ಲೈಫ್ ಬಾಯ್ ಅನ್ನೋ ಇಟ್ಟಿಗೆ ಸೋಪಿನ ಇಂಟ್ರೆಸ್ಟಿಂಗ್ ಪುರಾಣವು!

ಅದನ್ನ ಇಟ್ಟಿಗೆ ಸೋಪು ಅಂತಾನೆ ನಾವೆಲ್ಲಾ ಕರೆಯುತ್ತಿದ್ದೆವು.

ಕೆಂಪು ಕೆಂಪಾದ ಕಲರ್. ಬಣ್ಣದಲ್ಲಿ ಮತ್ತು ಸೈಜಿನಲ್ಲಿ ಇಟ್ಟಿಗೆ ಥರ ಇದ್ದಿದ್ರಿಂದಾನೋ ಏನೋ ಹಳ್ಳಿಗರು ಅದನ್ನ ಇಟ್ಟಿಗೆ ಸೋಪು ಅಂತ ಕರೆಯುತ್ತಿದ್ದರು! ಘಮವಂತೂ ಕೇಳಲೇಬೇಡಿ. ಈಗಿನ ಸೋಪುಗಳ ಥರ ಮಧುರವಾದ ಸುಗಂಧದ ವಾಸನೆಯೇನೂ ಇರಲಿಲ್ಲ. ಅಹ್ಲಾದಕರವಾಗೂ ಇರಲಿಲ್ಲ. ಆ ಸೋಪಿನ ಹೆಸರು ಲೈಫ್ ಬಾಯ್ ಸೋಪ್.  ಆ ಕಾಲಕ್ಕೆ ಪ್ರತಿಯೊಬ್ಬರ ಬಚ್ಚಲು ಮನೆಯ ಸಂಗಾತಿ.

ನಮಗೆಲ್ಲಾ ಸ್ನಾನ ಮಾಡಿಸಲು ಅಥವಾ ಆ ಕಾಲದ ಎಲ್ಲರೂ ಸ್ನಾನ ಮಾಡಲು ನಾಲ್ಕೈದು ರೀತಿಯ ಸಾಧನಗಳನ್ನ ಬಳಸುತ್ತಿದ್ದರು. ನಯವಾದ ಚೂರೇಚೂರು ಒರಟಾದ ದುಂಡಗಿನ ಒಂದು ಕಲ್ಲನ್ನ ಆರಿಸಿ ತಂದಿಟ್ಟುಕೊಂಡು ಅದರಿಂದಲೇ ಮೈಯನ್ನು ತಿಕ್ಕಿ ತಿಕ್ಕಿ ತೊಳೆಯುತ್ತಿದ್ದರು. ಎರಡನೇದು ‘ಚಗರೆ’. ತೆಂಗಿನ ನಾರನ್ನ ಬಿಡಿಸಿ ಅದನ್ನ ಉಂಡೆ ಮಾಡಿಟ್ಟುಕೊಂಡು ಅದರಿಂದ ಮೈ ತಿಕ್ಕುತ್ತಿದ್ದರು. ಎಷ್ಟು ಉರಿ ಗೊತ್ತಾ ಇದರಲ್ಲಿ ಮೈ ತಿಕ್ಕಿದ್ರೆ. ಆದರೂ ತಿಕ್ಕುತ್ತಿದ್ದರು. ಮೂರನೇದು ಕೆಮ್ಮಣ್ಣು. ನಾಲ್ಕನೇದು ಚುಜ್ಜಲಪುಡಿ. ಐದನೇದೇ ಲೈಫ್ ಬಾಯ್ ಸೋಪ್. ಮಕ್ಕಳಿಗೆ ಕಲ್ಲಿನಲ್ಲಿ ತಿಕ್ಕುತ್ತಿದ್ದದ್ದು ಕಡಿಮೆ. ಇಟ್ಟಿಗೆ ಸೋಪನ್ನ ಹಾಕಿ ಮೈ ತೊಳೆಯುತ್ತಿದ್ದರು. ಒಂದು ಸೋಪ್ ತಂದು ಅದನ್ನೆ ಮನೆಮಂದಿಯವರೆಲ್ಲಾ ಉಪಯೋಗಿಸಿದರೂ ತಿಂಗಳುಗಟ್ಟಲೆ ಬರುತ್ತಿತ್ತು. ಕರಗುತ್ತಲೇ ಇರಲಿಲ್ಲ. ಯಾಕೆಂದ್ರೆ ಸ್ನಾನ ಅಂತ ಮಾಡುತ್ತಿದ್ದದ್ದೆ ವಾರಕ್ಕೆ ಒಂದು ಸಲವೋ ಎರಡು ಸಲವೋ!

ಮುಖಮಜ್ಜನ ಮಾತ್ರ ನಿತ್ಯ ನಡೆಯುತ್ತಿತ್ತು.

ಅಸಲಿಗೆ ನಮಗೆ ಸ್ನಾನ ಮಾಡಲು ಬಚ್ಚಲು ಮನೆಗಳೆಲ್ಲಿದ್ದವು ಹೇಳಿ?  ಕಕ್ಕಸ್ಸು ಗುಂಡಿಗಳ ಕಲ್ಪನೆಯಂತೂ ಇರಲೇ ಇಲ್ಲ ಬಿಡಿ. ಬೆಳಗ್ಗೆ ಆದರೆ, ಯಾವಾಗ ಬೇಕಾದ್ರೆ ಆವಾಗ ಬಯಲಿನ ಕಡೆ ಹೋಗಿ ಬರುತ್ತಿದ್ದೆವು. ಬಚ್ಚಲು ಮನೆ ಇರಲಿಲ್ಲವಾದ್ದರಿಂದ ಬಯಲಲ್ಲೇ ನಿಂತೋ ಕೂತೋ ಒಂದು ಹಂಡೆಯಲ್ಲಿ ನೀರು ತುಂಬಿಕೊಂಡು ಸ್ನಾನ ಮಾಡುವುದು ಅಭ್ಯಾಸ. ಗಂಡಸರು ತೋಟದ ಬಾವಿಯಲ್ಲೋ ಕೆರೆ ಕುಂಟೆಯಲ್ಲೋ ಮಿಂದು ಬರುತ್ತಿದ್ದರು. ಹೆಂಗಸರು ಸ್ನಾನಕ್ಕೆ ಅಂತ ಗುಡಿಸಲಿನ ಆಚೀಚೆ ಬಿದಿರಿನಿಂದಲೋ, ತೆಂಗಿನ ಗರಿಯಿಂದಲೋ  ಒಂದು ಪುಟ್ಟ ಬಚ್ಚಲು ಮನೆ ಕಟ್ಟಿಸಿಕೊಳ್ಳುತ್ತಿದ್ದರು. ಅದಕ್ಕೆ ಮೇಲ್ಚಾವಣಿ ಇದ್ದಿದ್ದು ನಾನು ನೋಡೇ ಇಲ್ಲ.

ಹೊಲಗದ್ದೆ ಬಿಡಿ ಊರುಗಳಲ್ಲಿದ್ದ ಬಚ್ಚಲು ಮನೆಗಳಲ್ಲೂ ಅಷ್ಟೆ ಬಾಗಿಲು ಇರುತ್ತಿರಲಿಲ್ಲ. ಒಂದು ಪರದೆ ಇಳಿಬಿಡುತ್ತಿದ್ದರು. ಕೆಲವೊಮ್ಮೆ ಅದೂ ಇಲ್ಲ. ಬಚ್ಚಲು ಮನೆಯಲ್ಲಿ ಸೀಗೆಕಾಯಿ, ಕೈಯೆಣ್ಣೆ, ಚುಜ್ಜಲಪುಡಿ, ಒಂದು ಬುಡ್ಡಿದೀಪ ಮತ್ತು ಈ ಲೈಫ್ ಬಾಯ್ ಸೋಪು ಇಷ್ಟಿರುತಿದ್ದವು. ಕೆಲವರು ತಲೆಗೆ ಸೀಗೆಕಾಯಿ ಪುಡಿ ಬಳಸಿದ್ರೆ ಇನ್ನು ಕೆಲವರಿಗೆ ಮೈಗೂ ಮತ್ತು ತಲೆಗೂ ಲೈಫ್ ಬಾಯ್ ಸೋಪೆ ಕ್ಲೀನಿಂಗ್ ಐಟಂ ಆಗಿರುತ್ತಿತ್ತು.

ಬಹುಶಃ ನನಗೆ ಬುದ್ಧಿಬರೋ ತನಕವೂ ನಾನು ನಮ್ಮೂರಿನಲ್ಲಿ ನೋಡಿದ್ದು ಲೈಫ್ ಬಾಯ್ ಸೋಪ್ ಮಾತ್ರ. ಬೇರೆ ಹಮಾಮ್ ಸೋಪು ಇತ್ತೇನೋ. ಆದರೆ ಜನ ಸೈಜ್ ಮತ್ತು ಬಾಳಿಕೆ ದೃಷ್ಟಿಯಿಂದ ಹೆಚ್ಚು ಇಷ್ಟಪಡುತ್ತಿದ್ದುದ್ದು ಲೈಫ್ ಬಾಯ್ ಸೋಪನ್ನೆ. ಇನ್ನೊಂದು ವಿಷಯ ಏನಂದ್ರೆ, ಒಂದು ಲೈಫ್ ಬಾಯ್ ಸೋಪ್ ಬೇಡ ಅನ್ನೋರಿಗೆ ಅಂಗಡಿಯವರು ಅರ್ಧ ಕಟ್ ಮಾಡಿ ಕೊಡುತ್ತಿದ್ದರು. ಅರ್ಧ ಬೆಲೆಗೆ.

 

ಒಮ್ಮೆ ನಮ್ಮೂರಲ್ಲಿ ಒಂದು ಗುಸುಗುಸು ಪಿಸುಪಿಸು ನಡೆದಿತ್ತು. ನಾವೆಲ್ಲಾ ಮಾರಿಗುಡಿ ಹತ್ತಿರ ಹೋಗಿ ಕೂತು ವಿಷಯ ಏನು ಅಂತ ಕೆದಕಿದಾಗ ಗೊತ್ತಾಗಿದ್ದು ಇಷ್ಟು. ಬಸಪ್ಪ ಅನ್ನೋನು ಸ್ನಾನಕ್ಕೆ ಅಂತ ಹೋಗಿದ್ನಂತೆ.  ಹೆಂಡ್ತಿ ಒಲೆ ಊದುತ್ತಾ ಅಡುಗೆ  ಮಾಡ್ತಿದ್ದಳಂತೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳು ಶುರುವಾಗಿದೆ. ಬಸಪ್ಪನಿಗೆ ಪಿತ್ತನೆತ್ತಿಗೇರಿ ಬಚ್ಚಲು ಮನೆಯಿಂದಲೇ ಕೈಯಲ್ಲಿದ್ದ ಲೈಫ್ ಬಾಯ್ ಸೋಪ್ ನ ಹೆಂಡ್ತಿಯತ್ತ ಎಸೆ

 

ದಿದ್ದ. ಎಸೆದ ರಭಸಕ್ಕೆ ಸೋಪ್ ಹೆಂಡ್ತಿಯ ಪಕ್ಕೆಗೆ ಬಿದ್ದು, ನೋವು ತಾಳಲಾರದ ಆಕೆ ಕಿರುಚಿ ರಂಪ ಮಾಡಿದ್ದಳು. ಗಾಬರಿಯಾದ ಗಂಡ ಬಚ್ಚಲು ಮನೆಯಿಂದ ಹೊರಬಂದು ಎಸ್ಕೇಪ್ ಆಗಿದ್ದ. ಮೂರು ದಿನ ಮನೆಗೆ ಬಂದಿರಲಿಲ್ಲ.

 

ಲೈಫ್ ಬಾಯ್ ಸೋಪಿನ ಮಹಿಮೆ ಇಷ್ಟೆ ಅನ್ಕೋಬೇಡಿ. ಮನೆಗೆ ತಂದಮೇಲೂ ಪೂರ್ತಿ ಇಟ್ಟರೆ ಬೇಗ ಕರಗಿಹೋಗುತ್ತೆ ಅಂತ ಭಾವಿಸಿದ ಜನ  ಅರ್ಧ ಕಟ್ ಮಾಡಿ ಇನ್ನರ್ಧವನ್ನಷ್ಟೇ ಬಚ್ಚಲು ಮನೆಯಲ್ಲಿ ಇಡುತ್ತಿದ್ದರು. ಕಟ್ ಮಾಡುತ್ತಿದ್ದುದ್ದು ಬ್ಲೇಡ್ ನಿಂದಲ್ಲ. ಕೊಡಲಿಯಿಂದ ಇಲ್ಲ ಕುಡಗೋಲಿನಿಂದ ಕೊಯ್ಯುತ್ತಿದ್ದರು. ಉಳಿದರ್ಧ ಗೂಡಿನಲ್ಲಿ ಬುಡ್ಡಿದೀಪದ ಪಕ್ಕ ಬಿದ್ದಿರುತ್ತಿತ್ತು.

ನಮ್ಮೂರಿನ ಗೂಡಂಗಡಿಗಳಿಗೆ ಎಡತಾಕಿದರೆ ಕಾಣುತ್ತಿದ್ದದ್ದು ಒಂದರ ಮೇಲೊಂದು ಪೇರಿಸಿದ್ದ ಲೈಫ್ ಬಾಯ್ ಸೋಪ್ ಮಾತ್ರ. ‘ ಒಂದ್ ಲೈ

 

ಪ್ ಬೈ ಸೋಪ್ ತಗಂಡ್ ಬರೋಗುಡಾ? ಬಿರ್ರನ್ ಬಾ’ ಅಂತ ಸ್ನಾನಕ್ಕೆ ಕೂತ ಮೇಲೆ ನಮ್ಮಂಥ ಹುಡುಗರನ್ನ ಅಂಗಡಿಗೆ ಅಟ್ಟುತ್ತಿದ್ದರು. ನಾವು ಸೋಪ್ ತಗೊಂಡು ಒಂದೆರಡು ಕಡ್ಲೆ ಅಂತ ಅಂಗಡಿಯವನ ಮುಂದೆ ಕೈ ಚಾಚುತ್ತಿದ್ದೆವು. ಅವನು ಗದರಿಸಿದರೆ ಸೋಪನ್ನ ಚಡ್ಡಿ ಜೇಬಿಗಿಳಿಸಿ ಬುರ್ರ್ ಅಂತ ಮನೆ ಕಡೆಗೆ ಬಂಡಿಬಿಡುತ್ತಿದ್ದೆವು. ಎಷ್ಟೋ ಸಲ ಚಡ್ಡಿಯಲ್ಲಿದ್ದ ಇಟ್ಟಿಗೆ ಗಾತ್ರದ ಸೋಪನ್ನೆ ಮರೆತು ಬೀದಿಯಲ್ಲಿ ಆಡೋದಕ್ಕೆ ನಿಂತುಬಿಡುತ್ತಿದ್ದೆವು. ಅತ್ತ ಬಚ್ಚಲು ಮನೆಯಲ್ಲಿ ಸ್ನಾನಕ್ಕೆ ಕೂತಿದ್ದ ಹಿರಿಯ ಕೂಗಿಕೂಗಿ ಸಾಕಾಗಿ ವಾಚಾಮ ಗೋಚರ ಬೈದುಕೊಂಡು ನಮ್ಮನ್ನ ಹುಡುಕಿಕೊಂಡು ಬರುತ್ತಿದ್ದ. ನಾವು ಅವನ್ನ ನೋಡಿದಕೂಡಲೇ ಸೋಪು ನೆನಪಾಗಿ ಪೇರಿ ಕೀಳುತ್ತಿದ್ದೆವು.

ಇನ್ನೊಂದು ವಿಷಯವನ್ನ ನಾನು ನಿಮಗೆ ಹೇಳಲೇಬೇಕು. ನಮ್ಮ ಮನೆಯ ಪಕ್ಕದಲ್ಲೇ ಒಂದು ಚಿಲ್ರೆ ಅಂಗಡಿ ಇತ್ತು. ದೊಡ್ಡದೇನಲ್ಲ ಅದು. ಚಿಕ್ಕದು. ಅಲ್ಲಿಗೆ ಬೀಡಿ ಸೇದಲು ಬರುವ ಗಂಡಸ್ರು ಗಂಟೆಗಟ್ಟಲೆ ಕಟ್ಟೆಮೇಲೆ ಕೂತು ಬೇಕಾದ್ದು ಬೇಡದ್ದನ್ನು ಒದರುತ್ತಿದ್ದರು. ಹೀಗೆ ಮಾತಾಡುವಾಗಲೇ ಅಲ್ಲಿಗೆ ಶಿವ ಅನ್ನೋನು ಬಂದಿದ್ದ. ಶಿವ ಸ್ವಲ್ಪ ರೌಡಿ ಥರ ಇದ್ದ ಆಸಾಮಿ. ಬಂದು ಅಂಗಡಿಯವನಿಗೆ ಒಂದು ಕಟ್ಟು ಬೀಡಿ ಬೆಂಕಿಪೊಟ್ಟಣ ಕೊಡು ಅಂದಿದ್ದಾನೆ.  ಹಳೆಬಾಕಿ ಕೊಡು ಕೊಡ್ತೀನಿ ಅಂದಿದ್ದಾನೆ ಅಂಗಡಿಯಾತ. ನಾನೇನು ಊರುಬಿಟ್ಟು ಹೋಗ್ಬುಟ್ಟಾನ. ಕೊಡು ಕೊಡು ಅಂತ ಧಿಮಾಕಿನಿಂದ ಮಾತಾಡಿದ್ದಾನೆ ಶಿವ. ಅಂಗಡಿಯವ ಮಾತ್ರ ಹಳೆಬಾಕಿ ಚುಕ್ತಾ ಮಾಡೋ ಮೊದಲು ಒಂದು ಬೀಡಿನೂ ಕೊಡಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಇಬ್ಬರಿಗೂ ಜಗಳ ಶುರುವಾಗಿದೆ. ಹೊರಗಡೆ ನಿಂತಿದ್ದ ಶಿವ ಸಿಟ್ಟಿನಿಂದ ನೇತಾಕಿದ್ದ ಬಾಳೆಹಣ್ಣಿನ ಗೊನೆಯನ್ನ ಜಗ್ಗಿ ಬಿಸಾಕಿದ್ರೆ ಒಳಗಿದ್ದ ಅಂಗಡಿಯಾತ  ಕೈಗೆ ಸಿಕ್ಕಿದ್ದ  ಲೈಫ್ ಬಾಯ್ ಸೋಪನ್ನೆ ಶಿವನತ್ತ ಬೀಸಿದ್ದ. ಅದರಿಂದ ಏಟು ತಿಂದುಹೋದ ಶಿವ ಮತ್ತೆ ಆ ಕಡೆ ತಲೆ ಹಾಕಿರಲಿಲ್ಲ.

ಅಂದ್ರೆ ಆತ್ಮರಕ್ಷಣೆಗೋಸ್ಕರ ಕೂಡ ಲೈಫ್ ಬಾಯ್ ಒಂದು ಅಸ್ತ್ರವಾಗಿತ್ತು.

ಲೈಫ್ ಬಾಯ್ ಸೋಪ್ ಇತಿಹಾಸ ನೋಡಿದ್ರೆ ಅದು 1895ನೇ ಇಸವಿಗೆಹೋಗಿ ನಿಲ್ಲುತ್ತದೆ. ಲಿವರ್ ಬ್ರದರ್ಸ್ ಮೊದಲಿಗೆ ಇಂಗ್ಲಂಡ್ ನಲ್ಲಿ ಲೈಫ್ ಬಾಯ್ ಸೋಪ್ ಶುರುಮಾಡ್ತಾರೆ. ಅಮೆರಿಕದಲ್ಲಂತೂ ಇದು 1923ರಿಂದ 1950ನೇ ಇಸವಿ ತನಕ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿತ್ತಂತೆ. ಯಾವಾಗ ಸುಗಂಧಭರಿತ ಸೋಪುಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟವೋ ಆಗ ಲೈಫ್ ಬಾಯ್ ಸ್ವಲ್ಪ ಹಿಂದೆ ಸರಿಬೇಕಾಯ್ತು. ಹೊಸ ಸೋಪುಗಳ ಜೊತೆ ಜಿದ್ದಿಗೆ ಬಿದ್ದು ತನ್ನ ರೂಪ ಮತ್ತು ಸುಗಂಧ ಎರಡನ್ನೂ ಬದಲಾಯಿಸಿಕೊಂಡಿದೆ ಈಗಿನ ಲೈಫ್ ಬಾಯ್.

ಸೂಪರ್ ಮಾರ್ಕೆಟ್ ಗೆ ಹೋದಾಗ ಸೋಪ್ ಸೆಕ್ಷನ್ ಗೆ ಹೋದರೆ ಈಗಲೂ ನಾನು ಲೈಫ್ ಬಾಯಿ ಕಡೆ ಒಮ್ಮೆ ದೃಷ್ಟಿ ಹರಿಸುತ್ತೇನೆ.

ಸುಮ್ಮನೆ ಅದರ ಮೈ ದಡವಿ ಅಲ್ಲೇ ಇಟ್ಟು ಬರುತ್ತೇನೆ.

      ರವಿ ಅಜ್ಜೀಪುರ

Please follow and like us: