‘ಭವಸಾಗರ ಸಂಬಾಧಿತ ಭೂತಳೋದರಿ’ ಅನ್ನೋ ಹೆಸರು ಕೇಳೇ ಹೌಹಾರಿದೆ!

ದಿನದಂತೆ ಕ್ಲಾಸಿಗೆ ಹೋಗಿ ಅಚ್ಯುತ, ಅನಂತ, ಅತಂತ್ರ.. ಎಂದು ಎಟೆಂಡೆನ್ಸ್ ಜಪ ಶುರು ಮಾಡಿ ‘ಎಸ್ ಮಿಸ್’ ‘ನೋ ಮಿಸ್’ ಗಳಿಗನುಸಾರವಾಗಿ ಗುರುತು ಹಾಕಿಕೊಳ್ಳುತ್ತಾ ಮುಂದಿನ ನಂಬರಿನ ‘ಲಕ್ಷ್ಮಿ’ ಎಂಬ ಹೆಸರು ಕೂಗಿದೆ. ಉತ್ತರ ಬರಲಿಲ್ಲ. ಲಕ್ಷ್ಮಿ ಬರಲಿಲ್ಲವೇ ಎಂದು ತಲೆ ಎತ್ತಿ ನೋಡಿದೆ. ಮೂರನೇ ಬೆಂಚಲ್ಲಿ ಕೂತೇ ಇದ್ದಾಳೆ.“ ಏನು ಲಕ್ಷ್ಮಿ ಬೆಳಬೆಳಿಗ್ಗೆ ಕ್ಲಾಸ್ಗನಸು ಪ್ರಾರಂಭವಾಗಿದೆಯೋ” ಎಂದೆ . ಪ್ರತಿಕ್ರಿಯೆ ಇಲ್ಲ.ಪಕ್ಕದಲ್ಲಿ ಕುಳಿತ ಹುಡುಗಿ ಸರಸ್ವತಿ ಬಾಯ್ಬಿಟ್ಟಳು.

“ ನಿನ್ನೆಯಿಂದ ಲಕ್ಷ್ಮಿ ಹೆಸರು ಬದಲಾಯಿಸಿಕೊಂಡಿದ್ದಾಳೆ ಮಿಸ್. ಈಗ ಅವಳು ಲಕ್ಷ್ಮಿ ಎಂದರೆ ಓ ಅನ್ನುವಂತೆ ಇಲ್ಲ.”
“ ಹೊಸ ಹೆಸರು ಏನಂತೆ?”
“ ಐಶ್ವರ್ಯ ಸಿದ್ಧಿ ಪೂಪ್ರಸಾದ  ಜ್ಯೋತಿರ್ಲಕ್ಷ್ಮಿ.”

ಪೂರ್ತಿ ಎರಡು ನಿಮಿಷಗೂಡಿ ಹೇಳಿದಳು. ಲಕ್ಷ್ಮಿಯ ಬುಕ್ಸ್,ನೋಟ್ಸ್ ಎಲ್ಲಾ ಕಡೆ ಬದಲಾದ ಹೆಸರು ಕೆತ್ತಲಾಗಿತ್ತು.
ಲಕ್ಷಣವಾಗಿದ್ದ ಲಕ್ಷ್ಮಿಗೆ ಇಷ್ಟೆಲ್ಲ ಕಾಲು ಬಾಲ ಹಚ್ಚಿ ನಾಮಾಂತರಿಸಿದ್ದೇಕೆಂದು ಕೇಳಲಾಗಿ ಹೆಸರು ಬದಲಾವಣೆ    ಎಂಬ ಹೊಸ ವ್ಯವಹಾರವೊಂದರ ಸುಳಿವು ಸಿಕ್ಕಿತು.

ನಗರದ ಸ್ಟಾರ್ ಹೋಟೆಲ್ಲಿನಲ್ಲಿ ವಾರ ಕಾಲ ವಾಸ್ತವ್ಯ ಹೂಡಿದ್ದ ನಾಮ ಪಂಡಿತರೊಬ್ಬರು ಇಡೀ ನಗರದವರ ಹೆಸರು ಬದಲಾಯಿಸಿಕೊಟ್ಟು ಅದೃಷ್ಟ ಖುಲಾಯಿಸಿಕೊಂಡು ನಿಮ್ಮ ಕಷ್ಟ ಇನ್ನು ಕಳೆಯಿತು ಎನ್ನುತ್ತಿದ್ದಾರೆ. ಪೇಪರು ಟಿ ವಿ ಗಳಲ್ಲಿ ನಿಮ್ಮ ತೊಂದರೆಗಳಿಗೆ ಮೂಲ ನಿಮ್ಮ ದೋಷಪೂರಿತ ಹೆಸರೇ.ಬನ್ನಿ ನಮ್ಮಲ್ಲಿಗೆ, ನಿಮಗೆ ಅದೃಷ್ಟ ತರುವ ಹೆಸರು ನೀಡುತ್ತೇವೆ. ಎಂದೆಲ್ಲ ಪ್ರಚಾರ ನಡೆಸಿದ್ದಾರಂತೆ. ಆ ನಾಮತಜ್ಞರ ಸಲಹೆಯ ಪ್ರಕಾರವ  ಲಕ್ಷ್ಮಿ ತನ್ನ ಹೆಸರು ಬದಲಾಯಿಸಿಕೊಂಡಿದ್ದಳು. ಇದರಿಂದಾಗುವ ಲಾಭವೇನು ಎಂಬ ಪ್ರಶ್ನೆಗೆ ಬಂದ ಉತ್ತರ ನನ್ನ ಬಾಯಿ ಮುಚ್ಚಿಸಿತು. “ನಾನು ಪ್ರತಿಸಲವೂ ನೂರು ಮಾರ್ಕು ಬರಬೇಕೆಂದು ಪ್ರಯತ್ನ ಪಟ್ಟಿರುತ್ತೇನೆ. ಆದರೆ ಸಿಗುವುದು ಮೂವತ್ತೈದು ಮಾತ್ರ. ಸಖತ್ ಬೇಜಾರಾಗ್ತಿತ್ತು. ಇದಕ್ಕೆಲ್ಲ ಕಾರಣ ನನ್ನ ಹೆಸರಿನ ದೋಷ ಎಂದು ತಿಳಿಸಿ ಈ ನಾಮ ಪಂಡಿತರು ಹೊಸ ಹೆಸರು ಕೊಟ್ಟಿದ್ದಾರೆ. ಇನ್ನು ಮುಂದೆ ಮೂವತ್ತೈದು ಮಾರ್ಕಿಗಾಗುವಷ್ಟು ಓದಿದರೂ ನೂರು ಮಾರ್ಕು ಖಂಡಿತ ಎಂಬ ಭರವಸೆಯಿತ್ತಿದ್ದಾರೆ ” ಎನ್ನುತ್ತಾ ನನ್ನ ಕಡೆ ಚಾಲೆಂಜಿಂಗ್ ನೋಟ ಬೀರಿದಳು.

ನನಗೆ ಹೊಸ ಭಯ ಶುರು ಆಯ್ತು. ಕ್ಲಾಸಿನಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಅನಂತ, ಪ್ರಕಾಶ ಎಂಬ ಹೆಸರುಗಳನ್ನು ‘ದಿಗ್ ದಿಗಾನಂತ- ಕೃಪಾಕರುಣಾಕರ’ ಎಂದೋ ‘ಕೋಟಿ ಬಾನು ತೇಜಪುಂಜಃ ಪ್ರಕಾಶ’ ಎಂದೋ ಬದಲಾಯಿಸಿ ಕೊಂಡು ಕೂತರೆ ಅರ್ಧ ಗಂಟೆ ಪೂರ್ತಿ ಎಟೆಂಡೆನ್ಸ್ ಕೂಗುವುದೇ ಕೆಲಸವಾದೀತು.ಅಷ್ಟೇ ಅಲ್ಲ, ಎಲ್ಲಾ ವಿದ್ಯಾರ್ಥಿಗಳು “ನಾವು ನೂರಕ್ಕಿಂತ ಹೆಚ್ಚು ಅಂಕ ಬರುವಂತೆ ಹೆಸರು ಬದಲಾಯಿಸಿಕೊಂಡಿದ್ದೇವೆ.ನೀವಿಷ್ಟು ಕಡಿಮೆ ಮಾರ್ಕು ಕೊಟ್ಟಿದ್ದೀರಿ” ಎಂದು ಜಗಳಕ್ಕಿಳಿದರೆ.. ಎಂಬ ಚಿಂತೆಯೂ ಹತ್ತಿಕೊಂಡಿತು.

ಮನೆಗೆ ಬಂದಾಗ ಮತ್ತೊಂದು ಉತ್ಪಾತ ಕಾದಿತ್ತು.ಮಗಳ ರಿಪೋರ್ಟ್ ಕಾರ್ಡ್ ಬಂದಿತ್ತು.ನನಗೆ ತೋರಿಸದೇ ಅಪ್ಪನಿಗೆ ಪೂಸಿ ಹೊಡೆದು ಸಹಿ ಹಾಕಿಸಿಕೊಂಡಾಗಿತ್ತು. ಕೊಡಿಲ್ಲಿ ರಿಪೋರ್ಟ್ ಕಾರ್ಡ್ ಎಂದೊಡನೇ ಮಗಳು ಎಗರಿ ಬಿದ್ದಳು. “ನನಗೆ ಆಭಾ ಅಂತ ಹೆಸರಿಡಲು ಹೇಳಿದ್ದು ಯಾರು”? ಎಂದು ಹೂಂಕರಿಸಿದಳು. ನನಗೂ ತಲೆ ಬಿಸಿಯಾಗಿತ್ತು. ಪ್ರತಿ ಜಗಳದ ಧಾಟಿಯಲ್ಲಿ “ ನಿನ್ನಪ್ಪ” ಎಂದೆ. ಮಗಳು ಸಮರಸನ್ನದ್ಧೆಯಾಗಿಯೇ ಬಂದಿದ್ದಳು. “ ಕರಿ
ಅಪ್ಪನನ್ನು.. ನಿಮ್ಮಿಬ್ಬರ ಎದುರೇ ನನ್ನ ಹೆಸರು ಬದಲಾಯಿಸಬೇಕು. ನನ್ನೀ ಅನಿಷ್ಟ ಹೆಸರು ಹೋಗುವ ತನಕ ನಿಮ್ಮ ಕಾಟ, ಹೋಮ್ವರ್ಕ್ ಕಾಟ ತಪ್ಪಿದ್ದಲ್ಲ” ಎಂದಳು. ನಾಮ ಪಂಡಿತರು ನನಗೆ ಗೊತ್ತಿಲ್ಲದೆ, ನಮ್ಮ ಮನೆಯೊಳಗೇ ಪ್ರವೇಶ ಮಾಡಿದ್ದು ಸ್ಪಷ್ಟವಾಗಿ ತೋರುತ್ತಿತ್ತು.

“ ಯಾರು ಹೇಳಿದ್ದು ನಿನಗೆ ಅನಿಷ್ಟ ಹೆಸರೆಂದು?ಆಭಾ ಎಷ್ಟೊಳ್ಳೆ ಹೆಸರು ನಿನ್ನದು.. ಆಹಾ! ಎಂದು ಹೇಳಿದಂತಾಗುತ್ತದೆ.” ನನ್ನ ಸಮಜಾಯಿಶಿ ಮಗಳಿಗೆ ಬೇಕಿರಲಿಲ್ಲ.“ ನನ್ನ ಫ್ರೆಂಡಿನ ಅಮ್ಮ ಅದ್ಯಾರೋ ನ್ಯೂಮರಾಲಜಿಸ್ಟ್ ಕಮ್ ನೇಮಾಲಾಜಿಸ್ಟ್ ಹತ್ತಿರ ಹೋಗಿದ್ರಂತೆ.ನನ್ನ ಹೆಸರು ಬರೆದು ಕಳಿಸಿದ್ದೆ.ಅವಳಮ್ಮ ನನ್ನ ಹಾಗೂ ಪಿಂಕಿಯ ಹೆಸರು ಬದಲಾಯಿಸಿಕೊಂಡು ಬಂದಿದ್ದಾರೆ” ಎಂದಳು. ಹೊಸ ಅಂಗಿ ತಂದಿದ್ದಾರೆ ಎಂದು ಹೇಳಿದಷ್ಟೇ ಸಲೀಸಾಗಿ ಹೊಸ ಹೆಸರು ತಂದಿದ್ದಾರೆ ಎಂದು ಹೇಳುತ್ತಿದ್ದಾಳೆ. ಪಿಂಕಿ ಇನ್ನು ಮುಂದೆ ‘ಶ್ರೀಪಿಂಕಿ  ಸಮಸ್ಥಿತಿ’ಯಂತೆ. ಇವಳ ಹೆಸರು ‘ಆಭಾಗ್ಯವಿದಾತೆ’ ಎಂಬುದಾಗಿ ಬದಲಾಯಿಸಲಾಗಿದೆಯಂತೆ, ಎನ್ನುತ್ತಾ ನನ್ನನ್ನು
ಹಲ್ಲಲ್ಲಿ, ಕಣ್ಣಲ್ಲಿ ತಿವಿದಳು ಮಗಳು.

ಈ ನಾಮಾಂತರಣದ ತಲೆನೋವನ್ನು ಇವಳಪ್ಪನ ತಲೆಗೇ ಕಟ್ಟುವುದು ಸೂಕ್ತವೆನಿಸಿ “ ನಿನ್ನಪ್ಪನ್ನ ಕರಿ” ಎಂದು ಅಟ್ಟಿದೆ. ಎದ್ದು ಬರುವಾಗ ಆಸಾಮಿ ಬಾಯಲ್ಲಿ ಏನೋ ಮಣ ಮಣ ನಡೆಸಿದಂತಿತ್ತು.ದ್ರ,ಮ್ರ,ಚ್ರ,ಕ್ರ ಎಂದೇನೋ ಅಧಃ ಚಂದ್ರ ಪಠಣ ಮಾಡುತ್ತಾ “ಹಾ! ರಾಹು ಮಧ್ಯ ಬಂತು. ಶೇರು ಪೇಟೆ ಢಮಾರೆನ್ನದೆ ಇನ್ನೇನು” ಎಂದು ನನ್ನನ್ನೇ ಕೇಳಿದರು. ನನ್ನ ಪತಿರಾಯನೂ ನಾಮ ಪಂಡಿತರನ್ನು ಭೇಟಿಯಾಗಿ ಬಂದದ್ದು ಸ್ಪಷ್ಟವಾಯ್ತು.ಮನೆ ಮುಂದೆ ‘ಸ್ವಯಂಭೂನಿಲಯ’ ಎಂಬ ಹೊಸ ಬೋರ್ಡ್ ಬೇರೆ. ಇನ್ನು ಆ ನಾಮ ತಜ್ಞರನ್ನು ಕಾಣುವುದೊಂದೇ ನನಗುಳಿದ ದಾರಿ.

ತಲೆ ಕೆಟ್ಟು ಹೋಗಿತ್ತು. ಸ್ಟಾರ್ ಹೋಟೆಲ್ಲಿಗೆ ಹೋದಾಗ ನನ್ನಂತೆ ‘ನಿರ್ನಾಮ’ವಾದ ಕಳೆ ಹೊತ್ತ ಅನೇಕ ನಾಮ
ಪೀಡಿತರು ಅಲ್ಲಿದ್ದರು. ಒಬ್ಬ ಸಾಹಿತಿಯೊಂದಿಗೆ ಮಾತುಕತೆಯಾಗುತ್ತಿತ್ತು.

“ತಾವು ಸಾಹಿತಿಗಳೋ? ಏನು ತಮ್ಮ ಸಮಸ್ಯೆ?”

“ಕಷ್ಟ, ಕಡು ಕಷ್ಟ.. ಹೆಸರಿಲ್ಲ ಕೀರ್ತಿಯಿಲ್ಲ, ಪ್ರಶಸ್ತಿಯ ಮೂರನೆಯ ಪಟ್ಟಿಯಲ್ಲೂ ನನ್ನ ಹೆಸರಿಲ್ಲ. ಬದುಕು ಬರಡು ಸಾಹಿತ್ಯದಂತಾಗಿದೆ.ಕಾರಣ ಹೇಳಿ ಸ್ವಾಮಿ.”

“ನಿಮ್ಮ ಹೆಸರಿನ ದೋಷ ಕಾಡುತ್ತಿದೆ. ಕೇತು ಕೆರಳಿದ್ದಾನೆ, ರಾಹು ಹೂಂಕರಿಸುತ್ತಿದ್ದಾನೆ.ನೀವು ಇಷ್ಟು ವರ್ಷ
ಬದುಕಿದ್ದೇ ಹೆಚ್ಚು.”

“ ಅಯ್ಯೋ ಹಾಗೆನ್ನಬೇಡಿ ಸ್ವಾಮಿ.. ಜೀವನದಲ್ಲಿ ಒಂದಾದರೂ ಪತ್ತೇದಾರಿ ಕೃತಿ ಬರೆಯಬೇಕೆಂಬ ಆಸೆ ನೆರವೇರದೆ
ಸಾಯಲಾರೆ.ಪರಿಹಾರ ಹೇಳಿ ಸ್ವಾಮಿ.”

“ಉಂಟು.. ಕಮಲಾಕ್ಷ ಎಂಬ ನಿಮ್ಮ ಹೆಸರನ್ನು ‘ಬಹು ಭ್ರಾಂತಿ ಪೀಡಿತ ಕವಿ ಕುಲಲಲಾಮ’ ಎಂದು ಬದಲಾಯಿಸಬೇಕು. ಆದರೆ ಅದಕ್ಕೆ ತಗಲುವ ಫೀಸು ಕೊಡುವ ತಾಕತ್ತಿದೆಯೇ ನಿಮಗೆ?”

“ ಕೊಡುತ್ತೇನೆ ಸ್ವಾಮಿ, ಪತ್ರಿಕೆಯೊಂದು ಹತ್ತು ರೂಪಾಯಿ ಸಂಭಾವನೆ ನೀಡಿದೆ. ಅದನ್ನು ಇಲ್ಲಿಡುತ್ತೇನೆ. ಹೊಸ ಹೆಸರು ನೀಡಿ” ಎನ್ನುತ್ತಾ ಚೀಟಿಯಲ್ಲಿ ಬರೆದ ತನ್ನ ನಾಮಧೇಯವನ್ನು ಕಣ್ಣಿಗೊತ್ತಿಕೊಳ್ಳುತ್ತಾ ನಿರ್ಗಮಿಸಿದ ಆ ಕವಿಕುಲ ಲಲಾಮ.
ಮುಂದೆ ಜರುಗಿದ ನಾನು ದೀರ್ಘದಂಡ ನಮಸ್ಕಾರ ಹಾಕಿದೆ.

ನಾಮತಜ್ಞರು “ಏನು ಮಗಳೇ” ಎಂದು ಕೇಳಿದಾಗ ದುಃಖ ಒತ್ತರಿಸಿ ಬಂತು. ಗದ್ಗದ ವಿವರಣೆ ನೀಡಿದೆ. “ ನಾನು ಮಾಡದ ತಪ್ಪಿಗೆ ನನಗೆ ಶಿಕ್ಷೆ ಅಗುತ್ತಿದೆ. ಮನೆಯಲ್ಲಿ ಹಿರಿಕಿರಿಯರ್ಯಾರೂ ಕ್ಯಾರೇ ಎನ್ನುತ್ತಿಲ್ಲ.ಸಂಬಳದ ಹಣ ಕೈಗೆ ಬರುವುದೊಂದೇ ಕಾಣುತ್ತಿದೆ. ಆಮೇಲೇನಾಗುತ್ತದೆ ಎಂದು ತಿಳಿಯುತ್ತಿಲ್ಲ. ಕೈಗಡ ತೆಗೆದುಕೊಂಡವರೆಲ್ಲಾ ಪರಿಚಯ
ಇಲ್ಲದವರಂತೆ ಓಡಾಡುತ್ತಿದ್ದಾರೆ.ಕ್ಲಾಸಿನಲ್ಲಿ ಎಲ್ಲರ ಎಟೆಂಡೆನ್ಸ್ ಕರೆದು ಮುಗಿಸುವಾಗ ನೀರು ಕುಡಿಯಬೇಕೆನ್ನಿಸುತ್ತದೆ. ಎಲ್ಲಾ ವಿದ್ಯಾರ್ಥಿಗಳು ನೂರಕ್ಕೆ ನೂರು ಮಾರ್ಕು ಕೊಡಿ ಎಂದು ಬೆದರಿಸುತ್ತಿದ್ದಾರೆ. ನಗುಮುಖಗಳೇ ಕಾಣದೆ ಕಂಗೆಟ್ಟಿದ್ದೇನೆ..” ಅಳುವಿನಿಂದಾಗಿ ಮುಂದೆ ಹೇಳಬೇಕಾದುದನ್ನೆಲ್ಲಾ ಹೇಳಲಾಗಲಿಲ್ಲ.

“ಹೆಸರೇನು?” ಎಂದು ಬಂತು ಪ್ರಶ್ನೆ. ಹೇಳಿದೆ. ಕಣ್ಮುಚ್ಚಿ ಧ್ಯಾನಿಸಿದ ನಾಮತಜ್ಞರು ‘ಶ್ವ’ ಶ್ಯೇ ಶ್ವಾನಧ್ಯಾನ ಅಸಡ್ಡಾಳ ಒತ್ತಕ್ಷರ. ‘ ಶ್ವರಿ’ಯಲ್ಲೇ ಅರಿ ನೆಲೆಸಿದ್ದಾನೆ. ಭೂ ಗಾತ್ರದ ಕಷ್ಟ.(ಭು), ನೆ.. ನೇತಿ ಎಂದು ನಿಡುಸುಯ್ದರು. ಜೀವನದಲ್ಲಿ ಕಷ್ಟಕ್ಕೆ ಅಂಜದವರುಂಟೇ? “ಏನು ಪರಿಹಾರ.” ಸಧ್ಯಕ್ಕೆ ನೂರು ರೂಪಾಯಿ (ನಾಮಿನಲ್ ಚಾರ್ಜ್) ಹೊಸ ನಾಮಕರಣವಾಗಬೇಕು. ರೆಕಾರ್ಡು ತಿದ್ದುವುದು ಕಷ್ಟ. ಪದೇ ಪದೇ ಹೆಸರು ಬದಲಾಯಿಸಲು ಕೋರ್ಟಿಗೆ ಹೋಗುವುದು ಕಷ್ಟ.ನಮ್ಮೂರ ಕೋರ್ಟ್ ಗುಡ್ಡದ ಮೇಲಿದೆ. ಹತ್ತುವುದೇ ಕಷ್ಟ. ರೂಢಿನಾಮ ಮಾತ್ರ ಬದಲಾಯಿಸಿದರೆ ಆದೀತೇ ಎಂದು ಪ್ರಶ್ನಿಸಿದೆ. ನಮ್ಮೂರಲ್ಲಿ ಒಬ್ಬ ‘ತಿಪ್ಪೇಶಿ’ ಎಂಬ ಹೆಸರನ್ನು ಅಧಿಕೃತವಾಗಿ ‘ತಪಸ್ಕುಮಾರ್’ ಎಂದು ಬದಲಾಯಿಸಿಕೊಳ್ಳುವಾಗ ಆದ ಗೋಜಲು ನೆನಪಿತ್ತು.“ಪರವಾಗಿಲ್ಲ. ಕರೆಯುವ ಹೆಸರು ರೆಕಾರ್ಡ್ ತಿದ್ದದೇ ಬದಲಾಯಿಸಿಕೊಂಡರೂ ಅರ್ಧ ಕಷ್ಟ ಪರಿಹಾರವಾದಂತೇ” ಎಂದರು ನಾಮ ಪಂಡಿತರು. ನನಗೋ ಹೊಸ ಹೆಸರಿನ ಕುತೂಹಲ. ಇಷ್ಟೇ ಕಳೆದುಕೊಂಡವಳಿಗೆ ನೂರು ರೂಪಾಯಿ ಹೆಚ್ಚಾದೀತೇ..? ಪದತಲದಲ್ಲಿಟ್ಟೆ. ಹೊಸ ನಾಮ ಪ್ರದಾನ ಮಾಡಿದರು. “ಭವಸಾಗರ ಸಂಬಾಧಿತ ಭೂತಳೋದರಿ.” ಹೌಹಾರಿದೆ. ‘ಭೂತ’ ಎಂದಿದ್ದನ್ನು ಕಂಡು ಭಯವಾಯ್ತು. ಇನ್ನು ಮೇಲೆ ಇದು ನನ್ನ ಹೆಸರೇ ಎಂದು ತತ್ತರಿಸಿದೆ. ಆದರೆ ಕಡು ಕಷ್ಟಗಳನು ಜಯಿಸಲು ಇದು ಸುಲಭ ಮಾರ್ಗವಲ್ಲವೇ? ಒಲ್ಲೆ ಎನ್ನಲಾದೀತೇ?ಆಯ್ತು  ಪ್ರಸಾದವೆಂದೇನು” ಎನ್ನುತ್ತಾ (ಹೊಸ ಹೆಸರಿನೊಂದಿಗೆ) ಮನೆಗೆ ಬಂದೆ.

ನನಗೆ ಒಳಿತಾಗಲೆಂಬ ಹೃದಯವುಳ್ಳ ನನ್ನ ಸ್ನೇಹಿತರು, ಹಿತೈಷಿಗಳು ಇನ್ನು ಮೇಲೆ ನನ್ನ ಹೆಸರಿನಲ್ಲಿರುವ ‘ಭ’ಕಾರಗಳನ್ನು ನೆನಪಿನಲ್ಲಿಟ್ಟುಕೊಂಡು ( ಭೂತ ಎನ್ನಲು ಹೆದರಿಕೆಯಿಲ್ಲದಿದ್ದರೆ) ಹೊಸ ಹೆಸರಿನಲ್ಲೇ ಸಂಭೋದಿಸಿ ನನ್ನನ್ನು ಭವಸಾಗರ ಪೀಡೆಗಳಿಂದ ಭಯಮುಕ್ತಗೊಳಿಸಬೇಕೆಂದು ಈ ಮೂಲಕ ಬೇಡಿಕೊಳ್ಳುತ್ತೇನೆ.

                                                                                                                                              ಭುವನೇಶ್ವರಿ ಹೆಗಡೆ

Please follow and like us: