Title

" ಬದುಕು ಒಂದು ಕನಸಿನಂತೆ.

ಸಾವೊಂದು ಮಹಾ ಅರಿವಿನಂತೆ "

...

ನಿಜ ಹೇಳಬೇಕೆಂದರೆ ನನ್ನದ್ಯಾವುದೂ ಗುರುತು ಅನ್ನುವುದು ಇಲ್ಲ. ನಾನು ಹುಟ್ಟಿದಾಗ ನನ್ನ ಹೆತ್ತವರು

ನನಗೊಂದು ಹೆಸರಿಟ್ಟು ಕರೆದಿರಬಹುದು. ಈಗ ಅದೇ ನಾಮಧೇಯದಿಂದ ಜನ ನನ್ನನ್ನು ಕೂಗಿ ಕರೆಯುತ್ತಾರೆ. ಆದರೆ ಅಂತಹ ಹೆಸರುಳ್ಳವರು ಈ ಜಗತ್ತಿನಲ್ಲಿ ಅದೆಷ್ಟೋ ಜನ ಇರಬಹುದು ಎಂದು ಅರಿವಾದ ಮೇಲೆ ಯಾರಾದರೂ ನನ್ನನ್ನೇ ಕೂಗಿ ಕರೆದರೂ ಬೇರೆ ಯಾರನ್ನೋ ಕರೆದಿರಬಹುದೆಂದು ಊಹಿಸಿ ಕೇಳಿಯೂ ಕೇಳದವನಂತೆ ಉದಾಸೀನ ಭಾವ ತಾಳುತ್ತೇನೆ.

ನನಗೆ ಒಮ್ಮೊಮ್ಮೆ ಅನ್ನಿಸುತ್ತದೆ; ಈ ಹೆಸರಲ್ಲಾದರೂ ಏನಿದೆ ? ಯಾವುದೇ ಒಬ್ಬ ವ್ಯಕ್ತಿಯನ್ನು ಗುರುತಿಸಲು ಬರೀ ಹೆಸರಷ್ಟೇ ಸಾಕೇ ? ಯಾರಾದರೂ ಗುಂಪಿನಲ್ಲಿ ನಿಂತು ಯಾವುದೋ ಒಂದು ಹೆಸರು ಹಿಡಿದು ಕೂಗಿದರೆ ಅದೆಷ್ಟು ಜನ ತಾನಿರಬಹುದೇ,ತಾನಾಗಿರಬಹುದೇ, ಎಂದು ತಿರುಗಿ ನೋಡಲಾರರು ? ಬರೀ ಹೆಸರಿನಿಂದಲೇ ವ್ಯಕ್ತಿಯೊಬ್ಬನನ್ನು ಗುಂಪಿನಲ್ಲಿ ನಿಖರವಾಗಿ ಗುರುತಿಸುವುದು ಅಸಾಧ್ಯವೆಂದಾದ ಮೇಲೆ ಅಂತಹ ಹೆಸರು ಇಟ್ಟು ಕೊಂಡಾದರೂ ಸಾಧಿಸುವುದಾದರೂ ಏನಿದೆ ? ಆದರೆ ವ್ಯಕ್ತಿಯೊಬ್ಬನಿಗೆ ಒಂದು ಹೆಸರು ಅನ್ನುವುದು ಬೇಕೇ ಬೇಕಲ್ಲವೇ ? ಅದನ್ನಿರಿಸಿಕೊಂಡೇ ತನ್ನ ಅಸ್ತಿತ್ವವನ್ನು ಖಚಿತ ಪಡಿಸಲು ಬೇರೆ ಏನಾದರೂ ಮಾಡಲೇಬೇಕಲ್ಲವೇ ? ಅದು ಏನು ? ಅದು ಏನು ಅನ್ನುವ ಪ್ರಶ್ನೆ ಬಾರಿ ಬಾರಿಗೂ ಎದುರು ನಿಂತು ಎತ್ತರದ ದನಿಯಲ್ಲಿ ಕೇಳಿ ನನ್ನನ್ನು ಮತ್ತೆ ಮತ್ತೆ ತತ್ತರಗೊಳಿಸುತ್ತದೆ. ಆ ಪ್ರಶ್ನೆಗೆ ನೀಡಬಹುದಾದ ಉತ್ತರದ ಹುಡುಕಾಟದಲ್ಲಿ ನನ್ನ ಕಣ್ಣ ಮುಂದೆ ವಿಶಾಲವಾದ ಬದುಕೆನ್ನುವ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಬದುಕಿನಲ್ಲಿ ಅಸಾಧ್ಯ ಎನ್ನುವುದನ್ನು ಸಾಧ್ಯವಾಗಿಸುವ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುವುದು ಇಂತಹ ಸಂದಿಗ್ಧ ಸಂದರ್ಭಗಳಲ್ಲಿಯೇ ಅಲ್ಲವೇ ? ಬದುಕಿನೆಡೆಗೆ ಅದಮ್ಯ ಪ್ರೀತಿ ಹುಟ್ಟುವುದೂ, ಜೀವಚೈತನ್ಯ ಚಿಲುಮೆಯಾಗಿ ಚಿಮ್ಮುವುದೂ ಇಂತಹ ಸಮಯದಲ್ಲಿಯೇ ಅಲ್ಲವೇ !?

ಬದುಕೆಂದರೆ ಹರಿಯುವ ನದಿಯಂಥದ್ದು. ಮಧುರವಾದ ಹಾಡಿನಂಥದ್ದು‌. ಅಂತಹ ಸುಂದರ ಮತ್ತು ಸವಿಯಾದ ಬದುಕನ್ನು ಬದುಕುವುದಕ್ಕೆ ಒಂದಿಷ್ಟು ಸಿದ್ಧತೆಯೂ ಮಾಡಿಕೊಳ್ಳಬೇಕಲ್ಲವೇ ? ಆ ದಾರಿಯ ಪಯಣ ಬದುಕೆಂಬ ಬದುಕಿನ ಕುರಿತು ನನ್ನಲ್ಲಿ ಹೊಸ ಪುಳಕವನ್ನು ಹುಟ್ಟುಹಾಕುತ್ತದೆ. ಆಳದಲ್ಲಿ ಒಂದು ಅನೂಹ್ಯ ಕುತೂಹಲ ಚಿಗುರೊಡೆಯುತ್ತದೆ. ಒಳಗೆ ಜೀವಧಾರೆಯೊಂದು ಜಿನುಗಿ ಭಾವಗಳು ಹದಗೊಳ್ಳುತ್ತವೆ. ಒಂದಿಡೀ ಬದುಕನ್ನು ಇಡಿ ಇಡಿಯಾಗಿ, ಪೂರ್ತಿಯಾಗಿ ಬದುಕಬೇಕೆಂಬ ತವಕ ಹುಟ್ಟಿಕೊಳ್ಳುತ್ತದೆ. ನಾನು ಜಗತ್ತು ತನಗೆ ತಾನೇ ಎಳೆದುಕೊಂಡ ಗಡಿರೇಖೆಗಳನ್ನು ಅಳಿಸಿಹಾಕಬೇಕೆಂದು ಬಯಸುತ್ತೇನೆ. ದೇಹ ಮತ್ತು ಮನಸ್ಸುಗಳೆರಡನ್ನೂ ಬಂದಿಯಾಗಿಸಿರುವ ಸಂಕೋಲೆಗಳನ್ನು ತುಂಡರಿಸಬೇಕು ಅಂದುಕೊಳ್ಳುತ್ತೇನೆ. ಹರಿಯುವ ನೀರಿನ ತೆರದಿ ಅಡೆತಡೆಗಳನ್ನು ಮೀರಿ, ಗಡಿಗಳನ್ನು ದಾಟಬೇಕು ಎಂದು ಕನವರಿಸುತ್ತೇನೆ. ಬೆಟ್ಟ, ಗುಡ್ಡ, ಗಿರಿ-ಕಂದರಗಳನ್ನು ಏರಿಳಿಯುತ್ತಾ, ದುರ್ಗಮ ಘಟ್ಟಗಳಲ್ಲಿ ಹಾದು ಹೋಗುತ್ತಾ, ಸ್ವತಃ ದಾರಿಯನ್ನು ನಿರ್ಮಿಸಿಕೊಳ್ಳುತ್ತಾ, ಹೆಜ್ಜೆ ಇಡುವಲ್ಲೆಲ್ಲ ನಾದ, ಮಧುರವಾಗಿ ಹಾಡಿಕೊಳ್ಳುತ್ತಾ , ಬಾಯಾರಿ, ಬಳಲಿ, ಬೆಂಡಾದ ಜೀವಿಗಳ ದಾಹ ತಣಿಸುತ್ತಾ, ಬರಡು ಭೂಮಿಯಲ್ಲಿ ಜೀವಸೆಲೆಯುಕ್ಕಿಸುತ್ತಾ, ಹಸಿರು ಉಸಿರಾದ ಶಬ್ದಗಳಲ್ಲಿ ಬದುಕಿಗೊಂದು ಅರ್ಥ ಬರೆಯುತ್ತಾ, ಗೊತ್ತಾದ ಗಮ್ಯವನ್ನು ಸೇರಬೇಕೆಂದು ಕನಸುತ್ತೇನೆ. ಅದಕ್ಕಾಗಿ ನಾನು ಹರಿದು ಹಸನುಗೊಳಿಸಬೇಕಾದ ಸ್ಥಳಗಳನ್ನು ಮೊದಲೇ ಗೊತ್ತು ಮಾಡಿಟ್ಟುಕೊಂಡಿದ್ದೇನೆ. ಆ ಪಟ್ಟಿಯಲ್ಲಿ ನಾನು ಬರೆದಿಟ್ಟುಕೊಂಡ ಮೊದಲ ಹೆಸರು..., ಶತಮಾನಗಳ ಕಾಲ ವಸಾಹತು ಶಾಹಿಗಳ ಹಿಂಸೆ, ಕ್ರೌರ್ಯ, ದಬ್ಬಾಳಿಕೆ, ದಮನ, ಅಮಾನವೀಯತೆ ಮತ್ತು ಗುಲಾಮಗಿರಿಗೆ ಸಿಲುಕಿ ನರಳಿ, ನಲುಗಿದ ನನ್ನ ಪ್ರೀತಿಯ ದೇಶ.

ಅಲ್ಲಿ ನಾನು ಹೆಜ್ಜೆ ಇಡುವುದಕ್ಕಿಂತ ಮೊದಲು ದಶಕಗಳ ಕಾಲದ ಹಿಂದೆ ನನ್ನಂಥವನೊಬ್ಬ ಜೀವಸೆಲೆಯಾಗಿ ಜಿನುಗುತ್ತಿದ್ದ. ಜುಳು ಜುಳು ಹರಿವ ತೊರೆಯಾಗಿ, ಹಾಡುವ ಹೊಳೆಯಾಗಿ ಬಂಜರು ಭೂಮಿಯಲ್ಲಿ ಹಸುರುಕ್ಕಿಸಿ ಜೀವ ಚೈತನ್ಯ ಚಿಗುರೊಡೆಯಲು ಕಾರಣನಾಗಿದ್ದ. ಅಲ್ಲಿ ಗಿಡಮರಗಳು ನೆಲದಾಳದಲ್ಲಿ ಆಳವಾಗಿ ಬೇರು ಬಿಟ್ಟು, ರೆಂಬೆ- ಕೊಂಬೆಗಳಾಗಿ ಟಿಸಿಲೊಡೆದು, ಹಸಿರು ಹೊಮ್ಮಿ ಯುಗದ ಪ್ರವಾದಿಯ ಸಂತನೊಬ್ಬ ತನ್ನ ಎರಡೂ ಕೈ ಎತ್ತಿ ಆಕಾಶದತ್ತ ನಿರುಮ್ಮುಳವಾಗಿ ಮುಖ ಮಾಡಿ ಬೊಗಸೆ ತುಂಬಾ ಪ್ರೀತಿ ಕೊಡು ಭಗವಂತ ಎಂದು ಪ್ರಾರ್ಥನೆ ಸಲ್ಲಿಸುತ್ತಿರುವಂತೆ ಕಂಗೊಳಿಸುತ್ತಿದ್ದವು. ಅವನು ನೋವು, ನಿರಾಸೆ, ದುಃಖ, ದುಮ್ಮಾನ, ಹಸಿವು, ಬಾಯಾರಿಕೆ, ಕ್ರೌರ್ಯ, ತಾರತಮ್ಯ, ದಮನ, ದಬ್ಬಾಳಿಕೆ, ರೋಗರುಜಿನಗಳು ಎಂದೂ ಕಾಡಬಾರದೆಂದು ಅಲ್ಲಿನ ಫಲವತ್ತಾದ ಭೂಮಿಯಲ್ಲಿ ಸತ್ಯ ,ಅಹಿಂಸೆ ಮತ್ತು ಮಾನವಪ್ರೇಮದ ಬೀಜಗಳನ್ನು ಬಿತ್ತಿದ್ದ. ಅವು ಮೊಳಕೆಯೊಡೆದು, ಚಿಗಿತು, ಹೆಮ್ಮರವಾಗುವುದನ್ನು ಕಂಡು ಆತ ಪುಟ್ಟ ಮಗುವಿನಂತೆ ನಲಿಯುತ್ತಿದ್ದ. ಅವನ ಅನವರತ ಪ್ರಯತ್ನದಿಂದ ಅದೊಂದು ನೆಮ್ಮದಿಯ ತಾಣವಾಗಿ ರೂಪುಗೊಂಡಿತ್ತು. ಅದು ಈ ಭೂಮಿಯ ಮೇಲೆ ಶಾಶ್ವತವಾಗಿ ಉಳಿಯಬೇಕೆಂಬುದು ಅವನ ಕೊನೆಯಾಸೆಯಾಗಿತ್ತು. ಆದರೆ ಅವನನ್ನೀಗ ಅಲ್ಲಿ ಕುಣಿ ತೊಡಿ ಮಲಗಿಸಲಾಗಿದೆ.

ನಾನು ತಿಳಿದಂತೆ, ಅವನು ಹುಟ್ಟುವಾಗ ಯಾವುದೇ ಗುರುತನ್ನು ಹೊತ್ತು ತಂದಿರಲಿಲ್ಲ. ನಮ್ಮ ನಿಮ್ಮ ಹಾಗೆಯೇ ಅವನ ಎಳೆಯ ಪಾದಗಳು ಈ ಮಣ್ಣಿನ ಮೇಲೆಯೇ ಮುದ್ರೆಯೊತ್ತುತ್ತಾ ಅಲೆಯುತ್ತಿದ್ದವು. ಆದರೆ ಅಂತಹ ಯಾವ ಮುದ್ರೆಗಳೂ ಶಾಶ್ವತವಲ್ಲ ಅನ್ನುವುದು ಬಲುಬೇಗ ಅವನ ತಿಳಿವುಗೆ ಬಂತು. ಅವನ ನಡಿಗೆಯಿಂದ ಮೃದುಗೊಂಡ ಮಣ್ಣು ಅವನ ಅಂಗಾಲಿಗೆ ಮೆತ್ತಿಕೊಳ್ಳುತ್ತಾ ಅವನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಹಾಕುತ್ತಿತ್ತು. ಆಗೆಲ್ಲಾ ಅವನ ಉಸಿರ ತಿತ್ತಿಗಳಿಂದ ಉದ್ವಿಗ್ನತೆ ತುಂಬಿದ ತಾರುಣ್ಯದ ಬಿಸುಪು ಹೊರಸೂಸುತ್ತಿತ್ತು‌. ಅಂತಹ ಬಿಸುಪು ಅವನಿಗೆ ಕಾಮನೆಗಳ ಅರ್ಥ ಏನೆಂಬುದನ್ನು ತೋರಿಸಿಕೊಡುತ್ತಿತ್ತು. ಆಗೆಲ್ಲಾ ಅವನು ಕೊತ ಕೊತ ಕುದಿಯುವ ನೀರಾಗುತ್ತಿದ್ದ. ಆತನ ಕುದಿತದ ಹಬೆ ಇಲ್ಲಿ ಮೋಡವಾಗಿ ಹೆಪ್ಪಗಟ್ಟಿ ಮಳೆಯಾಗಿ ಸುರಿಯುತ್ತಿತ್ತು. ಆ ಮಳೆಯ ನೀರು ಬರಿದೇ ನೀರಾಗಿರಲಿಲ್ಲ. ಪವಿತ್ರ ತೀರ್ಥವಾಗಿತ್ತು. ಅದನ್ನೇ ಅವನು ಬಲು ಪ್ರೀತಿಯಿಂದ ಜನರ ಹೃದಯಗಲ್ಲಿ ಮತ್ತು ಮಣ್ಣ ಮಡಿಲಲ್ಲಿ ಹರಿಯಬಿಡುತ್ತಿದ್ದ. ಅಂತಹ ತೀರ್ಥವನ್ನು ಧರಿಸಿದ ಎದೆಯ ಬಯಲು ಮತ್ತು ಮರುಭೂಮಿಯ ಒಡಲು ಹಸುರುಕ್ಕಿ ನಲಿಯುತ್ತಿತ್ತು. ಅವನು ಯಾವಾಗಲೂ ಜನರ ನಡುವೆಯೇ ಬದುಕುತ್ತಿದ್ದ. ಸಾಮಾನ್ಯ ರೈತನಂತೆಯೇ ನೆಗಿಲು ಹಿಡಿದು ಉಳುಮೆ ಮಾಡುತ್ತಿದ್ದ. ಭೂಮಿ ಹಸನಾಗಿ, ಹದಗೊಂಡಾಗ ಬಿತ್ತನೆ ಕಾರ್ಯದಲ್ಲಿ ನಿರತನಾಗುತ್ತಿದ್ದ. ಅವನು ಬಿತ್ತಿದ ಮಾನವ ಪ್ರೇಮದ ಬೀಜಗಳನ್ನು ಅಲ್ಲಿನ ಭೂಮಿ ಇಂದಿಗೂ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆಯಂತೆ.

ಅಲ್ಲಿ ನದಿಯೊಂದು ಜುಳು ಜುಳು ಮಂಜುಳ ನಿನಾದ ಮಾಡುತ್ತಾ ಅನವರತ ಹರಿಯುತ್ತಿದೆ. ಅದರ ತಟದ ಮೇಲಿನ ಸುಂದರ ಹೂದೋಡದಲ್ಲಿ ಹೂ ಗಿಡಗಳು ಹೂ ಬಿಟ್ಟು ನಳನಳಿಸುತ್ತಿವೆ. ಅಲ್ಲಿ ಹರಡಿಕೊಂಡ ಪರಿಮಳದಲ್ಲಿ ಕ್ರಾಂತಿಗೀತೆಗಳ ಘಮ ಸೂಸುತ್ತದೆ. ಅಲ್ಲಿನ ಗಿಡಮರಗಳಲ್ಲಿ ತೊನೆದು ನಿಂತ ಹೀಚು ಹಣ್ಣುಗಳಲ್ಲಿ ಬದಲಾವಣೆಯ ಸ್ವಾದ ತುಂಬಿದೆ. ಅದೇ ನದಿಯ ದಂಡೆಯ ಮೇಲೆ ಅವನು ಕೈಯಾರೆ ಕಟ್ಟಿ ನಿಲ್ಲಿಸಿದ ಆಶ್ರಮವೂ ಇದೆ. ಆದರೆ ಒಳಗೆ ಅವನು ಮಾತ್ರ ಇಲ್ಲ. ಅಲ್ಲಿ ಅವನ ದೊಡ್ಡದಾದ ಭಾವಚಿತ್ರಕ್ಕೆ ಕಟ್ಟು ಹಾಕಿಸಿ ಮೇಜಿನ ಮೇಲಿರಿಸಿದ್ದಾರೆ. ನೆಲಕ್ಕೆ ಪ್ಲಾಸ್ಟಿಕ್ ನ ಕೃತಕ ಹಸುರು ನೆಲಹಾಸನ್ನು ಹಾಸಿದ್ದಾರೆ. ಪಕ್ಕದ ಕಪಾಟಿನಲ್ಲಿ ಅವನ ಕೈ ಬರಹದ ಪುಸ್ತಕಗಳು ತುಂಬಿವೆ. ಅವುಗಳ ಸಮೀಪ ಸುಳಿದರೆ ಸಾಕು ಆತನ ಕೈ ಬೆವರಿನ ವಾಸನೆ, ಆರದ ಮಸಿಯ ಹಸಿ ಮೂಗಿನ ಹೊರಳೆಗಳಲ್ಲಿ ತುಂಬಿಕೊಂಡು ಮತ್ತೇರಿಸುತ್ತದೆ. ಆತನ ಬರವಣಿಗೆಯ ಸಾಧನಗಳಾದ ಮಸಿ ಕುಡಿಕೆ-ಪೆನ್ನುಗಳು ಅವನಿಲ್ಲದಿದ್ದರೂ ಅವನ ಇರುವಿಕೆಯನ್ನು ಸಾರುತ್ತವೆ.

ಅವನು ತನ್ನ ಎಪ್ಪತ್ತೆಂಟನೆಯ ವಯಸ್ಸಿನಲ್ಲಿ ಹಂತಕನ ಗುಂಡಿಗೆ ಬಲಿಯಾದ. ನಿರ್ದಯಿ ಹಂತಕನ ಪಿಸ್ತೂಲಿನಿಂದ ಹೊರಟ ಗುಂಡು ಮಾನವಪ್ರೇಮದ ದೇಗುಲವಾದ ಅವನ ನಿಷ್ಕಲ್ಮಶ ಎದೆಯನ್ನು ಛಿದ್ರಗೊಳಿಸಿ ತೂರಿ ಹೋಯಿತು. ಅಂತಿಮ ಕ್ಷಣದಲ್ಲಿ ಅವನ ನಾಲಿಗೆ ನುಡಿದದ್ದು " ಹೇ ರಾಮ್ " ಅನ್ನುವ ಅಮೃತ ಸದೃಶ ನಿರಪೇಕ್ಷ ಮಂತ್ರವನ್ನು. ಅದನ್ನವನು ಉಸುರುತ್ತಾ ಅನಂತದಲ್ಲಿ ಲೀನವಾಗಿ ಹೋದ.

ನಾನು ಅವನ ಹೆಜ್ಜೆ ಜಾಡನ್ನು ಅರಸಿ ಹೊರಟಿರುವ ಒಬ್ಬ ಸಾಮಾನ್ಯ ಪಥಿಕ. ನನ್ನ ಪಯಣ ನನ್ನನ್ನು ಅವನ ಸಮಾಧಿಯ ಬಳಿ ತಂದು ನಿಲ್ಲಿಸಿದೆ. ನಾನಿಲ್ಲಿ ಮೌನ ಧರಿಸಿ ಮಗುವಾಗಿದ್ದೇನೆ. ನಾನು ನನ್ನ ಆತ್ಮ ಮತ್ತು ಹೃದಯಗಳೆರಡನ್ನೂ ತೆರೆದಿರಿಸಿದ್ದೇನೆ. ಸಮಾಧಿಯೊಳಗಿನಿಂದ ಅವನ ಆತ್ಮದಿಂದ ಹೊರಟ ಪಿಸು ನುಡಿಗಳು ನನ್ನ ಅಂತರಾತ್ಮವನ್ನು ಸೋಕುತ್ತಿವೆ. ಅವು ನನ್ನ ಅಂತಃಸಾಕ್ಷಿಯೊಂದಿಗೆ ಸಂವಹನ ನಡೆಸಿವೆ. ನಾನು ಆ ಸಂತನ ಸಂದೇಶಗಳನ್ನು ನನ್ನೆದೆಯಲ್ಲಿ ತುಂಬಿಕೊಳ್ಳುತ್ತಿದ್ದೇನೆ. ಇಲ್ಲಿ ಒಂದು ಗಾಢ ಮೌನ ಆವರಿಸಿಕೊಂಡಿದೆ. ನನ್ನ ಉಛ್ವಾಸ-ನಿಛ್ವಾಸಗಳ ಲಯಬದ್ಧ ಸದ್ದು ಹರಳುಗಟ್ಟುತ್ತಾ ಸಮಯದ ಸೆಳವಿನಲ್ಲಿ ಉರುಳಿಹೋಗುತ್ತಿದೆ.

ಅವನ ಆತ್ಮದ ಪಿಸು ದನಿಯಲ್ಲಿ ಹಿಂಸೆ, ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆ, ದಮನದ ಪಾಪದ ಬಟ್ಟಲು ತುಂಬಿ ತುಳುಕಿದಾಗ ಅಸಹಾಯಕರ ಎದೆಯಲ್ಲಿ ಢವಗುಡುವ ಬವಣೆ-ಸಂಕಟದ ಯಾತನೆಗಳು ಕನಲುತ್ತವೆ. ಬಡವರೆದೆಯ ದಾರುಣತೆಯ ದಯನೀಯ ಕ್ಷಣಗಳು ಹೊಡಮರಳಿ ಜೀವ ತಳೆಯುತ್ತವೆ. ನಿಟ್ಟುಸಿರೊಂದನ್ನು ನಿಡಿದಾಗಿ ಎಳೆದುಕೊಂಡಂತೆ ಭಾಸವಾಗಿ ನಾನು ಗಾಬರಿಗೊಳ್ಳುತ್ತೇನೆ. ನಾನು ನನ್ನ ಹೆಗಲ ಚೀಲದೊಳಗೆ ಕೈ ಹಾಕಿ ಅವನು ತನ್ನ ಕೈಯ್ಯಾರೆ ಬರೆದ ಪುಸ್ತಕವನ್ನು ಅಂಗೈಯಲ್ಲಿ ಬಿಡಿಸಿಟ್ಟು ಪಾರಾಯಣದಲ್ಲಿ ಲೀನವಾಗುತ್ತೇನೆ. ಅವನ ಆತ್ಮ ಸಮಾಧಿಯಲ್ಲಿ ಮಗ್ಗಲು ಬದಲಿಸಿದಂತೆ ಭಾಸವಾಗುತ್ತದೆ.

ನಾನು ಹಾದಿಯಲ್ಲಿ ದಾಪುಗಾಲಿಟ್ಟು ಸಾಗುತ್ತಿದ್ದೇನೆ. ಜನ ನಿದ್ರೆಯಿಂದ ಎಚ್ಚತ್ತವರಂತೆ, ಇದುವರೆಗೆ ಏನನ್ನೋ ಮರೆತಿದ್ದವರು ಈಗಷ್ಟೇ ನೆನಪು ಮಾಡಿಕೊಂಡವರಂತ ಗುಂಪುಗೂಡಿ ಎತ್ತರದ ದನಿಯಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ನನ್ನನ್ನು ಕಂಡಕೂಡಲೇ ಅವರೆಲ್ಲರೂ ಗುಂಪು ಗುಂಪಾಗಿ, ಜೊತೆಯಾಗಿ ನನ್ನತ್ತಲೇ ನಡೆದು ಬರುತ್ತಿದ್ದಾರೆ. ನಾನು ಮಣ್ಣದಿಬ್ಬದ ಮೇಲೆ ಹತ್ತಿ ನಿಂತಿದ್ದೇನೆ. ಅವರು ನನ್ನ ಹೆಸರು ಹಿಡಿದು ಕರೆಯುತ್ತಿದ್ದಾರೆ. ಲಕ್ಷಾಂತರ ಜನರ ನಡುವೆ ನಿಂತರೂ ಜನ ನನ್ನನ್ನು ಗುರುತಿಸುತ್ತಿದ್ದಾರೆ ಎಂದು ನನಗೆ ಅರಿವಾಗುತ್ತಿದೆ. ಅವನು ನಡೆದ ದಾರಿಯಲ್ಲಿ ಅವನ ಹೆಜ್ಜೆ ಗುರುತು ಅನುಸರಿಸಿ ನಾನಿಲ್ಲಿಗೆ ನಡೆದು ಬಂದಿದ್ದೇನೆ. ಅಲ್ಲಿದ್ದವರು ನನಗೆ ಅವರನ್ನು ಉದ್ದೇಶಿಸಿ ಮಾತಾಡುವಂತೆ ಒತ್ತಾಯಿಸುತ್ತಿದ್ದಾರೆ.

ನಾನು ಜಾತಿ, ಮತ, ಕುಲ, ಗೋತ್ರ, ವರ್ಗ, ವರ್ಣ, ಲಿಂಗ, ಬೇಧ, ನಾಮ, ರೂಪ, ಫಂಥ, ಪ್ರಾಂತಗಳ ಗಡಿಗಳನ್ನು ದಾಟಿ ಸಮಾಜದಲ್ಲಿನ ಅನೈತಿಕತೆ, ಅನಾಚಾರ, ಶೋಷಣೆ, ಹಿಂಸೆ, ಅಸಮಾನತೆಗಳ ನಗ್ನ ನರ್ತನದ ಭೀಬತ್ಸ ಸನ್ನಿವೇಶವನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಎಲ್ಲ ಯೋಜನ, ಕಾಲ-ದೇಶ-ಭಾಷೆಗಳಲ್ಲಿ ಹೊಸ ಯುಗದ ಮಾನವಪ್ರೇಮದ ಅಂತಃಕರಣದ ಮಾತನಾಡುತ್ತೇನೆ. ಅಲ್ಲಿ ಹೊಸ ದನಿಗಳು ಹುಟ್ಟಿಕೊಳ್ಳುತ್ತವೆ. ಎಲ್ಲ ದನಿಗಳೂ ಒಂದರೊಡನೊಂದು ಬೆರೆತು ಮೊಳಗಿ ಮಾರ್ದನಿಗೊಳ್ಳುತ್ತವೆ. ಲಕ್ಷಾಂತರ ಜನರ ಸಮೂಹ ಆದರೆ ಒಂದೇ ದನಿ. ನಾನು ಬೆರಗಾಗಿ ಜನಸಮೂಹವನ್ನೇ ನಿರುಕಿಸುತ್ತೇನೆ. ಆದರೆ ಜನಜಂಗುಳಿಯ ನಡುವಿನಿಂದ, ಜಯಘೋಷಗಳ ಒಡಲಿನಿಂದ ಚಿಮ್ಮಿಬಂದ ಗುಂಡೊಂದು ನನ್ನ ಎದೆಯನ್ನು ಸೀಳಿಹಾಕಿತ್ತದೆ. ನನ್ನ ಮುಖದ ಮೇಲೆ ಸಾರ್ಥಕತೆಯ ಭಾವವೊಂದು ಹರಡಿಕೊಳ್ಳುತ್ತದೆ. ಆ ಭಾವ ಎಂದೂ ಬಾಡದ ಸುಮವಾಗಿ ನನ್ನ ತುಟಿಗಳ ಮೇಲೆ ಅರಳಿ ನಗುತ್ತದೆ.

" ನಮ್ಮ ಸುತ್ತಲೂ ಎಲ್ಲವೂ ಎಷ್ಟೊಂದು ಸುಂದರವಾಗಿದೆ ‌. ಈ ಭೂಮಿಯನ್ನು ನೆಮ್ಮದಿಯ ತಾಣವಾಗಿಸಲು ಬೇಕಾದ ಎಲ್ಲವೂ ಇಲ್ಲಿಯೇ ಇದೆ. ಚಿತ್ತಭೃಮೆಗೊಳಗಾದವರು ಈ ಲೋಕವನ್ನು ಅಸ್ತವ್ಯಸ್ತಗೊಳಿಸಿಬಿಡುತ್ತಾರೆ. ಈ ಜಗತ್ತಿಗೀಗ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯ ಅಗತ್ಯವಿದೆ ".

- ಖಾದರ್ ಮೊಹಿಯೊದ್ದೀನ್. ಕೆ.ಎಸ್

#ಖಾದರ್_ಮೊಹಿಯೊದ್ದೀನ್_ಕೆ_ಎಸ್

More Literatures

" ಬದುಕು ಒಂದು ಕನಸಿನಂತೆ.

ಸ ... Read More

ನೋವು ಕಾಡುವಾಗ

ನೋವು ನುಂಗ ... Read More

.ಅರವಿಂದ ಚೊಕಾಡಿ ಎಂಬ ಮಾರ್ಗದರ್ಶ ... Read More

ದೇವರಿದ್ದಾನೆಯೇ!!!?

ಹಸಿವು ಹೈ ... Read More

ವಿಠ್ಠಲ ಮೂರ್ತಿ ಸರ್,

ಸಾಗರದವ ... Read More