ಸುಖ ಸಂಸಾರಕ್ಕೆ ಈ ಆರು ಸೂತ್ರಗಳು ಸಾಕು

ಮನುಷ್ಯ ಸಂಬಂಧಗಳು ಬಹಳ ಸೂಕ್ಷ್ಮವಾದುವು. ಅದರಲ್ಲೂ ಗಂಡ-ಹೆಂಡತಿಯ ಸಂಬಂಧ; ಅದು ಸೂಕ್ಷ್ಮವಾದುದಷ್ಟೇ ಅಲ್ಲ. ಅತ್ಯಂತ ಪವಿತ್ರವಾದುದು ಹೌದು. ಒಂದು ಸಂಬಂಧ ಚೆನ್ನಾಗಿರಬೇಕು ಅಂದರೆ ಹಲವಾರು ಅಂಶಗಳು ಮುಖ್ಯವಾಗುತ್ತವೆ. ಅದರಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅಂತ ನಿರ್ಧರಿಸಬೇಕಾದವರು ಯಾರು? ಅದರಲ್ಲೂ ಗಂಡ-ಹೆಂಡತಿ ಸಂಬಂಧ ಅಂತ ಬಂದಾಗ ತಮಗೆ ಏನು ಬೇಕು ಏನು ಬೇಡ ಅಂತ ಅ

ವರಿಬ್ಬರಿಗೇ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಈ ಸಮಾಜ ತನಗೇ ಎಲ್ಲಾ ಗೊತ್ತಿರೋದು ಎಂಬಂತೆ ವರ್ತಿಸುತ್ತದೆ. ಹತ್ತಾರು ಕಟ್ಟಳೆಗಳನ್ನು ವಿಧಿಸುತ್ತದೆ. ಗಂಡ-ಹೆಂಡತಿ ಅಂದರೆ ಹೀಗೇ ಇರಬೇಕು ಅಂತ ಓಬೀರಾಯನ ಕಾಲದ ನೀತಿ ನಿಯಮಗಳನ್ನು ಹೇಳುತ್ತದೆ. ಆದರೆ ನೆನಪಿಡಿ. ಗಂಡ-ಹೆಂಡತಿ ನಡುವಿನ ಪ್ರೀತಿ ಶಾಶ್ವತವಾಗಿ ಉಳಿಯಬೇಕು ಅಂದರೆ ಅಲ್ಲಿ ಪರಸ್ಪರ ಅಂಡರ್ ಸ್ಟ್ಯಾಂಡಿಂಗ್ ಇರಬೇಕು, ಹೊಂದಾಣಿಕೆ ಇರಬೇಕು. ನಮ್ಮ ಸಂಬಂಧ ಹೇಗೆ ಇರಬೇಕು ಎಂಬುದನ್ನು ಅವರಿಬ್ಬರೇ ನಿರ್ಧರಿಸಬೇಕು. ಅದರ ಆಧಾರದ ಮೇಲೆ ಅದರ ಗಟ್ಟಿತನ ಅವಲಂಬಿಸಿರುತ್ತದೆ.

ಒಂದು ಸಂಸಾರ ಚೆನ್ನಾಗಿ ಇರಬೇಕು ಅಂದರೆ ಈ ಆರು ಅಂಶಗಳು ಬಹಳ ಮುಖ್ಯ ಅನ್ನುತ್ತಾರೆ ತಜ್ಞರು. ಅವ್ಯಾವುವು ಎಂದರೆ;

  1. ಒಂದೇ ಹಾಸಿಗೆಯಲ್ಲಿ ಮಲಗದಿದ್ದರೆ ಗಂಡ-ಹೆಂಡತಿ ಸಂಬಂಧದಲ್ಲಿ ಏನೋ ಸರಿ ಇಲ್ಲ ಎಂಬ ನಿರ್ಧಾರಕ್ಕೆ ಕೆಲವರು ಬರುತ್ತಾರೆ. ಆದರೆ ಅದು ಅವರಿಬ್ಬರ ನಿರ್ಧಾರವಾಗಿದ್ದರೆ, ಅದಕ್ಕೆ ಪರಸ್ಪರ ಒಪ್ಪಿಗೆ ಇದ್ದರೆ ಏನೂ ತೊಂದರೆ ಇಲ್ಲ. ಯಾವ ಕಾರಣಕ್ಕೆ ನಾವು ಬೇರೆ ಬೇರೆ ಮಲಗ್ತಾ ಇದ್ದೀವಿ ಎಂಬುದು ಇಬ್ಬರಿಗೂ ಗೊತ್ತಿದ್ದರೆ ಮುಗೀತು. ಕಿರಿಕಿರಿ ಮಾಡಿಕೊಳ್ಳದೆ ಬೇರೆ ಬೇರೆ ಮಲಗಿದರೆ ಅದರಿಂದ ಸಂಸಾರಕ್ಕೆ ಏನೂ ತೊಂದರೆ ಇಲ್ಲ.
  2. ಒಬ್ಬರಿಗೊಬ್ಬರು ಆಗಾಗ ಮೆಸೇಜ್ ಮಾಡಿಕೊಳ್ಳುವುದು ರೊಮ್ಯಾಂಟಿಕ್ ಆಗಿರುತ್ತೆ. ಆದರೆ ಕೆಲಸದ ವೇಳೆ ನೋಡಿಕೊಂಡು ಮೆಸೇಜ್ ಮಾಡಬೇಕು. ಇಲ್ಲದಿದ್ದರೆ ಇರಿಟೇಟ್ ಆಗುವ ಸಾಧ್ಯತೆ ಇರುತ್ತದೆ. ಹಿತವಾಗಿ ಮಿತವಾಗಿ ಮೆಸೇಜ್ ಮಾಡೋದ್ರಿಂದ ಇಬ್ಬರೂ ಟಚ್ ನಲ್ಲಿ ಇದ್ದೀವಿ ಎಂಬ ಭಾವ ಪರಸ್ಪರರಲ್ಲಿ ಇರುತ್ತದೆ.
  3. ಗಂಡ-ಹೆಂಡತಿ ಅಂದ ಮಾತ್ರಕ್ಕೆ ಇಪ್ಪತ್ತನಾಲ್ಕು ಗಂಟೆಯೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಮಿತ್ರರು ಅಂತ ಇರ್ತಾರೆ. ಅವರೊಟ್ಟಿಗೆ ಆಗಾಗ ಹೊರಗೆ ಹೋಗುತ್ತಿರಬೇಕು. ಜಾಲಿಯಾಗಿ ಕಾಲ ಕಳೆಯಬೇಕು. ಈ ಮಾತು ಗಂಡ ಹೆಂಡತಿ ಇಬ್ಬರಿಗೂ ಅನ್ವಯವಾಗುತ್ತದೆ.
  4. ತಮ್ಮ ಹಳೇ ಸಂಬಂಧಗಳ ಬಗ್ಗೆ (ಒಂದು ವೇಳೆ ಇದ್ದರೆ) ಇಬ್ಬರೂ ಒಬ್ಬರಲ್ಲೊಬ್ಬರು ಮುಕ್ತವಾಗಿ ಹೇಳಿಕೊಳ್ಳಬೇಕು ಮತ್ತು ಅದರಿಂದ ನಾನು ಸಂಪೂರ್ಣವಾಗಿ ಹೊರಬಂದಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಹಾಗೆಯೇ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು.
  5. ಗಂಡ-ಹೆಂಡತಿ ಸಂಬಂಧ ಅಂದ ಮೇಲೆ ಅಲ್ಲಿ ಏನಿರುತ್ತೋ ಬಿಡುತ್ತೋ ಹಣದ ವಿಷಯವಂತೂ ಇದ್ದೇ ಇರುತ್ತೆ. ಅಷ್ಟಕ್ಕೂ ಇಬ್ಬರೂ ಎಲ್ಲ ವಿಷಯಗಳನ್ನು ಪರಸ್ಪರ ಹಂಚಿಕೊಂಡ ಮೇಲೆ ಹಣದ ವಿಷಯವೂ ಹಂಚಿಕೊಳ್ಳಲೇ ಬೇಕಲ್ಲವೆ. ಅದರಲ್ಲಿ ಏನೂ ಮುಚ್ಚುಮರೆ ಇಟ್ಟುಕೊಳ್ಳಬಾರದು. ಯಾವ್ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡಬೇಕು. ಅದು ಅಗತ್ಯ ಇದೆಯಾ ಅಂತ ನೋಡಿಕೊಳ್ಳಬೇಕು.
  6. Last but not least ಊಟದ ವಿಚಾರ. ಒಬ್ಬೊಬ್ಬರದ್ದು ಒಂದೊಂದು ಟೇಸ್ಟ್ ಇರುತ್ತೆ. ಗಂಡನಿಗೆ ನಾನ್ ವೆಜ್ ಇಷ್ಟ ಆಗುತ್ತೆ. ಆದರೆ ಹೆಂಡತಿಗೆ ಅದರ ವಾಸನೆ ಕಂಡರೇನೇ ಆಗದು. ಹಾಗಂತ ಪರಸ್ಪರ ನಿಂದಿಸುವ, ಮುನಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವನಿಗೇನಿಷ್ಟಾನೋ ಅದನ್ನು ಅವನು ತಿನ್ನಲಿ ಅಂತ ಬಿಡಬೇಕು. ಗಂಡನೂ ಅಷ್ಟೇ, ನೀನು ಮಾಂಸ ತಿನ್ನು ಅಂತ ಹೆಂಡತಿಗೆ ಬಲವಂತ ಮಾಡಬಾರದು.

ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಮುಖ್ಯವಾದ ವಿಷಯ ಅಂದರೆ ಹೊರಗಿನ ಜನಕ್ಕೆ ನಮ್ಮ ಸಂಸಾರದ ವಿಷಯದಲ್ಲಿ ಮೂಗು ತೂರಿಸುವ ಅವಕಾಶವನ್ನೇ ನಾವು ಕೊಡಬಾರದು. ಹಾಗೊಂದು ವೇಳೆ ಕೊಟ್ಟೆವೋ ಕಥೆ ಮುಗೀತು. ಎಷ್ಟೋ ಜನ ಕೈಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡು ಯಾವಾಗ ಹುಳಿ ಹಿಂಡಲಿ ಅಂತಲೇ ಕಾಯುತ್ತಿರುತ್ತಾರೆ. ಸಂಸಾರವೆಂಬ ಹಾಲನ್ನು ಅತ್ಯಂತ ಎಚ್ಚರದಿಂದ ಕಾಪಾಡಿಕೊಳ್ಳಬೇಕಾದ್ದು ಗಂಡ-ಹೆಂಡತಿಯ ಕೈಲೇ ಇದೆ.

ಅಲ್ಲವೇ?

Please follow and like us: