ಮನೆ ಬಿಟ್ಟು ಕರೆದೊಯ್ದವನು ಕಡೆಗೆ ಇದೇನು ಮಾಡಿದ?

ಪ್ರೀತಿಯ ತಂದೆಯೇ,

ನಮಸ್ಕಾರಗಳು.

ಇದೆಂಥ ಸಮಸ್ಯೆಗೆ ಸಿಕ್ಕು ಬಿದ್ದಿದ್ದೇನೋ, ನೋಡಿ. ನನ್ನ ಹೆಸರು ದೀಪಾ ಅಂತ ಇಟ್ಟುಕೊಳ್ಳಿ. ನಾನು ಪದವೀಧರೆ. ಮುಂದೆ ಸ್ನಾತಕೋತ್ತರ ಪದವಿ ಮಾಡುವ ಆಸೆ. ವಯಸ್ಸು ಇಪ್ಪತ್ಮೂರು. ಒಂದೂವರೆ ವರ್ಷಕ್ಕೆ ಮುಂಚೆ ನನಗೆ ಒಬ್ಬ ಯುವಕ ಪ್ರಪೋಸ್ ಮಾಡಿದ. ತಕ್ಷಣ ನಾನು ಒಪ್ಪಿಕೊಳ್ಳಲಿಲ್ಲ. ಆದರೆ ಕ್ರಮೇಣ ನನ್ನಲ್ಲೂ ಪ್ರೀತಿ ಉಂಟಾಯಿತು. ಅಂದಿನಿಂದ ನಮ್ಮದು two way love. ಅವನ ಮನೆಯಲ್ಲಿ ಈ ವಿಷಯ ಮೊದಲು ಗೊತ್ತಾಯಿತು. ಅಲ್ಲಿ ಕೊಂಚ ಒರಟು ಮಾತುಗಳಾದವು. ಅವರ ಮನೆಯವರು ಅವನನ್ನು ನಿರ್ಬಂಧದಲ್ಲಿ ಇರಿಸಿದರು. ನಾವು touchನಲ್ಲಿರಲೇ ಬಾರದು ಎಂಬ ಹಟ ಅವನ ಮನೆಯವರದು. ಆದರೂ ಮೆಸೇಜ್ ಮಾಡುತ್ತಿದ್ದ. ಕೆಲವು ಸಲ ಮಾತೂ ಆಡುತ್ತಿದ್ದ. ನಾನು ಮಾತ್ರ ವಿಪರೀತ ಚಡಪಡಿಸಿದೆ. ಖಿನ್ನಳಾದೆ. ಒಂದರ್ಥದಲ್ಲಿ ಬದುಕುವ ಉತ್ಸಾಹವೇ ಬತ್ತಿ ಹೋದಂತಾಯಿತು. I was so upset. ಆದರೆ ಯಾರೊಂದಿಗೂ ಇದನ್ನು ನಾನು ಹೇಳಿಕೊಳ್ಳಲಿಲ್ಲ. ಆದರೆ ಅವನು ಒಮ್ಮೆ ಇದ್ದಕ್ಕಿದ್ದಂತೆ ಫೋನ್ ಮಾಡಿ ಹೇಳಿದ. “ನೀನು ಬಂದು ಬಿಡು. ಮದುವೆ ಆಗೋಣ. ಕೆಲವು ದಿನ ಮುಂಬೈನಲ್ಲಿ ಇರೋಣ” ಅಂದ. ಅದಕ್ಕೂ ಮುಂಚೆ ಅವನು ಮುಂಬೈನಲ್ಲಿದ್ದ. ಅವನಿಗಲ್ಲಿ ಒಂದು ಕೆಲಸವೂ ಇತ್ತು. ವಾಸಕ್ಕೆ ಒಂದು ರೂಮ್ ಕೂಡ ಇತ್ತು. ಅವನು ಹಾಗೆ ಕರೆದಾಗ ನಿಜಕ್ಕೂ ಎಕ್ಸೈಟ್ ಆದೆ. ಈ ಅನುಭವ ಎಲ್ಲ ಹುಡುಗಿಯರಿಗೂ ಆಗುತ್ತದಾ? ನನಗೆ ಮಾತ್ರ ಆಯಿತು. ಖಂಡಿತ ಆಯಿತು. ನಾನು ಮನೆಯಿಂದ ಹೊರಟುಬಿಟ್ಟೆ.

ಅವನ ಪರಿಸ್ಥಿತಿ ನನಗೆ ಗೊತ್ತಿತ್ತು. ಅವನ ಕೈ ಖಾಲಿ. ಹೀಗಾಗಿ ನನ್ನ ಒಂದಷ್ಟು ಹಣ, ಒಡವೆ ಮುಂತಾದವುಗಳನ್ನು ತೆಗೆದುಕೊಂಡೇ ಹೋಗಿದ್ದೆ. ನನಗೆ ಬೇರೆ ಏನೂ ಬೇಕಿರಲಿಲ್ಲ: ಅವನ ಪ್ರೀತಿಯ ಹೊರತಾಗಿ. ಅಲ್ಲಿ ಮುಂಬೈನಲ್ಲಿ ಅವನು ಸಿಕ್ಕಿದ. ಕೆಲವು ಒಡವೆ ಮಾರಿ ಒಂದು ವರ್ಷದ rent ಕಟ್ಟಿದೆವು. ಅವನು ದೇವರ ಮುಂದೆ ತಾಳಿ ಕಟ್ಟಿದ. ನಮ್ಮ ಸಂಸಾರ ಪ್ರಾರಂಭವಾಯಿತು. ಅವನು ನನ್ನನ್ನು ತುಂಬ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಅಪರೂಪಕ್ಕೆ ಅಂತ ತನ್ನ ಮನೆಗೆ ಫೋನ್ ಮಾಡುತ್ತಿದ್ದ. ನಾನು ಅಪ್ಪಿತಪ್ಪಿ ಕೂಡ ನಮ್ಮ ಮನೆಗೆ ಫೋನ್ ಮಾಡುತ್ತಿರಲಿಲ್ಲ.

ಆನಂತರ ನನ್ನ ಗಮನಕ್ಕೆ ಬಂದ ಸಂಗತಿಯೆಂದರೆ, ಅವನು ಕೆಲಸಕ್ಕೆ ಹೋಗುತ್ತಲೇ ಇರಲಿಲ್ಲ. `ನೀನು ಹೋಗು’ ಅನ್ನುತ್ತಿದ್ದ. ಎಲ್ಲಿಗೆ ಹೋಗಲಿ? ಮುಂಬೈನಲ್ಲಿ ಹಿಂದಿಯೇ ಬಾರದ ನಾನು ಎಲ್ಲಿ ನೌಕರಿ ಮಾಡಲಿ? ತಾನು ಕೆಲಸಕ್ಕೆ ಹೋದರೆ, ಅವನ ಮನೆಯಲ್ಲಿ ಗೊತ್ತಾಗಿ ಬಿಡುತ್ತದೆ ಎಂಬ ಭಯ. ಅವನ ಸಂಬಂಧಿಗಳ ಪೈಕಿ ಅನೇಕರು ಮುಂಬೈನಲ್ಲೇ ನೆಲೆಗೊಂಡಿದ್ದರು. ಕೆಲಸಕ್ಕೆ ಹೋದರೆ ಪರಸ್ಪರರು ಭೇಟಿ ಆಗಲೇ ಬೇಕಿತ್ತು. ಹಾಗಾಗಿ ಭಯ ಪಡುತ್ತಿದ್ದ. ನಿಮಗೂ ಗೊತ್ತಿದೆ ತಂದೆಯೇ. ಕುಳಿತು ತಿಂದರೆ ಎಷ್ಟು ದಿನ ನೂಕಬಹುದು? ಸಾಕಷ್ಟು ತೊಂದರೆಗಳಾದವು. ಅವನು ತನ್ನ ಮನೆಗೆ call ಮಾಡೋದನ್ನೇ ಬಿಟ್ಟುಬಿಟ್ಟ. ವಿಪರೀತ ಹಸಿವಾದಾಗ ಒಂದು ಸಮೋಸ ತಿಂದು ಹೊಟ್ಟೆ ಭರ್ತಿ ನೀರು ಕುಡಿದು ಮಲಗುತ್ತಿದ್ದೆವು. ಮುಂಬೈನಲ್ಲಿ ಇವನ ಮಾವ ಇದ್ದಾರೆ. ಹೊಟೇಲ್ ನಡೆಸುತ್ತಾರೆ. ಅಲ್ಲಿನ ಕ್ಯಾಷಿಯರ್ ಒಬ್ಬ ನಮ್ಮ ಕಡೆಯವನೇ. ಓಡಿ ಬಂದ ನಂತರ ಊರಲ್ಲಿ, ಅವನ ಮನೆಯಲ್ಲಿ ಏನೇನು ನಡೆಯುತ್ತಿದೆ ಅಂತ ತಿಳಿದುಕೊಳ್ಳುತ್ತಿದ್ದ. `ಈ ಮನುಷ್ಯ miss ಆಗಿದ್ದಾನೆ. ಇವನ ಫೊಟೋ ಪತ್ರಿಕೆಯಲ್ಲಿ ಹಾಕಿಸುತ್ತೇವೆ. ವಿಷಯ ಎಲ್ಲರಿಗೂ ಗೊತ್ತಾಗುತ್ತದೆ’ ಅಂತ ಇವನ ಅಣ್ಣ ಅನ್ನುತ್ತಿದ್ದನಂತೆ. ಮುಂದೆ ಇವನ ಮನೆಯವರಿಂದಲೇ ನನ್ನ ಹಿರಿಯರಿಗೆ ಗೊತ್ತಾಗುವಂತಾಯಿತು. ಅವರು ಮರ್ಯಾದೆಗೆ ಅಂಜಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿರಲಿಲ್ಲ.

ಇಬ್ಬರಲ್ಲೂ ಹಣವಿರಲಿಲ್ಲ. ಇವನ ಮಾವನ ಹೊಟೇಲ್ ಕ್ಯಾಷಿಯರ್ ಒಮ್ಮೆ “ಆಯ್ತು, ಕೊಂಚ ಹಣ ಕೊಡ್ತೇನೆ” ಅಂದ. ಬೆಳಿಗ್ಗೆ ಒಂಬತ್ತೂವರೆಗೇ ಇವನು ಹೋದ. ವಾಪಸು ಬಂದದ್ದು ರಾತ್ರಿ ಹತ್ತು ಗಂಟೆಗೆ. ಅಂಗಿಯೆಲ್ಲ ಹರಿದು ಹೋಗಿತ್ತು. ಸಾಲಗಾರರು ಇವನನ್ನು ಹಿಡಿದು ಹೊಡೆದಿದ್ದರು. “ಈ ಊರಿನ ಸಹವಾಸವೇ ಬೇಡ. ಮಂಗಳೂರಿಗೆ ಹೋಗೋಣ” ಅಂದ. ಅಲ್ಲಿ ಇವನಿಗೆ ಒಬ್ಬ ಗೆಳೆಯನಿದ್ದಾನಂತೆ. “ಯಾವುದೂ ಬೇಡ. ಊರಿಗೇ ಹೋಗೋಣ. ಅಲ್ಲಿ ನಿನ್ನ ಮನೆಗೇ ಹೋಗೋಣ, ಮುಂದೆ ಎಲ್ಲ ಸರಿ ಹೋಗುತ್ತದೆ” ಅಂದೆ. ಅವನು ಒಪ್ಪಲಿಲ್ಲ. ತನ್ನ ಬಟ್ಟೆ ಪ್ಯಾಕ್ ಮಾಡಿ ಒಂದು ಬ್ಯಾಗ್‌ಗೆ ಹಾಕಿದ. ಹಾಗೇ ನನ್ನ ಬಟ್ಟೆಗಳನ್ನೂ ಪ್ಯಾಕ್ ಮಾಡಿ ಇನ್ನೊಂದು ಬ್ಯಾಗ್‌ಗೆ ಹಾಕಿದ. “ಊರಿನವರ್‍ಯಾರಾದರೂ ನೋಡ್ತಾರೆ. ನೀನು ಲೇಡೀಸ್ ಕಂಪಾರ್ಟ್‌ಮೆಂಟ್‌ಗೆ ಹೋಗಿ ಕೂಡು. ನಾನು ಜನರಲ್ ಡಬ್ಬಿಯಲ್ಲಿ ಇರ್‍ತೇನೆ” ಅಂದ. ದಾರಿಯಲ್ಲಿ ಇವನು ಒಮ್ಮೆ ಬಂದು, ಮಾತಾಡಿಸಿ ಹೋದ. ಆದರೆ ಅದೇ ಕೊನೆ. ಆನಂತರ ಇವನು ಬರಲೇ ಇಲ್ಲ. ಜನರಲ್ ಡಬ್ಬಿಗೆ ಹೋಗಿ ನೋಡಿದೆ. ಇವನಿರಲಿಲ್ಲ. ರೈಲು ಮಂಗಳೂರಿಗೆ ಬಂತು. ಅಲ್ಲೂ ಇವನು ಸಿಗಲಿಲ್ಲ. “ಇಲ್ಲಿಯ ತನಕ ಅವನು ಪ್ರಯಾಣ ಮಾಡಲಿಲ್ಲ. ಅವನು ಹಿಂದಿನ ಯಾವುದೋ ಊರಿನ ತನಕ ಬಂದು, ಅಲ್ಲಿ ಇಳಿದು ಹೋದ” ಅಂದರು. I was shocked. ಇವನು ನನಗೆ ಮೋಸ ಮಾಡಿದ ಅಂತ ಖಾತರಿ ಆಯಿತು. ಬೇರೆ ದಾರಿ ಇಲ್ಲದಂತಾಗಿ ಮಂಗಳೂರಿನ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟೆ. ನನ್ನಲ್ಲಿದ್ದ ಮೊಬೈಲ್‌ನಲ್ಲಿ ಸಿಮ್ ಇರಲಿಲ್ಲ. ಠಾಣೆಯಿಂದಲೇ ಅವನ ಒಬ್ಬ ಗೆಳೆಯನಿಗೆ ಫೋನ್ ಮಾಡಿದೆ. `ತನಗೆ ಏನೂ ಗೊತ್ತೇ ಇಲ್ಲ’ ಎಂಬಂತೆ ಆತ ಮಾತಾಡಿದ. “ಆಯ್ತು, ನಾನು ಒಬ್ಬಳೇ ಊರಿಗೆ ಹೋಗ್ತೇನೆ. ಅವನ ಮನೆಗೇ ಹೋಗ್ತೀನಿ. ಸಹಾಯ ಮಾಡಿ” ಅಂತ ಕೇಳಿಕೊಂಡೆ. ಪೊಲೀಸರು ಒಪ್ಪಿಕೊಂಡು ಮರುದಿನ ಒಬ್ಬ ಪೇದೆಯನ್ನು ಜೊತೆಗೆ ಕಳಿಸುವುದಾಗಿ ಒಪ್ಪಿಕೊಂಡರು. ಆದರೆ, ಅವರು ಹಾಗೆ ಮಾಡಲೇ ಇಲ್ಲ. ಸರಿ, ನನ್ನ ಕರ್ಮ ನನಗಿರಲಿ! ಅಂದುಕೊಂಡು ಊರಿಗೆ ಒಬ್ಬಳೇ ಹೋದೆ. ನೇರವಾಗಿ ಅವರ ಮನೆಗೇ ಹೋದೆ. ಜೊತೆಯಲ್ಲಿ ಒಬ್ಬ ಪೇದೆ ಬಂದರು. ಅವರು ಮಂಗಳೂರಿನವರಲ್ಲ. ನಮ್ಮ ಊರಿನ ಠಾಣೆಯವರೇ. ಆದರೆ ಮನೆಯ ಹತ್ತಿರಕ್ಕೆ ಹೋಗುವ ತನಕ ಅವರು ನನ್ನ ಪರವಾಗೇ ಇದ್ದರು. ಆದರೆ ಇವನ ಅಣ್ಣ ಪಕ್ಕಕ್ಕೆ ಕರೆದು ಅವರೊಂದಿಗೆ ಏನೋ ಮಾತನಾಡಿದರು. ನಂತರ ಆ ಪೇದೆ, “ನೋಡಮ್ಮಾ, ನೀನು ಇವತ್ತಿನ ಮಟ್ಟಿಗೆ ನಿಮ್ಮ ಮನೆಗೇ ಹೋಗು. ನಾಳೆ ನಾನೂ ಇರ್‍ತೇನೆ. ಈ ಮನೇಗೆ ಬರುವಿಯಂತೆ” ಅಂದರು. ಹೋಗಲಿಲ್ಲ ಅಂದರೆ ನಿನ್ನನ್ನ ಕಾನೂನು ಪ್ರಕಾರ ಜೈಲಿಗೆ ಕಳಿಸ್ತೇನೆ ಅಂತಲೂ ಅಂದರು. ಆಗಲೇ ನಾನು ಗಲಾಟೆ ಮಾಡಿದ್ದು. ಅದು ಜೋರಾಗಿಯೇ ಆಯಿತು. ನಮ್ಮ ಮನೆಯವರಿಗೂ ಗೊತ್ತಾಯಿತು. ಮೊದಲು ನನ್ನ ಚಿಕ್ಕಮ್ಮ ಬಂದರು. ಮತ್ತೆ ನಾನು ಠಾಣೆಗೆ ಹೋದೆ. “ಆಯ್ತು, action ತಗೊಳ್ಳೋಣ. ಮೊದಲು ನೀನು ಪ್ರೂಫ್ ತೋರಿಸು” ಅಂದರು. ಇದೆಲ್ಲ ನಡೆಯುತ್ತಿದ್ದಾಗಲೇ ನನ್ನ ಚಿಕ್ಕಮ್ಮ ಒಲ್ಲದ ಮನಸ್ಸಿನಿಂದ ಮನೆಗೆ ಕರೆದೊಯ್ದರು. ಅಲ್ಲಿ ಶುದ್ಧ ನರಕ ಅನುಭವಿಸಿದೆ. ತಲೆಗೊಬ್ಬರಂತೆ ಮಾತಾಡಿದರು. ಹಂಗಿಸಿದರು. ಮಾತಿನಲ್ಲೇ ನನ್ನನ್ನು ಕೊಂದರು. ಅದೇ ಹಿಂಚು ಮುಂಚಿನಲ್ಲಿ ನನ್ನ ಅಕ್ಕನ ಸೀಮಂತ ಸಮಾರಂಭ ಇತ್ತು. “ನೀನು ಹೋದೆ. ಆದರೆ ಅಲ್ಲೇ ಸಾಯಬೇಕಿತ್ತು. ವಾಪಸು ಯಾಕೆ ಬಂದೆ?” ಅಂದರು. ನನ್ನ ಅಪ್ಪ-ಅಮ್ಮ ಕೂಡ ಮಾತನಾಡಿಸಲಿಲ್ಲ. ಮರುದಿನ ಹೋಗಿ ಠಾಣೆಯಲ್ಲಿ ದೂರು ನೀಡಿದೆ: ನನ್ನ ಮೇಲೆ ರೇಪ್ ಆಗಿದೆ ಅಂತಲೇ ಕೊಟ್ಟೆ. ಆಗ ಕೊಂಚ ಎಚ್ಚರಗೊಂಡ ಪೊಲೀಸರು ಅವನನ್ನು ಹುಡುಕತೊಡಗಿದರು. ನನಗೆ ಅವನನ್ನು ಶಿಕ್ಷಿಸಬೇಕು, ಜೈಲಿಗೆ ಕಳಿಸಬೇಕು ಅಂತೇನೂ ಇರಲಿಲ್ಲ. ಆದರೆ ರೇಪ್ ಕೇಸ್ ಕೊಟ್ಟರೆ ಬಂದಾದರೂ ಬರುತ್ತಾನಲ್ಲ ಅನ್ನಿಸಿ ಹಾಗೆ ಕೇಸ್ ಕೊಟ್ಟೆ. ನನ್ನ ಮಾವ ಪೊಲೀಸರನ್ನು ಕರೆದುಕೊಂಡು ಮುಂಬೈಗೆ ಹೋದ, ಹುಡುಕಲಿಕ್ಕೆ.

ನನ್ನ ಸ್ಥಿತಿ ನೋಡಿ. ಮದುವೆ ಆದದ್ದಕ್ಕೆ ಪ್ರೂಫ್ ಇಲ್ಲ. ತಾಳಿ ಎಂಬುದು ಪ್ರೂಫ್ ಅಲ್ಲ. ತೆಗೆಸಿಕೊಂಡ ಫೊಟೋಗಳನ್ನು ಅವನು ಡಿಲೀಟ್ ಮಾಡಿಬಿಟ್ಟ. ಇದೆಲ್ಲದರ ಮಧ್ಯೆ ಅವನಿಗೆ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಆಯಿತು. ಅವನು ಕೊಟ್ಟ-ಕಟ್ಟಿದ ತಾಳಿಗೆ ಬೆಲೆ ಇಲ್ಲವಾಯಿತು-ತಂದೆ, ಅವನು ನನ್ನನ್ನು ಪ್ರೀತಿಸುತ್ತಾನೆ. ಅದು ಸತ್ಯ. ಯಾರಿಗೋ ಹೆದರಿ ಹೀಗೆ ಮಾಡಿದ್ದಾನೆ. ನನ್ನ ಬಳಿ ಇರೋದು ಸಿಮ್ ಇಲ್ಲದ ಮೊಬೈಲ್. ಆದರೆ ಅವನು ಫೋನ್ ಕೂಡ ಮಾಡುವುದಿಲ್ಲ. ಅವನ ಹಿಂದೆ ಉಟ್ಟ ಬಟ್ಟೆಯಲ್ಲೇ ಹೋಗಿದ್ದೆ. ಆಗಷ್ಟೆ ಪರೀಕ್ಷೆ ಬರೆದಿದ್ದೆ. ಅದರಲ್ಲಿ ನಂಗೆ ಫಸ್ಟ್ ಕ್ಲಾಸ್ ಬಂದಿತ್ತು. ಮುಂದೆ ಹೇಗೆ ಓದಿದೆ, ಏನೇನೆಲ್ಲ ಕಷ್ಟಪಟ್ಟೆ ಎಂಬುದು ನನಗೆ ಮತ್ತು ದೇವರಿಗೆ ಗೊತ್ತು. ಈಗಲೂ ನನಗೆ ಸ್ವಾತಂತ್ರ್ಯವಿಲ್ಲ. ಕೈಲಿ ಹಣವೂ ಇಲ್ಲ. ತೀರ ಅಂಗಳಕ್ಕೂ ಬರಲಾರೆ. ಆ ಸ್ಥಿತಿ ನನ್ನದು. ನಾನು ಯಾರಿಗೆ ಮೊರೆ ಹೋಗಲಿ? ಕೊನೆಯ ಆಶಾ ದೀಪವೆಂದರೆ ನೀವೇ. ಸಂಬಂಧಿಸಿದ ಎಲ್ಲರದೂ ಫೋನ್ ನಂಬರ್ ಕೊಟ್ಟಿದ್ದೇನೆ. ದಯವಿಟ್ಟು ಫೋನ್ ಮಾಡಿ. ನನ್ನ ಪರವಾಗಿ ನೀವು ಒಂದು ಮಾತಾಡಿದರೂ ಸಾಕು. ಅವರು ಮೃದುವಾಗುತ್ತಾರೆ. ಅವನನ್ನು ಕರೆಸುತ್ತಾರೆ. ನಿಮ್ಮ ನೆರವನ್ನು ನಾನು ಸಾಯೋತನಕ ಮರೆಯುವುದಿಲ್ಲ. ನಿಮ್ಮ ಮಗಳು ನಾನು.

-ಡಿ.

ಪ್ರೀತಿಯ ಡಿ,

ಒಂದು ಮಾತಿದೆ: I am not surprised. ನಿನ್ನ ಪತ್ರವನ್ನ ತುಂಬ ಜವಾಬ್ದಾರಿಯಿಂದ ಓದಿದ್ದೇನೆ. ಕೊಟ್ಟ ನಂಬರ್‌ಗಳನ್ನ note ಮಾಡಿಕೊಂಡಿದ್ದೇನೆ. ಅದು ನನ್ನ ಕಾಳಜಿ, ಶ್ರದ್ಧೆ ಮತ್ತು ಪ್ರೀತಿಗೆ ಸಂಬಂಧಿಸಿದ್ದು. ಆಯ್ತಾ? ನಾನು ಯಾವ ಪತ್ರವನ್ನೂ neglect ಮಾಡುವವನಲ್ಲ.

ನಿನ್ನದು ಒಂದೂವರೆ ವರ್ಷದ ಪ್ರೇಮ ಅಂತೀಯ. ಆದರೆ ಎಲ್ಲೋ ಒಂದು ಕಡೆ ನೀನು ತುಂಬ ವೇಗವಾಗಿ, ಭಾವುಕಳಾಗಿ, feverish ಆಗಿ ಮುಂದುವರೆದು ಬಿಟ್ಟೆಯಾ ಅಂತ ಅನುಮಾನ ನಂಗೆ. “ಥತ್, ಈ ಮನೇಲಿ ನಂಗೆ ಬದುಕೋಕೇ ಆಗಲ್ಲ. ಒಂದು ಮದುವೆ ಅಂತ ಆಗ್ಲಿ. ಎಂಥವನಾದ್ರೂ ಸರೀನೇ. ತಾಳಿ ಅಂತ ಕಟ್ಟಿ ಬಿಡಲಿ. ಆಮೇಲೆ ಈ ದರಿದ್ರರ ಕಡೆಗೆ ತಿರುಗಿ ಕೂಡ ನೋಡಲ್ಲ. ಸಾಕು ಈ ದುಷ್ಟರ ಸಹವಾಸ!” ಅಂತ ಮಾತನಾಡುವ ಅನೇಕ ಹುಡುಗಿಯರನ್ನು ನೋಡಿದ್ದೇನೆ. “ಯಾರಾದರೂ ಕರೆದರೆ ಸಾಕು: ಅವರ ಹಿಂದೆ ಓಡಿ ಹೋಗಿ ಬಿಡ್ತೀನಿ” ಅಂತ ಮಾತನಾಡುವವರನ್ನೂ ನೋಡಿದ್ದೇನೆ. ಇದು ಮತ್ತೇನೂ ಅಲ್ಲ: lack of attachment. ಕೆಲವು ಮನೆಗಳು ಹಾಗಿರುತ್ತವೆ. ಮುಖ್ಯವಾಗಿ attachmentನ ಕೊರತೆ.

ಆಯ್ತು, ನೀನು ಆ ಸ್ಥಿತಿಯಲ್ಲಿದ್ದೆ. ಅವನು ಮನೆ ಹತ್ತಿರದವನು. ಗಾಢವಾಗಿ ಅನ್ನೋದಕ್ಕಿಂತ ತೀವ್ರವಾಗಿ ಪ್ರೀತಿಸಿದ್ದೀಯ. ಮುಂಬೈಗೆ ಹೋಗೋದಕ್ಕೆ ಮುಂಚಿತವಾಗಿಯೇ ಅವನೊಂದಿಗೆ ದೈಹಿಕ ಸಂಬಂಧವಿತ್ತು ನಿನಗೆ. Not good. ಅಂಥ ಅವಸರ ಯಾಕೆ ಹೇಳು. ಕೊಂಚ serious ಆಗಿ ತೆಗೆದುಕೊಳ್ಳಬೇಕು ಬದುಕನ್ನ: ನಿಮ್ಮದೇ ದೇಹವನ್ನ. ಬಿಡು, ಆನಂತರ ಅವನು ನಿನ್ನನ್ನು ಕರೆದ, ಓಡಿ ಹೋಗಿ ಮದುವೆಯಾಗೋಣ ಅಂತ, ನೀನು ಹೋಗಿಯೇ ಬಿಟ್ಟೆ. That is also bad. ನೀನು ವಹಿಸಿದ ಒಂದೇ practical ಸಂಗತಿ ಅಂದರೆ- ಹೋಗುವಾಗ ಕೊಂಚ ಹಣ, ಕೊಂಚ ಒಡವೆ ತೆಗೆದುಕೊಂಡು ಹೋದದ್ದು. ಒಡವೆ ಅಂತ ನಾವು ಮಾಡಿಸೋದೇ ಕಷ್ಟ ಕಾಲದಲ್ಲಿ ಅದರ ನೆರವು ಪಡೆಯೋದಕ್ಕೆ ಅಂತಲೇ. I am not worried. ಬದುಕು ನೆಟ್ಟಗಿದ್ದರೆ ಅದರ ಎರಡು ಪಟ್ಟು ಒಡವೆ ಮಾಡಿಸಬಹುದು. ಆದರೆ ಆ ದೈತ್ಯ ನಗರಿಯಲ್ಲಿ ನೀವು ಮಾಡಿದ್ದಾದರೂ ಏನು? ಮದುವೆಯಾದಿರಿ. ಅದನ್ನು ರಿಜಿಸ್ಟರ್ ಮಾಡಿಸಲಿಲ್ಲ. ದೇವರ ಎದುರಿಗೆ ಕಟ್ಟಿದ ತಾಳಿ. ಅದನ್ನೂ ನಾನು ಗೌರವಿಸುತ್ತೇನೆ. ತಾಳಿ ಎಂಬುದು ಮದುವೆಗೆ proof ಅಲ್ಲ ಅನ್ನುತ್ತದೆ ಸಮಾಜ. ಫೊಟೋಗಳದು ಯಾವ ಲೆಕ್ಕ? ಬಟನ್ ಅಮುಕಿದರೆ, ಡಿಲೀಟ್! ಆದರೆ ಮದುವೆಯ ನಂತರ ಗಂಡಸು ಜವಾಬ್ದಾರಿ ಹೊರಲು ಸಿದ್ಧನಾಗಬೇಕು. ಕೆಲಸಕ್ಕೆ ಹೋಗಬೇಕು. ಆದರೆ ಹೋದನಾ? ಕೆಲಸಕ್ಕೆ ಹೋದರೆ ನೆಂಟರಿಷ್ಟರ ಕಣ್ಣಿಗೆ ಬೀಳುತ್ತೇನೆ ಎಂಬ ಭಯ. ಮುಂಬೈ ಎಂಬುದು ಅರಸೀಕೆರೆ ಅಥವಾ ಬಾಣಾವರ ಅಲ್ಲ. ಅದೊಂದು ವಿಶಾಲ ಸಮುದ್ರ. ನೆಂಟರಿಷ್ಟರು ಇಲ್ಲದ ಕಡೆ ಆರಾಮಾಗಿ ನೌಕರಿ ಹಿಡಿದು ಕೆಲಸ ಮಾಡಿಕೊಂಡಿರಬಹುದು. ಅವನಿಗದು ಗೊತ್ತಿಲ್ಲವಾ? ನೀನು ತಂದ ಹಣ, ಮಾರಿದ ಒಡವೆ ಖಾಲಿಯಾಗುವ ತನಕ ಜೊತೆಗೆ ಕುಂತು ಉಂಡ. ಎಷ್ಟು ದಿನ ಉಣ್ಣಲಾಗುತ್ತದೆ ಹೇಳು? ಹೋಗಲಿ, ನೆಂಟರಿಷ್ಟರನ್ನು ಪೂರ್ತಿ avoid ಮಾಡಿದನಾ? ಅದೂ ಇಲ್ಲ. ಮಾವನ ಹೊಟೇಲಿನ ಕ್ಯಾಷಿಯರ್‌ನೆಡೆಗೆ ಒಂದು ರಹಸ್ಯ ಕಿಂಡಿ ತೆರೆದು ಸಂಪರ್ಕ ಇಟ್ಟುಕೊಂಡೇ ಇದ್ದ. ಕಡೆಗೆ ಏನಾಯಿತು ಹೇಳು? ನಿನ್ನ ಹಣ, ಒಡವೆ ಎಲ್ಲಾ ಮುಗಿಸಿ ಮುಂಬೈನಿಂದ ವಾಪಸು ಬರಲಿಕ್ಕೆ ಆ ಕ್ಯಾಷಿಯರ್‌ನಿಂದ ಹಣ ಇಸಿದುಕೊಂಡು, ದಾರಿಯಲ್ಲಿ ಸಾಲಗಾರರಿಂದ ಒದೆ ತಿಂದು ಬಂದ. ಇರಲಿ, ತಲೆಗೆ ಸರಿಯಾಗಿ ಎಣ್ಣೆ ಇಲ್ಲದಂಥವರು ತಮ್ಮ ತೀಟೆ ತೀರಿಸಿಕೊಳ್ಳಲಿಕ್ಕೆ ಹೊರಟರೆ ಇದೆಲ್ಲವೂ ಆಗೋದು ಸಹಜ. ಅವನ ಪ್ಲಾನ್ ಹೇಗಿತ್ತು ಅಂತ ನಿನಗೇ ಗೊತ್ತಾಗಿದೆ. ಬಟ್ಟೆ ಪ್ಯಾಕ್ ಮಾಡುವಾಗಲೇ ಎರಡು ಬೇರೆ ಬೇರೆ bag ಮಾಡಿದ್ದಾನೆ. ನಿನಗೆ ಯಾಕೆ ಅನುಮಾನ ಬರಲಿಲ್ಲವೋ: ಕಾಣೆ. ದಾರಿಯಲ್ಲೆಲ್ಲೋ ಇಳಿದು ಹೋಗಿದ್ದಾನೆ. ಅದಕ್ಕೂ ಎಷ್ಟು ನಾಟಕ? ನೀನು ಹೆಂಗಸರ ಡಬ್ಬಿ, ಅವನು ಜನರಲ್ ಡಬ್ಬಿ! ಜೊತೆಗೇ ಕುಳಿತರೆ ಇಳಿದು ಹೋಗೋದು ಸಾಧ್ಯವಿಲ್ಲ ಅಲ್ವಾ? ಇದು ಆಕಸ್ಮಿಕ ಅನ್ನುವಂತಹ ಛಾನ್ಸೇ ಇಲ್ಲ. ಬಟ್ಟೆ ಪ್ಯಾಕ್ ಮಾಡೋದರಿಂದ ಹಿಡಿದು ರೈಲಿನಿಂದ ಇಳಿದು ಹೋಗೋದರ ತನಕ ಎಲ್ಲವನ್ನೂ plan ಮಾಡಿದ್ದಾನೆ. Not a good man. ನಾನು ದುಷ್ಟರನ್ನು ಹೇಗೋ ಸಹಿಸಿಕೊಳ್ಳುತ್ತೇನೆ. ಆದರೆ ವಂಚಕರನ್ನು ಸಹಿಸುವುದಿಲ್ಲ. ಅವನು ಮಾಡಿದ್ದು ವಂಚನೆಯೇ.

ಈ ವಯಸ್ಸಿನಲ್ಲಿ ಇಷ್ಟೆಲ್ಲ ಮಾಡಿದ್ದೀಯ: ಕೇವಲ ನಿನ್ನ ಪ್ರೀತಿಗಾಗಿ, ಇಬ್ಬರ ಒಳಿತಿಗಾಗಿ. ಕೂತು ಲೆಕ್ಕ ಹಾಕು: ಅವನು ಮಾಡಿದ್ದೇನು? ನಿನ್ನನ್ನು ತಂದೆ-ತಾಯಿಯ ಮನೆಯಿಂದ ಎಬ್ಬಿಸಿದ. ಅಲ್ಲಿಂದ ಮುಂಬೈ ತನಕ ನಿನ್ನದೇ ದುಡ್ಡು. ಮುಂಬೈಗೆ ತಲುಪಿದ ನಂತರವೂ ಅದೇ ಹಣ. ಒಟ್ಟಿನಲ್ಲಿ, ಇದೇನಾಯಿತು ಅಂತ ಯೋಚಿಸಿದರೆ, ನಿನ್ನದೇ ಒಡವೆ-ಹಣ ತೆಗೆದುಕೊಂಡು ಹೋಗಿ, ಹಣವನ್ನೆಲ್ಲ ಅವನಿಗೇ ಕೊಟ್ಟು, ಅವನೊಂದಿಗೆ ಸಂಬಂಧ ಇರಿಸಿಕೊಂಡು, ನಿನ್ನ ಹಣ ಮುಗಿದ ನಂತರ ನಿನ್ನನ್ನು ಅವನು ರೈಲಿನಲ್ಲಿ ಬಿಟ್ಟು ಹೋದಂತಾಯಿತು! ಅಲ್ಲವಾ?

ನಿಯತ್ತಿನ ಗಂಡಸರು ಇರೋ ರೀತಿಯಲ್ಲ. ಪ್ರೀತಿಸಿ ಕರೆದೊಯ್ದು ಕೊರಳಿಗೆ ತಾಳಿ ಕಟ್ಟಿದ ನಂತರ ಎಂಥ ರಣಹೇಡಿ ಕೂಡ `ಗಂಡಸಾ’ಗುತ್ತಾನೆ. ಹಟಕ್ಕೆ, ಛಲಕ್ಕೆ ಬೀಳುತ್ತಾನೆ. ಮೈ ಮುರಿಯೆ ಕೆಲಸ ಮಾಡಿ ಒಂದೊಪ್ಪತ್ತಿಗಾಗಿಯಾದರೂ ದುಡಿಯುತ್ತಾನೆ. ಆದರೆ ಈ ಮನುಷ್ಯ ಮಾಡಿದ್ದು ಮೋಸ. ತಿಂದು ಮಲಗು ಅಂತ ನಿನ್ನದೇ ಹಣದಲ್ಲಿ ಖರೀದಿಸಿ ಕೊಟ್ಟದ್ದು ಸಮೋಸ! ಆಯ್ತಲ್ಲ? ನೀನು ಊರಿಗೆ ಹೋದೆ. ಅವನ ಮನೆಗೇ ಹೋದೆ. ಎಲ್ಲ ಥರದ ಅವಮಾನ ಎದುರಿಸಿದೆ. ನಂತರವಾದರೂ ಅವನು ವಾಪಸ್ ಬಂದನಾ? ಅವನಿಗೆ ನಡೆದ ಪ್ರತಿಯೊಂದರ ಬಗ್ಗೆಯೂ ಗೊತ್ತಾಗಿದೆ. ಆದರೆ ನಿನ್ನನ್ನು ಒಂದೇ ಒಂದು ಸಲಕ್ಕಾದರೂ ಮಾತನಾಡಿಸಿ, ಧೈರ್ಯ ಹೇಳಿದನಾ? ನಾನು ಬಂದೇ ಬರುತ್ತೇನೆ ಎಂಬ ಭರವಸೆ ನೀಡಿದನಾ? ಅವನು ಹೇಡಿಯೂ ಹೌದು, ವಂಚಕನೂ ಹೌದು. ಇದೆಲ್ಲ ಗೊತ್ತಾಗಿ, ಊರಲಿ ಕೆಟ್ಟ ರೀತಿಯ ಚರ್ಚೆಗಳಾಗಿ ತಲೆಯೆತ್ತಲಾರದಂತಹ ಪರಿಸ್ಥಿತಿ ಬಂದ ನಂತರವೂ ನಿಮ್ಮ ಮನೆಯ ಜನ ನಿನ್ನನ್ನು ಮನೆಯೊಳಕ್ಕೆ ಬಿಟ್ಟುಕೊಂಡಿದ್ದಾರೆ. ಅವರು ನಿನ್ನ ಗಂಡ(?)ನಿಗಿಂತ ಸಾವಿರ ಪಾಲು ಮೇಲು. ಒಂದೆರಡು ಒರಟು ಮಾತು ಆಡಿರಬಹುದು. ಆದರೂ ಮನೆಯೊಳಕ್ಕೆ ಬಿಟ್ಟುಕೊಂಡರಲ್ಲ? ಮುಂದಕ್ಕೆ ಓದಿಸಿಯೂ ಓದಿಸಿದರು. ಇಷ್ಟೆಲ್ಲ ಆದರೂ ನೀನು ಪೆದ್ದಿಯಂತೆ ಬರೆಯುತ್ತೀಯ: “ಅವನು ತುಂಬ love ಮಾಡುತ್ತಾನೆ ತಂದೆ! ನೀವು ಎರಡು ಫೋನ್ ಮಾಡಿ, ಅವನ ಅಣ್ಣ-ಮಾವ ಮುಂತಾದವರನ್ನು convince ಮಾಡಿ, ನನಗೆ ನನ್ನ ಗಂಡನನ್ನು ಕೊಡಿಸಿ” ಅಂತ ಬರೆಯುತ್ತೀಯ. Of course ನಾನು ನಂಬರ್‌ಗಳನ್ನ ಬರೆದಿಟ್ಟುಕೊಂಡಿದ್ದೇನೆ. ಫೋನ್ ಕೂಡ ಮಾಡುತ್ತೇನೆ. ಒಳ್ಳೆಯದಾದರೆ, ಎಲ್ಲ ಸರಿ ಹೋದರೆ ನನಗೂ ಸಮಾಧಾನ. ಆದರೆ ಅವನು ಮಾಡಿದ್ದು ತಪ್ಪಲ್ಲವೇ? ಯೋಚಿಸು ಮಗಳೇ. ಈಗ ಕೊಂಚ ನೆರಳಲ್ಲಾದರೂ ಇದೀಯ. ಮುಂದೆ ಅದೂ ಇರದಂತಾದರೆ ಹೇಗೆ?

ನನ್ನ ಪ್ರಯತ್ನ ನಾನು ಮಾಡೇ ಮಾಡುತ್ತೇನೆ. ಒಳ್ಳೆಯದಾಗಲಿ.

-ಆರ್.ಬಿ.

Please follow and like us: