ಪರಭಾಷಾ ಸಿನಿಮಾ ಹಾವಳಿ ನಿಯಂತ್ರಿಸಲು ಸ್ಟಾರ್‌ ಸಿನಿಮಾ ಹೆಚ್ಚಬೇಕು: ನಾಗೇಂದ್ರ ಪ್ರಸಾದ್

ನಿರ್ದೇಶಕ ಸಂಘದ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಜತೆ ಮಾತುಕಥೆ
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ವಿ ನಾಗೇಂದ್ರ ಪ್ರಸಾದ್ ಈ ಭಾರಿ ಮರು ಆಯ್ಕೆಗೊಂಡಿದ್ದರೆ. ಕನ್ನಡ ಚಿತ್ರ ರಂಗದ ನಿರ್ದೇಶಕ, ಸಾಹಿತ್ಯ ಬರಹಗಾರ, ಸಂಭಾಷಣೆಕಾರ, ಸಂಗೀತ ಸಂಯೋಜಕ ಮತ್ತು ನಟ ಆಗಿರುವ ನಾಗೇಂದ್ರ ಪ್ರಸಾದ್ ಅವರು ವಿಶ್ವವಾಣಿಯೊಂದಿಗೆ ಮಾತಾಡಿದ್ದು ಹೀಗೆ.

ಮತ್ತೆ ನಿರ್ದೇಶಕರ ಸಂಘದ ಅಧ್ಯಕ್ಷರಾಗಿದ್ದೀರಿ….!
ಹೌದು, ಖುಷಿ ಇದೆ ಇದರ ಬಗ್ಗೆ. ಕಳೆದ ಭಾರಿ ಹಾಕಿಕೊಂಡ ಕೆಲ ಯೋಜನೆಗಳನ್ನು ಪರಿಪೂರ್ಣಗೊಳಿಸಲು ಆಗಿರಲಿಲ್ಲ. ಈಗ ಮತ್ತೆ ಅವಕಾಶ ಸಿಕ್ಕಂತಾಗಿದೆ.
ಹೇಗಿದೆ ಕನ್ನಡ ಚಿತ್ರರಂಗದ ಸ್ಥಾನಮಾನ..?
ನಮ್ಮ ಕನ್ನಡ ಸಿನಿಮಾಗಳು ಚೆನ್ನಾಗಿವೆ. ಎಲ್ಲರೂ ಇಷ್ಟ ನೋಡ್ತಾರೆ. ಈಗ ಮೇಕಿಂಗ್ ವೆಚ್ಚ ಕಡಿಮೆ ಆಗಿರುವುದರಿಂದ ಬಹಳಷ್ಟು ಹೊಸ ನಿರ್ದೇಶಕರು ಸಿನಿಮಾ ಮಾಡುತ್ತಿದ್ದಾರೆ. ಇದರಿಂದ ಸಿನಿಮಾ ರಿಲೀಸ್‌ಗೆ ತೊಂದರೆಯಾಗುತ್ತಿದೆ. ಪರಭಾಷಾ ಹಾವಳಿ ನಮಗೆ ಮೊದಲಿಂದನೂ ಇದ್ದದ್ದೇ. ಸಿನಿಮಾ ಆದ್ರೆ ಹೆಚ್ಚು ಸಮೃದ್ಧವಾಗಿರುತ್ತೆ. ಆದರೆ ನಮ್ಮಲ್ಲಿನ ಸ್ಟಾರ್‌ಗಳು ವರ್ಷಕ್ಕೆ 1ಅಥವಾ 2 ಸಿನಿಮಾ ಮಾಡುತ್ತಾರೆ. ಸ್ಟಾರ್‌ಗಳು ಹೆಚ್ಚು ಹೆಚ್ಚು ಸಿನಿಮಾ ಮಾಡುವಂತಾಗಬೇಕು. ಅದರಿಂದ ಹೆಚ್ಚು ಲಾಭ ಕನ್ನಡ ಚಿತ್ರರಂಗಕ್ಕೆ ಆಗುತ್ತದೆ.
ಈ ವರ್ಷ ಹೇಗಿರಬೇಕು ನಿರ್ದೇಶಕರ ಸಂಘ..?
ಆರ್ಥಿಕವಾಗಿ ಬಲಿಷ್ಟವಲ್ಲದಂತಹ ನಿರ್ದೇಶಕರು ಮತ್ತು ಆರೋಗ್ಯದಲ್ಲಿ ಏರು ಪೇರಿರುವಂತಹ ಹಲವು ನಿರ್ದೇಶಕರು ನಮ್ಮಲ್ಲಿದ್ದಾರೆ. ಅವರಿಗೆ ನೆರವಿಗೆ ನಿಲ್ಲಬೇಕು ನಮ್ಮ ಸಂಘ. ಅದಲ್ಲದೇ ಹೊಸ ನಿರ್ದೇಶಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನಿರ್ದೇಶಕರ ನಡುವೆ ಒಳ್ಳೆಯ ಒಡನಾಟ ಬೆಳೆಯಬೇಕು.
ಡಬ್ಬಿಂಗ್ ಬಗ್ಗೆ ಏನೆನ್ನುತ್ತೀರಾ?
ನಮ್ಮ ಸಂಘ ಪ್ರಾರಂಭದಿಂದಲೂ ಡಬ್ಬಿಂಗ್ ವಿರೋಧಿಸಿ ನಿಂತಿದೆ. ಹಾಗಂದ ಮಾತ್ರಕ್ಕೆ ಮಾಡಲೇ ಬಾರದು, ಮಾಡಿದರೆ ಆ ನಿರ್ದೇಶಕನ ವಿರುದ್ಧ ಹೋರಾಡುತ್ತೇವೆ ಎಂದಲ್ಲ. ಡಬ್ಬಿಂಗ್ ಬೇಡ ಎನ್ನುವುದು ನಮ್ಮ ನಿಲುವು.
ಡಬ್ಬಿಂಗ್ ಏನಕ್ಕೆ ಬೇಡ?
ಡಬ್ಬಿಂಗ್ ಮಾಡಲಿ, ಆದರೆ ಅದು ಯಾವ ರೀತಿಯ ಸಿನಿಮಾ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಮಕ್ಕಳ ಮನೋವಿಕಾಸಕ್ಕೆ ಸಂಬಂದ ಪಟ್ಟಿದ್ದು ಮತ್ತು ಜ್ಞಾನ ಹೆಚ್ಚಿಸುವಂತದ್ದು ಆದರೂ ಅಂತಹದರ ಡಬ್ಬಿಂಗ್‌ಗೆ ನಮ್ಮ ಬೆಂಬಲವಿದೆ. ಎಂಟರ್‌ಟ್ರೈನ್‌ಮೆಂಟ್ ಇರುವಂತಹ ಸಿನಿಮಾಗಳನ್ನು ಡಬ್ಬಿಂಗ್ ಮಾಡಬೇಡಿ ಎನ್ನುವುದು ನಮ್ಮ ಕೋರಿಕೆ. ನಮ್ಮ ಸಿನಿಮಾಗಳನ್ನು ನಂಬಿಕೊಂಡು ಲಕ್ಷಾಂತರ ಜನರಿದ್ದಾರೆ. ಡಬ್ಬಿಂಗ್‌ನಿಂದಾಗಿ ಅವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಡಬ್ಬಿಂಗ್ ಇರುವಂತಹ ಭಾಷೆಗಳಲ್ಲಿ ಅವರು ಭಾಷೆಯ ವಿಚಾರವಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಆ ಕ್ಷೇತ್ರದ ಸಿನಿಮಾ ವೃಂಧ ಮಾತ್ರವಲ್ಲದೆ ಲೇಖಕರು ಮತ್ತು ಚಿಂತಕರು ಕೂಡಾ ವಿರೋಧಿಸುತ್ತಾ ಬಂದಿದ್ದಾರೆ. ಡಬ್ಬಿಂಗ್ ಇಂದ ನಮ್ಮದಲ್ಲದ ಸಂಸ್ಕೃತಿಯನ್ನ ಮೇಲೆ ಹೇರಿದಂತಾಗುತ್ತದೆ. ಆದ್ದರಿಂದ ಕೇವಲ ಜ್ಞಾನಾರ್ಜನೆಯ ಸಿನಿಮಾಗಳು ಮಾತ್ರ ಕನ್ನಡಕ್ಕೆ ಡಬ್ ಆಗಲಿ.
ಈ ಬಾರಿ ಯಾವ ಯೋಜನೆಗಳಿಗೆ ಕೈ ಹಾಕಲಿದ್ದೀರಿ?
ನಮ್ಮ ಸಂಘಕ್ಕೆ ಅದರದ್ದೇ ಆದ ಕಟ್ಟಡವಿಲ್ಲ. ಅದನ್ನ ಆದಷ್ಟು ಬೇಗ ನಿರ್ಮಿಸಬೇಕೆಂದಿದ್ದೇವೆ. ಶಾಂತಲಾ ಅವಾರ್ಡ್‌ಸ್ ಅನ್ನು ಹಲವು ವರ್ಷದ ಹಿಂದೆ ನೀಡಲಾಗುತ್ತಿತ್ತು. ಕಾರಣಾಂತರಗಳಿಂದ ಆ ಪದ್ಧತಿ ನಿಂತಿದೆ. ಅದನ್ನ ಮತ್ತೆ ಪುನರಾರಂಭಿಸಬೇಕು. ಶ್ರೇಷ್ಠ ನಾಯಕ, ಶ್ರೇಷ್ಠ ನಾಯಕಿ, ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ಸಿನಿಮಾ ಹೀಗೆ ಸಿನಿಮಾ ಪ್ರಶಸ್ತಿಯನ್ನು ನೀಡಿ ಕಲಾವಿದರನ್ನು ಹುರಿದುಂಬಿಸಬೇಕೆಂದಿದ್ದೇವೆ. ಆದಷ್ಟು ಹೊಸ ನಿರ್ದೇಶಕರುಗಳಿಗೆ ನಮ್ಮ ಕಡೆಯಿಂದ ಪ್ರೋತ್ಸಾಹದ ಜತೆ ಮಾರ್ಗದರ್ಶನವನ್ನು ನೀಡಬೇಕೆಂಬುದು ನಮ್ಮ ಆಶಯ.

Please follow and like us:

Leave a Reply