ಕಾಡ ಮಧ್ಯೆ ಫಕ್ಕನೆ ನಕ್ಕಿತು ಆರೋಗ್ಯ

ಮನಸಿನ್ಯಾಗಿನ ಮಾತು

ತಲೆ ಧಿಮ್ಮೆನ್ನುತ್ತಿತ್ತು. ಇಡೀ ದೇಹಕ್ಕೆ ಜೋಮು ಜೋಮು. ಒಂದು ದಿನದ ಮಾತಲ್ಲ. ನಿರಂತರ ಜೋಮು. ನನ್ನ ಡಾಕ್ಟರ್ ಧುಳೆಪ್ಪನವರ್ ರನ್ನು ಕೇಳಿದರೆ ಏನಾಗುವುದಿಲ್ಲ ರೆಸ್ಟ್ ತಗೊ ಅಂತಿದ್ರು. It was miserable, ದೇಹಕ್ಕೆ ಉಲ್ಲಾಸವೇ ಇಲ್ಲ. ಸತ್ತು ಹೋಗುತ್ತೇನಾ ಅನಿಸುತ್ತಿತ್ತು. ಸುಲಭಕ್ಕೆ ಸಾಯುವವನಲ್ಲ. ಆದರೆ ಅನಾರೋಗ್ಯ ತುಂಬಾ ಹೆದರಿಸುತ್ತೆ.

ಮೊನ್ನೆ ಇಲ್ಲಿಗೆ ಬಂದೆ. ಇದು ನನ್ನ ಎಸ್ಟೇಟು. ಜೋಯಿಡಾದ ಸಮೀಪವಿರುವ ಒಂದೇ ಮನೆಯ ಗ್ರಾಮದ ಹೆಸರು ಬರ್ಬೂಸಾ. ಇಲ್ಲಿ ನನ್ನ ಪುರಾತನ ಬಂಗ್ಲೆ ಇದೆ. ಮೂಲತಃ ಇಂಗ್ಲಿಷ್‌ನ ಖ್ಯಾತ ಲೇಖಕ ಮನೋಹರ ಮಳಗಾಂವ್‌ಕರ್ ಅವರದು. ಇಲ್ಲಿ ಯಾರೆಂದರೆ ಯಾರೂ ಇರುವುದಿಲ್ಲ. ಪ್ರಶಾಂತ ಪ್ರಶಾಂತ. ಒಬ್ಬನೇ ಇರಲಿಕ್ಕೆ ಬಂದೆ. ರಾತ್ರಿ ಮಲಗಿಕೊಂಡಾಗ ಜೀವಕ್ಕೆ ಮತ್ತದೇ ಬೇಸರ , ಅದೇ ಜೋಮು. ಆದರೆ ಬೆಳಗ್ಗೆ ಎದ್ದೆ ನೋಡಿ, ಅದೇನೋ ಮಾಯ ಮಾಡಿದಂತೆ ಏಕ್ ದಮ್ ಆರೋಗ್ಯ ಸರಿ ಹೋಗಿತ್ತು. No ಜೋಮು. ಬಿಸ್ಸಿಯಾದ್ದೊಂದು ಕಾಫಿ ಕುಡಿದೆ. ಬೆಚ್ಚಗೊಂದು ಸಿಗರೇಟು. ಗೆಳೆಯ ದರ್ಶನ್ ಆರಾಧ್ಯ ಬಂದ. ಕಾಲಿಗೆ ಬೂಟು ತೊಟ್ಟು ಕಾರಿನೊಳಗೆ ಹಾರಿ ಗಿರಗಿರಗಿರ ಕಾಡು ಸುತ್ತಿದೆವು. ನನ್ನ ಬಂಗಲೆಗೆ ತುಂಬಾ ಹತ್ತಿರವಿದೆ ಕ್ಯಾಸೆಲ್ ರಾಕ್. ಅಲ್ಲಿಗೆ ಅನೇಕ ವರ್ಷಗಳ ಹಿಂದೆ ಹೋಗಿದ್ದೆ. ನಾನು ಹೋಗುತ್ತಿದ್ದಂತೆ ಫಾರೆಸ್ಟ್ ಗಾರ್ಡ್ ಫಕ್ಕನೆ ಗುರುತು ಹಿಡಿದು ರವಿ ಸರ್ ಅಂದ. ಚೆಂದದ ಕಾಫಿ ಕೊಟ್ಟ. ಇನ್ನೊಮ್ಮೆ ಬಂದಾಗ ಅಡುಗೆ ಮಾಡಿ ಹಾಕುತ್ತೇನೆ ಅಂದ. ನೈಸ್ ಬಾಯ್. ಈ ದಾರಿಯಲ್ಲಿ ನಾನು ಆನೆ ನೋಡಿದ್ದೇನೆ, ಹುಲಿ ನೋಡಿದ್ದೇನೆ, ಕಾಟಿ ನೋಡಿದ್ದೇನೆ. ಜಿಂಕೆಯಂತೂ ರಾಶಿ ರಾಶಿ. ಹೀಗೆ ಚೆಂದದ ನಿಸರ್ಗದ ಮಧ್ಯೆ ಇರೋದು ತಂತಾನೆ ಆರೋಗ್ಯವಾಗಿಡುತ್ತದೆ. ಯಾರಿಗೆ ಬೇಕು ಗುಷ್ಟು ಬೆಂಗಳೂರು. ಅಲ್ಲಿನ ಹವೆಯಲ್ಲಿ ವಿಷ ಬೆರೆತಿದೆ. ನೀರಿನಲ್ಲಿ ಪಾಶಾಣ. ಇಲ್ಲಿ ಫ್ರೆಶ್ ಆದ ನೀರು ಕುಡಿಯುತ್ತೇನೆ. ಬಂಗಲೆಯಲ್ಲಿ ದೀಪ ಮಾಡಿಕೊಡುವ ಅದ್ಭುತವಾದ ಊಟ ಮಾಡುತ್ತೇನೆ. ಮಾತ್ರೆಯ ಸಹವಾಸ ಸಾಕು. ಓಶೋ ತುಂಬಾ ಚೆನ್ನಾಗಿ ಹೇಳುತ್ತಾನೆ, ಹತ್ತು ಡಾಕ್ಟರುಗಳನ್ನು ನಿಮ್ಮ ಕೋಣೆಗೆ ಕರೆದು ಆರೋಗ್ಯದ ಬಗ್ಗೆ ಮಾತನಾಡಿ ಅನ್ನಿ, ಅವರು ಕೇವಲ ರೋಗಗಳ ಬಗ್ಗೆ ಮಾತನಾಡುತ್ತಾರೆ. ಎಷ್ಟು ಸತ್ಯ ಅಲ್ವಾ. ಡಾಕ್ಟರುಗಳ ಕೈಗೆ ಸಿಕ್ಕು ನಾವು ನಾಶವಾಗಬಾರದು. Off course ನನಗೆ ತುಂಬಾ ಒಳ್ಳೆಯ ಡಾಕ್ಟರ್ ಮಿತ್ರರಿದ್ದಾರೆ. ಅವರು ಹೇಳುತ್ತಾರೆ, ನಿಮ್ಮ ಇಷ್ಟದ ಜಾಗಕ್ಕೆ ಹೋಗಿ. ಅಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಆರೋಗ್ಯ ನಾವು ಕೊಡುವುದಿಲ್ಲ. It is true.

ನೀವೇನ್ರಿ ಶ್ರೀಮಂತರು. ಬೇಕಾದ ಕಡೆ ಹೋಗ್ತಿರಿ, ಬೇಕಾದ್ದು ಕೊಳ್ಳುತ್ತೀರಿ ಎಲ್ಲರಿಗೂ ಅದು ಆಗಬೇಕಲ್ಲ ಅನ್ನುವವರಿದ್ದಾರೆ. Please listen. 25 ವರ್ಷಗಳ ಹಿಂದೆ ನನ್ನ ಕೈಲಿ ಕಿಲುಬು ಕಾಸು ಇರಲಿಲ್ಲ. ಇದನ್ನೆಲ್ಲ ನಾನು ನಿಯತ್ತಾಗಿ ದುಡಿದೆ. ಯಾರಿಗೂ ಮೋಸ ಮಾಡಲಿಲ್ಲ. ದೇಹಿ ಅನ್ನಲಿಲ್ಲ. ಹೀಗೆ ದುಡಿಯುವುದು ಎಲ್ಲರಿಗೂ ಸಾಧ್ಯ. ಯಾವ ಲಕ್ಕನ್ನೂ ನಾನು ನಂಬಿದವನಲ್ಲ. ನಂಬಿದ್ದು ನನ್ನ ಶ್ರಮವನ್ನು, ಕೈ ಒಳಗಿನ ಲೇಖನಿಯನ್ನು. ಯಾವ ಮಿರಾಕಲ್ ಕೂಡ ಆಗುವುದಿಲ್ಲ. ನಮ್ಮ ಶ್ರಮಕ್ಕೆ ಮಾತ್ರ ಫಲಿತಾಂಶ ದೊರೆಯುತ್ತದೆ. ಆ ಫಲಿತಾಂಶದ ಹೆಸರು ‘ಹಾಯ್ ಬೆಂಗಳೂರ್!’ ಮತ್ತು ‘ಓ ಮಸನೇ’. ಇನ್ನೊಂದರ ಹೆಸರು ‘ಪ್ರಾರ್ಥನಾ’. ಮತ್ತೊಂದರ ಹೆಸರು ನನ್ನ ಎಸ್ಟೇಟ್ ‘ಕರ್ನಲ್ ಹಿಮ’. ಇದ್ಯಾವುದೂ ಪುಗಸಟ್ಟೆ ಬಂದದ್ದಲ್ಲ. ನನ್ನ ಯೌವ್ವನದ ಇಪ್ಪತ್ತೈದು ವರ್ಷಗಳನ್ನು ಆ ನನ್ನ ಟೇಬಲ್ಲಿನ ಮೇಲೆ ಕಳೆದಿದ್ದೇನೆ. ಮೊಣಕೈ ಊರಿ ಬರೆದಿದ್ದೇನೆ. ಪ್ರಧಾನಮಂತ್ರಿಯಾಗಿದ್ದ ದೇವೆಗೌಡರಿಂದ ಹಿಡಿದು ಜುಜುಬಿ ಕಾರ್ಪೊರೇಟರ್ ತನಕ ಕಂಡ ಕಂಡವರ ಕಣ್ಣಿಗೆ ಕೈ ಹಾಕಿದ್ದೇನೆ. ರೌಡಿಗಳನ್ನು ಮಾತನಾಡಿಸಿದ್ದೇನೆ. ಅವರ ಕ್ರೌರ್ಯ, ಅದರಲ್ಲಿ ಬೆರೆತ ಅವರ ಕಣ್ಣೀರು, ಅವರ ದುಃಖ, ಅವರ ಸಾವು ಎಲ್ಲವನ್ನೂ ದಾಖಲಿಸಿದ್ದೇನೆ. ನನ್ನಂತಹ ಧೈರ್ಯವಂತರಿದ್ದಾರೆ. ಬುದ್ಧಿವಂತರಿದ್ದಾರೆ, ಶ್ರಮ ಪಡುವವರಿದ್ದಾರೆ. ಆದರೆ, ಈ ಮೂರರ ಕಾಂಬಿನೇಷನ್ ಇನ್ನೊಬ್ಬರಲ್ಲಿ ನಾನು ಕಂಡಿಲ್ಲ. ಅನೇಕರು ನನ್ನ ‘ಹಾಯ್ ಬೆಂಗಳೂರ್!’ ನಂತೆಯೇ ತಮ್ಮ ಪತ್ರಿಕೆ ಮಾಡಿದ್ದಾರೆ. ನನ್ನಂತೆಯೇ ಬರೆಯಲೆತ್ನಿಸಿದ್ದಾರೆ. ನೀವು ಇನ್ನೊಬ್ಬರಂತೆ ಮಾಡಲು ಯತ್ನಿಸಿದಾಗ ಅದು ನಿಮ್ಮದಾಗುವುದಿಲ್ಲ. ನೀವು ನಿಮ್ಮ ಹಾಗೆ ಬರೆಯಿರಿ, ನಿಮ್ಮ ಹಾಗೆ ಯೋಚಿಸಿರಿ, ನಿಮ್ಮ ಹಾಗೆ ಧೇನಿಸಿರಿ, ನಿಮ್ಮ ಹಾಗೆ ಕಷ್ಟಪಡಿ. ಆಗ ಮಾತ್ರ ಗೆಲುವು ನಿಮ್ಮದಾಗುತ್ತದೆ.

ಒಮ್ಮೆ ನನ್ನ ಆಡಿಯೋ ಸಿ.ಡಿ. ‘ಮನಸೇ’ ಕೇಳಿ. ನನ್ನ ಪುಸ್ತಕಗಳು ಎಂಬತ್ತೆಂಟಿವೆ. ಒಮ್ಮೆ ಓದಿ. ನಿಮ್ಮಲ್ಲಿ ಹೊಸ ಚೈತನ್ಯ ಉಂಟಾದರೆ ನಾನು ಧನ್ಯ. ಇಷ್ಟೆಲ್ಲ ಸಿಂಗಾರ ಬಂಗಾರ ನಿಮಗೋಸ್ಕರವೆ ಅಲ್ಲವೆ. ಇದೇನ್ ಸಾರ್ ಇದು ಬರೀ ನಿಮ್ಮದೆ ಕತೆ ಹೇಳಿಕೊಳ್ತೀರಿ ಅನ್ನುವವರಿದ್ದಾರೆ. ನನ್ನ ಕಥೆ ನಿಮ್ಮಲ್ಲಿ ಸ್ಫೂರ್ತಿಯುಂಟುಮಾಡಿದರೆ , ನಿಮ್ಮಲ್ಲಿ ಚೈತನ್ಯ ಹೆಚ್ಚಿಸಿದರೆ ಹೇಳಿಕೊಂಡಿದ್ದಕ್ಕೂ ಸಾರ್ಥಕ. ನನ್ನ ಕಾದಂಬರಿ ‘ಹೇಳಿ ಹೋಗು ಕಾರಣ’ ದಲ್ಲಿ ನೀವು ನನ್ನನ್ನು ಕಾಣುತ್ತೀರಿ. ನನ್ನ ಹುಡುಗಿ ಕಾಣಿಸುತ್ತಾಳೆ. ಕಮ್ಮಗೆ ನಗುತ್ತಾಳೆ. ಬಿಟ್ಟು ಹೋದ ಅವಳು ಒಂದು ವೇದನೆಯಂತೆ ಸುಮ್ಮನೆ ನೆನಪಾಗುತ್ತಾಳೆ. ಅದನ್ನೆಲ್ಲ ಕಾದಂಬರಿಯಾಗಿಸಿದ್ದೇನೆ. ‘ನೀ ಹಿಂಗ ನೋಡಬೇಡ ನನ್ನ’ ಕೂಡ ಅದೇ ಕತೆ. ಸದ್ಯಕ್ಕೆ ನಾನು ಬರೆಯುತ್ತಿರುವ ಪುಸ್ತಕದ ಹೆಸರು ‘ಹೇಳಲೇನು ಕಾರಣ?’ ತುಂಬಾ ಹಿಂದೆ ಹೋದರೆ ನಾನು ಇಷ್ಟ ಪಡುವ ಲೇಖಕ ಸತ್ಯಕಾಮರನ್ನು ನೀವೇಕೆ ಬರೆಯುತ್ತೀರಿ ಅಂತ ಕೇಳಿದೆ. ಕನ್ನಡಕದ ಹಿಂದಿನ ಕಣ್ಣುಗಳಲ್ಲಿ ನನ್ನನ್ನು ದಿಟ್ಟಿಸಿ ನೋಡಿ ನನ್ನ ಅಹಂಕಾರಕ್ಕಾಗಿ ಬರೆಯುತ್ತೇನೆ ರವಿ ಅಂದರು. ಅವರ ‘ಪಂಚಮಗಳ ನಡುವೆ’, ‘ವಿಜ್ಞಾನ ಭೈರವ’, ‘ತಂತ್ರಯೋನಿ’ ಮುಂತಾದವುಗಳನ್ನು ಹುಚ್ಚನಂತೆ ಓದಿದ್ದೇನೆ. ನನಗೆ ಅರ್ಥವಾದಷ್ಟು, ನನಗೆ ದಕ್ಕಿದಷ್ಟು. ಉಳಿದೆಲ್ಲವರಿಗಿಂತ He was a different writer and a different person. ಮದುವೆಯೇ ಆಗದಿದ್ದ ಅವರು ತುಂಬಾ ಅದ್ಭುತವಾಗಿ ಬರೆದರು, ಬದುಕಿದರು. ಅವರೊಬ್ಬ ತಂತ್ರಸಾಧಕ. ನಮಗೆ ನಿಲುಕದ ಅದೇನೇನನ್ನೋ ಅವರು ಸಾಧಿಸಿದರು. ತಮ್ಮ ಮುಂದುವರಿಕೆಯಾಗಿ ನನ್ನ ಗುರುಬಂಧು ವೀಣಾ ಬನ್ನಂಜೆಯವರನ್ನು ಬಿಟ್ಟು ಹೋದರು. ನಾವು ಅಂಥವರ ಕೈಲಿ ಬೆಳೆಯಬೇಕು. ಬದುಕಿಗೆ ಹೊಸ ಅರ್ಥ ಕಾಣುತ್ತದೆ. ಅವರು ಒಂದೇ ಒಂದು ಸಲ ಚೆನ್ನಾಗಿ ಬರೆಯುತ್ತೀಯ ಅಂದರೆ ಸಾಕು. ನಾನು ನವಿಲಾಗುತ್ತಿದ್ದೆ. ಅವರಿಂದ ತುಂಬಾ ಕಲಿತೆ.

ಹೇಗೆ ಒಬ್ಬ ಶಿಷ್ಯ ಗುರುವಿಗಾಗಿ ಹುಡುಕಾಡುತ್ತಾನೋ ಒಬ್ಬ ಗುರುವೂ ಕೂಡ ಒಬ್ಬ ಶಿಷ್ಯನಿಗಾಗಿ ಹುಡುಕುತ್ತಿರುತ್ತಾನೆ. ಅಂಥ ಗುರುವಿಗೆ ನೀವು ಶಿಷ್ಯರಾಗಿರಿ.

       -ನಿಮ್ಮವನು,  ಆರ್.ಬಿ.

Please follow and like us:

Leave a Reply