ಹಳೆ ಕಾರು ಮಾರ್ತಿದ್ದವನ ಮಗ ಇವತ್ತು ಅಮೆರಿಕದ ಅಧಿಪತಿ!

 

ಅಂದುಕೊಂಡ ಹಾಗೇ ಆಗಿದೆ.

ಹುಚ್ಚು ದೊರೆ ಎನಿಸಿದ್ದ ಡೊನಾಲ್ಡ್ ಟ್ರಂಪ್ ನನ್ನ ಅಮೆರಿಕದ ಜನತೆ ಮುಲಾಜಿಲ್ಲದೆ ಕಿತ್ತೊಗೆದಿದ್ದಾರೆ. ನಿನ್ನ ದರ್ಪ, ನಿನ್ನ ಅಹಂಕಾರ, ನಿನ್ನ ಮತೀಯತೆ ಏನಿದ್ದರೂ ನಿನ್ನ ಮನೆಲಿಟ್ಟುಕೊ. ದೇಶಕ್ಕೆ ಅದರ ಅವಶ್ಯಕತೆ ಇಲ್ಲ ಅಂತ ಗೆಲುವನ್ನ ಜೋ ಬೈಡೆನ್ ಅನ್ನೋ 77ರ ಹರಯದ ಹಿರಿಯನ ಕೈಗೆ ಕೊಟ್ಟಿದ್ದಾರೆ. ನಾಲ್ಕು ವರ್ಷಗಳ ಕಾಲ ಅಮೆರಿಕದ ಘನತೆಯನ್ನ, ಆರ್ಥಿಕತೆಯನ್ನ, ಜನಜೀವನವನ್ನ, ಸಾಮರಸ್ಯವನ್ನ ಹಾಳು ಮಾಡಿದ ಟ್ರಂಪ್ ಗೆ ಅಲ್ಲಿನ ಜನತೆ ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ.

ಅಮೆರಿಕ ಸದ್ಯಕ್ಕೆ ನಿರಾಳ.

ಟ್ರಂಪ್ ಬೇಸಿಕಲಿ ರಾಜಕಾರಣಿಯಲ್ಲ. ಆತನೊಬ್ಬ ಪಕ್ಕಾ ಬ್ಯೂಸಿನೆಸ್ ಮ್ಯಾನ್. ಆತನ ಒಟ್ಟು ಆಸ್ತಿಯ ಮೌಲ್ಯ 19 ಸಾವಿರ ಕೋಟಿಗೂ ಹೆಚ್ಚು. ಟ್ರಂಪ್ ಗೆ ಅನೇಕ ತಿಕ್ಕಲುತನಗಳಿವೆ. ಇಂಥ ಭೂಪ 2016ರಲ್ಲಿ ಪ್ರೆಸಿಡೆನ್ಸಿಯಲ್ ಎಲೆಕ್ಷನ್ ಗೆ ನಿಂತಾಗಲೂ ಅಮೆರಿಕದ ಜನತೆಗೆ ಒಲವಿರಲಿಲ್ಲ. ಆದರೂ ಒಂದು ಚಾನ್ಸ್ ಇರಲಿ ಅಂತ ಅವಕಾಶ ಕೊಟ್ಟಿದ್ದರು. ಆ ಅವಕಾಶವನ್ನು ದುರುಪಯೋಗ ಮಾಡಿಕೊಂಡ ಟ್ರಂಪ್ ಗೆ ಇನ್ನೊಂದು ಚಾನ್ಸ್ ಕೊಡುವಷ್ಟು ಅಮೆರಿಕದ ಜನ ದಡ್ಡರೇನಲ್ಲ. ಟ್ರಂಪ್ ಗೆ ಹೋಲಿಸಿದರೆ ಬೈಡನ್ ಜಸ್ಟ್ 70 ಕೋಟಿಯಷ್ಟು ಶ್ರೀಮಂತ ಅಷ್ಟೆ. ಪಕ್ಕಾ ರಾಜಕಾರಣಿ. ಕಳೆದ 45 ವರ್ಷಗಳಿಂದ ಅಮೆರಿಕದ ರಾಜಕಾರಣದಲ್ಲಿದ್ದಾರೆ.

ಬೈಡನ್ ನ ಟ್ರಂಪ್ ಯಾವ ಪರಿ ಗೋಳು ಹೊಯ್ದುಕೊಂಡ ಅಂದರೆ ಪರ್ಸನಲ್ ಆಗಿ ಅಟ್ಯಾಕ್ ಮಾಡಿದ್ದ. ಸೋಲಿನ ಭೀತಿ ಟ್ರಂಪ್ ಗೆ ಮೊದಲಿನಿಂದಲೂ ಕಾಡಿತ್ತು ಅನಿಸುತ್ತೆ. ಹಾಗಾಗಿ ಬೈಡನ್ ಸರಿಯಿಲ್ಲ. ಆತ ಭ್ರಷ್ಟ. ಆತನಿಗೆ ವಯಸ್ಸಾಗಿದೆ. ತಲೆ ಸರಿಯಿಲ್ಲ ಅಂತೆಲ್ಲ ಟೀಕಿಸಿದ. ಸಾರ್ವಜನಿಕವಾಗಿ ಡಿ ಗ್ರೇಡ್ ಮಾಡತೊಡಗಿದ. ಆದರೆ ಬೈಡನ್ ಎದೆಗುಂದಲಿಲ್ಲ. ಸವಾಲಾಗಿ ಸ್ವೀಕರಿಸಿದರು. ತೀರ್ಮಾನವನ್ನ ಅಮೆರಿಕದ ಜನತೆಗೆ ಬಿಟ್ಟರು.

ಪೆನ್ಸಿಲ್ವೇನಿಯಾದಲ್ಲಿ 1942ರಲ್ಲಿ ಜನಿಸಿದ ಬೈಡನ್  ಒಳ್ಳೆ ಹೆಸರು ಮಾಡಬೇಕು ಅಂತ ಬಾಲ್ಯದಿಂದಲೇ ಅಂದುಕೊಂಡಿದ್ದ ಹುಡುಗ. ಅಪ್ಪ ಹಳೆಕಾರುಗಳ ಸೇಲ್ಸ್ ಮ್ಯಾನ್. ಅಂಥ ಶ್ರೀಮಂತಿಕೆ ಏನೂ ಇರಲಿಲ್ಲ. ಮಿಡಲ್ ಕ್ಲಾಸ್ ಕುಟುಂಬ. ಹಾಗಂತ ಹುಡುಗ ಬೈಡನ್ ಸುಮ್ನೆ ಕೂತವನಲ್ಲ. ಹೈಸ್ಕೂಲ್ ದಿನಗಳಲ್ಲೇ ಫುಟ್ ಬಾಲ್ ಆಡ್ತಾ, ಬೇಸ್ ಬಾಲ್ ಆಡ್ತಾ ಹೆಸರು ಮಾಡಲು ತೊಡಗಿದ್ದ.

ಬೈಡನ್ ಗೆ ಬಾಲ್ಯದಲ್ಲಿ ಒಂದು ಪ್ರಾಬ್ಲಂ ಇತ್ತು. ಆತನಿಗೆ ಸುಲಲಿತವಾಗಿ ಮಾತಾಡಲು ಆಗುತ್ತಿರಲಿಲ್ಲ.  ತೊದಲುತಿದ್ದ. ಅದನ್ನು ಇಂಗ್ಲಿಷಿನಲ್ಲಿ stutter ಅಂತಾರೆ. ಉಗ್ಗುವಿಕೆ ಅಂತಾರಲ್ಲ ಅದು. ಬೈಡನ್ ನ ಸಮಸ್ಯೆ ಕಂಡು ಕ್ಲಾಸ್ ರೂಮಿನಲ್ಲಿ ಸ್ನೆಹಿತರೆಲ್ಲಾ ರೇಗಿಸ್ತಿದ್ರು. ತರ್ಲೆ ಮಾಡ್ತಿದ್ರು. ಅದನ್ನೆಲ್ಲಾ ಸಹಿಸದ ಬೈಡನ್ ಪ್ರತಿಭಟನೆ ಎಂಬಂತೆ ಸೀದಾ ಕ್ಲಾಸ್ ರೂಮಿನಿಂದ ಎದ್ದವನೆ ಮನೆಗೆ ಹೋಗಿದ್ದ. ಆದರೆ ಬೈಡನ್ ಗೆ ಗೊತ್ತಿತ್ತು ನನ್ನ ವೀಕ್ನೆಸ್ಸನ್ನೂ ನಾನು ಮೀರಿ ಬೆಳೆಯಬಲ್ಲೆ ಅಂತ. ಹಾಗೆಯೇ ಬೆಳೆದ. ಉಗ್ಗುವಿಕೆಯನ್ನ ಸರಿ ಮಾಡಿಕೊಳ್ಳಲು ಕನ್ನಡಿ ಮುಂದೆ ನಿಂತು ಗಂಟೆಗಟ್ಟಲೆ ಕವಿತೆಯನ್ನು ಜೋರಾಗಿ ಓದುತ್ತಿದ್ದ. ಮತ್ತೆ ಮತ್ತೆ ಓದುತ್ತಿದ್ದ. ಒಂದಿನ ಅದು ಹೋಗಿದ್ದು ಮತ್ತೆ ಬರಲಿಲ್ಲ. ಅಷ್ಟೊತ್ತಿಗೆ ಸ್ಪೋರ್ಟ್ಸ್ ನಲ್ಲಿ ಚಿಕ್ಕದಾಗಿ ಹೆಸರು ಮಾಡ್ತಾ ಮಾಡ್ತಾ ದಿಲಾವರ್ ಯೂನಿವರ್ಸಿಟಿಗೆ ತಲುಪಿಬಿಟ್ಟಿದ್ದ ಬೈಡನ್. 1965ರಲ್ಲಿ ಗ್ರಾಜ್ಯೂಯೇಷನ್ ಮುಗಿಸಿದ. ಆಗ ಬೈಡನ್ ಕಣ್ಣಿಗೆ ಬಿದ್ದ ಸುಂದರಿಯೇ ನೀಲಿಯಾ ಹಂಟರ್.

 

ಎರಡು ವರ್ಷದ ಪ್ರೀತಿಯ ನಂತರ ಇಬ್ಬರೂ 1969ರಲ್ಲಿ ಮದುವೆ ಆಗ್ತಾರೆ. ಮೂವರು ಮಕ್ಕಳು ಜನಿಸುತ್ತಾರೆ. ಬ್ಯೂ, ರಾಬರ್ಟ್ ಮತ್ತು ನವೋಮಿ. ದುರಂತ ಅಂದ್ರೆ 1972ರಲ್ಲಿ ಕ್ರಿಸ್ಮಸ್ ಶಾಪಿಂಗ್ ಗೆ ಅಂತ ಹೋಗಿದ್ದ ಪತ್ನಿ ನೀಲಿಯಾ ಹಂಟರ್ ಬೈಡನ್ ಮತ್ತು ಒಂದು ವರ್ಷದ ಮಗಳು ನವೋಮಾ ಕ್ರಿಸ್ಟಿನಾ ಆಕ್ಸಿಡೆಂಟ್ ಒಂದರಲ್ಲಿ ಸಾವನ್ನಪ್ಪುತ್ತಾರೆ. ಇನ್ನಿಬ್ಬರು ಮಕ್ಕಳು ಬದುಕಿ ಉಳಿದಿದ್ದೇ ಹೆಚ್ಚು. ಆಸ್ಪತ್ರೆಯಲ್ಲಿ ಒಂದುಕಡೆ ಮಗು ಬೆಡ್ ಮೇಲೆ ಮಲಗಿದ್ದಾಗಲೇ ಬೈಡನ್ ದಿಲಾವರ್ ನ ಸೆನೆಟರ್ ಆಗಿ ಅಧಿಕಾರ ಸ್ವೀಕರಿಸುತ್ತಾರೆ. ಪತ್ನಿ ಮತ್ತು ಮುದ್ದು ಮಗಳ ಸಾವು ಬೈಡನ್ ನನ್ನ ತುಂಬಾ ದಿನ ಬಾಧಿಸುತ್ತದೆ. ಇನ್ನು ಸಾಕು ಈ ಜೀವನ. ದಿಲಾವರ್ ಬ್ರಿಡ್ಜ್ ನಿಂದ ಬಿದ್ದು ಸತ್ತುಹೋಗಲಾ ಅಂತ ಯೋಚಿಸುತ್ತಾರೆ. ಆದರೆ ಉಳಿದ ಮಕ್ಕಳನ್ನು ಅನಾಥರನ್ನಾಗಿ ಮಾಡಬಾರದು ಅಂತ ಮತ್ತೆ ಮೈ ಕೊಡವಿಕೊಂಡು ಎದ್ದು ನಿಲ್ಲುತ್ತಾರೆ.  1977ರಲ್ಲಿ ಜಿಲ್ ಟ್ರೇಸಿ ಜ್ಯಾಕೊಬ್ಸ್ ಬೈಡನ್ ಳನ್ನ ಮದುವೆ ಆಗ್ತಾರೆ. ಆಗ ಹುಟ್ಟಿದ ಕೂಸೇ ಆ್ಯಷ್ಲೀ.

 

ಬೈಡನ್ ಬದುಕಲ್ಲಿ ದುರಂತಗಳ ಸರಮಾಲೆಯೇ ಇದೆ. ಪತ್ನಿ ಮಗು ಸತ್ತಿದ್ದಲ್ಲದೆ ಇನ್ನೊಂದು ದುರಂತಕ್ಕೆ ಬೈಡನ್ ಸಾಕ್ಷಿಯಾಗಬೇಕಾಯ್ತು. ಮಗ ಬ್ಯೂ ಬೈಡೆನ್ ಅಪ್ಪನಂತೆಯೇ ರಾಜಕೀಯ ಮಹತ್ವಾಕಾಂಕ್ಷಿಯಾಗಿದ್ದ. ದಿಲಾವೆರ್ ನಲ್ಲಿ ಅಟಾರ್ನಿ ಜನರಲ್ ಆಗಿದ್ದವನು. ಆದ್ರೆ ಆತನಿಗೆ ಬ್ರೈನ್ ಟ್ಯೂಮರ್ ಇತ್ತು. 2015ರಲ್ಲಿ ಚಿಕಿತ್ಸೆ ಫಲಿಸದೆ ಅಸು ನೀಗುತ್ತಾನೆ. ಇದ್ದಿದ್ದರೆ ಬೈಡನ್ ಗೆ ರಾಜಕೀಯದಲ್ಲಿ ಒಳ್ಳೆ ಸಾಥ್ ನೀಡುತ್ತಿದ್ದ.

ಗ್ರಾಜ್ಯೂಯೇಷನ್ ಮುಗಿಸಿದ ಬೈಡನ್ ಲಾ ಪ್ರಾಕ್ಟೀಸ್ ಮಾಡೋದಕ್ಕೂ ಮೊದಲು ಕ್ಲರ್ಕ್ ಆಗಿ ಕೆಲಸ ಮಾಡುತ್ತಾರೆ. ನಂತರ ಡೆಮಾಕ್ರಟಿಕ್ ಪಕ್ಷ ಸೇರುತ್ತಾರೆ. ದಿಲಾವೆರ್ ನಿಂದ ಯಂಗೆಸ್ಟ್ ಸೆನೆಟರ್ ಆಗಿ ಆಯ್ಕೆಯಾಗಿ ಎಲ್ಲರ ಗಮನ ಸೆಳೆಯುತ್ತಾರೆ. ಆರು ಅವಧಿಗೆ ಸೆನೆಟರ್ ಆಗಿರುತ್ತಾರೆ. 1988ರಲ್ಲಿ ರೊನಾಲ್ಡ್ ರೀಗನ್ ಅವಧಿ ಮುಗಿದ ಮೇಲೆ ಅಧ್ಯಕ್ಷ ಪದವಿಗೆ ಸ್ಪರ್ಧಿಸುತ್ತಾರೆ. ಆದ್ರೆ ನಾಮಿನೇಷನ್ ವಾಪಸ್ ತೆಗೆದುಕೊಳ್ತಾರೆ.

1988 ಬೈಡನ್ ಪಾಲಿಗೆ ಮತ್ತೆ ಸಂಕಷ್ಟಕಾಲ.  Aneurysm ನಿಂದ ಹಾಸ್ಪಿಟಲೈಸ್ ಸೇರ್ತಾರೆ.  ಅನ್ಯುರಿಸಂ ಅಂದ್ರೆ ಮಿದುಳಿನಲ್ಲಿ ರಕ್ತನಾಳಗಳ ಹಿಗ್ಗುವಿಕೆ. ಬೈಡನ್ ಸ್ಥಿತಿ ಹೇಗಿತ್ತೆಂದರೆ ಸಂಸ್ಕಾರಕ್ಕೆ ರೆಡಿ ಮಾಡ್ಕೊಳಿ ಅಂತ ಯಾರೋ ಒಬ್ಬ ಪಾದ್ರಿ ಹೇಳಿಯೂ ಬಿಟ್ಟಿದ್ದ. ಆದರೆ ಮಿದುಳಿನ ಆಪರೇಷನ್ ಆಗಿ ಬೈಡನ್ ಎದ್ದುಬರ್ತಾರೆ.

1994ರಲ್ಲಿ ಅತ್ಯಂತ ಮಹತ್ವದ ಕ್ರೈಮ್ ಬಿಲ್ ಒಂದನ್ನು ಪಾಸ್ ಮಾಡ್ತಾರೆ. ಒಬಾಮಾ ಅಧ್ಯಕ್ಷರಾದಾಗ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಾರೆ. ಒಬಾಮಾ ಎರಡನೇ ಅವಧಿ ಮುಗಿದಾಗ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಚ್ಛೆ ಇತ್ತಾದರೂ ಮಗನ ಸಾವು ಆ ಅವಕಾಶವನ್ನು ಕೈಬಿಡುವಂತೆ ಮಾಡುತ್ತದೆ.

ಈಗ ಟ್ರಂಪ್ ಅನ್ನೋ ಬಲಪಂಥೀಯನನ್ನು ಸದೆ ಬಡಿಯುವ ಮೂಲಕ ಬೈಡನ್ ಮತ್ತು ಕಮಲಾ ಹ್ಯಾರಿಸ್ ವೈಟ್ ಹೌಸ್ ಪ್ರವೇಶಿಸುತ್ತಿದ್ದಾರೆ. ಯಾರೋ ಹೇಳುತ್ತಿದ್ದರು, ಟ್ರಂಪ್ ವೈಟ್ ಹೌಸ್ ನ ಘನತೆ, ಪ್ರತಿಷ್ಠೆಯನ್ನು ಹಾಳು ಮಾಡಿದ ಅಂತ. ಬಹುಶಃ ಬೈಡನ್ ಆ ಪ್ರತಿಷ್ಠೆ, ಗೌರವವನ್ನು ಉಳಿಸುತ್ತಾರೆ ಅಂತಾನೆ ಜನ ವೋಟ್ ಮಾಡಿದ್ದಾರೆ.

ಕಂಗ್ರಾಜ್ಯುಲೇಷನ್ ಬೈಡನ್.

ಆರ್ ಎ

Please follow and like us: