ಕೂತು ತಿಂದ್ರೂ ಕರಗದ ಸಂಪತ್ತು.. ನಾಲ್ಕು ಮದುವೆ.. ದೊರೆ ಮಾತ್ರ ಸ್ವಲ್ಪ ಲೂಸು!

 

 

ನಾನು ರಾಜನನ್ನ, ರಾಜಪ್ರಭುತ್ವವನ್ನ ನೋಡಿಲ್ಲ. ಆದ್ರೆ ರಾಜ ಅಂದ್ರೆ ಹೀಗಿದ್ದ ಅನ್ನೋ ಕಲ್ಪನೆಯಂತೂ ಇದೆ. ನನಗೆ ತಿಳಿದ ಮಟ್ಟಿಗೆ ರಾಜ ನಿಜವಾಗಲೂ ಪ್ರಜೆಗಳ ಪಾಲಿಗೆ ದೇವರಂತಿದ್ದ. ಮೈಸೂರು ಅರಸರು ತಮ್ಮ ಸಾರೋಟಿನಲ್ಲಿ ಸಾಗ್ತಾ ಇದ್ರೆ ಜನ ಇಕ್ಕೆಲಗಳಲ್ಲಿ ಭಯ ಭಕ್ತಿಯಿಂದ ನಿಂತು ಗೌರವಿಸ್ತಿದ್ರು, ನಮಿಸ್ತಾ ಇದ್ರು ಅಂತ ಅಪ್ಪ ಹೇಳ್ತಿದ್ದಿದ್ದು ನೆನಪು. ಮೈಸೂರು ರಾಜರುಗಳಂತೂ ಜನಾನುರಾಗಿಯಾಗಿದ್ದರು ಅನ್ನೋದಕ್ಕೆ ಇತಿಹಾಸದಲ್ಲಿ ಸಾಕಷ್ಟು ನಿದರ್ಶನಗಳಿವೆ.

ಆದರೆ ಇದೆಂಥ ರಾಜ ಇವನು?

ಇವನಿಗೆ ನಾಲ್ಕು ಜನ ಹೆಂಡತಿಯರು. ಸಾವಿರಾರು ಕೋಟಿ ಹಣ ಇದೆ. ಆದರೂ ‘ಕ್ರಾಪ್ ಟಾಪ್’ ಹಾಕಿಕೊಂಡು, ಸೊಂಟದಿಂದ ಇಳಿಬಿದ್ದ ಜೀನ್ಸ್ ಹಾಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡ್ತಾನೆ. ಮೈ ತುಂಬಾ ಎಂಥೆಂಥದೋ ಅಸಂಬದ್ಧ ಟ್ಯಾಟೂ. ಕೊಳೆಯುವಷ್ಟು ಸಂಪತ್ತಿದ್ದರೂ ಸ್ಕೂಲ್ ಫೀಸ್ ಕಟ್ಟದೆ ತನ್ನದೇ ಮಕ್ಕಳನ್ನು ಗೋಳುಹೊಯ್ದುಕೊಳ್ತಾನೆ. ತನ್ನ ಮುಂದೆ ಬರುವವರೆಲ್ಲಾ ತೆವಳಿಕೊಂಡೇ ಬರಬೇಕು ಅನ್ನೋದು ಅವನ ಆಜ್ಞೆ. ತನ್ನ ಪ್ರೀತಿಯ ನಾಯಿ ‘ಫುಫು’ಗೆ ಏರ್ ಚೀಫ್ ಮಾರ್ಷಲ್ ಪಟ್ಟ ಕಟ್ಟಿದ್ದ. ಅದನ್ನ ಡಿನ್ನರ್ ಗೆ ಕರೆದುಕೊಂಡು ಹೋಗುತಿದ್ದ. ಅದು ಸತ್ತಾಗ ಬೌದ್ಧ ಸಂಸ್ಕೃತಿ ಪ್ರಕಾರ ನಾಲ್ಕು ದಿನ ವಿಧಿವತ್ತಾದ ಸಂಸ್ಕಾರ ಮಾಡಿದ್ದ. ಇಂಥ ವಿಲಕ್ಷಣ ರಾಜನ ಹೆಸರು ಥಾಯ್ ಲ್ಯಾಂಡ್ ನ ರಾಜ ಮಹಾ ವಾಜಿರಲಾಂಗ್ಕಾರ್ನ್. King Rama X ಅಂತಾನೆ ಫೇಮಸ್. ದುರಂತ ಅಂದ್ರೆ ಈ ರಾಜನಿಗೆ ರಾಜನಿಗಿರಬೇಕಾದ ಯಾವ ಗಾಂಭೀರ್ಯವೂ ಇಲ್ಲ. ಗತ್ತೂ ಇಲ್ಲ. ಆದರೆ ಅಹಂ ಇದೆ. ಶೋಕಿ ಇದೆ. ಹುಚ್ಚುತನ ಇದೆ.  ಅದೇ ಅವನನ್ನ ಜಗತ್ತಿನ ಮುಂದೆ ನಗೆಪಾಟಲಿಗೀಡಾಗುವಂತೆ ಮಾಡಿರೋದು.

ರಾಜ ವಾಜಿರಲಾಂಗ್ಕಾರ್ನಾ ಏನು ಕಡಿಮೆ ಓದಿದಾನೆ ಅಂದುಕೊಂಡಿರಾ? ಹದಿಮೂರು ವರ್ಷಕ್ಕೆ ಲಂಡನ್ ಗೆ ಹೋಗಿ ಅಲ್ಲಿ ಐದು ವರ್ಷ ವಿದ್ಯಾಭ್ಯಾಸ ಮಾಡ್ತಾನೆ. ಆಮೇಲೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಒಂದು ವರ್ಷ ಓದ್ತಾನೆ. ಕ್ಯಾನ್ಬೆರಾದ ರಾಯಲ್ ಮಿಲಿಟರಿ ಕಾಲೇಜಿನಲ್ಲಿ ನಾಲ್ಕು ವರ್ಷ ಮಣ್ಣು ಹೊರುತ್ತಾನೆ. ನಂತರ ಥಾಯ್ ಲ್ಯಾಂಡ್ ನಲ್ಲಿ ಮಿಲಿಟರಿ ಟ್ರೈನಿಂಗ್ ತಗೊಂಡು ಮಿಲಿಟರಿ ಆಫೀಸರ್ ಆಗ್ತಾನೆ. ವಿಮಾನ ಓಡಿಸಬಲ್ಲ. ಅವನಿಗೆ ಅಂತಾನೆ  ಅವನ ವಿಲಾಸಿ ಓಡಾಟಕ್ಕೆ ಅಂತಾನೆ ಒಂದು ಪ್ರೈವೆಟ್ ಬೋಯಿಂಗ್ ವಿಮಾನ ಇದೆ. ರಾಜ ಮನೆತನಕ್ಕೆ ಸೆರಿದ 16,210 ಎಕರೆ ಜಮೀನು ಥಾಯ್ ಲ್ಯಾಂಡಿನಲ್ಲಿದೆ. ಅವನ ವಂಶದ ಹಿರಿಯರು ಹತ್ತು ತಲೆಮಾರು ಕೂತು ತಿಂದರೂ ಮುಗಿಯದಷ್ಟು ಆಸ್ತಿಪಾಸ್ತಿ ಮಾಡಿಟ್ಟಿದ್ದಾರೆ. ಸಲ್ಲದಕ್ಕೆ ಇವನೊಬ್ಬನೇ ಚಕ್ರಿ ರಾಜಮನೆತನದ ಕುಲಪುತ್ರ.

ಭಯಂಕರ ಶೋಕಿಲಾಲ.

ರಾಜ ವಾಜಿರಲಾಂಗ್ಕಾರ್ನ್ ಬಳಿ 546.67 ಕ್ಯಾರೆಟ್ ನ ಒಂದು ವಜ್ರ ಇದೆ. ಅದು ಜಗತ್ತಿನಲ್ಲೇ ಅತಿ ದೊಡ್ಡ ಡೈಮಂಡ್. ಅದರ ಬೆಲೆ 12 ಮಿಲಿಯನ್ ಡಾಲರ್ ಆಗಬಹದು ಅನ್ನೋದು ಒಂದು ಅಂದಾಜು.  ಅವನಿಗೆ ಬರುವ ಆದಾಯವಂತೂ  ಜಗತ್ತಿನ ಯಾವ ರಾಜನಿಗೂ ಬರಲ್ಲ ಅನ್ನೋದು ಖಂಡಿತಾ ಉತ್ರ್ಪೇಕ್ಷೆ ಅಲ್ಲ. ಅಷ್ಟು ಆಗರ್ಭ ಶ್ರೀಮಂತ ರಾಜ ಮನೆತನ ಅವನದ್ದು.

ಇಂಥ ತಿಕ್ಕಲು ರಾಜನಿಗೆ ನಾಲ್ಕು ಜನ ಹೆಂಡತಿಯರು. 1977ರಲ್ಲಿ ಸೋಮ್ಸವಾಲಿ ಕಿತಿಯಾಕರಳನ್ನ ಮದುವೆ ಆಗ್ತಾನೆ. ಒಂದು ಮಗು ಆಗುತ್ತೆ. ಹದಿನಾರು ವರ್ಷಗಳ ನಂತರ ಆ ಮದುವೆ ಗೊಟಕ್ ಅನ್ನುತ್ತೆ. ನಂತರ ನಟಿ ಸುಜಾರಿನೆ ವಿವಾಚರ ವಂಗ್ಸೆಯನ್ನ ಮದುವೆ ಆಗ್ತಾನೆ. ಅದೂ ಎರಡು ವರ್ಷದಲ್ಲಿ ಮುರಿದುಬೀಳುತ್ತೆ. 2001ರಲ್ಲಿ ಮೂರನೇ ಮದುವೆ ಶ್ರೀರಶ್ಮಿ ಸುವಾಡಿ ಜೊತೆ ನಡೆಯುತ್ತೆ. 2005ರಲ್ಲಿ ಒಂದು ಮಗು ಜನಿಸುತ್ತೆ. 2014ರ ಹೊತ್ತಿಗೆ ಆ ಮದುವೆಯೂ ಢಮಾರ್. ನಾಲ್ಕನೆ ಮದುವೆ ನಡೆದಿದ್ದು 2019ರಲ್ಲಿ. ಸುತಿದಾ ಬಜ್ರಸುಧಬಿಮಲಲಕ್ಷ್ಮಣಳನ್ನ ಮದುವೆ ಆಗ್ತಾನೆ. ಮದುವೆ ಆಗೋದಕ್ಕೂ ಮೊದಲು ಆಕೆ ರಾಜನ ಬಾಡಿಗಾರ್ಡ್ ಆಗಿರ್ತಾಳೆ. ಈಗ ಅವಳೇ ಅರಮನೆಯ ರಾಣಿ.

ಪುಣ್ಯಾತ್ಮ ಇವಳನ್ನ ಯಾವಾಗ ಬಿಡ್ತಾನೋ!

2016ರಲ್ಲಿ ತನ್ನ ತಂದೆ ರಾಜ ಭುಮಿಬೊಲ್ ಸತ್ತ ನಂತರ ಹತ್ತನೇ ಕಿಂಗ್ ರಾಮನಾಗಿ ಅಧಿಕಾರ ಏರಬೇಕಾದವನು ಇದೇ ತಿಕ್ಕಲು ರಾಜ. ಮೂರು ವರ್ಷಕಾಲ ನನ್ನ ತಂದೆಗೆ ಗೌರವ ಸಲ್ಲಿಸಿ ಅಂತ ಬಿಟ್ಟು 2019ರಲ್ಲಿ ಗದ್ದುಗೆ ಏರ್ತಾನೆ. ಅದೊಂದು ಝಗಮಗಿಸುವ ಸಮಾರಂಭ. ಅದಾದ ಮೇಲೆ ಇವನ ಒಂದೊಂದು ತಿಕ್ಕಲತನವೂ ಜಗತ್ತಿಗೆ ಗೊತ್ತಾಗಿದ್ದು.  ಈಗಂತೂ  ಥಾಯ್  ಲ್ಯಾಂಡಿನ ಜನರಿಗೆ ಇವನ ಸಹವಾಸವೇ ಸಾಕಾಗಿದೆ. ಉಪಟಳ ಸಾಕಾಗಿದೆ. ಮೊದಲು ಈ ದೊರೆಯನ್ನ ಕೆಳಗಿಳಿಸಿ ಅಂತ ಜನ ಅರಮನೆ ಮುಂದೆ ಪ್ರೊಟೆಸ್ಟ್ ಮಾಡ್ತಿದ್ದಾರೆ.

ಅಸಲಿಗೆ ರಾಜ ವಾಜಿರಲಾಂಗ್ಕಾರ್ನ್ ಮಹಾ ಜೂಜುಕೋರ. ಹೆಣ್ಣು ಬಾಕ. ಥಾಯ್ ಲ್ಯಾಂಡ್ ಕೊರೋನಾ ವೈರಸ್ ದಾಳಿಗೆ ಸಿಕ್ಕಿ ನರಳುತಿದ್ದಾಗ ಈತ ಇಪ್ಪತ್ತು ಹುಡುಗಿಯರ ದಂಡು ಕಟ್ಟಿಕೊಂಡು ಹೊಟೇಲ್ ಒಂದರಲ್ಲಿ ಚಕ್ಕಂದ ಆಡ್ತಿದ್ದನಂತೆ. ಹಾಗಂತ ಯಾಕೆ ಹೀಗೆ ಮಾಡಿದೆ ಅಂತ ಕೇಳುವ ಅಧಿಕಾರ ಅಲ್ಲಿನ ಯಾರಿಗೂ ಇಲ್ಲ. ಥಾಯ್ ಲ್ಯಾಂಡ್ ನಲ್ಲಿರೋದು ಮಿಲಿಟರಿ ಡಿಕ್ಟೇಟರ್ ಶಿಪ್ ಸರ್ಕಾರ. ಜನರಲ್ ಸೊಂದಿ ಬೊನ್ಯಾರಟ್ ಕಲಿನ್ ಈಗಿನ ಪ್ರಧಾನಿ. ಆತ ರಾಜ ಹೇಳಿದ್ದಕ್ಕೆ ತಲೆ ಕೂಡ ಆಡಿಸಲ್ಲ. ಅಲ್ಲದೆ ಥಾಯ್ ಲ್ಯಾಂಡಿನ ಬಹುತೇಕ ಜನ ರಾಜನ ಪ್ರತ್ಯಕ್ಷ ದೇವರೆಂದು ಈಗಲೂ ನಂಬಿದ್ದಾರೆ.

ಹಾಗಾಗಿ ಆತನ ಬಗ್ಗೆಯಾಗಲಿ, ಆತನ ಸಿಂಹಾಸನ ಬಗ್ಗೆಯಾಗಲಿ ರಾಜ ಮನೆತನದ ಬಗ್ಗೆಯಾಗಲಿ ಯಾರೂ ತುಟಿ ಪಿಟಿಕ್ ಅನ್ನಲ್ಲ. ಅನ್ನೋ ಹಾಗೂ ಇಲ್ಲ. ಅಂದ್ರೆ ಶಿಕ್ಷೆ ಗ್ಯಾರಂಟಿ.  ತನ್ನ ಮನೆತನಕ್ಕೆ ಸರಿಯಾಗಿ ನಡೆದುಕೊಳ್ಳಲಿಲ್ಲ ಅಂತಾನೆ ಅನೇಕ ಹೆಂಡತಿಯರಿಗೆ ಡಿವೋರ್ಸ್ ಕೊಟ್ಟ ಪುಣ್ಯಾತ್ಮ ಈತ.

ಥಾಯ್ ಲ್ಯಾಂಡ್  ಇಂಥ ಈಡಿಯಟ್ ರಾಜನಿಂದಲೇ ನೆಮ್ಮದಿ ಕಳೆದುಕೊಂಡಿದೆ, ಅದರ ಮಾನ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗ್ತಿದೆ ಅಂತ ನಿಮಗೆ ಅನಿಸಲ್ವ?

ಅನಿಸಿದ್ದಕ್ಕೆ ಹೊಸ ತಲೆಮಾರು ರಾಜನ ವಿರುದ್ಧ ಮಾತಾಡ್ತಿದೆ. ರಾಜಪ್ರಭುತ್ವವನ್ನ ಕೆಳಗಿಳಿಸುವಂತೆ ಆಗ್ರಹ ಪಡಿಸ್ತಿದೆ.

 

 ರವಿ

Please follow and like us: