ಇವಕ್ಕೆಲ್ಲಾ ಮಿನಿಮಮ್ ಮ್ಯಾನರ್ಸ್ ಬೇಕು!

 

ಆಫೀಸಿಗೆ ಬರ್ತೀರ. ಹೆಡ್ ಫೋನ್ ವರ್ಕ್ ಆಗ್ತಿಲ್ಲ ಅಂತ ಇನ್ನಾರದ್ದೋ ಹೆಡ್ ಫೋನ್ ಹೇಳ್ದೆ ಕೇಳ್ದೆ ಎತ್ಕೊಂಡು ಹೋಗಿ ಕಿವಿಗಾಕೊಳ್ಳೋದು. ಯಾರದ್ದೋ ಪೆನ್, ಯಾರದ್ದೋ ಪೇಪರ್, ಯಾರೋ ತಂದಿಟ್ಟ ನೀರನ್ನ ಗಟಗಟ ಕುಡಿದುಬಿಡೋದು. ಊಟದ ಬಾಕ್ಸ್ ಕಂಡ  ತಕ್ಷಣ ಗಬಕ್ ಅಂತ ಕೈ ಹಾಕಿ ತಿಂದುಬಿಡೋದು. ಸ್ವೀಟ್ ತಗೊಳಿ ಅಂದಾಕ್ಷಣ ಕೈ ತುಂಬಾ ತಗೊಂಡುಬಿಡೋದು; ಇವೆಲ್ಲಾ ಶುದ್ಧ ನಾನ್ಸೆನ್ಸ್. ಮಿನಿಮಮ್ ಮ್ಯಾನರ್ಸ್ ಇಲ್ದೆ ಇರೋರು ಮಾಡುವಂಥ ಕೆಲ್ಸಗಳು.

ನಮಗೆ ನೀರಡಿಕೆ ಆದಹಾಗೆ ಇನ್ನೊಬ್ಬರಿಗೂ ನೀರಡಿಕೆ ಆಗುತ್ತೆ. ನಮಗೆ ಹಸಿವಾದ ಹಾಗೆ ಇನ್ನೊಬ್ಬರಿಗೂ ಹಸಿವಾಗುತ್ತೆ. ನಮಗೆ ಅವಶ್ಯಕತೆ ಇರೋ ವಸ್ತುಗಳು ಇತರರಿಗೂ ಅವಶ್ಯವಾಗಿರುತ್ತೆ. ಹಾಗಾಗಿಯೇ ಅವ್ರು ಅವರಿಗೆ ಬೇಕಾದ್ದನ್ನ ತಂದಿಟ್ಟುಕೊಂಡಿರ್ತಾರೆ. ಜೋಪಾನ ಮಾಡಿರ್ತಾರೆ ಅನ್ನೋ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಯಾರದ್ದೋ ಮನೆಯಲ್ಲಿ ಒಂದು ಅಪರೂಪದ ವಸ್ತು ನೋಡಿದ ತಕ್ಷಣ ‘ನಂಗಿಷ್ಟ ಆಯ್ತು. ಇದನ್ನ ನಾನು ತಗೊಂಡೋಗ್ಲಾ?’ ಅಂತ ಎತ್ಕೊಂಡು ಬಂದುಬಿಡಬಾರ್ದು. ಅದನ್ನ ನಿಮಗಿಂತ ಮೊದಲು ಇಷ್ಟ ಪಟ್ಟಿದ್ದು ಅವ್ರು. ಅದು ಅವರ ವಸ್ತು ನೆನಪಿರಲಿ.

ಕೆಲವು ಡಿಸಿಪ್ಲೀನ್ನ ಫಾಲೋ ಮಾಡಿದ್ರೆ ಒಳ್ಳೇದು. ಆಫೀಸಿಗೆ ಬಂದ ತಕ್ಷಣ ನಿಮ್ಮ ಟೇಬಲ್ ಸ್ವಚ್ಚವಾಗಿದೆಯಾ ನೋಡ್ಕೊಳಿ. ಹೆಡ್ ಫೋನ್ ವರ್ಕ್ ಆಗ್ತಿಲ್ಲ ಅಂದ್ರೆ ಸಂಬಂಧಪಟ್ಟ ಇಲಾಖೆಗೆ ತಿಳಿಸಿ. ಟೇಬಲ್ ಮೇಲೆ ಪೆನ್ನು, ಪೇಪರ್ ಇದೆಯಾ ನೋಡ್ಕೊಳಿ. ಜೊತೆಗೆ ನೀರು. ಆರೋಗ್ಯಕ್ಕೆ ಒಳ್ಳೇದು. ಹಾಗೆ ನಿಮ್ಮದೇ ಆದ ಊಟದ ಬಾಕ್ಸ್ ತಗೊಂಡು ಹೋಗಿ ಎಲ್ರ ಜೊತೆ ತಿನ್ನಿ. ಎಷ್ಟೇ ಆತ್ಮೀಯರಾಗಿದ್ರೂ ಇತರರ ಊಟ ತಿಂದು ಅವರ ಹೊಟ್ಟೆಮೇಲೆ ಹೊಡಿಬೇಡಿ. ನೀವು ತಿಂದ ಮೇಲೆ ಅವರು ಉಪವಾಸ ಇರ್ಬೇಕಾ?

ಮನುಷ್ಯ ಸಹಜವಾದ ಕೆಲವು ಆಸೆಗಳಿರುತ್ತವೆ. ಅವು ನಮ್ಮ ಸೋಮಾರಿತನದ, ಉಡಾಫೆಯ ಮೇಲೆ ಹುಟ್ಟಿದ ಆಸೆಗಳಾಗಿರಬಾರದು.

ಅವು ಇನ್ನೊಬ್ಬರಿಗೆ ನೋವು ನೀಡುತ್ತವೆ.

ಹೌದು ತಾನೆ.

Please follow and like us: