ಆ್ಯಂಟಿಯರ ಇಂಥ ಮಾತಿಗೆಲ್ಲಾ ತಲೆಕೆಡಿಸಿಕೊಳ್ಳಬೇಡಿ!  

ಇದನ್ನೊಂದು ಖಯಾಲಿ ಅಂತೀರೋ ಏನೋ! ಪರಿಚಿತರಾಗಿರುವ ಆ್ಯಂಟಿಯರು ಮನೆಗೆ ಬಂದರೆ, ರಸ್ತೆಯಲ್ಲಿ ಹೋಗುವಾಗ ಬರುವಾಗ ಸಿಕ್ಕಿದ್ರೆ, ನೆಂಟರಿಷ್ಟರು ಮನೆಗೆ ಬಂದ್ರೆ ಏನಮ್ಮಾ ಚೆನ್ನಾಗಿದ್ದೀಯ ಅಂತ ಮಾತಾಡಿಸ್ತಾರೆ. ಸಂತೋಷ ಅಲ್ವ. ಯೋಗಕ್ಷೇಮ ವಿಚಾರಿಸ್ತಾರೆ. ಇನ್ನೂ ಸಂತೋಷಾನೆ. ಆದ್ರೆ ಇಷ್ಟು ಕೇಳಿ ಅವರು ಮುಂದಕ್ಕೆ ಹೋಗಲ್ಲ. ಪ್ರಶ್ನೆಗಳೆಂಬ ಅಸ್ತ್ರಗಳನ್ನ ಎಸೆದೇ ಹೋಗೋದು. ಅವು most irritating ಪ್ರಶ್ನೆಗಳು.

ಆ ಪ್ರಶ್ನೆಗಳನ್ನ ಕೇಳಿಸಿಕೊಂಡ ಹುಡುಗಿಯರಂತೂ ರವರವ ಉರಿದುಹೋಗುತ್ತಾರೆ. ಯಾಕೆಂದ್ರೆ ಆ ಪ್ರಶ್ನೆಗಳ ಹಿಂದೆ ಒಂದು ಕುಹಕ ಇರುತ್ತೆ. ಕಾಲೆಳೆಯುವ ತಂತ್ರ ಇರುತ್ತೆ. ಹೀಯಾಳಿಸುವ ಉದ್ದೇಶ ಇರುತ್ತೆ. ಅಫ್ ಕೋರ್ಸ್ ಅಲ್ಲಲ್ಲಿ ಅನುಕಂಪವೂ ಇರುತ್ತೆ.

ಪ್ರಶ್ನೆಗಳು ಹೇಗಿರುತ್ತವೆ ನೋಡಿ.

-ಏನಮ್ಮಾ ಇತ್ತೀಚೆಗೆ ಇಷ್ಟು ಸಣ್ಣಗಾಗಿಬಿಟ್ಟಿದ್ದೀಯಾ? ಸರಿಯಾಗಿ ತಿಂತಾ ಇಲ್ಲ ಅನಿಸುತ್ತೆ! ನೋಡು ಮೂಳೆ ಚಕ್ಕಳಾ ಹಾಗಿಬಿಟ್ಟಿದ್ದೀಯಾ!? ಸರಿಯಾಗಿ ತಿನ್ನಮ್ಮ!

-ಏನೇ ಇಷ್ಟು ದಪ್ಪ ಆಗಿಬಿಟ್ಟಿದ್ದೀಯಾ? ಒಳ್ಳೇ ನಾಯಿಗೆ ಹೊಡೆಯೋ ಕೋಲಿದ್ದ ಹಾಗಿದ್ದೆ! ಹೀಗೇನೆ ಇಷ್ಟು ದಪ್ಪ! ಚೆನ್ನಾಗಿ ತಿಂತಾ ಇದೀಯ ಅನಿಸುತ್ತೆ. ಸ್ವಲ್ಪ ಕಡಿಮೆ ಮಾಡು.

– ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದೆ ಅಲ್ವ. ಎಷ್ಟು ಬಂತೆ ಮಾರ್ಕ್ಸು? ಸರಿಯಾಗಿ ಓದಲ್ಲ ನೀನು ಅಂತ ಬೇರೆ ಅಕ್ಕಪಕ್ಕದವರು  ಹೇಳ್ತಿದ್ರು. ನಮ್ಮ ಮಕ್ಕಳಷ್ಟು ಬಂದಿರಲ್ಲ ಬಿಡು. ದೊಡ್ಡವನದ್ದು  95 ಪರ್ಸೆಂಟ್ ಬಂದಿತ್ತು. ಈ ಸಲ ಚಿಕ್ಕವಳದ್ದು 94.5 ಪರ್ಸೆಂಟ್ ಗೊತ್ತಾ?

ಓದೋದು ಅಂದ್ರೆ ಎಲ್ಲರಿಗೂ ಆಗ್ಬುಡುತ್ತಾ ತಗಳಮ್ಮ!?

-ಯಾವಾಗಮ್ಮಾ ಮದುವೆ? ಎಷ್ಟು ವಯಸ್ಸು? ಇಪ್ಪತ್ತೆರಡು ಆಯ್ತಲ್ವ? ಯಾವುದೋ ಒಂದು ನೋಡಿ ಮದುವೆ ಮಾಡಾಕೆ ನಿಮ್ಮಪ್ಪ ಅಮ್ಮಂಗೆ ಏನು ದಾಡಿ. ಕಾಲ ಬೇರೆ ಸರಿಯಿಲ್ಲ. ನಮ್ಮ ಪಕ್ಕದ್ಮೇನಲಿದ್ದಳಲ್ಲ ಆ ಹುಡುಗಿ ಅವಳು ಯಾವನ್ ಜೊತೆಯೋ ಓಡಿ ಹೋದ್ಲಂತೆ. ಅವರಪ್ಪನೂ ನಿನ್ನಂಗೆ ಮುದ್ದು ಮಾಡಿ ಮಾಡಿ ಮಗಳನ್ನ ಸಾಕಿದ್ದ.

-ಇನ್ನೂ ಮಕ್ಕಳಾಗಿಲ್ವೇನೆ? ನಾಲ್ಕು ವರ್ಷ ಆಯ್ತಲ್ವ ಮದ್ವೆ ಆಗಿ. ಬಿರಬಿರನೆ ಗಂಡೋ ಹೆಣ್ಣೋ ಒಂದು ಮಾಡ್ಕಳಕಿಲ್ವಾ? ಯಾವುದಕ್ಕೂ ಒಂದ್ಸಲ ಚೆಕ್ ಮಾಡುಸ್ಕಾ ಬಾರದಾ? ಆಗುತ್ತೆ ಬಿಡು ಬಿಡು ಅಂತಿದ್ದ ನಮ್ಮ ಆಚೆ ಮನೆ ಹುಡುಗಿಗೆ ಎಂಟು ವರ್ಷ ಆದ್ರೂ ಹೊಟ್ಟೇಲಿ ಒಂದು ಹುಳ ಹುಟ್ಟಲಿಲ್ಲ.

-ಇದೇನೆ ಈ ಥರ ಬಟ್ಟೆ ಹಾಕಂಡಿದ್ದೀಯಾ? ಥೋ ಸ್ವಲ್ಪಾನೂ ಚೆನ್ನಾಗಿ ಕಾಣಿಸ್ತಿಲ್ಲ ನಿಂಗೆ. ಎಲ್ಲಿ ತಗಂಡಿದ್ದು. ನಮ್ಮನೆ ಹತ್ರ ಇದೆಯಲ್ಲಾ ಆ ಬಜಾರ್ ನಲ್ಲ?!  ನನ್ನ ಮಗಳ ಬರ್ತ್ ಡೇಗೆ ಅವರಪ್ಪ ಐದು ಸಾವಿರ ರೂಪಾಯಿ ಕೊಟ್ಟು ಒಂದು ಡ್ರೆಸ್ ತಂದವ್ನೆ. ಎಷ್ಟು ಚೆನ್ನಾಗಿದೆ ಅಂತೀಯಾ?

ಪಾಪ ನಿನಗೆ ಅಷ್ಟೆಲ್ಲಾ ಕೊಟ್ಟು ಎಲ್ಲಿ ತಗೊಳಕಾಗುತ್ತೆ ಬಿಡು.

-ಏನೇ ಕೆಲಸಕ್ಕೋಗ್ತಿದೆಯಾ? ಎಷ್ಟು ಕೊಡ್ತಾರೆ ಸಂಬಳ? ಐದೋ ಹತ್ತೋ ಕೊಡ್ತಾರೆ ಅಷ್ಟೆ ಅನಿಸುತ್ತೆ ಅಲ್ವ. ನೀನೇನು ಜಾಸ್ತಿ ಓದಿಲ್ವಲ್ಲ. ನನ್ನ ಮಗಳು ಅದೆಂಥದೋ ಸಾಫ್ಟ್ ವೇರ್ ಇಂಜಿನಿಯರ್ ಅಂತೆ. ಸೇರಿ ಒಂದು ತಿಂಗಳಾಗಿಲ್ಲ. ಇಪ್ಪತ್ತೈದು ಸಾವಿರ ಗೊತ್ತಾ?

-ಫೇಸ್ ಬುಕ್ ನಲ್ಲಿ ಅದೇನೆ ಅಂಥ ಫೋಟೋ ಹಾಕ್ತೀಯ! ಹಂಗೆಲ್ಲಾ ಹಾಕಬೇಡ ಕಣಮ್ಮಾ. ಜನ ಸರಿ ಇಲ್ಲ. ಮಿಸ್ ಯೂಸ್ ಮಾಡ್ಕೊತಾರೆ. ಮೂಲೆ ಮನೆ ಹುಡುಗಿ ಹಂಗೆ ಫೇಸ್ ಬುಕ್ ನಲ್ಲೇ ಯಾರಿಗೋ ಒಬ್ಬನಿಗೆ ಪರಿಚಯವಾಗಿ ಅವನ ಜೊತೆ ಓಡೋದ್ಲಲ್ಲಾ?

ಯಾವುದಕ್ಕೂ ಹುಷಾರು ಕಣೆ ಜನ ಸರಿ ಇಲ್ಲ.

      ಪೂರ್ವಿ

Please follow and like us: