ಸಂತೋಷ ಸಾಯ್ತಿದೆ ಅಂದ್ರೆ ನಾವು ಸಾಯ್ತಿದ್ದೇವೆ ಅಂತಾನೆ ಅರ್ಥ

ಜಗತ್ತು ಸಂತೋಷವಾಗಿಲ್ಲ.

ಅರೆ.. ಇದೇನು ಹೀಗ್ ಹೇಳ್ತಿದೀರ ಅಂದ್ರಾ? ಬೇಕಾದ್ರೆ ನೀವೇ ಚೆಕ್ ಮಾಡಿ. ಮೊದಲು ನೀವು ಖುಷಿಯಾಗಿದ್ದೀರಾ? ಇಲ್ಲ. ನಿಮ್ಮ ನೆರೆಹೊರೆಯವರು, ನೆಂಟ್ರು-ಇಷ್ಟರು, ಸ್ನೇಹಿತರು ಖುಷಿಯಾಗಿದ್ದಾರಾ? ಇಲ್ಲ. ಹಣಕಾಸಿನ ಯಡವಟ್ಟು,  ಮನೆ ಅನ್ನೋ ನರಕ, ಆಫೀಸಿನಲ್ಲಿ ಕಿರಿಕಿರಿ, ಗಂಡ ಬೇಲಿ ಹಾರ್ತಾನೆ, ಹೆಂಡ್ತಿ ಬಾಯ್ ಬಡ್ಕಿ, ಹುಟ್ಟಿಸಿದ ಮಕ್ಕಳು ನೆಟ್ಟಗಿಲ್ಲ, ಅಪ್ಪ ಅಮ್ಮಂದು ಬರೀ ವರಾತ. ಉಫ್..ಒಂದಾ ಎರಡಾ ರಗಳೆ. ಪ್ರತಿ ಹೃದಯದಲ್ಲೂ ಇಂಥ ಅಸಂತೋಷದ ಪಕಳೆಗಳೇ. ಸುಖ ಝೀರೋ.

ನನಗೊಬ್ಬ ಹುಡುಗ ಪರಿಚಯ. ಅವನಿಗೆ ಸಿನಿಮಾ ಮಾಡುವಾಸೆ. ಆದ್ರೆ ಅದು ಅಷ್ಟು ಸುಲಭವಾಗಿ ಆಗಬೇಕಲ್ಲ. ಏಳೆಂಟು ವರ್ಷದಿಂದ ಗಾಂಧೀ ನನಗರದಲ್ಲಿ ಅಲೆದು ಅಲೆದು ಹೈರಾಣಾಗಿದ್ದಾನೆ. ಒಂದಿನ ಇದ್ದಕ್ಕಿದ್ದಂತೆ ನಿಮ್ಮತ್ರ ಮಾತಾಡ್ಬೇಕು ಬರ್ತೀನಿ ಸರ್ ಅಂದ. ಬಂದ. ನೋಡಿದ್ರೆ ಗಡ್ಡಗಿಡ್ಡ ಬಿಟ್ಕೊಂಡು ದೇವ್ ದಾಸ್ ಥರ ಆಗ್ಬಿಟ್ಟಿದ್ದಾನೆ. ಸಿನಿಮಾ ಬಿಡು ಮಾರಾಯ ದುಡಿಯೋ ದಾರಿ ಕಂಡುಕೋ ಅಂದೆ. ಯಾಕೋ ಮನಸೇ ಸರಿ ಇಲ್ಲ. ಮನಸಲ್ಲಿ ಬರೀ ದುಃಖವೇ ತುಂಬಿದೆ ಸರ್ ಅಂತ ಕಣ್ಣೀರಾಕಿದ. ನಿಜ ಹೇಳ್ತೀನಿ, ಇಂಥ ಅಸಂತೋಷವೆ ಈಗ ಜಗತ್ತಿನಲ್ಲಿ ಹಾಸ್ಕೊಂಡು ಒದ್ಕೊಂಡು ಮಲಗಿರೋದು. ಸಂತೋಷ ಮರೀಚಿಕೆ.

2019ರಲ್ಲಿ ಒಂದು ರಿಪೋರ್ಟ್ ಬಂತು. ಅದೇ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್. ಆತಂಕಕಾರಿ ವಿಚಾರ ಅಂದ್ರೆ ಜಗತ್ತಿನಲ್ಲಿ ದಿನೇ ದಿನೇ ಅಸಂತೋಷದ ಬಳ್ಳಿ ಹಬ್ತಿದೆ. ನೆಗೆಟಿವ್ ಫೀಲಿಂಗ್ಸ್ ಹೆಚ್ಚಾಗ್ತಿದೆ. ಚಿಂತೆ, ದುಃಖ, ಕೋಪ ಈ ಮೂರೂ ಜಗತ್ತಿನ ಜನರನ್ನ ಕಿತ್ತು ತಿನ್ನುತ್ತಿವೆ ಅನ್ನೋದೆ ಆ ರಿಪೋರ್ಟ್. 2010ರಿಂದ ಹೀಗೆ ದುಃಖದಿಂದ ಬಳಲುವವರ ಸಂಖ್ಯೆ ಇಪ್ಪತ್ತೇಳು ಪಟ್ಟು ಜಾಸ್ತಿ ಆಗಿದೆ ಅಂದ್ರೆ ನಂಬ್ತೀರ.

ಆಧುನಿಕ ಸಮಾಜ ನಮಗೆ ಎಲ್ಲವನ್ನೂ ಒದಗಿಸಿಕೊಟ್ಟಿದೆ. ಆಧುನಿಕತೆ ಕಾಲ್ಪನಿಕ ಲೋಕವನ್ನೇ ಕೈಗೆಟಕುವಂತೆ ಮಾಡಿದೆ. ಮನೆ, ಆಫೀಸು, ಮನಸು ಎಲ್ಲವೂ ಗ್ಯಾಡ್ಜೆಟ್ಗಳ ಜೊತೆ ತಳಕುಹಾಕಿಕೊಂಡಿದೆ. ಹೇಳ್ಬೇಕು ಅಂದ್ರೆ ಜಗತ್ತಿನ ಜನರ ಬಳಿ ಆ್ಯವರೇಜ್ ಪ್ರಮಾಣದಲ್ಲಿ ಬಯಸಿದಂಥ ಎಲ್ಲವೂ ಇದೆ. ಇಲ್ಲದೆ ಹೋಗಿರೋದು ಒಂದೇ. ಖುಷಿ. 2010ರ ನಂತರ ಜನ ಖುಷಿ ಕಳೆದುಕೊಂಡಿದ್ದಾರೆ ಅಂದ್ರೆ ಅದಕ್ಕೆ ಕಾರಣ ಬದುಕಿಗೆ ಸಿಕ್ಕ ಆಧುನಿಕತೆಯ ಸ್ಪರ್ಶ. ನಂಬಿಕೆ ಇಲ್ಲದ ಜಗತ್ತಿನಲ್ಲಿ ಖುಷಿ ಹೇಗೆ ಸಿಗಲು ಸಾಧ್ಯ ಅಲ್ವ? ‘ಒತ್ತಡ ಮತ್ತು ಋಣಾತ್ಮಕ ಭಾವನೆಗಳು ಹೆಚ್ಚುತ್ತಿರುವ ಯುಗದಲ್ಲಿ ನಾವಿದ್ದೇವೆ’ ಅಂತ ಅರ್ಥಶಾಸ್ತ್ರಜ್ಞ ಜೆಫ್ರಿ ಡಿ ಹೇಳಿದ್ದು ಸರಿ ಎನಿಸುತ್ತದೆ. ಕಳೆದ ಶತಮಾನದ ಜನ ಬಡತನದ ಬೇಗುದಿಗೆ ಸಿಕ್ಕು ದುಃಖಿತರಾಗಿದ್ದರು ಅಂದ್ರೆ ಈ 2010ರ ನಂತರದ ಕಾಲಮಾನ ಏನಿದೆ ಇದು ಎಲ್ಲ ಇದ್ದರೂ ಮನುಷ್ಯನನ್ನ ದುಃಖಕ್ಕೆ ತಳ್ಳಿಬಿಟ್ಟಿದೆ.

Happiness inequality  ಅನ್ನೋ ಪದ ಕೇಳಿದ್ದೀರ? ಅಸಮಾನತೆ ಅನ್ನೋದು ಬೇರೆ ಬೇರೆ ಸಾಮಾಜಿಕ ಸ್ಥರಗಳಲ್ಲಿ ವ್ಯಾಪಿಸಿದೆ. ಜಾತಿ, ಧರ್ಮ, ವರಮಾನ, ಅಂತಸ್ತು. ಎಕ್ಸ್ ಪರ್ಟ್ಸ್ ಪ್ರಕಾರ 2007ರ ನಂತರ ಅದು ಖುಷಿಗೂ ಅನ್ವಯಿಸುತ್ತಿದೆ. ಸಂತೋಷದ ಅಸಮಾನತೆ ಎಲ್ಲೆಡೆ ತಾಂಡವವಾಡ್ತಿದೆ. ಸಂತೋಷಿಗಳು ಮತ್ತು ಅಸಂತೋಷಿಗಳ ನಡುವಿನ ಗ್ಯಾಪ್ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾನೆ ಇದೆ. ಲ್ಯಾಟಿನ್ ಅಮೆರಿಕಾ, ಏಷಿಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಈ ಹ್ಯಾಪಿನೆಸ್ ಇನ್ ಈಕ್ವಾಲಿಟಿ ಜಾಸ್ತಿ ಕಂಡುಬಂದರೂ ಭಾರತದಂಥ ದೇಶದಲ್ಲಿ ಅದು ಈಗಾಗಲೇ ಮುಗಿಲು ಮುಟ್ಟಿದೆ ಅಂದ್ರೆ ಆಶ್ಚರ್ಯವಿಲ್ಲ. ಬೇಜಾನ್ ಹಣ ಇರುವ, ಸದಾ ಝಗಮಗಿಸುವ, ಅತ್ಯಾಧುನಿಕ ಜೀವನ ಶೈಲಿ ರೂಢಿಸಿಕೊಂಡಿರುವ ಜಗತ್ತಿನ ಪವರ್ ಫುಲ್ ದೇಶ ಎನಿಸಿರುವ ಅಮೆರಿಕಾ sad state ಅನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ ಅಂದ್ರೆ ಕೊರತೆಯಲ್ಲೇ ಬದುಕುತ್ತಿರುವ ನಮ್ಮಂಥ ದೇಶಗಳ ಅಸಂತೋಷದ ಗ್ರಾಫ್ ಯಾವ ಲೆವಲ್ ಗೆ ಇರಬೇಕು ಗೆಸ್ ಮಾಡಿ.

ವೆರಿ ವೆರಿ ಇಂಪಾರ್ಟೆಂಟ್ ಮತ್ತು ಆತಂಕದ ವಿಷಯ ಏನಂದ್ರೆ, ಯುವ ಜನತೆ ಹೆಚ್ಚೆಚ್ಚು ಅಸಂತೋಷಿಗಳಾಗ್ತಿದ್ದಾರೆ. 2000ನೇ ಇಸವಿಯಿಂದೀಚೆಗೆ ಅಮೆರಿಕಾದ ಯುವಕರು ಮತ್ತು ಯುವತಿಯರು ಹೆಚ್ಚೆಚ್ಚು ದುಃಖಿಗಳಾಗ್ತಿದ್ದಾರೆ ಅನ್ನುತ್ತದೆ ರಿಪೋರ್ಟ್. ಎಲ್ಲಾ ಇದ್ದೂ ಅವರು ಅಷ್ಟು ಅಸಂತೋಷಿಗರು ಅನ್ನೋದಾದ್ರೆ ನಮ್ಮಲ್ಲಿ ಯುವಜನತೆಗೆ ಮಾರ್ಗದರ್ಶನವಿಲ್ಲ. ಸರಿಯಾದ ಶಿಕ್ಷಣವಿಲ್ಲ. ಶಿಕ್ಷಣ ಮುಗಿಸಿದರೆ ದುಡಿಯಲು ಕೆಲಸವಿಲ್ಲ. ಅಸಂತೋಷ ಬರದೆ ಇನ್ನೇನು ಬರುತ್ತೆ?  ಈ ಅಸಂತೋಷಿಗಳೇ ಸಂತೋಷ ಹುಡುಕಿಕೊಂಡು ಹೊರಟು ಹಾದಿ ತಪ್ಪೋದು. ಅಪರಾಧ, ಮಾದಕ ವ್ಯಸನ, ಸಂಘಟಿತ ಕೊಲೆ ಸುಲಿಗೆ, ಜೂಜು  ಇವನ್ನು ಮೈಗೂಡಿಸಿಕೊಂಡವರು ಇನ್ನಷ್ಟು ಅಸಂತೋಷಕ್ಕೆ ಕಾರಣವಾಗ್ತಾರೆ.

ಇದಲ್ಲದೆ ಅಸಂತೋಷಕ್ಕೆ ಇನ್ನೊಂದು ಮೇಜರ್ ಕಾರಣ ಅಂದ್ರೆ ಟೆಕ್ನಾಲಜಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಮೊಬೈಲ್, ಕಂಪ್ಯೂಟರ್ ಆವರಿಸಿಕೊಂಡಿದೆ. ಸಭ್ಯತೆಯ ಡೆಫಿನಿಷನ್ನೇ ಚೇಂಜ್ ಆಗಿದೆ. ಪ್ರೈವೆಸಿ ಪದದ ಅರ್ಥವೇ ಪಲ್ಲಟವಾಗಿದೆ. ಅನುಮಾನ ಹೆಡೆ ಎತ್ತಿದೆ. ನೀವು ಗಂಟೆಗಟ್ಟಲೆ ಕಂಪ್ಯೂಟರ್ ಗೆ, ಮೊಬೈಲ್ ಗೆ ಸಾಮಾಜಿಕ ಜಾಲತಾಣಕ್ಕೆ ಕಣ್ಣು ಕೀಲಿಸಿಕೊಂಡು ಕೂತಿದ್ದೀರಿ ಅಂದ್ರೆ ಸಂತೋಷ ಸತ್ತುಹೋಗಿದೆ ಅಂತಾನೆ ಅರ್ಥ. ಯಾವಾಗ ಕೃತಕ ವಸ್ತುಗಳಲ್ಲಿ ಸಂತೋಷ ಹುಡುಕ್ತಾ ಪರಸ್ಪರರಲ್ಲಿ ಅನುಮಾನ ಬೆಳೆಸಿಕೊಂಡೆವೋ, ದೂರಾದೆವೋ ಆಗಲೇ ಸಂತೋಷ ಸತ್ತಿದ್ದು.

ಸಂತೋಷ ಸಾಯ್ತಿದೆ ಅಂದ್ರೆ ನಾವು ಸಾಯ್ತಿದ್ದೇವೆ ಅಂತಾನೆ ತಾನೆ ಅರ್ಥ.

ಪ್ಲೀಸ್ 0ಅರ್ಥ ಮಾಡ್ಕೊಳಿ.

-ಪೂರ್ವಿ   

 

Please follow and like us: