ಎಡ ಬಲಗಳ ನಡುವೆ ಒಬ್ಬರು ಶುದ್ಧ ಕತೆಗಾರ- ಖಾಸನೀಸ

ಮರೆಯಲಿ ಹ್ಯಾಂಗ

ಕಳೆದ ಶತಮಾನ ಕನ್ನಡ ಸಾಹಿತ್ಯದಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಮಹತ್ವದ ಘಟ್ಟ. ನವೋದಯದ ರಮ್ಯತೆ, ನವ್ಯದ ಉನ್ಮಾದ, ಪ್ರಗತಿಶೀಲ ಆಕಾಂಕ್ಷೆ ಮತ್ತು ಬಂಡಾಯದ ಬಿಸಿಗೆ ಅದು ಸಾಕ್ಷಿ. ಈ ಪ್ರಕಾರಗಳ ಮಧ್ಯೆಯೇ ಬೆಳೆದದ್ದು ಪಂಥೀಯ ಸಾಹಿತ್ಯ. ಬಹುಶಃ ನಮ್ಮಲ್ಲಿ ಹೆಚ್ಚಿನ ಸಾಹಿತಿಗಳು ಗುರುತಿಸಿಕೊಂಡಿದ್ದೂ ತಮ್ಮ ಪಂಥದ ಮೂಲಕವೇ. ಒಂದು ವಾದಕ್ಕೆ ಪ್ರತಿವಾದ, ಏಟಿಗೆ ಎದಿರೇಟು ಹಾಕುವ ಅಬ್ಬರದಲ್ಲಿ ಓದುಗ ವಲಯ ಮತ್ತು ವಿಮರ್ಶಕ ಜಗತ್ತಿನ ನಿರ್ಲಕ್ಷ್ಯಕ್ಕೆ  ಈಡಾದದ್ದು ಮಾತ್ರ ಶುದ್ಧ ಸಾಹಿತ್ಯ.

ಯಾವುದೇ ಸಿದ್ಧಾಂತಕ್ಕೆ ಜೋತುಬೀಳದ ಲೇಖಕರು ತಮ್ಮ ಇರುವನ್ನು ಖಚಿತಪಡಿಸುವುದು ಕಷ್ಟದ ಕೆಲಸ. ಅವರಲ್ಲಿ ತಮ್ಮದೇ ಆದ ಅಪ್ತವಲಯವೂ ಇರುವುದಿಲ್ಲವಾದ್ದರಿಂದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ.

ಅಂಥ ಬರಹಗಾರರಲ್ಲಿ ಕಾಣಸಿಗುವ ಹೆಸರೆಂದರೆ ರಾಘವೇಂದ್ರ ಖಾಸನೀಸರದ್ದು. ಸಾಹಿತ್ಯ ಜಗತ್ತಿನ ರಾಜಕೀಯ ಅವರನ್ನು ಹೆಚ್ಚಾಗಿ ಗಮನಕ್ಕೆ ತಾರದಂತೆ ಮಾಡಿದ್ದು ನಿಜ. ಆದರೆ ಅವರ ಕಥೆಗಳು ದೊಡ್ಡ ಸಂಖ್ಯೆಯಲ್ಲೇನೂ ಇಲ್ಲ ಅನ್ನುವುದು ಮತ್ತೊಂದು ಅಂಶ. ಹೇಳಿಕೇಳಿ ಅವರದು ಗ್ರಂಥಪಾಲನ ವೃತ್ತಿ. ಬೆಂಗಳೂರು ವಿವಿಯ ಪ್ರಧಾನ ಗ್ರಂಥಪಾಲಕರಾಗಿ ನೇಮಕಗೊಂಡ ಮೇಲೆ ಅಲ್ಲಿನ ಕೆಲಸಗಳು ಮತ್ತು ಜಾಗತಿಕ ಸಾಹಿತ್ಯದ ಅಪಾರ ಓದಿನಿಂದಾಗಿ ಹೆಚ್ಚಿನ ಕಥೆಗಳು ಅವರಿಂದ ಬರಲಿಲ್ಲವೆಂಬ ಮಾತೂ ಇದೆ.

ಆದರೆ ಬರೆದದ್ದಷ್ಟೂ ಅದ್ಭುತವಾಗಿರುವ ಕೆಲವೇ ಸಾಹಿತಿಗಳಲ್ಲಿ ಖಾಸನೀಸರು ಪ್ರಮುಖರು. ಅವರ ಕತೆಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಳ್ಳುತ್ತಿರಬೇಕಾದರೆ, ನಮ್ಮಲ್ಲಿ ಆ ಹೆಸರಿನ ಕತೆಗಾರರಿದ್ದಾರೆ ಎಂಬ ಸಂಗತಿಯೇ ಗೊತ್ತಿಲ್ಲದ ಸ್ಥಿತಿ ಇತ್ತು. ಆದರೆ ಕೆಲಮಟ್ಟಿಗೆ ಅವರನ್ನು ಚಾಲ್ತಿಯಲ್ಲಿಟ್ಟದ್ದು ಓದುಗ ವರ್ಗವೇ.

‘ತಬ್ಬಲಿಗಳು’ ಎಂಬ ಅವರ ಪ್ರಸಿದ್ಧ ಕತೆ Orphans ಅಂತ ಇಂಗ್ಲಿಷಿಗೆ ಅನುವಾದವಾಗಿದೆ. ಮಿಕ್ಕ ಕತೆಗಳೂ ಕನ್ನಡದ ದೀರ್ಘಾಯುಷ್ಯವಿರುವ ಕತೆಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಆ ಕತೆಗಳಲ್ಲಿ ಸೈದ್ಧಾಂತಿಕ ವಾದಗಳಿಲ್ಲ‌. ಯಾರೋ ಮತ್ತೊಬ್ಬ ಲೇಖಕನ ಪ್ರಭಾವವೂ ಇಲ್ಲ. ಅವುಗಳಲ್ಲಿ ಅಪ್ಪಟ ಜೀವನವಿದೆ. ಅದ್ಭುತವಾದ ಲಾಲಿತ್ಯವಿದೆ. ಕಲಾವಂತಿಕೆ ಇದೆ.

ಉಳಿದಂತೆ ಗ್ರಂಥಾಲಯ ಪಾಲನೆಗೆ ಸಂಬಂಧಿಸಿದ ಒಂದಷ್ಟು ಬರಹಗಳು ಅವರಿಂದ ಪ್ರಕಟಗೊಂಡವು. ಬಂಗಾಳಿ ಭಾಷೆಯ ಪರಿಚಯ ಇದ್ದಕಾರಣ ಅಲ್ಲಿನ ಕೆಲವು ಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಪಂಥೀಯ ಸಾಹಿತ್ಯದ ಭರಾಟೆ ಮುಗಿದ ಮೇಲೆ ಖಾಸನೀಸರಂಥ ಲೇಖಕರ ರಚನೆಗಳನ್ನು ಗಮನಿಸುತ್ತಿರುವ ಸಣ್ಣ ಸೂಚನೆ ಈಗಿನ ಸಾಹಿತ್ಯ ಪರಿಸರದಲ್ಲಿ ಶುರುವಾಗಿದೆ : ಸಂತೋಷದ ವಿಷಯವೇ ಅದು.

ಅವರಾಗ ಹಾಗಿದ್ದರು, ನಾವೀಗ ಹೀಗಿದ್ದೇವೆ‌.

 

ಸೂರಜ್ ನಾರಾಯಣ

Please follow and like us: