ಚುಟುಕುಗಳು

ಗುರುವಿನೊಲ್ಮೆ

ಗುರಿಯ ತೋರಿಸುವಾತ ಗುರುವು
ಸಿರಿಯ ಕರುಣಿಸುವಾತ ಗುರುವು
ಹಿರಿಮೆ ನೀಡುವಾತನು ಗುರುವು ಇಂತಿಪ್ಪ
ಗುರುವಿನೊಲ್ಮೆಯೇ ಪರಮ ಗುರಿ ತಿಳಿಯೋ ಚೊಂಬೇಶ

 ಗರ್ವದ ಗರ್ವ ಮುರಿದು

ಪರ್ವತದ ತುತ್ತ ತುದಿಗೇರಿದಡೆ
ಸರ್ವವನು ಸಾಧಿಸಿದಂತಾಯ್ತೆ
ಗರ್ವದ ಗರ್ವ ಮುರಿದು ಸರ್ವರೊಳು ಸೇರಿದರೆ
ಪರ್ವತಕೂ ಮಿಗಿಲು ನೀ ಚೊಂಬೇಶ!

 ಸಾವ ಕೊಲ್ಲಲು ಬಾರದು

ಸಾವಿನೂರಿನ ಪಯಣ ಯಾರಿಗೂ ಬೇಡವಿಲ್ಲಿ
ದೇವ ದಾನವರಿಗೂ ಸಾವೆಂದರಂಜಿಕೆ
ಜೀವವುದಿಸಿದ ಮೇಲೆ ಸಾಯಲೇಬೇಕಿಲ್ಲಿ
ಸಾವ ಕೊಂದು ಬದುಕಬಹುದೇ ಚೊಂಬೇಶ?

 ಅರಿವೆಂಬ ಗುರು
ಮೂಳೆ ಮಾಂಸಗಳ ಹೊದಿಕೆ ಈ ದೇಹವು
ಕೊಳೆ ಕಲ್ಮಶಗಳೇ ಒಳಹೊರಗೂ
ಬಳಿದು ಸಾರಿಸದಿರೆ ಅರಿವೆಂಬ ಪೊರಕೆ ಹಿಡಿದು
ಕೊಳೆತು ನಾರುವುದಲ್ಲೋ ಚೊಂಬೇಶ

-ರಾಘವೇಂದ್ರ ಈ ಹೊರಬೈಲು

Please follow and like us: