ನಿಮ್ಮ ಮನಸ್ಸು ಕ್ಷಣ ಸುಖ ಅನುಭವಿಸಿದರೆ ಅಷ್ಟೇ ಧನ್ಯ!

ಬೇಸಿಕಲಿ ನಾವು ನಿಸರ್ಗಪ್ರಿಯರು. ಹಾಗೆ ಸ್ವರ್ಗಪ್ರಿಯರೂ.

ಸ್ವರ್ಗ ಇದೆಯೋ ಇಲ್ವೋ ಗೊತ್ತಿಲ್ಲ. ಆದರೆ ಅದರ ಅದ್ಭುತವಾದ ಕಲ್ಪನೆಯಂತೂ ನಮಗಿದೆ. ಸ್ವರ್ಗ ಅಂದ್ರೆ ಹೀಗೇ ಇದೆ ಅನ್ನುವ ನಿಖರವಾದ ಕಲ್ಪನೆಯಲ್ಲೇ ನಾವು ಬದುಕುತಿದ್ದೇವೆ. ಸತ್ತ ಮೇಲಲ್ಲ ಬದುಕಿದ್ದಾಗಲೇ ಅದನ್ನು ಅಪ್ಪಿಕೊಳ್ಳಲು, ಎಂಜಾಯ್ ಮಾಡಲು, ಆ ಸುಖವನ್ನು ಅನುಭವಿಸಲು ಕೈ ಚಾಚುತ್ತೇವೆ.

ಆದರೆ ಸಿಗಲ್ಲ.

ಒಂದು ಅದ್ಭುತವಾದ ಕಾಫಿ, ಬಾಯಿ ನೀರೂರಿಸುವ ಭೋಜನ, ಎದೆ ಹಿಂಡುವ ನೋವಿಗೆ ಮದಿರೆ, ಒಂದು ಅಸ್ಕಲಿತ ಹೂವು, ನೀಲಿ ನೀಲಿ ಆಕಾಶ, ಬೆಟ್ಟದ ಬುಡ ತಬ್ಬಿಕೊಂಡು ಹರಿಯುವ ನದಿ, ಆ ನದಿ ತಬ್ಬಿಕೊಂಡು ನಿಂತ ಹಸಿರಸಿರು ಬೆಟ್ಟ, ಸುರಿಯುವ ಬೆಳ್ ಬೆಳ್ಳಗಿನ ಹಿಮ, ಮೈ ತಬ್ಬುವ ತಂಗಾಳಿ. ಇವೆಲ್ಲವನ್ನು ಯಾರು ಕಣ್ಣು ತುಂಬಿಕೊಂಡರೂ ಅದು ಸ್ವರ್ಗಸುಖಾನೆ. ನೋಡುವ ಮತ್ತು ಆಸ್ವಾದಿಸುವ ಮನಸ್ಸು ಇರಬೇಕು. ಇಲ್ಲದಿದ್ದರೆ ಅಂಗೈಯಲ್ಲಿ ತಾಜ್ ಮಹಲ್ ತಂದು ಇಟ್ಟರೂ ಅಯ್ಯೋ ಇದಾ ಅನಿಸಿ ಸುಮ್ಮನಾಗಿಬಿಡುತ್ತೇವೆ.

ಕಾಂಕ್ರೀಟ್ ಕಾಡಿಗೆ ಬಿದ್ದಮೇಲಂತೂ ನಾವು ಸ್ವರ್ಗಸುಖವನ್ನೆಲ್ಲಾ ಬಹುತೇಕ ಕಳೆದುಕೊಂಡುಬಿಟ್ಟಿದ್ದೇವೆ. ಹಿತವಾದ ಕಾಫಿ ಇರುತ್ತೆ. ಎಂಜಾಯ್ ಮಾಡುವ ಮನಸಿರಲ್ಲ. ಹಾಕಿದ ಪಾಟ್ ನಲ್ಲಿ ಒಂದು ಮನಮೋಹಕ ಹೂವರಳಿರುತ್ತೆ. ಅದನ್ನ ಫೋನ್ ನಲ್ಲಿ ಮಾತಾಡ್ತಾ ಮಾತಾಡ್ತಾ ಕಿತ್ತು ಪಕಳೆ ಉದುರಿಸುತ್ತೇವೆ. ಸಿಟಿ ದಾಟಿ ಹೋದರೆ ಸಾಕು ದೂರದಲ್ಲೆಲ್ಲೋ ನದಿ ಸಿಗುತ್ತದೆ. ಹೋಗಲು ಪುರಸೊತ್ತಿಲ್ಲ. ಬೆಟ್ಟಗಳು ಮುಗಿಲುಮುಟ್ಟುವಂತೆ ನಿಂತಿರುತ್ತವೆ. ಆ ಸೊಗಸನ್ನು ಅನುಭವಿಸಲು ಟೈಂ ಇಲ್ಲ. ಅದೆಲ್ಲಾ ಇರಲಿ, ಧಾರಾಕಾರ ಸುರಿಯುವ ಮಳೆ, ಹಿಮಕ್ಕೆ ಮೈಯೊಡ್ಡಿ ಯಾವತ್ತಾದರೂ ನಿಂತಿದ್ದೀರಾ?

ಉಹುಂ.

ಭೂಮಿ ಅನ್ನೋ ಸ್ವರ್ಗವನ್ನೇ ನರಕ ಮಾಡಿದ್ದೇವೆ. ಹಾಗಂತ ತುಂಬಾ ನಿರಾಶರಾಗೋದು ಬೇಡ. ನಿಸರ್ಗ ಇನ್ನೂ ತನ್ನ ತಾಜಾತನವನ್ನು ಕಳೆದುಕೊಂಡಿಲ್ಲ. ಸೊಬಗು ಕಳೆದುಕೊಂಡಿಲ್ಲ. ಜೀವಂತಿಕೆ ಕಳೆದುಕೊಂಡಿಲ್ಲ. ಅನುಭವಿಸುವ ಆಸಕ್ತಿಯನ್ನು ಕಳೆದುಕೊಂಡಿರುವುದು ನಾವಷ್ಟೆ.

ಈ ಚಿತ್ರಗಳು ನೋಡಿ, ನಿಮ್ಮ ಮನಸ್ಸು ಕ್ಷಣ ಸುಖ ಅನುಭವಿಸಿದರೆ ಅಷ್ಟೇ ಧನ್ಯ.

Please follow and like us: