ಅಷ್ಟು ಚುರುಕಾಗಿ ಬದುಕುತ್ತಿದ್ದ ಆಕೆಗೆ ಅದೆಂಥ ಸಿಡಿಲು ಬಡಿದಿತ್ತು

ಮನಸಿನ್ಯಾಗಿನ ಮಾತು:

“ Happy birthday” ಅಂದರೆ ಅಮ್ಮ ಕಣ್ಣರಳಿಸಿ ನಗುತ್ತಿದ್ದಳು. ಡೇಟು ನೆನಪಿಲ್ಲ. “ವರಮಹಾಲಕ್ಷ್ಮಿ ವ್ರತವಂತೆ ಅವತ್ತು. ಅವತ್ತೇ ಹುಟ್ಟಿದ್ದು. ಮೊದಲು ಜಯಲಕ್ಷ್ಮಿ ಅಂತ ಹೆಸರಿಟ್ಟಿದ್ದರಂತೆ. ಅದು ಕಡೆಗೆ ಪಾರ್ವತಿ ಅಂತ ಯಾವಾಗ ಆಯ್ತೋ ಗೊತ್ತೇ ಇಲ್ಲ. ಯಾತರ ವರಮಹಾಲಕ್ಷ್ಮಿಯೋ ಏನೋ?” ಅಂದದ್ದು ನೆನಪಿದೆ. ವರ ಮಹಾಲಕ್ಷ್ಮಿ ವ್ರತದಂದು ಹುಟ್ಟಿದವಳಂತೆ: ಇಟ್ಟ ಹೆಸರು ಜಯಲಕ್ಷ್ಮಿಯಂತೆ. ಒಂದು ದಿನಕ್ಕೂ ಲಕ್ಷ್ಮಿ ಕಟಾಕ್ಷ ಆಗಲಿಲ್ಲ. ನನ್ನ ಅಮ್ಮ ಬಡತನದಲ್ಲೇ ನವೆದು ನವೆದು ಸತ್ತು ಹೋದಳು. ಅದೇನೇ ಇರಲಿ, ಅಮ್ಮ-ಮತ್ತು ನಾನು ಒಂದು ಅಪರೂಪದ ನಂಟು, ಗೆಳೆತನಗಳನ್ನು ಮೊದಲಿನಿಂದ share ಮಾಡಿಕೊಳ್ಳುತ್ತಾ ಬಂದೆವು. Loved each other. ನನಗೆ ಆಕೆಯ ಬದುಕು, ಅದರ ದಾರುಣತೆ, ಕಷ್ಟ-ಕೋಟಲೆ ಪೂರ್ತಿಯಾಗಿ ತಿಳಿದಿರಲಿಲ್ಲ. ಒಳ್ಳೆ ಫ್ರೆಂಡ್ಸ್ ಥರಾ ಇದ್ದವರು ನಾವು. ಆಕೆಯನ್ನು ಚೆನ್ನಾಗಿ ರೇಗಿಸುತ್ತಿದ್ದೆ. ಗೇಲಿ ಮಾಡುತ್ತಿದ್ದೆ. ಕೆಲ ಬಾರಿ ಗೋಳು ಹುಯ್ಕೊಳ್ಳುತ್ತಲೂ ಇದ್ದೆ. ಆಕೆ ಕೆಲವು ನಿರ್ಬಂಧಗಳನ್ನು ಆರಂಭದಿಂದಲೇ ಹಾಕಿದ್ದಳು. ಅವುಗಳನ್ನು ಇವತ್ತಿಗೂ ನಾನು ಬಿಟ್ಟುಕೊಟ್ಟಿಲ್ಲ.

ಅದು ೧೯೭೨ರ ನವೆಂಬರ್ ತಿಂಗಳಾ? Not sure. ಅವತ್ತು ದೀಪಾವಳಿಯಂತೂ ಹೌದು. ಬೆಳಿಗ್ಗೆ ಯಿಂದ ಅಮ್ಮ ಕೆಲಸ ಮಾಡುತ್ತಲೇ ಇದ್ದಳು. ಆಕೆ ಹಬ್ಬದಡುಗೆಯನ್ನೇನೂ ಮಾಡುತ್ತಿರಲಿಲ್ಲ. ಹೇಗೂ ರಜೆ ಇತ್ತು. ಅಮ್ಮ ಯಾವತ್ತಿಗೂ ಸುಮ್ಮನೆ ಕುಳಿತವಳಲ್ಲ. ಅವತ್ತು ಆಕೆ ಸಾರಿನ ಪುಡಿ, ಹುಳಿ ಪುಡಿ ಇತ್ಯಾದಿಗಳನ್ನು ಮಾಡಿಟ್ಟುಕೊಳ್ಳುತ್ತಿದ್ದಳು. ಬ್ರಾಹ್ಮಣರ ಮನೆಯಲ್ಲಿ ಈ ಸಂಪ್ರದಾಯವಿತ್ತು. ಸರಕ್ಕನೇ ಅಂಗಡಿಗೆ ಹೋಗಿ ಗರಮ್ ಮಸಾಲೆ ತಂದು ಯಾವತ್ತೂ ಸಾರು, ಹುಳಿ, ಪಲ್ಯೆ, ಮಾಡುವುದಿಲ್ಲ. ಮೂರೋ, ಆರೋ ತಿಂಗಳುಗಳಿಗೊಮ್ಮೆ ಹಾಗೆ ಪುಡಿ ಮಾಡಿಟ್ಟುಕೊಳ್ಳುತ್ತಿದ್ದರು. ಅದನ್ನು ಹಾಕಿ ಬೇಳೆ ಸಾರು ಮಾಡುತ್ತಿದ್ದರು. ಪುಡಿಗಳನ್ನು ಮಾಡುವ ವಿಷಯದಲ್ಲಿ ಅಮ್ಮ ಬೇ-ಮಿಸಾಲ್! ಆಕೆಗೆ ಈ ವಿಷಯದಲ್ಲಿ ಹೋಲಿಕೆ ಇರಲೇ ಇಲ್ಲ. ಅಂಥ ರುಚಿ, ಅಂಥ ಹದ! ಅದು ಸಾರಿಗೆ ಬೇಕಾದ ಮೂಲದ್ರವ್ಯ. ಸಾರಿನ ಪುಡಿ ಕೆಟ್ಟು ಹೋದರೆ, ಆಮೇಲೆ ನೀವೇನೇ ಸರ್ಕಸ್ ಮಾಡಿದರೂ ಸಾರು ರುಚಿಯಾಗಿರುವುದಿಲ್ಲ. ಅಮ್ಮ ಮಾಡಿದ ಉಪ್ಪಿನಕಾಯಿ ಯಾವ ಪರಿ ಚೆನ್ನಾಗಿರುತ್ತಿತ್ತೆಂದರೆ ಅದನ್ನು ಹರಸಾಹಸ ಮಾಡಿ ಅಮೆರಿಕಕ್ಕೆ ನನ್ನ ಸೋದರ ಸಂಬಂಧಿಯೊಬ್ಬ ಒಯ್ಯುತ್ತಿದ್ದ. ಮದುವೆಯಾದಾಗಿನಿಂದ ನಾನು ಕಡ್ಡಾಯವಾಗಿ ಈ ಪುಡಿಗಳನ್ನು ಮಾಡುವುದನ್ನು ಕಲಿ ಅಂತ ಲಲಿತಳಿಗೆ ಗಂಟು ಬಿದ್ದಿದ್ದೆ. She did it. ತೀರಾ ನಾನು ಮಾಡಿದಷ್ಟು ಚೆಂದಗೆ ಅವಳು ಸಾರು ಮಾಡಲಾರಳು. ಆದರೆ ಚೆನ್ನಾಗಿಯೇ ಮಾಡುತ್ತಾಳೆ. ಈಗ ಅಡುಗೆಯವರು ಮಾಡುತ್ತಾರೆ. No comments.

ಅವತ್ತು ದಿನವಿಡೀ ಅಮ್ಮ ಕೆಲಸ ಮಾಡುತ್ತಿದ್ದಳು. ಅದಕ್ಕೆ ಒಂದೆರಡು ತಿಂಗಳ ಹಿಂದೆ ನಾವಿಬ್ಬರೂ ಮದ್ರಾಸಿಗೆ ಹೋಗಿದ್ದೆವು. ಜಾನಕಿ ಎಂಬಾಕೆ ಅಮ್ಮನಿಗೆ ಪರಿಚಯವಿದ್ದರು. ಆಕೆಗೆ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. `ನೀವು ನನ್ನ ಕವಿತೆಗಳನ್ನು ತಿದ್ದಿ ಕೊಡಿ’ ಅಂತ ಅಮ್ಮನನ್ನು ಕರೆಸಿಕೊಂಡಿದ್ದರು. ಅದರಂತೆ ಅಲ್ಲಿಗೆ ಹೋಗಿ ಅಮ್ಮ ಪದ್ಯಗಳನ್ನು ತಿದ್ದಿ ಕೊಟ್ಟಳು. ಅವರು ಅಮ್ಮನಿಗೆ ಆ ಕಾಲದಲ್ಲಿ ಗಾಡಿ ಖರ್ಚು ನೀಡಿ, ಉಡುಗೊರೆ ಎಂಬಂತೆ ಒಂದು ಟ್ರಾನ್ಸಿಸ್ಟರ್ ಕೊಟ್ಟಿದ್ದರು. ಅದನ್ನು ಹಾಕಿಕೊಂಡು, ಅವತ್ತು ಅಮ್ಮ ಹಾಡು ಕೇಳುತ್ತಿದ್ದಳು. ಆಕೆ ತುಂಬ ವಯಸ್ಸಾದವಳೇನಲ್ಲ. ಆದರೆ ಬಿ.ಪಿ. ಇತ್ತು. ಕೆಲವೊಮ್ಮೆ ಬಿ.ಪಿ. ಜಾಸ್ತಿಯಾದಾಗ ಆಕೆಗೆ ಕತ್ತು ನೋವು ಬರುತ್ತಿತ್ತು.

ನೀವಾದರೂ ತಿಳಿದುಕೊಂಡಿರಿ: ಕತ್ತು ನೋವು ಬಂದಾಗ ಬಿ.ಪಿ. ಇರುವವರು ಕೊಂಚ ಎಚ್ಚರ ವಹಿಸಬೇಕು. ಈಗ ನಾವೆಲ್ಲ ಮೇಲಿಂದ ಮೇಲೆ ಬಿ.ಪಿ. ಪರೀಕ್ಷೆ ಮಾಡಿಸಿಕೊಳ್ಳುತ್ತಿರುತ್ತೇವೆ. ಷುಗರ್ ವಿಷಯದಲ್ಲಿ ಇನ್ನೂ ಹುಶಾರು. ಪ್ರತಿನಿತ್ಯ ಷುಗರ್ ಚೆಕ್ ಮಾಡಿಕೊಳ್ಳುತ್ತಿರುತ್ತೇವೆ. ಆ ಕಾಲಕ್ಕೆ ಇಷ್ಟೆಲ್ಲ ಎಲ್ಲಿಯದು? ಅಮ್ಮ ಕೆಲಸದ ನಡುವೆಯೇ `ಕತ್ತು ನೋವು ಕಣೋ’ ಅನ್ನುತ್ತಿದ್ದಳು. ನನ್ನದು ಅಷ್ಟೆಲ್ಲ ತಿಳಿವಳಿಕೆಯ ವಯಸ್ಸಲ್ಲ. ಸಂಜೆ ಏಳು ಗಂಟೆ ಹೊತ್ತಿಗೆ ಅಮ್ಮ ಖಾಲಿ ತಟ್ಟೆಯೊಂದನ್ನು ಹಿಡಿದುಕೊಂಡು ಅಡುಗೆ ಮನೆಯಿಂದ, ಮನೆಯ ಅಂಗಳಕ್ಕೆ ಬಂದಳು. ಬಹುಶಃ ಮನೆ ಎದುರಿಗಿನ ನಲ್ಲಿಯಲ್ಲಿ ತಟ್ಟೆ ತೊಳೆಯಲು ಬಂದಿರಬೇಕು. ನಾನು ಮನೆ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದೆ. ಅಮ್ಮ ಸರಿಯಾಗಿ ಮೆಟ್ಟಿಲಿಳಿದೂ ಇರಲಿಲ್ಲ. ಅಷ್ಟರಲ್ಲಿ ಒಳಗಿಂದ ಚಿಮ್ಮಿ ಬಂತೇನೋ ಎಂಬಂತೆ ಆಕೆಗೆ ವಾಂತಿಯಾಯಿತು. ನಾನು ಆಕೆಯನ್ನು ಹಿಡಿದುಕೊಳ್ಳಲು ಹೋದೆ. ಆದರೆ ಆಯತಪ್ಪಿ ಅಮ್ಮ ಮೆಟ್ಟಿಲ ಮೇಲಿಂದ ಬಿದ್ದು ಬಿಟ್ಟಳು.

ಅಷ್ಟೆ!

ಅಮ್ಮನ ಬದುಕೇ ಆರಿದ ದೀಪದಂತಾಯಿತು. She was half dead. ಅವತ್ತು ನನಗೆ ಗೊತ್ತಾಗಲಿಲ್ಲ. ಬೆಳಗಿನ ಜಾವಕ್ಕೆ ಹೋಗಿ ಮುಂದಿನ ಬೀದಿಯಲ್ಲೇ ಇದ್ದ ನನ್ನ ಸೋದರ ಸಂಬಂಧಿ ಪ್ರಸನ್ನನನ್ನು ಕರೆದುಕೊಂಡು ಬಂದೆ. ರಾತ್ರಿಯಿಡೀ ನಾನೇ ಅಮ್ಮ ನಿಗೆ ಕಾವಲಿದ್ದೆ. ಅಮ್ಮ ಸ್ಪೃಹೆ ತಪ್ಪಿದ್ದಳು. ರಾತ್ರಿ ಯಿಡೀ ವಾಂತಿ. ವಾಂತಿಗಿಂತ ಹೆಚ್ಚಾಗಿ ಆಕೆಗೆ ಮೂತ್ರಬಾಧೆ. ಅದನ್ನು ನಿಯಂತ್ರಿಸಲು ಆಗುತ್ತಿರಲಿಲ್ಲ. ನಾನು ಬಳಿದು ಹಾಕಿ, ನೆಲ ಒರೆಸುತ್ತಿದ್ದೆ. ಅಂಗಳದಲ್ಲಿ ಬಿದ್ದಿದ್ದ ಆಕೆಯನ್ನು ಏಕಾಂಗಿಯಾಗಿ ಹೊತ್ತುಕೊಂಡು ಹೋಗಿ ಕೋಣೆಯಲ್ಲಿ ಮಲಗಿಸಿದ್ದೆ. I was physically very strong. ಪ್ರಸನ್ನ ಒಂದು ಜಟಕಾ ತರಿಸಿದ. ಒಂಟಿ ಕುದುರೆಯ ಗಾಡಿ ಅದು. ನಾನು ಹಿಂದೆ ಸೈಕಲ್ಲಿನಲ್ಲಿ ಹೋದೆ. ಆ ಕಾಲಕ್ಕೆ ಊರ ಹೊರಗಿನ ಆ ಆಸ್ಪತ್ರೆಯನ್ನು `ದೊಡ್ಡಾಸ್ಪತ್ರೆ’ ಅನ್ನುತ್ತಿದ್ದರು. ಅಥವಾ ‘O.P.D’ ಅನ್ನುತ್ತಿದ್ದರು. ಅಲ್ಲಿ ಅಡ್ಮಿಟ್ ಮಾಡಿದಾಗಲೇ ಅಮ್ಮನಿಗೆ ಪಾರ್ಶ್ವವಾಯು ಹೊಡೆದಿದೆ ಅಂತ ನನಗೆ ಗೊತ್ತಾದದ್ದು. ಹಾಗಾದ ಎರಡನೇ ದಿನಕ್ಕೇ ಬೆಳಗೆರೆಯಿಂದ ನನ್ನ ಸೋದರಮಾವ ಕೃಷ್ಣ ಶಾಸ್ತ್ರಿಗಳು  ಬಂದರು. ಮೈಸೂರಿನಲ್ಲಿದ್ದ ಇನ್ನೊಬ್ಬ ಅಣ್ಣ ಪ್ರಸನ್ನಕುಮಾರ್ ಬಂದ. ಅವರೆಲ್ಲ ಸೇರಿ ಅಮ್ಮನನ್ನು ಮೈಸೂರಿಗೆ ಕರೆದೊಯ್ಯೋದು ಅಂತ ತೀರ್ಮಾನಿಸಿದ್ದರು. ಅಮ್ಮ ನಿಗಿದ್ದ ಏಕೈಕ ಗೆಳತಿ ಓಬಳಮ್ಮ ಕೂಡ ಕಾರಿನಲ್ಲಿ ಜೊತೆಗೇ ಬಂದಳು. ನಾನು ಅಮ್ಮನನ್ನು ಅಣ್ಣ ಪ್ರಸನ್ನ ಕುಮಾರ್ ಮನೆಗೆ ಬಿಟ್ಟು ಬಳ್ಳಾರಿಗೆ ವಾಪಸು ಬಂದೆ. ಅಷ್ಟರಲ್ಲಿ ನನ್ನ ದೊಡ್ಡಪ್ಪ  (ಅವರೂ ಕೃಷ್ಣ ಶಾಸ್ತ್ರಿಗಳೇ) ಬಂದು ನನ್ನೊಂದಿಗೆ ಉಳಿದರು. ನಾನು ಶಾಲೆಗೆ ಹೋಗುತ್ತಿದ್ದೆ.

ಪಾರ್ಶ್ವವಾಯು ಅಂದರೆ ಏನು ಅಂತ ನನಗೆ ಗೊತ್ತಾದದ್ದು ಒಂದು ವರ್ಷದ ನಂತರ. ಮೈಸೂರಿನಲ್ಲಿ ಚಿಕಿತ್ಸೆ ಪಡೆದ ಅಮ್ಮ ವಾಪಸು ಬಳ್ಳಾರಿಗೆ ಬಂದಳು. ಅಣ್ಣ ಕರೆತಂದಿದ್ದ. ರೈಲಿನಿಂದ ಇಳಿಸಿಕೊಳ್ಳಲು ನಾನೇ ಹೋಗಿದ್ದೆ. ಆಕೆಯಲ್ಲಿ ಮೊದಲಿನ ಯಾವ ಚೈತನ್ಯವೂ ಉಳಿದಿರಲಿಲ್ಲ. She was half dead. ಎಡಗಾಲು, ಎಡಗೈಯಿ, ಎಡಗಣ್ಣು-ಎಲ್ಲ ಸತ್ತು ಹೋಗಿದ್ದವು. ಅಮ್ಮನ ತಲೆಗೂದಲು ಮೊದಲಿಂದ ತುಂಬ ಸೊಂಪು. ನಡೆಯುವಾಗ ಆಕೆಯ ಹಾವಿನಂಥ ಜಡೆ ಎದ್ದು ಕಾಣುತ್ತಿತ್ತು. ಅಂಥದರಲ್ಲಿ stroke ಹೊಡೆದ ಕೆಲವೇ ದಿನಗಳಿಗೆ ತಲೆಯಿಡೀ ಬೆಳ್ಳಗಾಗಿ ಬಿಟ್ಟಿದ್ದವು. ಆ ಗಾತ್ರದ ಜಡೆ ಸೊರಗಿ ಹೋಗಿತ್ತು. ದೇಹದ ಮೇಲಿನ ಬಟ್ಟೆ ಸರಿದು ಹೋದರೆ ಅಮ್ಮನಿಗೆ ಗೊತ್ತೇ ಆಗುತ್ತಿರಲಿಲ್ಲ. Sensation ಇಲ್ಲದಂತಾಗಿತ್ತು. ಹತ್ತು ಹೆಜ್ಜೆಯೂ ನಡೆಯಲಾಗುತ್ತಿರಲಿಲ್ಲ. ತುಂಬ ಭಾವುಕತೆಗೆ ಒಳಗಾಗಿ ಗಳಗಳನೆ ಅಳುತ್ತಿದ್ದಳು. ನನ್ನ ಆ ಚೆಂದನೆಯ ಅಮ್ಮ ಎಲ್ಲಿ? ಇದಲ್ಲ ನನ್ನ ಅಮ್ಮ ಅಂತ ಒಬ್ಬನೇ ಕುಳಿತು ಮರುಗುತ್ತಿದ್ದೆ.

ನಂತರದ ದಿನಗಳ ಬಗ್ಗೆ ಏನು ಹೇಳಲಿ? ಅಮ್ಮ, ನಾನು, ದೊಡ್ಡಪ್ಪ-ಮೂರೇ ಜನ. ಪುಣ್ಯಕ್ಕೆ ಅಮ್ಮನ ಬಾಯಿ ಬಿದ್ದು ಹೋಗಿರಲಿಲ್ಲ. ಮಾತು ಸ್ಪಷ್ಟವಾಗೇ ಇದ್ದವು. ಅಮ್ಮನ ನಗೆ ತುಂಬ ಚೆಂದ. ಅದು ಹಾಗೇ ಉಳಿದಿತ್ತು. ಆದರೆ ಕಂಠ? ಅಮ್ಮ ತುಂಬ ಚೆನ್ನಾಗಿ ಹಾಡುತ್ತಿದ್ದಳು. ಆಕಾಶವಾಣಿಯಲ್ಲೂ ಹಾಡಿ ಬರುತ್ತಿದ್ದಳು. ಪಾಪ, ಆ ದನಿಯನ್ನೇ ಕೆಟ್ಟ ಖಾಯಿಲೆ ನುಂಗಿ ಬಿಟ್ಟಿತ್ತು. ಆಕೆಯದು ಆಗ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಸಿಲ್ವರ್ ಜುಬಿಲಿ ಸ್ಕೂಲ್‌ನಲ್ಲಿ ಶಿಕ್ಷಕಿಯ ನೌಕರಿ.  She was very able and popular teacher. ಆದರೆ ಇವತ್ತಿನ ಸ್ಥಿತಿಯಲ್ಲಿ? ಅದ್ಯಾರು ಹೋಗಿ ಸಂಘದ ಆಡಳಿತ ಮಂಡಳಿಯೊಂದಿಗೆ ಮಾತನಾಡಿದರೋ ಕಾಣೆ. ಶಾಲೆಗೆ ಹೋಗದೆ ಒಂದು ವರ್ಷವಾಗಿತ್ತು. ಆಡಳಿತ ಮಂಡಳಿಯವರು ಅಮ್ಮನಿಗೆ ನೌಕರಿಯಲ್ಲಿ ಮುಂದುವರೆಯುವ ವ್ಯವಸ್ಥೆ ಮಾಡಿದರು.

ಹೇಳಿದೆನಲ್ಲ? ದೇಹದ ಅರ್ಧಭಾಗ ಸತ್ತು ಹೋಗಿತ್ತು. ಆದರೆ ಅಮ್ಮ ವಿಪರೀತ ಛಲದವಳು. ಹಾಗೆ ಬಿದ್ದು ಹೋದ ಅರ್ಧ ದೇಹದಲ್ಲೇ ಮನುಷ್ಯ ಮಾತ್ರರು ಏನೇನು ಮಾಡಬಹುದೋ, ಅಮ್ಮ ಅದೆಲ್ಲವನ್ನೂ ಮಾಡಿದಳು. ಪ್ರತೀನಿತ್ಯ ಅಮ್ಮ, ಶಾಲೆಗೆ ಸೈಕಲ್ ರಿಕ್ಷಾದಲ್ಲಿ ಹೋಗಿ ಬರುತ್ತಿದ್ದಳು. ಬಳ್ಳಾರಿ ಹತ್ತಿರದ ಬಿಸಲಹಳ್ಳಿಯ ನಾಗಪ್ಪ ಎಂಬುವನು ಆಕೆಯನ್ನು ರಿಕ್ಷಾದಲ್ಲಿ ಕರೆದೊಯ್ದು, ವಾಪಸು ಕರೆತರುತ್ತಿದ್ದ. ಅವನಿಂದ ತುಂಬಾನೇ ಸಹಾಯವಾಯಿತು. ಇದ್ದ ಒಂದು ಕಣ್ಣಲ್ಲೇ ಅಮ್ಮ ಪ್ರತೀನಿತ್ಯ ಕನ್ನಡಪ್ರಭ ಓದುತ್ತಿದ್ದಳು. ಇಷ್ಟದ ಕತೆ-ಕಾದಂಬರಿ ಓದುತ್ತಿದ್ದಳು. ಒಂದಷ್ಟು ಸಣ್ಣ ಕತೆಗಳನ್ನೂ ಬರೆದಳು. ನನಗೆ ಆಶ್ಚರ್ಯವಾದುದೇ ಆಕೆಯ ಛಲ ಗಮನಿಸಿದಾಗ. ಒಬ್ಬ ಚಿಕ್ಕ ಹುಡುಗನನ್ನು ಜೊತೆಯಲ್ಲಿಟ್ಟುಕೊಂಡು ಸಣ್ಣದೊಂದು walk ಮಾಡುತ್ತಿದ್ದಳು. ಮನೆ ಎದುರಿಗಿನ ತುಳಸಿಗೆ ಪೂಜೆ ಮಾಡುತ್ತಿದ್ದಳು. ಸಭೆಗಳಿಗೆ ಕರೆದರೆ ಹೋಗಿ ಭಾಷಣ ಮಾಡುತ್ತಿದ್ದಳು. ಆಕೆಗೆ ವೈದ್ಯರು `ಉಪ್ಪು ತಿನ್ನಬೇಡಿ’ ಅಂದಿದ್ದರು. ನಂಬಲಿಕ್ಕಿಲ್ಲ ನೀವು: ಒಂದೇ ಒಂದು ಚಿಟಿಕೆ ಉಪ್ಪು ಆಕೆ ತಿನ್ನಲಿಲ್ಲ. ಒಂದೆರಡು ದಿನದ ಪಥ್ಯವಲ್ಲ. ಉಪ್ಪೇ ಇಲ್ಲದೆ ಆಕೆ ಹದಿನೆಂಟು ವರ್ಷ ಬದುಕಿದ್ದಳು. ಅಂಥ ಹಿಡಿತವಿತ್ತು ನಾಲಗೆಯ ಮೇಲೆ. ವೈದ್ಯರು `ಬೇಡ’ ಅಂದ ಯಾವುದನ್ನೂ ಆಕೆ ಮುಟ್ಟುತ್ತಿರಲಿಲ್ಲ. ಅನಾಮತ್ತು ಹದಿನೆಂಟು ವರ್ಷ ಆಕೆ ಹಾಗೆ ಬದುಕಿ ತೋರಿಸಿದಳು. Great! ಅಮ್ಮನಲ್ಲಿ ಮೊದಲಿಂದ ಇದ್ದ ಮೌಲ್ಯ, ನಿಯಮಗಳ್ಯಾವೂ ಕಣ್ಮರೆಯಾಗಲಿಲ್ಲ. `ನಾನು ಕುಂಟು ಬಿದ್ದೆ’ ಅಂತ ಆಕೆ ಅಂದುಕೊಳ್ಳುತ್ತಲೂ ಇರಲಿಲ್ಲ. “ಇನ್ನು ಮುಗೀತು ಮೊದಲಿನ ಹಾಗೆ ಬದುಕಲು ಆಗುವುದಿಲ್ಲ” ಎಂಬುದು ಗೊತ್ತಾಗುತ್ತಿದ್ದಂತೆಯೇ “ಆಯ್ತು, ತುಂಬ ಭಿನ್ನವಾಗಿ ಬದುಕಿ ತೋರಿಸ್ತೀನಿ” ಎಂದು ನಿರ್ಧರಿಸಿ ಹದಿನೆಂಟು ವರ್ಷ ಬದುಕಿದಳು. ಒಂದು ದಿನವೂ ಮಾತ್ರೆ ಮರೆಯಲಿಲ್ಲ. ಆಕೆ ವಿಪರೀತ ರಿಲಿಜಿಯಸ್ ಅಲ್ಲ. “ಯಾವ ಪುಣ್ಯ ಕ್ಷೇತ್ರವೂ ಬೇಡ ಕಣೋ. ದೇವರು ಅಲ್ಲೇ ಇರುತ್ತಾನೇನು?” ಅನ್ನುತ್ತಿದ್ದಳು. ಪೂಜೆ-ಪುನಸ್ಕಾರಗಳೆಲ್ಲ ಮನೆ ಮಟ್ಟಿಗೆ. ಆ ಸ್ಥಿತಿಯಲ್ಲೂ ಅಮ್ಮನಲ್ಲಿ ಸೆನ್ಸ್ ಆಫ್ ಹ್ಯೂಮರ್ ಇತ್ತು. ಇಬ್ಬರೇ ಕುಳಿತರೆ ಭರ್ತಿ ನಗೆ. `ಇದು ಅಮ್ಮನಿಗೆ ಗೊತ್ತಾಗಿರಲಿಕ್ಕಿಲ್ಲ’ ಅಂದುಕೊಂಡರೆ, ಅಮ್ಮನಿಗೆ ಗೊತ್ತಾಗದೆ ಇರುವಂತಹ ಸಂಗತಿ ಯಾವುದೂ ಇರುತ್ತಿರಲಿಲ್ಲ. She used to be alert. ನಮ್ಮಲ್ಲಿ ನಮ್ಮ ಬಗ್ಗೆಯೇ ಒಂದು ಗೌರವ ಭಾವ ಇರುತ್ತದೆ. ಅದನ್ನು ಆಕೆ ಕಳೆದುಕೊಂಡಿರಲಿಲ್ಲ. ಮೊದಲಿಂದಲೂ ಆಕೆಗೆ ಒಂದಳತೆಯ ಜಿಪುಣತನವಿತ್ತು. ಅದೇಕಿತ್ತು ಅಂದರೆ, ಒಬ್ಬಂಟಿಯಾದವರಿಗೆಲ್ಲ ಅಂಥ ಜಿಪುಣತನ ಇರುತ್ತದೆ. ವಯಸ್ಸಾದ ಮೇಲೆ ಹಣವೆಲ್ಲ ಖರ್ಚಾಗಿ ಬಿಟ್ಟರೆ? ದುಡ್ಡು ಕೊಡದಿದ್ದರೆ ಯಾರೂ ನೋಡಿಕೊಳ್ಳುವುದಿಲ್ಲ. ದುಡ್ಡು ಖಾಲಿಯಾಗಿಬಿಟ್ಟರೆ? ಅಂಥ ಹೆದರಿಕೆಯಿಂದಾಗಿಯೇ ಅಮ್ಮನಲ್ಲಿ ಜಿಪುಣತನವಿತ್ತು. ಖಾಯಿಲೆಯಾದ ನಂತರ ಆಕೆ ಮತ್ತೂ ಜಿಪುಣಳಾದಳು. “ಇದೇನು ಜಿಪುಣತನ ಮಾಡ್ತೀಯಾ?” ಅಂತ ತಮಾಷೆ ಮಾಡಿದರೆ “ಮಾರಾಯಾ, ನಿನ್ನ ಹಾಗಿರೋಕೆ ಸಾಧ್ಯವಾ? ಮಡಕೆ ತುಂಬ ದುಡ್ಡು ಇಟ್ಟರೂ, ಕೆಲವೇ ನಿಮಿಷಗಳಲ್ಲಿ ಅದಕ್ಕೊಂದು ದಾರಿ ಮಾಡ್ತೀಯ!” ಅನ್ನುತ್ತಿದ್ದಳು. ಅಷ್ಟಾಗಿ, ನಾವೇನೂ ಆಗರ್ಭ ಶ್ರೀಮಂತರಲ್ಲ. ಒಂದು ಸೈಟು, ಅದರಲ್ಲೇ ನಾಲ್ಕು ಚಿಕ್ಕ ಚಿಕ್ಕ ಮನೆ. ನಾನು ಅದನ್ನೆಲ್ಲ ಏನಾದರೂ ಮಾಡ್ತೀನೇನೋ ಎಂಬ ಆತಂಕ ಆಕೆಗಿತ್ತು.

“ನೋಡು ಲಲಿತಾ, ನೀನು ಕೈಮೇಲೆ ಕೈಯಿಟ್ಟು ಪ್ರಮಾಣ ಮಾಡು. ಈ ಆಸ್ತಿಯನ್ನು ಯಾವತ್ತಿಗೂ ಅವರಿವರಿಗೆ ಕೋರ್ಟಿನಲ್ಲಿ ಜಾಮೀನು ಅಂತ ಕೊಡಬೇಡ. ಇದರ ಮೇಲೆ ಸಾಲ ಮಾಡಬೇಡ. ಇವನನ್ನು  ನಂಬಿಕೊಂಡು ನಿನ್ನ ನೌಕರಿ ಬಿಡಬೇಡ. ಹೇಳು, ಆಣೆ ಮಾಡು” ಅಂತ ಶತಾಯಗತಾಯ ಆಣೆ ಮಾಡಿಸಿಕೊಂಡಳು. ಮನೆಗಳು ತುಂಬ ಹಳತಾಗಿ, ಬಿದ್ದು ಹೋದಾವು ಅಂತ ಅವುಗಳನ್ನು ನಾನೇ ಕೆಡವಿಸಿದೆ. ಸೈಟು ಹಾಗೇ ಇದೆ. ಅದಕ್ಕೊಂದು ಕಾಂಪೌಂಡ್ ಹಾಕಿಸಿದ್ದೇನೆ. ಅದು ಇವತ್ತಿಗೂ ಪರಭಾರೆ ಆಗಿಲ್ಲ. ಇವಳಾದರೂ ಏನು, ಪತ್ರಿಕೆ ಚೆನ್ನಾಗಿ ಸ್ಥಿರಗೊಂಡು, ಸಾಕಷ್ಟು ಹಣ ನೋಡಿದ ನಂತರವೇ ಸರ್ಕಾರಿ ನೌಕರಿಗೆ ರಾಜಿನಾಮೆ ನೀಡಿದ್ದು. ಇವಳಿಗೆ ಪಿಂಚಣಿ ಬರುತ್ತದೆ. ಎಷ್ಟು ಮಹಾ ಬಂದೀತು? ಆದರೆ “ನನ್ನ ಪೆನ್ಷನ್ ಅಮೌಂಟು ಬ್ಯಾಂಕಿನಲ್ಲಿ ಇದೆ ಗೊತ್ತಾ?” ಅನ್ನುತ್ತಿರುತ್ತಾಳೆ. ಪಾಪ!

ಅಂಥ ಬಂಗಾರದ ಅಮ್ಮ ತೀರಿ ಹೋಗಿ ಯಾವ ಕಾಲವಾಯಿತು? ಆಕೆಯನ್ನು ನೆನಪು ಮಾಡಿಕೊಳ್ಳದೆ ಒಂದು ದಿನವನ್ನೂ ನಾನು ಕಳೆದಿಲ್ಲ. ವರಮಹಾಲಕ್ಷ್ಮಿ ಹಬ್ಬ ಅಂದ ಕೂಡಲೆ ಏನೋ ಸಂಭ್ರಮ. ಈಗ ಸೊಸೆ ಲಕ್ಷ್ಮಿ ಇದ್ದಾಳೆ. ಮೊಮ್ಮಗ ಹುಟ್ಟಿದ್ದಾನೆ. ಆ ಮಗು, ಲಲಿತೆ-ಎಲ್ಲರೂ ಹೊಸ ಮನೆಯಲ್ಲಿ ದೊಡ್ಡ ನಗೆಯ ನಡುವೆ ಚೆನ್ನಾಗಿದ್ದಾರೆ. ನಾನು ಬೇರೇನು ಕೋರಲಿ?

ನಿಮ್ಮವನು, ಆರ್.ಬಿ.

Please follow and like us: