನಂತೆ.

ಸ ... Read More

ನೋವು ಕಾಡುವಾಗ

ನೋವು ನುಂಗ ... Read More

.ಅರವಿಂದ ಚೊಕಾಡಿ ಎಂಬ ಮಾರ್ಗದರ್ಶ ... Read More

ದೇವರಿದ್ದಾನೆಯೇ!!!?

ಹಸಿವು ಹೈ ... Read More

ವಿಠ್ಠಲ ಮೂರ್ತಿ ಸರ್,

ಸಾಗರದವ ... Read More