ಚೌಪದಿಗಳು

         

ಚೌಪದಿಗಳು

 

1. ಗುರುವಿನೊಲ್ಮೆ

ಗುರಿಯ ತೋರಿಸುವಾತ ಗುರುವು
ಸಿರಿಯ ಕರುಣಿಸುವಾತ ಗುರುವು
ಹಿರಿಮೆ ನೀಡುವಾತನು ಗುರುವು ಇಂತಿಪ್ಪ
ಗುರುವಿನೊಲ್ಮೆಯೇ ಪರಮ ಗುರಿ ತಿಳಿಯೋ ಚೊಂಬೇಶ

 

2. ಗರ್ವದ ಗರ್ವ ಮುರಿದು

ಪರ್ವತದ ತುತ್ತ ತುದಿಗೇರಿದಡೆ
ಸರ್ವವನು ಸಾಧಿಸಿದಂತಾಯ್ತೆ
ಗರ್ವದ ಗರ್ವ ಮುರಿದು ಸರ್ವರೊಳು ಸೇರಿದರೆ
ಪರ್ವತಕೂ ಮಿಗಿಲು ನೀ ಚೊಂಬೇಶ!

3. ಸಾವಧಾನವಿರಲಿ

ಸಾವಿರ ಕೋಟಿಯಿದ್ದರೇನು
ಸಾವಧಾನವಿಲ್ಲದಿದ್ದ ಮೇಲೆ
ಸೇವಕನಾದರೂ ಸರಿಯೇ
ಸಾವಧಾನದೊಡೆಯನಾಗೋ ಚೊಂಬೇಶ

4. ಕಣ್ಣೀರಿಗೆ ಬೆಲೆಯೆಲ್ಲಿ?

ಕಣ್ಣೀರಿಗೆ ಬೆಲೆಯೆಲ್ಲಿ ಕರುಣೆಯಿರದ ಲೋಕದಲ್ಲಿ
ಅಣ್ಣ ತಮ್ಮ ನಂಟಿಗೂ ಕರುಳೆಂದೂ ಕರಗದಿಲ್ಲಿ
ಬಣ್ಣ ಬಳಿದ ಮುಖಗಳಿಗೆ ಭಾರೀ ಬೇಡಿಕೆಯಿಲ್ಲಿ
ಬಣ್ಣ ಕಳಚಿ ಭಾವ ಬೆರೆಸಿ ಬಾಳೋ ಚೊಂಬೇಶ

 

5. ಏನಾದರೂ ಬಿಟ್ಟು ಹೋಗು

ಹುಟ್ಟುವವರೆಷ್ಟೋ ಸಾಯುವವರೆಷ್ಟೋ
ಹುಟ್ಟಿಯೂ ಸತ್ತಂತೆ ಬದುಕುವವರೆಷ್ಟೋ
ಚಟ್ಟವೇರಿ ಹೆಣವಾಗಿ ಹೋಗುವ ಮುನ್ನ
ಬಿಟ್ಟು ಹೋಗೋ ಒಳಿತೇನಾದರೂ ಚೊಂಬೇಶ

 

 ರಾಘವೇಂದ್ರ ಈ ಹೊರಬೈಲು

 

Please follow and like us: