ಎಡ ಬಲಗಳ ನಡುವೆ ಒಬ್ಬರು ಶುದ್ಧ ಕತೆಗಾರ- ಖಾಸನೀಸ

ಮರೆಯಲಿ ಹ್ಯಾಂಗ ಕಳೆದ ಶತಮಾನ ಕನ್ನಡ ಸಾಹಿತ್ಯದಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಮಹತ್ವದ ಘಟ್ಟ. ನವೋದಯದ ರಮ್ಯತೆ, ನವ್ಯದ ಉನ್ಮಾದ, ಪ್ರಗತಿಶೀಲ…

ನವೋದಯದ ಮಹೋದಯ‌ ಬಿಎಂಶ್ರೀ

 ಮರೆಯಲಿ ಹ್ಯಾಂಗ: ತಾವು ಕಡಿಮೆ ಬರೆದು, ಬರೆಸುವ ಪ್ರೇರಣೆಯನ್ನು ದೊಡ್ಡ ಸಂಖ್ಯೆಯಲ್ಲಿ ಹರಡಿದ ಪ್ರಮುಖರಲ್ಲಿ ಶ್ರೀಯವರೊಬ್ಬರು. ಕುಮಾರವ್ಯಾಸನ ನಡುಗನ್ನಡದಿಂದ ಮುದ್ದಣ್ಣನ ಹೊಸಗನ್ನಡಕ್ಕೆ…

ಮೇನಕೆಯೂ ಒಬ್ಬ ಹೆಣ್ಣು

ಪುರಾಣ ಪ್ರಪಂಚ ಇವರೇ ತನ್ನ ಪತಿಯಾದರೆ ಎಷ್ಟು ಚಂದ ಎಂದೆನಿಸಲು ಶುರುವಾಯ್ತು ಅವಳಿಗೆ. ಬಹುಶಃ ಇದು ಭೂಮಿಯ ಮ್ಯಾಜಿಕ್ ಇರಬಹುದು. ಮಣ್ಣಿನ…

ಭುವನ ಬಂಡಾರ-8

ಯಕ್ಷಗಾನ ಕಲಾವಿದರು ಬಂದು  ಮಾಳಿಗೆಯ ಮೇಲೆ ಮಲಗಿದ್ದರೆಂದರೆ ಕೆಳಗಡೆ ಲೋಕದಲ್ಲಿ ನಾವು ಗದ್ದಲ ಮಾಡುವಂತೆ ಇರಲಿಲ್ಲ. ಅವರಿಗಾಗಿ ತಂಬುಳಿ ಸಾಸಿವೆ ಇಂಥ ಮಲೆನಾಡಿನ ಸ್ಪೆಷಲ್ ಐಟಂಗಳು ಊಟಕ್ಕೆ ಇರಲೇಬೇಕಿತ್ತು. ಹೊತ್ತೊತ್ತಿಗೆ ಚಹಾ ಅವಲಕ್ಕಿ ಇತ್ಯಾದಿ ಸಪ್ಲೈ ಮಾಡಲು ನಮ್ಮ ಪಡೆ ತುದಿಗಾಲಲ್ಲಿ ನಿಂತಿರುತ್ತಿತ್ತು.

       -ಭುವನೇಶ್ವರಿ ಹೆಗಡೆ

ಚಂಡೆ ಮದ್ದಳೆ ಗೆಜ್ಜೆ ಸಪ್ಪಳದ ತೊಟ್ಟಿಲು

ಯಕ್ಷಗಾನವೆಂಬುದು ಬಹುಶಃ  ಕರಾವಳಿ ಹಾಗೂ ಮಲೆನಾಡಿನ ಮಣ್ಣಿನ ಗಂಧವನ್ನು ಹೊತ್ತು  ಹುಟ್ಟಿದ ಅಪರೂಪದ  ಗಂಧರ್ವ ಕಲೆ. ನಮ್ಮ ಬಾಲ್ಯದ ಅಜ್ಞಾನವನ್ನು ಜಗತ್ತಿನ ಕುರಿತಾಗಿ ಇರುವ ಭಯವನ್ನು ಹೋಗಲಾಡಿಸಿ ಪುರಾಣ ಪುಣ್ಯ ಕಥೆಗಳ ಅನೇಕಾನೇಕ ಆಖ್ಯಾನಗಳನ್ನು ನಮ್ಮ ತಲೆಯೊಳಗೆ ಇಳಿಸಿದ ವಿಶ್ವವಿದ್ಯಾಲಯ ಈ ಯಕ್ಷಗಾನ.

ನಮ್ಮ ಹಳ್ಳಿಯ ಸುತ್ತಮುತ್ತಲಿನ ಯಾವುದೇ ಮನೆಗೆ ಹೋದರೂ ಅ್ಲೊಬ್ಬ ಭಾಗವತರು, ಮದ್ದಳೆದಾರರು, ಚಂಡೆ ವಾದಕರು ಯಕ್ಷಗಾನ ವೇಷಧಾರಿ ಇಲ್ಲವೇ ತಾಳಮದ್ದಳೆ ಅರ್ಥಧಾರಿ-ಹೀಗೆ ಯಕ್ಷಗಾನ ಸಂಬಂಧಿ ಕಲೆಯನ್ನು ಚೂರಾದರೂ ಅರಿತವರು ಕಡ್ಡಾಯವಾಗಿ ಇರುತ್ತಿದ್ದರು ಈಗಲೂ ಇದ್ದಾರೆ. ಇವರೆಲ್ಲ ಯಾವುದೇ ತರಬೇತಿ ಪಡೆದವರಲ್ಲ.  ಪ್ರಖ್ಯಾತ ಯಕ್ಷಗಾನ ಕಲಾವಿದರನ್ನು ಹೊಂದಿದ್ದ ಮೇಳಗಳು ಬಂದರೆ ಹಳ್ಳಿಯವರು ಕಿತ್ತೆದ್ದು ಹೋಗಿ ಆಟ ನೋಡುತ್ತಾರೆ. ಯಕ್ಷಗಾನವೆಂದರೆ ಬರಿಯ ಮನರಂಜನೆಯ ಮಾಧ್ಯಮವಾಗಿ ನನ್ನ ಹಳ್ಳಿಗರು ಪರಿಗಣಿಸಿಲ್ಲ ಅದೊಂದು ಆರಾಧನೆಯ ಕಲೆಯಾಗಿ ದೈವೀ ಉಪಾಸನೆಯ ಮಾರ್ಗವಾಗಿ ಭಾಷೆಯ ಪ್ರಾವೀಣ್ಯತೆಯನ್ನು ಕುಣಿತವನ್ನು ಅಭಿನಯವನ್ನು    ಹಾಡುಗಾರಿಕೆಯನ್ನು ಮೇಳೈಸಿಕೊಂಡ ಒಂದು ಪರಿಪೂರ್ಣ ಕಲಾಪ್ರಕಾರ ವಾದುದರಿಂದ ತಮಗಿಷ್ಟವಾದ ರೀತಿಯಲ್ಲಿ ಯಕ್ಷಗಾನವನ್ನು ಆರಾಧಿಸುವವರೇ ನಮ್ಮ ಹಳ್ಳಿಯ ಕೃಷಿಕರು .

ನನ್ನದು ಘಟ್ಟದ ಮೇಲಿನ ಹಳ್ಳಿಯಾದರೂ ಅಷ್ಟರಲ್ಲಾಗಲೇ ಯಕ್ಷಗಾನ ಕಲಾವಿದರಾಗಿ ಅತ್ಯುತ್ಕಷ್ಟ ಸಾಧನೆ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದ ಖ್ಯಾತ ಕಲಾವಿದ ಕೆರೆಮನೆ ಶಿವರಾಮ ಹೆಗಡೆಯವರ ಯಕ್ಷಗಾನವನ್ನು ನೋಡಿ ಆಸ್ವಾದಿಸಿದ ಅನೇಕ ಹಿರಿಯರು ನಮ್ಮ ಮನೆಗೆ ಬಂದು ಹೋಗುವ ಆಪ್ತರಾಗಿದ್ದರು. ಅವರ ಮಗ ಕೆರೆಮನೆ ಶಂಭು ಹೆಗಡೆ ನಾವು ಹೈಸ್ಕೂಲಿನಲ್ಲಿ ಓದುವಾಗ ನಮಗೆ ಯಕ್ಷಲೋಕದ  ರುಚಿಯನ್ನು ಅಂಟಿಸಿದ ಮಹಾನ್ ಕಲಾವಿದ. ಕೆರೆಮನೆ ಮೇಳದ ಆಟ ಇದೆ ಎಂದರೆ ನಮ್ಮ ಮನೆಯಲ್ಲಿ ಸಂಭ್ರಮ. ಮೇಳದ ಕಲಾವಿದರು ಯಾರಾದರೂ ನಮ್ಮ ಮನೆಯಲ್ಲಿ ಬಂದು ಉಳಿಯುವುದಿತ್ತು ನಮ್ಮ ಹತ್ತಿರದ ಹಳ್ಳಿಗಳಾದ ಬಿಳಗಿ, ಇಟಗಿ, ಕ್ಯಾದಗಿ ಇಂಥ ಹಳ್ಳಿಗಳಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಾಡಾಗಿರುತ್ತಿತ್ತು. ದೂರದಿಂದ ಬರುವ ಕಲಾವಿದರಿಗೆ ಊಟ ವಸತಿ ವಿಶ್ರಾಂತಿಗಳನ್ನು  ನಮ್ಮ ಮನೆಯ ಮಾಳಿಗೆಯ ಮೇಲೆ ಸ್ವತಃ ನಮ್ಮ ತಂದೆಯವರ ಉಸ್ತುವಾರಿಯಲ್ಲಿ ಒದಗಿಸಲಾಗುತ್ತಿತ್ತು. ಅವರ ದಣಿವು ತೀರಿ ಚೆನ್ನಾಗಿ ನಿದ್ರಿಸಿದರೆ ಮಾತ್ರ ರಾತ್ರಿಯಲ್ಲಿ ಅವರ ಅಭಿನಯಕ್ಕೆ ಕಳೆಕಟ್ಟುತ್ತದೆ ಎಂದು ನಮ್ಮ ತಂದೆ ವಾದಿಸುತ್ತಿದ್ದರು. ಯಕ್ಷಗಾನ ಕಲಾವಿದರು ಬಂದು  ಮಾಳಿಗೆಯ ಮೇಲೆ ಮಲಗಿದ್ದರೆಂದರೆ ಕೆಳಗಡೆ ಲೋಕದಲ್ಲಿ ನಾವು ಗದ್ದಲ ಮಾಡುವಂತೆ ಇರಲಿಲ್ಲ. ಅವರಿಗಾಗಿ ತಂಬುಳಿ ಸಾಸಿವೆ ಇಂಥ ಮಲೆನಾಡಿನ ಸ್ಪೆಷಲ್ ಐಟಂಗಳು ಊಟಕ್ಕೆ ಇರಲೇಬೇಕಿತ್ತು. ಹೊತ್ತೊತ್ತಿಗೆ ಚಹಾ ಅವಲಕ್ಕಿ ಇತ್ಯಾದಿ ಸಪ್ಲೈ ಮಾಡಲು ನಮ್ಮ ಪಡೆ ತುದಿಗಾಲಲ್ಲಿ ನಿಂತಿರುತ್ತಿತ್ತು. ಮೂರೂರು ದೇವರು ಹೆಗಡೆಯವರ ಭಯಾನಕ ಭೀಮನನ್ನು ರಂಗಸ್ಥಳದಲ್ಲಿ ನೋಡಿದ್ದ ನಾನು ನಮ್ಮ ಮನೆಯಲ್ಲಿ ಸಾದಾ ಖಾದಿ ಪಂಚೆ ಉಟ್ಟು ಬಾರೆ ಕೂಸೇ ಹೆಸರೆಂಥದೆ ಎಂದು ನನ್ನನ್ನು ಕರೆದು ಮಾತನಾಡಿಸುವ ದೇವರು ಹೆಗಡೆಯವರನ್ನು ನೋಡಿ ಆಶ್ಚರ್ಯದಿಂದ ಕಣ್ಣು ಕಣ್ಣು ಬಿಡುತ್ತಿದ್ದೆ. ಮುಂದೆ ನಾನು ಶಿರಸಿಗೆ ಕಾಲೇಜು ಓದಲು ಹೋದಾಗ ಇದೇ ಮೂರೂರು ದೇವರು ಹೆಗಡೆಯವರ ಮಗಳು ಪದ್ಮಕ್ಕ ನನ್ನ ಆತ್ಮೀಯ ಗೆಳತಿಯಾಗಿ ಬಿಟ್ಟಳು. ಮಗಳ ಮನೆಗೆ ಈ ಭೀಮಸೇನ ಬಂದು ಇಳಿದರೆಂದರೆ ಅವರ ಬಾಯಲ್ಲಿ ಯಕ್ಷಲೋಕದ ಸ್ವಾರಸ್ಯಕರ ಘಟನೆಗಳನ್ನು ಕೇಳುತ್ತಾ ಕೇಳುತ್ತಾ ಮೈ ಮರೆಯುತ್ತಿದ್ದೆವು. ನನ್ನ ಜೀವನದಲ್ಲಿಯೇ ಅತ್ಯುತ್ಕಷ್ಟವಾದ ಪ್ರಸಂಗಗಳ ಪ್ರದರ್ಶನವನ್ನು ನಾನು ಶಿರಸಿಯಲ್ಲಿ ನೋಡಿದ್ದೇನೆ. ಕೆರೆಮನೆ ಸಹೋದರರಾದ ಮಹಾಬಲ ಹೆಗಡೆ ಶಂಭು ಹೆಗಡೆ ಹಾಗೂ ಗಜಾನನ ಹೆಗಡೆ ಈ ಮೂವರ ಜತೆಗೆ ನೆಬ್ಬೂರು ಭಾಗವತಿಕೆ ಇಂದಿಗೂ ಕಣ್ಮುಂದೆ ಕಿವಿ ಮುಂದೆ ಇದೆ. ಆ ವರ್ಷ ನಮಗೆ ರನ್ನನ ಗದಾಯುದ್ಧ ಪಾಠಕ್ಕೆ ಪ್ರೊ. ಕುಲಕರ್ಣಿಯವರು ಇದ್ದರು. ಯಕ್ಷಗಾನ ತಾಳಮದ್ದಲೆಯ ಮೇಲೆ ಪಿಎಚ್ಡಿ ಮಾಡಿದ ನಮ್ಮ ಮೇಡಂ ವಿಜಯನಳಿನಿ ರಮೇಶ್ ಕೂಡ ನಮ್ಮ ಜತೆ  ಆಟಕ್ಕೆ ಬರುತ್ತಿದ್ದರು. ರನ್ನನ ಗದಾಯುದ್ಧದ ಆಯ್ದ ಅಂತಹುದೇ ನಾಟಕೀಯ ಸನ್ನಿವೇಶಗಳನ್ನು ಹೆಣೆದ ಗದಾಯುದ್ಧದ ಪ್ರಸಂಗವನ್ನು ನಾವೆಲ್ಲ ಒಟ್ಟಿಗೆ ನೋಡಿದ್ದೆವು. ಮಹಾಬಲ ಹೆಗಡೆಯವರ ನ ಭೂತೋ ನ ಭವಿಷ್ಯತಿ ಎಂಬ ಮಾತುಗಾರಿಕೆಯ ಅಶ್ವತ್ಥಾಮ, ಇಡೀ ಮೈಯಲ್ಲಿ ಶೋಕ ರಸವನ್ನು ತುಂಬಿಕೊಂಡು ‘ಕುರುರಾಯನಿದನೆಲ್ಲ ಕಂಡು   ಸಂತಾಪದಿ ಮರುಗಿ ತನ್ನಯ ಭಾಗ್ಯವೆನುತ….’  ರಂಗಪ್ರವೇಶ ಮಾಡುವ ಕೌರವನಾಗಿ ಕೆರೆಮನೆ ಶಂಭು ಹೆಗಡೆ, ಕೃಷ್ಣನಾಗಿ ಶಂಭು ಸೋದರ ಗಜಾನನ ಹೆಗಡೆ, ನೀರಲ್ಲಿ ಅಡಗಿ ಕುಳಿತ ಕೌರವನನ್ನು ಮೂದಲಿಸಿ ಹೊರಗೆ ಕರೆಯುವ ‘ಕುನ್ನಿ ಕೂಳಿದೆ ತಿನ್ನು ಬಾರೆನ್ನುತ್ತಾ’ ಬೊಬ್ಬಿರಿಯುವ ಭೀಮಸೇನನಾಗಿ ಅದ್ಭುತ ಅಭಿನಯ ನೀಡಿದ ಮುರೂರು ದೇವರು ಹೆಗಡೆಯವರದ್ದು ರನ್ನನ ಗದಾಯುದ್ಧದ ಭೀಮಸೇನನನ್ನು ನೆನಪಿಸುತ್ತಿತ್ತು. ಅಂತೂ ಅಂದು ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಒಂದು ಪ್ರಾತ್ಯಕ್ಷಿಕೆ ಗದಾಯುದ್ಧ ತೋರಿಸಿದಂತೆ ಇತ್ತು. ಇಂಥ ಅನೇಕ ಸುಂದರ ಯಕ್ಷಗಾನ ಪ್ರಸಂಗಗಳನ್ನು ನಾನು ಶಿರಸಿಯಲ್ಲಿ ಕಾಲೇಜು ಓದುವಾಗ ನೋಡಿದ್ದೆ.

ಆಗೆಲ್ಲ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಪ್ರಾರಂಭದಲ್ಲಿದ್ದ ಭಾಗವತರು ಕೊನೆಯಲ್ಲಿ ಮಂಗಳ ಪದ್ಯ ಹಾಡಲು ಅವರೇ  ಬೇಕಿತ್ತು. ಮಧ್ಯದಲ್ಲಿ ಖ್ಯಾತ ಕಲಾವಿದರಿಗಾಗಿ ಹಾಡಲು ಖ್ಯಾತನಾಮರಾದ ಭಾಗವತರು ಮುಂಡಾಸು ಸುತ್ತಿ ಬಂದು ಕೂತಿರುತ್ತಿದ್ದರು. ನೆಬ್ಬೂರು ನಾರಾಯಣ ಭಾಗವತರು ಅಂಥವರಲ್ಲಿ ಒಬ್ಬರು. (ಇತ್ತೀಚೆಗೆ ನೆಬ್ಬೂರು ಭಾಗವತರು ತೀರಿಕೊಂಡಿದ್ದರೂ ಈಗ ಆ ಸ್ಥಾನವನ್ನು ನಮ್ಮೂರ ಯುವ ಭಾಗವತ ಕೊಳಗಿ ಕೇಶವಣ್ಣ ತುಂಬಿದ್ದಾನೆ.) ಅವರು ಹಿಂದುಗಡೆಯಿಂದ ರಂಗಸ್ಥಳಕ್ಕೆ ಪ್ರವೇಶ ಮಾಡುತ್ತಿದ್ದಂತೆ ಅವರ ಅಭಿಮಾನಿಗಳಿಂದ ಚಪ್ಪಾಳೆಯ ಸುರಿಮಳೆ ಕೇಳುತ್ತಿತ್ತು. ವಿನಮ್ರವಾಗಿ ಕೈಮುಗಿದು ಮೊದಲಿಗೆ ಚಂಡೆ ಮದ್ದಳೆಗಳಿಗೆ ವಂದಿಸಿ ಹಾಡಲು ಪರಿಕ್ರಮಿಸುತ್ತಿದ್ದರು. ಘಟಾನುಘಟಿ ಕಲಾವಿದರನ್ನು ತಾಳಕ್ಕೆ ತಕ್ಕಂತೆ ಕುಣಿಸುವ ಈ ಭಾಗವತರುಗಳು ಯಕ್ಷಗಾನದ ನಿರ್ದೇಶಕರು.    ಧರೆಗಿಳಿಯುವ ಯಕ್ಷ ಗಂಧರ್ವ ಲೋಕದ ಸೂತ್ರಧಾರರು. ನುರಿತ ಕಲಾವಿದರಿಗೆ ಪದ್ಯಗಳನ್ನು ಪುನರಾವರ್ತಿಸಿದರೆ ಹೊಸ ಹುಡುಗರನ್ನು ಆಯಾಸವಾಗದಂತೆ ಕುಣಿಸಿ ಕಥೆಯನ್ನು ಮುಂದುವರಿಸುವ ಕಲೆಗಾರಿಕೆ ಈ ಭಾಗವತರದ್ದು. ಹೆಚ್ಚಾಗಿ ಶಿರಸಿಯ ಜಾತ್ರೆಯಲ್ಲಿ ಅನೇಕ ಕಲಾವಿದರುಗಳನ್ನು ಸೇರಿಸಿದ ಅದ್ಭುತ ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಬಿಳಗಿ ಇಟಗಿ ಜಾತ್ರೆಗಳಲ್ಲಿಯೂ ಯಕ್ಷಗಾನವೆಂದರೆ ಇಡೀ ರಾತ್ರಿ ಸುತ್ತಮುತ್ತ ಬೆಂಡು ಬತ್ತಾಸು ಮಂಡಕ್ಕಿ ಅಂಗಡಿಗಳು ಇರಲೇಬೇಕು. ಭಟ್ಟರ ಸ್ಪೆಷಲ್ ಚಾ ಬೆಳತನಕ ರೆಡಿ ಇರುತ್ತಿತ್ತು. ನಾವು ಶೇಂಗಾ ತಿನ್ನುತ್ತಾ ರಾಕ್ಷಸ ಪಾತ್ರಗಳನ್ನು      ನೋಡಿ ನಡುಗುತ್ತಿದ್ದವು. ಕಂಬಳಿ ಚಾದರ ಹೊದ್ದು ನಿದ್ದೆ ಮಾಡುತ್ತಿದ್ದುದೂ  ಉಂಟು. ಹಾಸ್ಯಕ್ಕೆ ಅವಕಾಶಗಳಿರುವ ಪ್ರಸಂಗವಿದ್ದರೆ ನಾನು ನನ್ನ ತಮ್ಮ ಮುಂದಿನ ಸಾಲಿನಲ್ಲಿ ಕೂತಿರುತ್ತಿದ್ದೆವು. ನಮ್ಮ ತಂದೆಯವರು ಜೊತೆಗಿರುತ್ತಿದ್ದರು. ಕೆರೆಮನೆ ಮೇಳದಲ್ಲಿದ್ದ ಕುಂಜಾಲು ರಾಮಕೃಷ್ಣ ಎಂಬ ಅಭಿಜಾತ ಹಾಸ್ಯ ಕಲಾವಿದರನ್ನು ಎಂದಿಗೂ ಸ್ಮರಿಸಬೇಕು. ಒಂದು ಮಾತೂ ಆಡದೆ ಕೇವಲ ಭಾವ ಭಂಗಿಗಳನ್ನಷ್ಟೇ ಪ್ರದರ್ಶಿಸಿ ಜನ ಕೇಕೆ ಹಾಕಿ ನಗುವಂತೆ ಮಾಡುವ ಕಲೆಗಾರಿಕೆ ಅವರದ್ದು. ಕಂಡ ಕಂಡವರ ತಲೆಯ ಮೇಲೆ ಉರಿ ಕೈಯನ್ನಿಟ್ಟು ಭಸ್ಮ ಮಾಡಿಬಿಡುವ ಭಸ್ಮಾಸುರ ಕಾಡಿನಲ್ಲಿ ಬರುತ್ತಿರುವಾಗ ಮಾಣಿಯ ಪಾತ್ರದಲ್ಲಿ ಇದ್ದ ಕುಂಜಾಲು ಅತ್ಯಂತ ಮುಗ್ಧವಾಗಿ ಏ ಮಾರಾಯ ಯಾರ ನೀನು? ಒಬ್ಬನೇ ಕಾಡಲ್ಲಿ ಓಡಾಡ್ತಾ ಇದ್ದೆ. ಭಸ್ಮಾಸುರ ಅಂತ ಒಬ್ಬ ಕೆಟ್ಟ ಜನ ಇತ್ತಂತೆ  ನಿಂಗೆ ಹೆದರಿಕೆ ಇಲ್ಯ ಹೇಗೆ ಎಂದು ಕೇಳಿ ಅವನನ್ನೇ ತಬ್ಬಿಬ್ಬುಗೊಳಿಸುತ್ತಿದ್ದರು. ಭಸ್ಮಾಸುರ ಈತನ ಲೇವಡಿಯಿಂದ ಸಿಟ್ಟಿಗೆದ್ದು ಅವನ ತಲೆಯ ಮೇಲೆ ಕೈಯಿಡಲು ಮುಂದಾದಾಗ ರಂಗಸ್ಥಳದಲ್ಲಿ ಶೀರ್ಷಾಸನ ಹಾಕಿಬಿಟ್ಟು ಆತನಿಗೆ ತಲೆಯೇ ಸಿಗದಂತೆ ಮಾಡಿ ಪ್ರೇಕ್ಷಕರಲ್ಲಿ ನಗೆಯ ಅಲೆಯನ್ನು ಎಬ್ಬಿಸುತ್ತಿದ್ದ ಕುಂಜಾಲು ಯಕ್ಷಗಾನದ ಹಾಸ್ಯ ಸಾಮ್ರಾಟ್ ಎಂದೇ ಹೆಸರು ಮಾಡಿದ್ದರು. ಶಂಭು ಹೆಗಡೆಯವರ ಯಕ್ಷ ನೃತ್ಯದ ಮೋಹಕತೆ ಗಜಾನನ ಹೆಗಡೆಯವರ ಸ್ತ್ರೀವೇಷದ  ನಾಜೂಕು ನೃತ್ಯ ಅಭಿನಯ ಹಾಗೂ ಮಹಾಬಲ ಹೆಗಡೆಯವರ ಭಾಗವತಿಕೆಯ ಧಾಟಿ ಮತ್ತು ತಾತ್ವಿಕವಾದ ಮಾತುಗಳು ಅಂದು ನಮಗೆ ಸಿಕ್ಕ ಅಮೂಲ್ಯ ಆಸ್ತಿಯೆಂದೇ ಹೇಳಬಹುದು. ಇಂದಿಗೂ ನಮ್ಮೂರಲ್ಲಿ ಯಕ್ಷಗಾನ ಕಲಾವಿದರು ಈ ಹಿರಿಯರನ್ನು ನೆನಪಿಸಿಕೊಳ್ಳುತ್ತಾ ಅನುಕರಿಸಿ ಕೊಳ್ಳುತ್ತಾ ಶಂಭು ಶಿಷ್ಯ ಎಂದೆಲ್ಲ ಹೆಸರಿಟ್ಟು ಮೇಳ ಕಟ್ಟಿಕೊಂಡು ಯಕ್ಷಗಾನವನ್ನು ಜೀವಂತವಾಗಿಟ್ಟಿದ್ದಾರೆ.

ಕೆರೆಮನೆ ಮೇಳಕ್ಕೆ ಮಾತ್ರ ಮನೆಯಿಂದ ಅದ್ಭುತ ಪರ್ಮಿಷನ್ ಸಿಗುತ್ತಿತ್ತು. ಇನ್ನು  ಕೆಲವು ಮೇಳಗಳ ಆಟಕ್ಕೆ ಹೋಗಲು ನಾವು ಹರಸಾಹಸ ಪಡಬೇಕಿತ್ತು. ಆಗೆಲ್ಲಾ ನಮ್ಮ ನೆರವಿಗೆ ಬರುವವಳು ನಮ್ಮ  ಪಕ್ಕದ  ಮನೆಯ  ಲಕ್ಷ್ಮತ್ತಿಗೆ ಎಂಬ ಆಪದ್ಬಾಂಧವಿ. ನಮ್ಮ ಅಮ್ಮನ ಹಾಗೂ ಮಕ್ಕಳ ಎಲ್ಲ ಕಷ್ಟ ಕಾರ್ಯಕ್ಕೂ ಅವಳು   ಬಂದು  ಕೈಜೋಡಿಸುತ್ತಾರೆ ಎಂಬ ಕಾರಣಕ್ಕೆ ಅವಳು ಇವತ್ತು ನಿಮ್ಮ ಹುಡುಗರನ್ನು ನಾನು ಆಟಕ್ಕೆ ಕರೆದುಕೊಂಡು ಹೋಗುತ್ತೇನೆ. ನನ್ನ ಮಕ್ಕಳು ತುದಿಗಾಲಲ್ಲಿ ನಿಂತಿದ್ದಾರೆ ಎಂದು  ಡಿಕ್ಲೇರ್ ಮಾಡಿದಳೆಂದರೆ ಅವತ್ತು ನಾವು ಯಕ್ಷಗಾನಕ್ಕೆ ಹೋಗಿದ್ದೆ ಸೈ. ಆದರೆ ಅವಳ ಜೊತೆ ಹೋಗುವಾಗ ನಮಗೆಲ್ಲರಿಗೂ ನೆಲದ ಟಿಕೆಟ್‌ಗೆ ಮಾತ್ರ ಹಣ ಸಿಗುತ್ತಿತ್ತು. ಲಕ್ಷ್ಮತ್ತಿಗೆಯ ಕಿತಾಪತಿ ಒಂದೆರಡಲ್ಲ. ಆಟದ ಟೆಂಟಿನ ಬಾಗಿಲಿಗೆ ಕಾಣದಂತೆ  ನಾವೆಲ್ಲ ನಿಲ್ಲುವುದು. ಅಲ್ಲಿಂದ ಒಂದೊಂದೇ ಮಕ್ಕಳನ್ನು ಹೇಗೋ ಎತ್ತಿಕೊಂಡು ಬಾಗಿಲಿನಿಂದ ಒಳಗೆ ದಾಟಿಸಿ ಬಿಡುವುದು. ಚಾದರ ಕಂಬಳಿಗಳಲ್ಲಿ ಮುಖ ಮುಚ್ಚಿರುತ್ತಿತ್ತು. ಆದ್ದರಿಂದ ಹಾಗೆ ಎತ್ತಿಕೊಂಡ ಮಗು ಎಷ್ಟು ದೊಡ್ಡದು ಎಂಬುದು ಕಲೆಕ್ಟ್ ಮಾಡುವವನಿಗೆ ತಿಳಿಯುತ್ತಿರಲಿಲ್ಲ.ಅವಳ ಮಕ್ಕಳು ಸರಸು, ಪುತ್ತ, ಪ್ರಮೋದ ಹೀಗೆ ನಾಲ್ಕೈದಿದ್ದರೆ ನನ್ನ ತಂಗಿಯೂ ಅವರ ಜೊತೆಯ್ಲೇ ಎತ್ತಿಕೊಂಡು ಹೋಗಲ್ಪಡುತ್ತಿದ್ದಳು. ಒಮ್ಮೆಯಂತೂ ಬಾಗಿಲು ಕಾಯುವವ ಏನ್ರೀ ನಿಮ್ಮ ಮಗುವಿನ ಕಾಲು ನೆಲಕ್ಕೆ  ತಾಗುತ್ತಿದೆಯಲ್ಲ ಎಂದು ತಮಾಷೆ ಮಾಡಿ ಒಳಗೆ ಬಿಟ್ಟಿದ್ದು ನಡೆದಿತ್ತು ಹಾಗೆ ಉಳಿಸಿದ ಟಿಕೆಟ್ ಹಣದಲ್ಲಿ ನಮಗೆಲ್ಲ ಸೇಂಗಾ ಬಿಸಿ ಚಹಾ ಸರಬರಾಜು ಮಾಡುತ್ತಿದ್ದಳು. ಕಿತ್ತೂರು ಚೆನ್ನಮ್ಮನ ಧೈರ್ಯವಿರುವ  ಆಕೆ  ನಮಗೆಲ್ಲ ಆ ಕಾಲಕ್ಕೆ ಹೀರೋಯಿನ್ ಅಥವಾ ಮಾಡೆಲ್. ಪುಂಡ ಗಂಡಸರ ನಿಜ ಬಂಡವಾಳದ ಕುರಿತ ಅವಳ ತಮಾಷೆಯ ಮಾತುಗಳು ಹೆಣ್ಣು ಮಕ್ಕಳಾದ ನಮಗೆ ವಿಚಿತ್ರ ಧೈರ್ಯ ಕೊಡುತ್ತಿದ್ದವು. ಯಾವನೇ ಆದರೂ ಅಸಭ್ಯವಾಗಿ ನಿಮ್ಮ ಜೊತೆ ನಡೆದುಕೊಂಡರೆ ಹೆದರಬಾರದು ಹಿಂದಿರುಗಿ ನಿಂತು ಪ್ರತಿಭಟಿಸಿ ನೋಡಿ ಹೇಗೆ ಹೆದರಿಸಬಹುದು ಎಂದೆಲ್ಲ ಜೀವನ ಪಾಠ ಮಾಡುತ್ತಿದ್ದಳು. ನಮ್ಮೂರ ಗಂಡಸರು ಸಹ ಆಕೆಗೆ ಹೆದರುತ್ತಿದ್ದರು. ಯಕ್ಷಗಾನವು ರಂಗಸ್ಥಳದಲ್ಲಿ ಜೀವನ ದರ್ಶನ ಮಾಡಿಸಿದರೆ ಲಕ್ಷಮತ್ತಿಗೆ ಯಂಥ ಊರ ಮಹಿಳೆಯರು ಹೊರಗಡೆ ಜೀವನ ದರ್ಶನ ಮಾಡಿಸಿದ ಪ್ರಾತಃಸ್ಮರಣಿಯರು. ಈಗಲೂ ನಾನು ಊರಿಗೆ ಹೋದಾಗ ಲಕ್ಷ್ಮತ್ತಿಗೆಯನ್ನು ಭೆಟ್ಟಿ ಮಾಡದೇ ಬರುವುದಿಲ್ಲ. ಸುತ್ತಮುತ್ತ ಎಲ್ಲಾದರೂ ಆಟ ಇದೆಯೇ  ಹೋಗೋಣವೇನೆ ಎಂದು ಕೇಳಿ ನಗುತ್ತಾಳೆ.

ಬೇಂದ್ರೆ ಕಣ್ಣಲ್ಲಿ ಹಿಮಾಲಯ

ಸಾಹಿತಿಗಳ ಸ್ಮೃತಿ – ಭಾಗ 33 ಬೇಂದ್ರೆ ಕಣ್ಣಲ್ಲಿ ಹಿಮಾಲಯ ನನ್ನ ಹಳ್ಳಿ ಚಿತ್ರ, ಹಳ್ಳಿ ಮೇಷ್ಟ್ರು ನಾಟಕಗಳ ರೇಡಿಯೋ ಪ್ರಸಾರಗಳನ್ನು…

ತಾಳ್ಮೆ ಕಳೆದುಕೊಂಡ ಕೃಷ್ಣ

ಪುರಾಣ ಪ್ರಪಂಚ ತಾಳ್ಮೆಗಿರುವ ಶಕ್ತಿಯೇ ಅಂತಹದ್ದು. ಅದು ಒಮ್ಮೆಗೇ ಸಿಡಿಯದೇ ಇಡೀ ಶಕ್ತಿಯನ್ನು ತನ್ನೊಳಗೆ ಶೇಖರಿಸಿಕೊಳ್ಳುತ್ತಾ ಹೋಗುತ್ತದೆ. ಒಮ್ಮೆ ತಾಳ್ಮೆಯ ಕಟ್ಟೆ…

ಒಂದು ಭಾವನಾತ್ಮಕ ಬೇಂದ್ರೆ ಭೇಟಿ

ಸಾಹಿತಿಗಳ ಸ್ಮೃತಿ – ಭಾಗ 32 ಒಂದು ಭಾವನಾತ್ಮಕ ಬೇಂದ್ರೆ ಭೇಟಿ ಮರುದಿನ ಪೇಜಾವರದ ಶ್ರೀಗಳವರ ಭೇಟಿ ಬಳ್ಳಾರಿಯ ನಾರಾಯಣಸ್ವಾಮಿ ದೇವಾಲಯದಲ್ಲಿ.…

ಕೋಳಿ ಬೇಟೆಯಾಡಲು ಹೋಗಿ ಬಾವಿಗೆ ಬಿದ್ದ ಚಿರತೆ!

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ನಾರನಹಳ್ಳಿಯಲ್ಲಿ ಕೋಳಿ ಬೇಟೆಯಾಡಲು ಹೋಗಿ ಚಿರತೆಯೊಂದು ಪಾಳು ಬಾವಿಗೆ ಬಿದ್ದಿದೆ. ಆಹಾರ ಅರಸಿ ಬಂದಿದ್ದ ಚಿರತೆ,…