ನಿಜಕ್ಕೂ ನಾನು ಅವತ್ತು ಸತ್ತು ಹೋದೆನಾ?

ನಾನು ಸಾಯಲು ನಿರ್ಧರಿಸಿದೆ. ಬಹುದಿನಗಳಿಂದ ಯೋಚಿಸಿ ಆಲೋಚಿಸಿ ಮಥಿಸಿ ಮಂಥಿಸಿ ಕಡೆಯದಾಗಿ ಗಟ್ಟಿ ಮನಸ್ಸು ಮಾಡಿ ಸಾಯಲು ನಿರ್ಧರಿಸಿದೆ. ಸಾಯಲೇಬೇಕೆಂದೇನು ಇರಲಿಲ್ಲ, ಆದರೆ ನಾನು ಸಾಯಲೇ ಬೇಕಿತ್ತು!

ಸಾಯುವುದಕ್ಕೆ ನನಗೆ ನೂರಾರು ಕಾರಣಗಳಿದ್ದವು ಅದನ್ನು ಯಾರಿಗೆ ಬೇಕಾದರೂ ಮನದಟ್ಟಾಗುವಂತೆ “ನಿಮ್ಮ ನಿರ್ಧಾರ ಸರಿ” ಎನ್ನಿಸುವಂತೆ ಹೇಳಬಲ್ಲೆ. ಬದುಕಲಿಕ್ಕೆ ಯಾವ ಸಕಾರಣಗಳೂ ಇಲ್ಲ. ಯಾಕೋ ಇತ್ತೀಚೆಗಂತೂ ತುಂಬಾ ಬೇಸರ, ಒಂಟಿತನ, ದುಃಖ ಕಳವಳ, ಭಯ-ಆತಂಕ, ಒಂದು ತರದ ನಿರಾಸೆ ನಿರಾಸಕ್ತಿ ನಿರ್ಭಾವ ಹೀಗೆ ಹತ್ತು ಹಲವಾರು ಭಾವನೆಗಳು ನನ್ನ ಮನಸ್ಸನ್ನು ಏಕ ಕಾಲದಲ್ಲಿ ದಾಳಿ ಮಾಡುತ್ತವೆ. ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯುತ್ತಿಲ್ಲ.

ಭ್ರಮೆಗಳಲ್ಲಿ ಬದುಕಬಾರದು ಅದಕ್ಕಿಂತ ಘೋರ ಮತ್ತೊಂದಿಲ್ಲ. ಕನಸುಗಳಿರಲಿ ಒಳ್ಳೆಯದೇ, ಆದರೆ ಜೀವನಪೂರ್ತಿ ಕನಸು ಕಾಣುತ್ತ ಅದರ ಗುಂಗಲ್ಲೆ ಇಡೀ ಬದುಕನ್ನು ಕಳೆದು ಬಿಡಬಾರದು. ನನಗ್ಯಾಕೋ ತುಂಬಾ ಸಲ  ನನ್ನ ಕಷ್ಟಗಳನ್ನು ದುಃಖವನ್ನು ಒಂಟಿತನವನ್ನು  ಕನಸು ಕಾಣುವುದರ ಮೂಲಕ ಅದೆಲ್ಲವನ್ನೂ ಮೀರಲು ಯತ್ನಿಸುತ್ತಿದ್ದೇನೆ ಅನ್ನಿಸುತ್ತದೆ. ಆದರೆ ಅದೆಲ್ಲ ಭ್ರಮೆಯೆಂದು ಗೊತ್ತಾಗುವಷ್ಟರಲ್ಲಿ ಕಾಲ ಜಾರಿತ್ತು. ಮನಸ್ಸು ಮುದುಡಿತ್ತು. ಕೈ ಸೋತಿತ್ತು. ಇನ್ನು ನನಗೆ ಬದುಕಲು ಸಾಧ್ಯವೇ ಇಲ್ಲ ಅನ್ನಿಸಿತು. ಅದಕ್ಕಾಗಿ ಸಾಯುವ ನಿರ್ಧಾರ ಮಾಡಿದೆ. ಸಾಯುವುದೆಂದರೆ ಸುಮ್ಮನೆ ಕೆರೆಗೋ ಬಾವಿಗೋ ಹಾರುವುದಲ್ಲ ಅಥವಾ ವಿಷ ಕುಡಿಯುವುದಲ್ಲ. ತುಂಬಾ ವ್ಯವಸ್ಥಿತವಾಗಿ ಸಾಯಬೇಕು. ನಾನು ಸಾಯುವಾಗ ಅಕ್ಕ ಪಕ್ಕ ಯಾರೂ ಇರಬಾರದು ಎಂದು ಮೊದಲೇ ನಿರ್ಧರಿಸಿದ್ದೆ. ಆದರೆ ನಾನು ಒಂಟಿ ಅಂದಮೇಲೆ ಜೊತೆಯಲ್ಲಿ ಇನ್ಯಾರಾದರೂ ಯಾಕೆ ಇರುತ್ತಾರೆ?.

ಒಂಥರಾ ಅನಿಷ್ಠ ನಾನು. ಹಾಗಂತ ನನಗೆ ತುಂಬಾ ಸಲ ಅನ್ನಿಸಿತು. ಇಲ್ಲದಿದ್ದರೆ ಹೀಗೆ ಒಳ್ಳೆಯ ಗೆಳೆಯ-ಗೆಳತಿಯರು ಯಾರು ಇಲ್ಲದೆ, ನನ್ನ ಸಂಪರ್ಕಕ್ಕೆ ಬಂದವರು ಯಾರೂ ತುಂಬಾ ದಿನ ನನ್ನ ಜೊತೆಯಲ್ಲಿ ಉಳಿಯಲಿಲ್ಲ ಅಂದಮೇಲೆ ನನ್ನಲ್ಲೇ ಏನೋ ದೋಷ ಇರಬೇಕಲ್ಲವೇ? ಇದೆಲ್ಲಾ ನನಗೆ ಇತ್ತೀಚೆಗೆ ಒಂದೊಂದಾಗಿ ಸ್ಪಷ್ಟವಾಗತೊಡಗಿತ್ತು. ಇದೆಲ್ಲದರ ಮೂಲ ನನ್ನ ಮನಸ್ಸು. ಅದು ಸದಾ ಚಂಚಲವಾಗಿರುತ್ತಿತ್ತು. ನನ್ನ ಮಾತನ್ನು ಅದು  ಯಾವತ್ತೂ ಕೇಳಲಿಲ್ಲ, ಆದರೆ ಕಡೆಯಬಾರಿಗೆ ನನ್ನ ಮಾತನ್ನು ಕೇಳು ಎಂದು ಮನಸ್ಸನ್ನು ತುಂಬಾ ಶ್ರಮವಹಿಸಿ ಒಪ್ಪಿಸಿದ್ದೇನೆ.  ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದು ಮಹಾ ಪಾಪ. ಪುರಾಣದಲ್ಲಿ ಕೂಡ ಇದರ ಉಲ್ಲೇಖವಿದೆ. ಗರುಡ ಪುರಾಣದಲ್ಲಿ ಇರಬೇಕು ಅದರ ಬಗ್ಗೆ. ನನಗಷ್ಟು ಮಾಹಿತಿ ಇಲ್ಲ. ಇನ್ನೇನು ಸಾಯುವವನಿಗೆ ಅದೆಲ್ಲ ತಿಳಿದುಕೊಂಡು ಏನಾಗಬೇಕು ಅಲ್ವಾ?  ಅದೇ ರೀತಿ ಸರ್ಕಾರವು ಆತ್ಮಹತ್ಯೆಯನ್ನು ಪ್ರಚೋದಿಸುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ.

ಸರ್ಕಾರ ಸಾಯುವವರಿಗೆ ಅಂದರೆ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಸಹಾಯಧನ ನೀಡಿದರೆ ಒಳ್ಳೆಯದೆನಿಸುತ್ತದೆ. ಆದರೆ ಅದರಿಂದ ಸಾಯುವವನಿಗೆ ಏನು ಉಪಯೋಗವಿಲ್ಲ. ಹಾಂ…ಉಪಯೋಗವಾಗುತ್ತದೆ. ಹೇಗೆಂದರೆ, ಸಾಯುವವನು ಮೊದಲೇ ಅರ್ಜಿ ಹಾಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದರೆ ಸರ್ಕಾರಕ್ಕೆ ಅದಕ್ಕೆ ಒಪ್ಪಿಗೆ ನೀಡಿ ಸಹಾಯಧನ ನೀಡಿದರೆ ಅವನಿಗೆ ಸಾಯುವುದಕ್ಕೆ ವಿಷವನ್ನೋ ಒಳ್ಳೆಯ ಹಗ್ಗವನ್ನೊ ಖರೀದಿಸಲು ಸಹಾಯವಾಗಬಹುದು.

ನನ್ನ ಗೆಳೆಯನೊಬ್ಬನಿದ್ದ. ಅವನ ಹೆಸರು ಏನೋ ಇತ್ತು. ಅದು ಈಗ ಮರೆತುಹೋಗಿದೆ. ಆದರೆ ನಾವೆಲ್ಲ ಅವನನ್ನು ಕಲಾವಿದ ಎಂದೇ ಕರೆಯುತ್ತಿದ್ದೆವು. ಅದು ಅವನ ವೃತ್ತಿಗೆ  ಸಂಬಂಧಪಟ್ಟ ಅಡ್ಡ ಹೆಸರಲ್ಲ. ಅವನು ಅನೇಕ  ಕಲೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಉದಾಹರಣೆಗೆ, ಪೇಂಟಿಂಗ್ ಮಾಡುವುದು ಮತ್ತು ಮಣ್ಣಿನಿಂದ ಕಲಾಕೃತಿಗಳನ್ನು ಮಾಡುವುದು, ಪೇಪರ್ ಕಟಿಂಗ್  ಹೀಗೆ  ಏನೇನೋ ಮಾಡುತ್ತಿದ್ದ.  ಅದರಲ್ಲಿ ಅಭಿನಯ ಕೂಡ ಒಂದು. ಕಿಚ್ಚ ಸುದೀಪ್ ಅಭಿನಯದ ಹುಚ್ಚ ಚಿತ್ರದ ಯಾರೋ ಯಾರೋ ಗೀಚಿ ಹೋದ ಹಾಡಿಗೆ ತಾನು ಕೂಡ ಅದೇ ತರಹದ ಮಣಭಾರದ ಚೈನ್ ಧರಿಸಿ ಅಷ್ಟೇ ಸಣ್ಣಗೆ ಕಟಿಂಗ್ ಮಾಡಿಸಿ ನಮ್ಮೂರಿನ ಮದುವೆ ವಿಡಿಯೋಗಳನ್ನು ಮಾಡಿಕೊಂಡಿದ್ದ ಸ್ಟುಡಿಯೋ ಮಹೇಶನಿಗೆ ಸಾವಿರ  ದುಡ್ಡು ಕೊಟ್ಟು ಅದನ್ನು ಶೂಟ್ ಮಾಡಿ ನಮಗೆಲ್ಲ ತೋರಿಸಿದ್ದ. ಅಂಥವನ ಹಿಂದೆಯೂ ಒಂದು ವಿಷಾದ ಪ್ರೇಮಕಥೆ ಇತ್ತು. ಅವನು ಪ್ರೀತಿಸಿದ ಹುಡುಗಿ ಕೈಕೊಟ್ಟು ಹೋಗಿದ್ದಳು‌.

ಅದೇ ಕೊರಗಲ್ಲಿ ಆತ ನಿಜಕ್ಕೂ ಹುಚ್ಚನಂತೆ ಆಡತೊಡಗಿದ. ಆ ಹುಡುಗಿ ಮದುವೆಯಾದ ಮೇಲೆ ಒಂದು ದಿನ ಈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಯಾಕೋ ನಾನು ಸಾಯುವ ಸಂದರ್ಭದಲ್ಲಿ ಇದೆಲ್ಲಾ ನೆನಪಾಗುತ್ತಿದೆ.

ಪ್ರಪಂಚದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮೊದಲ ವ್ಯಕ್ತಿ ನಾನೇನಲ್ಲ. ದಿನನಿತ್ಯ ನೂರಾರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂತಹದರಲ್ಲಿ ನನ್ನ ಸಾವು ಕೂಡ ಈ ಪ್ರಪಂಚಕ್ಕೆ ಅಷ್ಟೇನೂ ವ್ಯತ್ಯಾಸ ಮಾಡಲಾರದು. ಅವರ ಸಾವಿನ ಸಂಖ್ಯೆಯ ಜೊತೆ ಸೇರಿ ನನ್ನದು ಒಂದು ಹೆಚ್ಚಾಗಬಹುದು ಅಷ್ಟೇ. ತೀರ ಆತ್ಮೀಯರು ಅಂತ ಯಾರೂ ಇಲ್ಲದಿದ್ದರೂ ಪರಿಚಯಸ್ಥರು ನನ್ನ ಸಾವಿನ ಉತ್ತರಾರ್ಥವಾಗಿ ತಮ್ಮ ವಾಟ್ಸ್ಯಾಪ್ ಡಿಪಿಯಲ್ಲಿ ನನ್ನ ಫೋಟೋ ಹಾಕಿ RIP ಎಂದು ಹಾಕಬಹುದು. ಫೇಸ್ಬುಕ್ನಲ್ಲಿ ಒಂದಷ್ಟು ಜನ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಅನ್ನೋ ಟ್ಯಾಗ್ಲೈನ್ ಇರುವ ಫೋಟೋಗೆ ಲೈಕ್ ಒತ್ತಬಹುದು. ಪಾಪ ಕೆಲವರಿಗೆ ನನ್ನ ಪರಿಚಯವೂ ಇರುವುದಿಲ್ಲ. ಇನ್ನು ಕೆಲವರು ಯಾಕೆ? ಏನಾಯ್ತು? ಹೇಗೆ ಸತ್ತ? ಅಂತೆಲ್ಲ ಕಮೆಂಟ್ ಮಾಡಿ ವಿಚಾರಣೆ ಮಾಡಬಹುದು  ಅಷ್ಟೇ. ಈಗ ನನಗೆ ಅದರ ಬಗ್ಗೆ ಯೋಚಿಸುವಷ್ಟು ಪುರುಸೊತ್ತು ಇಲ್ಲ ಮತ್ತು ಅದರಿಂದ ನನಗೇನೂ ಆಗಬೇಕಿಲ್ಲ. ಇನ್ನೂ ನಾನು ಸಾಯುವುದನ್ನು ನಿಧಾನಿಸಿದರೆ ಕಷ್ಟವಾಗಬಹುದು ಅಥವಾ ಮನಸ್ಸು ತನ್ನ ನಿರ್ಧಾರವನ್ನು ಬದಲಿಸಬಹುದು. ಹಾಗಾಗಬಾರದು ಎಂದು ಬೇಗ-ಬೇಗ ಮನೆಯಿಂದ ಹೊರ ನಡೆಯುತ್ತೇನೆ.

.ಆಗಷ್ಟೇ ಬೆಳಕು ಇಳಿಯುತ್ತಿರುತ್ತದೆ ಕತ್ತಲು ಬೆಳೆಯುತ್ತಿರುತ್ತದೆ. ಸೀದಾ ಅಂಗಡಿಗೆ ಹೋಗಿ ಒಂದು ಹೊಚ್ಚ ಹೊಸ ಬಿಳಿ ಹಗ್ಗ ಕೊಡಿ ಎಂದು ಕೇಳಿದೆ. ಅವನು ಯಾಕೆ? ಏನು? ಹಸು ಕಟ್ಟೋಕಾ?  ಮತ್ತೆನ್  ಮಾಡೋಕೆ? ಅದು ತಗೊಳ್ಳಿ ಇದು ತಗೊಳ್ಳಿ ಅಂತ ಹೇಳಿ ಹಗ್ಗ ಯಾಕೆ ಸಾರ್ ಎಂದು ಕೇಳಿದ. ನಾನು ನೇಣು ಹಾಕಿಕೊಳ್ಳೋಕೆ ಎಂದೆ. ಆತ ನನ್ನನ್ನೇ ಗಂಭೀರವಾಗಿ ನೋಡಿ ಸಾರ್ ತುಂಬಾ ತಮಾಷೆ ಮಾಡುತ್ತಾರೆ ಅಂತ ಹೇಳಿ ಹಗ್ಗವನ್ನು ಕೊಟ್ಟ. ನಾನು ಅವನ ಮಾತಿಗೆ  ಮತ್ತೇನು ಪ್ರತಿಕ್ರಿಯಿಸದೆ  ಹಗ್ಗ ತೆಗೆದುಕೊಂಡು ಸೀದಾ ನನ್ನ ಮನೆಗೆ ಬಂದೆ. ಹೊರಗಿನ್ನು ಮುಸ್ಸಂಜೆ. ಜನರು ಸುತ್ತಲೂ ಅಡ್ಡಾಡುತ್ತಿದ್ದರು. ನಾನು ಸ್ವಲ್ಪ ಕತ್ತಲಾಗುವುದನ್ನೇ ಕಾಯುತ್ತಾ ಕುಳಿತೆ. ಸೆಕೆಗೋ ಭಯಕ್ಕೋ ಗೊತ್ತಿಲ್ಲ ಸಣ್ಣಗೆ ಬೆವರುತ್ತಿದ್ದೆ. ಫ್ಯಾನ್ ಆನ್ ಮಾಡಿದೆ. ಅದರಿಂದ ಬರುವ ಗಾಳಿ ಅಷ್ಟೇನೂ ಹಿತಕರವಾಗಿರಲಿಲ್ಲ. ಫ್ಯಾನಿನ ಬಟನ್ ಎಷ್ಟೇ ತಿರುವಿದರೂ ಅದು ಜೋರಾಗಿ ತಿರುಗುತ್ತಲೇ ಇರಲಿಲ್ಲ. ಇರಲಿ ನಾನು ಸಾಯುವುದಕ್ಕೆ ಇನ್ನೂ ಕೆಲವು ನಿಮಿಷಗಳಿವೆ. ಅಷ್ಟರಲ್ಲಿ ಒಂದು ಡೆತ್ ನೋಟ್ ಬರೆಯೋಣವೆಂದುಕೊಂಡೆ. ಆದರೆ ಇದ್ದಾಗ ಯಾರಿಗೂ  ಕಷ್ಟ ಸುಖಗಳನ್ನು ಹೇಳಿಕೊಳ್ಳದ ನಾನು, ಸತ್ತಮೇಲೆ ನನ್ನ ಸಾವಿನ ಕಾರಣ ತಿಳಿದುಕೊಂಡು ಯಾರಿಗೆ ಏನಾಗಬೇಕು ಎಂದುಕೊಂಡೆ. ಅಷ್ಟರಮಟ್ಟಿಗೆ ಒಂದು ಖಾಲಿ ಹಾಳೆಯನ್ನು ಅದಕ್ಕೆ ಬಳಸಬಹುದಾದ ಇಂಕನ್ನು ಉಳಿಸಿದ ಸಮಾಧಾನವಾದರೂ ನನಗಿದೆ.

ಹೊರಗೆಲ್ಲ ನಿಶ್ಶಬ್ದ. ಬಹುಶಃ ಈಗ ಪೂರ್ತಿ ಕತ್ತಲಾಗಿದೆ. ಜನರ ಓಡಾಟ ಅಷ್ಟೇನೂ ನನಗೆ ಕೇಳಿಸುತ್ತಿಲ್ಲ. ಇದು ಸಾಯಲು ಸರಿಯಾದ ಸಂದರ್ಭ. ಫ್ಯಾನ್ ಆಫ್ ಮಾಡುತ್ತೇನೆ. ಅದು ತಟಸ್ಥವಾಗಿ ನಿಲ್ಲುವವರೆಗೆ ಅದನ್ನೇ ನೋಡುತ್ತಾ ನಿಲ್ಲುತ್ತೇನೆ‌. ವೇಗವಾಗಿ ತಿರುಗುತ್ತಿದ್ದ ಫ್ಯಾನ್ ನಿಧಾನವಾಗಿ ತಟಸ್ಥವಾಗುತ್ತದೆ (ಮೊದಲೇ ಹೇಳಿದಂತೆ ಫ್ಯಾನ್ ಅಷ್ಟೇನೂ ಜೋರಾಗಿ ತಿರುಗುತ್ತಿರಲಿಲ್ಲ) ನಂತರ ಒಂದು  ಚೇರನ್ನು ಎಳೆದುಕೊಂಡು ಅದರ ಮೇಲೆ ನಿಂತು ಅಂಗಡಿಯಿಂದ ತಂದ ಬಿಳಿ ಹಗ್ಗವನ್ನು ಮೊದಲೇ ಯೂಟ್ಯೂಬ್ನಲ್ಲಿ ನೋಡಿದಂತೆ ಫ್ಯಾನಿಗೆ ಹಗ್ಗವನ್ನು ಗಂಟು ಹಾಕುತ್ತೇನೆ. ನಂತರ ಕುಣಿಕೆಯನ್ನು ರೆಡಿ ಮಾಡಿಕೊಳ್ಳುತ್ತೇನೆ. ಒಂದು ಸುದೀರ್ಘ ನಿಟ್ಟುಸಿರು ತೆಗೆದುಕೊಂಡು ಕುಣಿಕೆಯನ್ನು ಕತ್ತಿಗೆ ಹಾಕಿಕೊಂಡು ನಿಧಾನವಾಗಿ ಬಿಗಿ ಮಾಡುತ್ತೇನೆ. ಇನ್ನೇನು ನನ್ನ ಕಾಲಿನಿಂದ ಚೇರನ್ನು ಹೊದೆಯಬೇಕು ಅಷ್ಟರಲ್ಲಿ ಕರೆಂಟ್ ಹೋಯಿತು! ಮುಂದೆ ಏನಾಯ್ತು ಅನ್ನುವುದು ನನಗೆ ಗೊತ್ತಿಲ್ಲ. ನಿಜಕ್ಕೂ ನಾನು ಅವತ್ತು ಸತ್ತು ಹೋದೆನಾ? ಅಥವಾ ಬದುಕಿದೆನಾ? ಗೊತ್ತಿಲ್ಲ. ನಾನು ಬದುಕಿದ್ದಲ್ಲಿ ಅಕಸ್ಮಾತ್ತಾಗಿ ನಿಮಗೆ ಸಿಕ್ಕರೆ ದಯವಿಟ್ಟು ಬಂದು ನನಗೆ ವಿಷಯ ತಿಳಿಸಿ.

    -ಕಾರ್ತಿಕ್ ಹುಂಡಿಮಾಳ

Please follow and like us: