ಕನಸುಗಳನ್ನು ಕೊಡಲಾರೆ ಕೈತುತ್ತ ಕೊಡುವೆ

ಯಾರು ಬರೆದ ಕತೆಯೊ ಬಡತನವು ನನಗಾಗಿ ಬರೆದ ವ್ಯಥೆಯೋ ಎಂದು ಚಿಕ್ಕಚಿಕ್ಕದಕ್ಕೂ ದೂರುತ್ತಾ ಕೂರಗುತ್ತಿದ್ದೆ. ನಿಮ್ಮ ಮಾತು ಉತ್ತೇಜನದಿಂದ ನನ್ನ ಬದುಕು ಬದುಕಲಾರದಷ್ಟು ಬರಡಲ್ಲ ಎಂದು ತಿಳಿದುಕೊಂಡಿದ್ದೀನಿ. ಈಗ ಎಲ್ಲವೂ ಸುಂದರವಾಗಿ ಕಾಣಿಸುತ್ತದೆ. ಮನಸ್ಸು ಹಗುರಾಗಿ ಎಲ್ಲವನ್ನು ಪ್ರೀತಿಸುತ್ತೇನೆ. ಖುಷಿಯಿಂದಿದ್ದೇನೆ. ಹಗಲು ಇರುಳು ಯಾವುದರ ಅರಿವು ಇಲ್ಲ.

ನೀವಿರುವ ಧೈರ್ಯದಲ್ಲಿ ನಾಳೆಯ ಅಭದ್ರತೆಯಿಲ್ಲ. ಇನ್ಯಾವ ಆಸೆಗಳು ಉಳಿದಿಲ್ಲ. ಪ್ರೀತಿಗಾಗಿ ನಾ ಪಟ್ಟ ಪಾಡು ಒಂದು ಕವನವಲ್ಲ ಕಾವ್ಯವಾಗಬಹುದು. ಇನ್ನು ಮುಂದೆ ಜೀವನ ಇನ್ನು ನಿಮ್ಮ ಕೈಯಲ್ಲಿ. ಕಣ್ಣಿಗೂ ಕರುಳಿಗೂ ತಿಳಿದಿರುವ ಸಂಬಂಧ ನೀವೇ. ಈ ಜನುಮಕ್ಕಿಷ್ಟು ಸಾಕು. ಬರಿದೆ ಬರುವ ಹೋಗುವ ನಮಗೆ ಸಿಕ್ಕ ಆಸರೆಯಿದಲ್ಲವೇ. ನಮ್ಮ ಪ್ರೀತಿಯಲ್ಲಿ ಆಡಂಬರವನ್ನು ಹುಡುಕಬೇಡ.

ನಾನೊಬ್ಬಳು ಬಡಪಾಯಿ. ಕನಸುಗಳನ್ನು ಕೊಡಲಾರೆ. ಆದರೆ ಕೈತುತ್ತ ಕೊಡುವೆ. ನಿಮ್ಮ ತಾಯಿಯಷ್ಟೆ ಪ್ರೀತಿಸುವ ಹೆಣ್ಣು ಇದ್ದರೆ ಅದು ನಾನೆ. ಸರಸಿಜಾಕ್ಷನ ಆಣೆ ಇದು ನಿಜ. ನಿಮ್ಮ ಎದೆಯಲಿ ಕಣ್ತುಂಬ ನೆಮ್ಮದಿಯ ನಿದ್ರೆಯ ಬೇಡುವೆ. ನನ್ನರಮನೆಯ ಮಹಾರಾಜ ನೀವೆ. ಪ್ರೀತಿಯಲ್ಲಿ ನಿರಾಕರಣೆ ಇಲ್ಲ ಅಲಂಕಾರಿಕೆಯಿಲ್ಲ. ಯಾವ ಒಡವೆಯೂ ಬೇಡ. ನಗುವೊಂದು ಅರಳಿರಲಿ ಸದಾ. ಪ್ರೀತಿಯೊಂದು ಬಂಧನವಲ್ಲ. ನಿಮ್ಮ ಇಚ್ಛೆಯಂತೆ ಹಾರಾಡಿಕೊಂಡಿರಿ. ನಿಮ್ಮ ಮಗುವಿನಂತ ಮನಸ್ಸು, ಹೃದಯ ಎಲ್ಲಾ ಸದಾ ನನಗಾಗಿ ಮಿಡಿಯುತಿದೆ ಅನ್ನೋದು ನನಗೊತ್ತು. ನನ್ನ ತವರನ್ನೂ ಪ್ರೀತಿಸುವ ನಿಮ್ಮ ಗುಣ ನನಗಿಷ್ಟ. ನನ್ನಮ್ಮ ನಿಮ್ಮಂತ ಅಳಿಯ ಅಲ್ಲ, ಮಗನನ್ನು ಪಡೆಯಲು ಪುಣ್ಯವಂತರು.

ಉಸಿರಿರುವ ತನಕ ನಾವಿಬ್ಬರೂ ಜತೆಯಾಗಿರೋಣ. ಈ ಅಣಕಿಸುವ ಜಗತ್ತಿಗೆ ಮೈಯೊಡ್ಡಿ ನಿಲ್ಲಲು ದೈರ್ಯ ತುಂಬಿದ್ದು ನಿಮ್ಮ ಅಕ್ಕರೆಯೇ.

ತವರೂರ ನೆನಪೂ ಬಾರದಷ್ಟು ಒಲವು ತೋರುವ ನಿಮ್ಮ ಪ್ರೀತಿಯ ಉಡುಗೂರೆಯೊಂದೆ ನನ್ನ ಆಸರೆ. ನಾನು ನನ್ನ ದೇವರಲ್ಲಿ ಬೇಡುವುದಿಷ್ಟೇ. ನನಗೆ ಸುಖದ ಹಂಬಲು ಇಲ್ಲ. ಗಂಜಿಯಾದರೂ ಒಟ್ಟಿಗೆ ಸವಿದು ಬದುಕೋಣ. ನಿಮ್ಮೊಂದಿಗೆ ಯಾವ ಅಂಜಿಕೆಯಿಲ್ಲ ಆದರೂ ನಿಮ್ಮಿಂದ ತುಸು ದೂರವಾದರೂ ಎದೆಯ ತಲ್ಲಣ ಕೇಳುವರಿಲ್ಲ.

ತುಂಬಾ ಹೇಳಬೇಕು ಅನಿಸಿದರೂ ಕಣ್ಣ ತೆರೆದು ನಿಮ್ಮೊಂದಿಗೆ ನೇರಾ ಏನೂ ಹೇಳಲಾರೆ.

ಅಪ್ಪಿಕೊಂಡು ಅತ್ತುಬಿಡುವುದಷ್ಟೆ ನನಗೆ ಸಾಧ್ಯ. ತುಂಟ ಹುಡುಗಾಟಿಕೆ ನೂರು ವರುಷ ನಿಮ್ಮೊಂದಿಗೆ ಬಾಳಬೇಕು. ದಡ್ಡಿ ಎನ್ನಬೇಡಿ. ನಿಮ್ಮೊಂದಿಗಿನ ಕನಸು ನನಗೆ ಎಣೆ ಇಲ್ಲದಷ್ಟು.

Please follow and like us:

Leave a Reply