ಆಸೆ

ತನ್ನ ಊಹೆ ನಿಜವಾಗಿದೆ ಎನ್ನಿಸಿದ್ದೇ ತಡ ಇನ್ನು ­­ಇಂಥಾ ಅವಕಾಶ ಬಿಡಬಾರದು ಎನ್ನಿಸಿ ಕೂಡಲೇ ಲಕ್ಷ್ಮಿಯ ಸೆರಗನ್ನು ಸೊಂಟದ ಆಚೆಗೆ ಬರುವಂತೆ ಜೋರಾಗಿ ಎಳೆದು ಬಿಟ್ಟಳು. ಗಾಳಿ ಪಟದಂತೆ ಮೇಲೆ ಹಾರಿದ ಬಣ್ಣಗೆಟ್ಟ ಅವಳ ಸೆರಗು ಆ ಶಾಂಡಿಲೀಯರ್ ಬೆಳಕಿನಲ್ಲಿ ಮಾಸಿದ ನಾರು ಮಡಿಯಂತೆ ಕಾಣಿಸುತ್ತಿತ್ತು.

…………………………..

ಸಡಗರ ಎದುರುಗಡೆಯ ಆ ದೊಡ್ಡ ಮನೆಯಲ್ಲಿದ್ದರೂ, ಪ್ರತಿಫಲನ ಮಾತ್ರ ಆ ಸಣ್ಣ ಮನೆಯ ಹುಡುಗಿ ಜ್ಯೋತಿಯ ಬತ್ತಿದ ಕಣ್ಣಲ್ಲಿ ಎದ್ದು ಕಾಣುತ್ತಿತ್ತು. ಆಗೀಗ ಸಿಕ್ಕು ಜೊತೇಲಿ ಆಟ ಆಡುವ ಸ್ನೇಹಿತೆ ಡಾಲಿ, ದೊಡ್ಡ ಮನೆಯಿಂದ ಹೊರ ಬರುತ್ತಲೇ ಅವಳ ಕೈ ಹಿಡಿದು ಆಸೆಯಿಂದ,

“ಏನಿವತ್ತು ಹಬ್ಬನಾ?” ಎಂದು ಕಣ್ಣರಳಿಸಿ ಕೇಳಿದಳು.

“ಇವತ್ತಾ…..ಇವತ್ತು ನನ್ನ ಹುಟ್ದಬ್ಬ!!”ಎಂದು ರಾಗವಾಗಿ ಹೇಳಿದ ಡಾಲಿ ಬಣ್ಣದ ಫ್ರಾಕು ತೀಡಿಕೊಳ್ಳುತ್ತಿದ್ದರೆ,

ಜ್ಯೋತಿ ಬಿಟ್ಟಗಣ್ಣು ಬಿಟ್ಟು ಅವಳನ್ನು ಅವಳ ಬಣ್ಣದ ಫ್ರಾಕಿನ ನೆರಿಗೆಗಳನ್ನೇ ನೋಡುತ್ತಿದ್ದವಳು, ಏನೋ ನೆನಪಾಗಿ ಗುಡಿಸಲಿಗೆ ಓಡಿದಳು.

ದೊಡ್ಡವರ ಮನೆಯ ಸಡಗರಕ್ಕೆ ಕೆಲಸದವರಿಲ್ಲದೆ ನಡೆಯುವುದಾದರೂ ಹೇಗೆ? ಆ ಜ್ಯೋತಿಯ ಅಮ್ಮ ಲಕ್ಷ್ಮಿನೇ ಕೆಲಸಕ್ಕೆ ಹೋಗಬೇಕು. ಆಕೆ ಹೊರಬರುತ್ತಿದಂತೆ, ಆಕೆಯ ಸೆರಗನ್ನು ಹಿಡಿದು,

“ಅಮ್ಮಾ, ನೀನು ಯಾವಾಗ್ಲೂ ಏಳ್ತಿದ್ದೆ ನಾನು ಡಾಲಿ ಹುಟ್ಟಿದ್ದು ಒಂದೇ ದಿನಾ ಅಂತಾ? ಮತ್ತೆ ನಂಗ್ಯಾಕೆ ಹಬ್ಬಯಿಲ್ಲ?” ಕಣ್ಣಲ್ಲಿ ಅಮೋದವೂ, ಆತಂಕವೂ ಅದಕ್ಕೂ ಮೀರಿದ ನಿರಾಸೆಯೂ ಏಕಕಾಲಕ್ಕೆ ಗೂಡು ಕಟ್ಟಿದ್ದವು.

“ಹೂ..ಮಗ ನೆಪ್ಪೆ ಇರ್ಲಿಲ್ಲ. ನಂಗೂ ಈಗ್ಲೇ ನೆಪ್ಪ್ ಬಂದಿದ್ದು ನೋಡು. ಈ ದಿನಾ ತಾರೀಕೂ…ಅಬ್ಬ… ಒಂದೂ ನಂಗೆ ಗೊತ್ತಾಗಕಿಲ್ಲ”

“ಮತ್ತೆ ನಂಗೂ ಹೊಸ ಬಟ್ಟೆ, ಕೇಕು ತತ್ತೀಯ?”ಆಸೆ ಕಂಗಳಲ್ಲಿ ಅನುಮಾನದ ಕಂಬನಿ ಮೋಡ ಕಟ್ಟಿತ್ತು.

ಮಗಳ ಈ ಸಣ್ಣ ಆಸೆಯನ್ನೂ ನೆರೆವೇರಿಸಲಾಗದ ತನ್ನ ಸ್ಥಿತಿಗೆ ಮನದಲ್ಲೇ ಒದ್ದಾಡುತ್ತಾ, ಅದನ್ನು ಹೊರಗೆ ತೋರ್ಪಡಿಸದೆ,

“ಹೂ, ನಿಂಗೆ ನಾನು ರಾತ್ರಿ ಬತ್ತ ಚಾಕಲೇಟ್ ತರ್ಲ?”ಇಡೀ ಆಕಾಶದ ನಕ್ಷತ್ರಗಳನ್ನೆಲ್ಲಾ ಒಟ್ಟು ಮಾಡಿ ತಂದು ಬೊಗಸೆಯಲ್ಲಿ ತುಂಬುವ ಆ ಧ್ವನಿಯ ಕೇಳಿದ ತಕ್ಷಣವೇ ತುಣುಕುತ್ತಿದ್ದ ಕಂಬನಿಯನ್ನು ಎರಡೂ ಕೈಯಲ್ಲಿ ಒರಿಸಿಕೊಳ್ಳುತ್ತಾ ಜ್ಯೋತಿ,

“ಹಾ…….?” ಎಂದು ಚಪ್ಪಾಳೆ ಹಾಕಿ ಕುಣಿಯುತ್ತಿದ್ದರೆ, ಅಮ್ಮ ಸೆರಗಂಚಿನಿಂದ ಕಣ್ಣೊರೆಸಿಕೊಳ್ಳುತ್ತಿದ್ದಳು. ಎಂಥದ್ದೇ ಸ್ಥಿತಿಯಲ್ಲೂ ಪ್ರತಿ ಮಗುವಿಗೂ ತನ್ನ ತಾಯಿ ತನ್ನೆಲ್ಲಾ ಆಸೆಗಳನ್ನು ಪೂರೈಸುವ ಕಾಮಧೇನುವೆ.

“ನೀನು ಡಾಲಿ ಮನೆಯಿಂದ ಬರೋದು ಲೇಟಾಗುತ್ತೇನೋ, ಮತ್ತೆ ಚಾಕ್ಲೆಟ್ ಯಾವಾಗ್ ತರ್ತೀಯ?”

“ಮೂಲೆ ಅಂಗಡಿ ಚಾಚಾ ಬಾಗ್ಲು ಹಾಕೊದ್ರೊಳ್ಗಾ ಬಂದು ತಂದು ಕೊಡ್ತೀನಿ!” ಹೇಗೂ ಇಂದು ಹೆಚ್ಚಿಗೆ ಕೆಲಸ ಮಾಡಿಸಿಕೊಳ್ಳೋದರಿಂದ ಒಂದಿಷ್ಟು ದುಡ್ಡು ಕೈಗೆ ಸಿಗಬಹುದು ಎನ್ನುವ ಆತ್ಮವಿಶ್ವಾಸದಿಂದ ನುಡಿದಿದ್ದಳು.

ಅಮ್ಮ ಎದುರಿನ ಮನೆಯ ಸಂಭ್ರಮದೊಳಗೆ ಕಳೆದು ಹೋದರೆ, ಹುಡುಗಿ ಸಣ್ಣ ಮನೆಯ ಕಿಟಕಿಗೆ ಆತುಕೊಂಡಳು. ಕಣ್ಣುಗಳು ಆಗ್ಗಾಗ್ಗೆ ಚಾಚಾನ ಅಂಗಡಿ ನೋಡುತ್ತಿದ್ದವು.

ಇತ್ತ ದೊಡ್ಡ ಮನೆಯಲ್ಲಿ ಒಂದು ಅಡಿ ಎತ್ತರದ ಬಾರ್ಬಿ ಡಾಲ್ ಕೇಕ್ ನೋಡುತ್ತಾ, ಅದು ಆಟ ಆಡೋಕ್ಕಾ…ತಿನ್ನೋಕ್ಕಾ ಎಂದು ಯೋಚಿಸುತ್ತಾ ಕಣ್ಣು ಪಿಳಿ ಪಿಳಿ ಬಿಟ್ಟ ಲಕ್ಷ್ಮಿಯನ್ನು ನೋಡಿ,

“ಅದು ಕೇಕ್ ಆಂಟಿ.” ಎಂದು ಡಾಲಿ ನುಡಿದಳು.

ಬರ್ತ್ಡೇ ಪಾರ್ಟಿಯಲ್ಲಿ ಕೇಕ್ ಕಟ್ ಮಾಡಿ, ಮೋಜು ಮಸ್ತಿ ಜೋರಾಗಿ ಲಕ್ಷ್ಮಿಗೆ ಒಂದು ನಿಮಿಷವೂ ಬಿಡುವಿಲ್ಲದಂತೆ ಕೆಲಸವಾಯ್ತು. ಅದರ ನಡುವೆಯೇ,

ಡಾಲಿ ಹಾಕಿದ ಪಿಂಕ್ ಕಲರ್ ಡ್ರೆಸ್ ನೋಡಿ, ನನ್ನ ಮಗಳಿಗೂ ಒಂದು ಇಂತಹ ಡ್ರೆಸ್ ಇದ್ದಿದ್ರೆ ಎಂದು ವಿಚಾರಿಸಿದರೆ,ಐದು ಸಾವಿರ! ತನ್ನೆಲ್ಲಾ ಬೆರಳು ಮಡಚಿ ಲೆಕ್ಕ ಹಾಕಿದಳು. ತನ್ನ ತಿಂಗಳ ಒಟ್ಟೂ ಕೂಲಿ!ಇನ್ನು ಅವಳ ಕೊರಳ ಚಿನ್ನದ ಸರವೋ, ತಾನು ತನ್ನ ಮಗಳು ಈ ಜನ್ಮದಲ್ಲಿ ಅದನ್ನು ನೋಡಲಾರೆವು ಎಂದು ಮನಸ್ಸಲ್ಲೇ ಲೆಕ್ಕ ಹಾಕಿದಳು.

ಇಂಥದೆಲ್ಲಾ ನಮ್ಮಂಥವರಿಗಲ್ಲ, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂದು ಆಕೆ ಅರಿತಿದ್ದರೂ, ತಾಯಿ ಹೃದಯ!! ಮಮತೆಗೆಲ್ಲಿಯ ಬಡತನ? ತಾಯಿ ಹೃದಯಕ್ಕೆ ಹಣದ ಭಾಷೆ ಎಂದೂ ತಿಳಿಯದು. ಆಸೆ ತಡೆಯದೆ ಸುಮ್ಮನೆ ಒಮ್ಮೆ ಡಾಲಿಯ ಕೊರಳು ತಡವಿ ನೋಡಿದ್ದಳು ಲಕ್ಷ್ಮಿ. ಸಮಯ ಹುಟ್ಟು ಹಬ್ಬದ ನೆಪದಲ್ಲಿ ಬೆರಳ ಸಂದಿನ ಮರಳಿನಂತೆ ಕಳೆಯುತ್ತಿತ್ತು. ಕತ್ತಲು ಅಡರತೊಡಗಿತು.

ಹೊರಗೆ ಕಿಟಕಿಗೆ ಆತುಕೊಂಡಿದ್ದ ಹುಡುಗಿ ಚಾಕೊಲೇಟ್ ಜೊತೆ ಬರುವ ಅಮ್ಮನಿಗಾಗಿ ಕಾಯುತ್ತಾ, ಒಂದು ಕಣ್ಣು ದೊಡ್ಡ ಮನೆಯ ಮೇಲೆ ಮತ್ತೊಂದು ಕಣ್ಣು ಅಂಗಡಿಯ ಮೇಲಿದ್ದರೆ. ಅವಳ ಕಿವಿ, ಎರಡು ಶಬ್ದಗಳಿಗೆ ಆತೊರೆಯುತ್ತಿದ್ದವು. ಒಂದು ದೊಡ್ಡ ಮನೆಯ ಹಿತ್ತಲಿನಿಂದ ಆಚೆಗೆ ಕೆಲಸದವರಿಗಾಗಿ ಇದ್ದ ಗೇಟ್ ತೆರೆಯೋ ಶಬ್ದ ಇನ್ನೊಂದು ಮೂಲೆ ಅಂಗಡಿ ಚಾಚಾ ಶೆಟರ್ ಎಳಿಯೋ ಶಬ್ದ!

ದೊಡ್ಡ ಮನೆಯ ಗೌಜು ಬಿಟ್ಟರೆ ಏನೂ ಕೇಳಿಸುತ್ತಿಲ್ಲ. ಹೊಟ್ಟೆ ತುಂಬಿದವರ ಸಮಾರಂಭ! ಅರೆಬರೆ ತಿಂದು ಬಿಟ್ಟ, ಬಂದಿದ್ದಕ್ಕೆ ಚೂರೇ ತಿನ್ನುವ ಅನಗತ್ಯ ಬಿಗುಮಾನಗಳ ಫಲವಾಗಿ ಸಿಂಕ್ ಪಕ್ಕದ ಬಕೇಟಿನಲ್ಲಿ, ಪೇಪರ್ ಪ್ಲೇಟ್ ಜೊತೆಗೆ ಸಮೋಸ, ಕೇಕುಗಳೂ ಜಮೆಯಾಗತೊಡಗಿದ್ದವು. ಅದರ ಜೊತೆಗೆ ಲಕ್ಷ್ಮಿಯ ಕೆಲಸವೂ ಬೆಟ್ಟವಾಗತೊಡಗಿದೆ. ಆದಷ್ಟೂ ಬೇಗ ಬೇಗ ಕೆಲಸ ಮುಗಿಸಿ, ಒಂದಿಷ್ಟು ಜನ ಖಾಲಿಯಾಗುತ್ತಿದಂತೆ,

“ಅಕ್ಕ ನಾನು ಬತೀನಿ…….”  ಡಾಲಿಯ ಅಮ್ಮನಿಗೆ ಹೇಳುತ್ತಾ ಎದ್ದು ನಿಂತ ಅವಳನ್ನು, ಆಕೆ ಮಾತ್ರ,

“ಇರು, ಇರು….ಅದ್ದನ್ನು ಎತ್ತು…ಇದನ್ನು ಒರೆಸು….” ಅಂತ ಎಲ್ಲಾ ಕೆಲಸ ಮುಗಿಸಿಕೊಳ್ಳುವ ಅವಸರದಲ್ಲಿದ್ದಳು. ಇವಳಿಗೋ ಹೊರಡುವ ಅವಸರ.

ಇದ್ದಕ್ಕಿದಂತೆ ಹಾಲ್ ನಲ್ಲಿ ಗಲಿಬಿಲಿಯಾಯಿತು. “ಅಲ್ಲಿ ನೋಡು…ಇಲ್ಲಿ ಹುಡುಕು.” ಎನ್ನುವ ಮಾತುಗಳು ಕೇಳ ತೊಡಗಿದವು. ವಿಷಯ……..ಡಾಲಿ ಕೊರಳಲ್ಲಿದ್ದ ಸರ ಕಾಣೆಯಾಗಿತ್ತು! ಹಬ್ಬದ ಕೊನೆಯ ಕಂತಿನಲ್ಲಿದ್ದ ಜನಕ್ಕೆ ಉದ್ವೇಗದ ರಂಗಿನ ಜೊತೆಗೆ ಈ ಹೊಸ ತಿರುವು ರೋಚಕತೆ ಉಂಟು ಮಾಡಿ ಬಿಟ್ಟಿ ಮನೋರಂಜನೆಯನ್ನು ಕೊಡುತ್ತಿದ್ದರೆ,ಮನೆಯ ಜನಕ್ಕೆ ಒಮ್ಮೆ ಆತಂಕ, ಕೋಪ ಏಕಕಾಲಕ್ಕೆ ಉದ್ಭವಿಸಿದವು. ಇದಾವುದೂ ಅರಿಯದ, ಆಸಕ್ತಿಯೂ ಇರದ ಲಕ್ಷ್ಮಿ,

“ಅಕ್ಕಾ…ನಾನು ಹೊರಡ್ತೀನಿ.”ಎಂದು ಆಗಾಗ್ಗೆ ಎನ್ನುವುದ ಕೇಳಿ, ಎಲ್ಲರಿಗೂ ಇವಳಿಗ್ಯಾಕೆ ಇಷ್ಟು ಆತುರ? ಎನಿಸಿತು. ಡಾಲಿ ಯ ಅಮ್ಮ ಅತೀ ಸಾದಾರಣ ಮಹಿಳೆಯರಂತೆ ಸಹಜವಾಗಿ ಮೊದಲ ಸಂಶಯ ಬರುವುದೇ ಕೆಳವರ್ಗದ ಮೇಲೆ ಎನ್ನುವುದಕ್ಕೆ ತಾನು ಮತ್ತೊಂದು ಸಾಕ್ಷಿಯಾಗುತ್ತಾ… ನೇರ ಅವಳ ಬಳಿ ಬಂದು,

“ನೀನು ಇವತ್ತು ಸರ ಮುಟ್ಟಿ ನೋಡ್ತಾಯಿದ್ದೆ ಅಲ್ವಾ…ಆಚೀಚೆ ಏನಾರ ಆಯ್ತಾ…?” ಎಂದು ಬಿಟ್ಟಳು.

ಎಲ್ಲರಿಗೂ ಒಮ್ಮೆಲೇ ನಿರಾಳ. ಕುರಿ ಸಿಕ್ಕಿತು. ಅದೇನು ತಿಂದಿದೆ, ಬಿಟ್ಟಿದೆ, ಉಪವಾಸ ಇದೆ, ಇತ್ಯಾದಿ ಮುಖ್ಯವಲ್ಲ. ಜನಕ್ಕೆ ಬಲಿಗೆ ಕುರಿ ಬೇಕಿತ್ತು ಅಷ್ಟೇ. ಅಚಾನಕ್ಕಾಗಿ ತನ್ನ ಮೇಲೆ ಎರುಗಿದ ಆ ಪ್ರಶ್ನೆಗೆ ಒದ್ದೆ ಮುದ್ದೆಯಾದ ಲಕ್ಷ್ಮಿ , ಕೇವಲ ‘ಇಲ್ಲ’ ಎಂಬಂತೆ ತಲೆ ಅಲ್ಲಾಡಿಸುತ್ತಾ, ಸೆರಗನ್ನು  ಹಿಡಿದುಕೊಂಡು ನಿಲ್ಲುತ್ತಿದ್ದರೆ, ಸಮಾರಂಭದಲ್ಲಿ ಭಾರೀ ಸೀರೆಯುಟ್ಟಿದ್ದ ಇನ್ನೊಬ್ಬಾಕೆಯ ಹುಬ್ಬು ಇದ್ದಕಿದ್ದಂತೆ ಗಂಟಿಕ್ಕಿದವು. ಲಕ್ಷ್ಮಿಯ ಕೆಳ ಹಾಕಿದ ನೋಟ. ಸೀರೆಯನ್ನು ಗಟ್ಟಿ ಹಿಡಿದಿದ್ದ ಆಕೆಯ ಕೈಗಳು ನಡುಗುತ್ತಿದ್ದ ರೀತಿ, ಅವಳ ಅವಸರ ಎಲ್ಲವೂ ಅವಳಿಗೆ ಏನನ್ನೋ ಸೂಚಿಸಿದಂತಾಗಿ, ಸಮಾರಂಭದ ಕೆಂಪು ದೀಪದಡಿ ನಾನೇ ನಾಯಕಿಯಾಗ ಬೇಕು ಎನ್ನುವ ಧಾವಂತದಲ್ಲಿ ಗುಂಪಿನಿಂದ ಈಚೆ ಅವಳ ಸನಿಹ ಬಂದವಳೇ,

“ಎಲ್ಲಿ, ಇದೇನು ತೆಗಿ, ನಿಮ್ಮಂಥವರ ಆಟ ಗೊತ್ತಿಲ್ವಾ…? ಎನ್ನುತ್ತಾ ನೇರ ಸೆರಗಿಗೆ ಕೈಯಿಟ್ಟಳು. ಕಕ್ಕಾಬಿಕ್ಕಿಯಾದ ಲಕ್ಷ್ಮಿ ಸಣ್ಣ ಅವಮಾನ ಮತ್ತು ಆತಂಕದಲ್ಲಿ, “ಏನೂ ಇಲ್ಲ ಅಕ್ಕಾವ್ರೆ, ಏನೂ ಇಲ್ಲ.” ಎನ್ನುತ್ತಾ ಸೆರಗು ಎಳೆದುಕೊಳ್ಳತೊಡಗಿದಳು. ಎದುರಿನ ಭಾರೀ ಸೀರೆಗೆ ಈಗ ಪಕ್ಕಾ ಆಗಿ ಹೋಯಿತು. ತನ್ನ ಊಹೆ ನಿಜವಾಗಿದೆ! ಎನ್ನಿಸಿದ್ದೇ ತಡ ಇನ್ನು ಇಂಥಾ ಅವಕಾಶ ಬಿಡಬಾರದು ಎನ್ನಿಸಿ ಕೂಡಲೇ ಲಕ್ಷ್ಮಿಯ ಸೆರಗನ್ನು ಸೊಂಟದ ಆಚೆಗೆ ಬರುವಂತೆ ಜೋರಾಗಿ ಎಳೆದು ಬಿಟ್ಟಳು. ಗಾಳಿ ಪಟದಂತೆ ಮೇಲೆ ಹಾರಿದ ಬಣ್ಣಗೆಟ್ಟ ಅವಳ ಸೆರಗು ಆ ಶಾಂಡಿಲೀಯರ್ ಬೆಳಕಿನಲ್ಲಿ ಮಾಸಿದನಾರು ಮಡಿಯಂತೆ ಕಾಣಿಸುತ್ತಿದ್ದರೆ, ಎಳೆದ ರಭಸಕ್ಕೆ ಸಮಾರಂಭಕ್ಕೆ ಎಂದು ಇದ್ದುದರಲ್ಲೇ ಚಂದದ ಸೀರೆ ಉಟ್ಟಿದ್ದ ಲಕ್ಷ್ಮಿಯ ಸೀರೆಯ ಸೆರಗು ಬಾಳೆಯ ಎಲೆಯಂತೆ ಪರ್……ಎಂದು ಹರಿದ ಸಮಯಕ್ಕೆ ಸರಿಯಾಗಿ,

ಡಾಲಿ, “ಅಮ್ಮಾ ಸಿಕ್ತು! ಇಲ್ಲೇ ಫ್ರಾಕಿನ ತುದಿಗೆ ಸಿಗಾಕ್ಕೊಂಡಿತ್ತು ಸರ….” ಎಂದು ಕೂಗಿದಳು.

ಮೇಲೆ ಎಳೆದ ಸೆರಗು ನಿಧಾನಕ್ಕೆ ಆಕೆಯ ಮೇಲೆ ಬೀಳುತ್ತಿದ್ದರೆ, ಅದರ ಮಡಲಿನಿಂದ ಬಾಡಿದ ಹೂವಿನಂತೆ ಪುಡಿ ಪುಡಿಯಾಗಿ ಹಾರಿ ಬಿದಿತ್ತು,ಬಕೇಟಿಗೆ ಸುರಿದಿದ್ದ ಒಂದು ಪೀಸು ದುಬಾರಿ ಕೇಕಿನ ತುಂಡುಗಳು…ತಿನ್ನದೇ ಬಿಟ್ಟ ಬಿಗುಮಾನದ ಸೆಳಕುಗಳು… ಥೇಟ್ ದೊಡ್ಡಸ್ಥಿಕೆಯ ಪಳೆಯುಳಿಕೆಗಳಂತೆ!ಸೋತು ಹೋದ ಲಕ್ಷ್ಮಿಯ ಸ್ವಾಭಿಮಾನದಂತೆ!ಲಕ್ಷ್ಮಿ ತಗ್ಗಿಸಿದ್ದ ತಲೆ ಎತ್ತಿ ಒಮ್ಮೆ ಗಂಭೀರವಾಗಿ ಎಲ್ಲರ ಮುಖ ನೋಡಿದರೆ, ಎಲ್ಲರ ಮುಖಗಳು ಬಕೇಟಿನಲ್ಲಿ ಬಿದ್ದಿದ್ದ ಜಗಿದು ಬಿಟ್ಟ ಕೇಕಿನಂತೆ ಕಾಣಿಸ ತೊಡಗಿ, ಅಸಹ್ಯಿಸಿ ಏನೊಂದೂ ಮಾತಾಡದೇ, ಕಣ್ಣಲ್ಲಿ ನೀರು ತುಂಬಿಕೊಂಡು ತಿರುಗಿ ನೋಡದೆ ನೇರ ಹೆಬ್ಬಾಗಿಲಿನ ಗೇಟ್ನಿಂದಲೇ ಭರ ಭರನೇ ಮನೆಯತ್ತಾ ನಡೆದಳು.

ಎದುರಿಗೆ ಜಗುಲಿಯ ಕಿಟಕಿಗೆ ತಲೆಯಿಟ್ಟು ಕುಳಿತಲ್ಲಿಯೇ ನಿದ್ದೆ ಹೋದ ಮಗು ಕಾಣುತ್ತಿದಂತೆ, ಅಯಾಚಿತವಾಗಿ ಅತ್ತ ನೋಡಿದಳು. ಚಾಚಾನ ಅಂಗಡಿ ಅದ್ಯಾವಗಲೋ ಮುಚ್ಚಿದ್ದು ಕಾಣಿಸಿತು. ಜ್ಯೋತಿಯ ಹುಟ್ಟಿದ ಹಬ್ಬವೂ ಮುಗಿದಿತ್ತು.

 

                                                                ಗಾಯತ್ರಿ ರಾಜ್

Please follow and like us: