ಅಪಸ್ವರವೆದ್ದ ಸಂಸಾರದ ದೋಣಿ ಕೊನೆ ತನಕ ಸಾಗೋದು ಕಷ್ಟ ಕಷ್ಟ!

  

  ಇವಳು ನನಗೆ ಒಳ್ಳೆ ಜೋಡೀನಾ?  

 ಮದುವೆಗೆ ಮುನ್ನವೇ ಆ ಪ್ರಶ್ನೆ ಎದ್ದರೆ ಸಂತೋಷ. ಶುರುವಿನಲ್ಲಿ ಎದ್ದರೆ ದುಃಖ.

ಮಧ್ಯದಲ್ಲಿ ಎದ್ದರೆ ಸಾಕ್ಷಾತ್ ನರಕ.  

—————

 It’s a package deal; the bad comes with the gud.

ಮದುವೆ ಬಗ್ಗೆ ಥಾಮಸ್ ಬ್ರಾಡ್ಬರಿ(Thomas Bradbury) ಅನ್ನೋ ಮನಶ್ಶಾಸ್ತ್ರಜ್ಞನ ಅಭಿಪ್ರಾಯ ಇದು. ಮದುವೆ ಅನ್ನೋದು ಜಸ್ಟ್ ಒಂದು ಪ್ಯಾಕೇಜ್. ಒಳ್ಳೇದರ ಜೊತೆಗೆ ಕೆಟ್ಟದ್ದೂ ಬರುತ್ತದೆ. ಅನುಭವಿಸಬೇಕಷ್ಟೆ. ಯಾರಿಗೆ ಅನುಭವಿಸಲಿಕ್ಕೆ ಆಗಲ್ವೋ ಅವರು ಮದುವೆ ಅನ್ನೋ ಬಂಧನ ಮುರಿದುಕೊಂಡು ಎದ್ದುಹೋಗ್ತಾರೆ.

ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತ ಪುಂಗು ಹೊಡೆಯೋ ಜ್ಯೋತಿಷಿಗಳಿದಾರೆ. ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೋ ಇಲ್ವೋ ಮದುವೆ ಆದಮೇಲಂತೂ ಬಹುತೇಕ ಜೋಡಿಗಳ ಜೀವನ ಸಾಕ್ಷಾತ್ ನರಕ. ಮದುವೆಯಾದ ಯಾವ ಜೋಡಿ ತಾನೆ ‘ನಾವು ಖುಷಿಖುಷಿಯಾಗಿದ್ದೀವಿ. ಸ್ವರ್ಗದಲ್ಲಿ ನಿಶ್ಚಯ ಮಾಡಿದ್ದಲ್ವ ಮದ್ವೆ ಅದಕ್ಕೆ ನಮ್ಮ ಸಂಸಾರ ಸ್ವರ್ಗಸದೃಶವಾಗಿದೆ ಅಂತ  ಹೇಳಿಕೊಂಡಿದ್ದಾರೆ ಹೇಳಿ. ಗಂಡ ಏರಿಗೆಳೆದ್ರೆ ಹೆಂಡ್ತಿ ನೀರಿಗೆ.  ಒಂದಕ್ಕೊಂದು ಮ್ಯಾಚೇ ಆಗದ ಸಂಬಂಧ. ರಾಮ ಶಾಮ ಭಾಮ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಒಂದು ಡೈಲಾಗ್ ಹೇಳ್ತಾರೆ. ‘ನಮ್ಮಿಬ್ಬರ ಜಾತಕ ನೋಡಿ ಜೋಡಿ ಮಾಡಿದೋರು ಯಾರು? ಯಾರಾಗಿದ್ರೂ ಸರಿ ಇಟ್ಸ್ ಅ ರಾಂಗ್ ಪೇರ್.

ಇಂಥ ರಾಂಗ್ ಪೇರ್(wrong pair)ಗಳೇ ಇವತ್ತಿನ ಸಮಾಜದಲ್ಲಿ ಸಂಸಾರವೆಂಬ ರಥವನ್ನ ತಿಣುಕಾಡ್ತಾ ಎಳಿತಿರೋದು. ಯಾರಾದ್ರೂ ಮಹಿಳೆಯನ್ನ ನಿಲ್ಲಿಸಿ, ‘ನಿಮ್ಮ ಪತಿ ನಿಮಗೆ ಸರಿಯಾದ ಜೋಡೀನಾ?’ ಅಂತ ಕೇಳಿನೋಡಿ. ಮನಸಿನಲ್ಲೇ ಆಕೆ ಲೆಕ್ಕಹಾಕ್ತಾಳೆ. ಇಲ್ಲ ಅಂತ ಹೇಳಲ್ಲ. ‘ನಿಮ್ಮ ಪತಿಗಿಂತಲೂ ಉತ್ತಮವಾದ ವ್ಯಕ್ತಿ ನಿಮಗೆ ಸಿಕ್ತಿದ್ದ ಅಂತ ನಿಮಗೆ ಅನಿಸ್ತಿದೆಯಾ?’ ಒಳಗೆ ಹೌದು ಅಂದುಕೊಂಡರೂ ಹೊರಗೆ ಮೌನ. ಕಾಂಪ್ಲಿಕೇಟೆಡ್ ಕ್ವೆಶ್ಚನ್ ಅಲ್ವ. ಫೈನಲಿ, ‘ ನೀವು ಬಯಸುವಂಥ ಇನ್ನೊಬ್ಬ ವ್ಯಕ್ತಿ ಸಿಕ್ಕಿದ್ದಿದ್ರೆ ನಿಮ್ಮ ಬದುಕು ನಿಜವಾಗಿಯೂ ಇನ್ನೂ ಚೆನ್ನಾಗಿರ್ತಿತ್ತಾ? ಇನ್ನಷ್ಟು ಖುಷಿಯಾಗಿರ್ತಿದ್ರಾ?’ ಹೌದು ಅಂತನಿಸುತ್ತೆ ಅನ್ನದಿದ್ರೆ ಕೇಳಿ.

ಸಾಮಾನ್ಯವಾಗಿ ಮಹಿಳೆ ತನ್ನ ಪತಿಯನ್ನ ಇನ್ನೊಬ್ಬ ವ್ಯಕ್ತಿ ಜೊತೆ ಹೆಚ್ಚು ಕಂಪೇರ್ ಮಾಡಿಕೊಳ್ತಾಳೆ ಅನ್ನುತ್ತೆ ಮನಶ್ಶಾಸ್ತ್ರ. ಆದ್ರೆ ಈಕೆ ಕಂಪೇರ್ ಮಾಡಿಕೊಂಡವನ ಹೆಂಡ್ತಿಯನ್ನ ಕೇಳಿದ್ರೆ ಅವಳ ಮನೆಯಲ್ಲೂ ದೋಸೆ ತೂತೆ. ಹೀಗೆ ಮಹಿಳೆಯರು ಕಂಪೇರ್ ಮಾಡ್ಕೊಂಡು ಗಂಡನ ಜೊತೆ ಸರಿಯಾಗಿ ಬೆರೆಯದೆ ಇರೋದ್ರಿಂದಾನೆ ಹೆಚ್ಚೆಚ್ಚು ಡಿವೋರ್ಸ್ ಪ್ರಕರಣಗಳು ಆಗ್ತಿವೆಯಂತೆ. ‘ನನ್ನ ಗಂಡ ಸಿಕ್ಕಾಪಟ್ಟೆ ಮೌನಿ. ಅವನ ಆ ಮೌನವನ್ನ ಸಹಿಸಿಕೊಳ್ಳಲು ನನಗೆ ಆಗ್ತಿಲ್ಲ’ ಅಂತ ಒಬ್ಬಾಕೆ ಡಿವೋರ್ಸ್ಗೆ ಕಾರಣ ಕೇಳಿದ ಜಡ್ಜ್ ಮುಂದೆ ಹೇಳಿದ್ಲು.

ಆದರೆ ಪುರುಷರಲ್ಲಿ ಕಂಪ್ಯಾರಿಷನ್ ಪ್ರವೃತ್ತಿ ಸ್ವಲ್ಪ ಕಡಿಮೆ. ಅದರಲ್ಲಿ ಅವರಿಗೆ ಅಂಥ ಆಸಕ್ತಿಯೂ ಇಲ್ಲ. ಯಾವತ್ತೂ ಡೈಲಿ ಬೇಸಿಸ್(daily basis)ನಲ್ಲಿ ನನ್ನ ಹೆಂಡ್ತಿ ನನಗೆ ಸರಿಯಾದ ಜೋಡಿಯಲ್ಲ ಅಂತ ಆತ ಥಿಂಕ್ ಕೂಡ ಮಾಡಲ್ಲ. ಯಾಕೆಂದ್ರೆ ಅವನಿಗೆ ಅದಕ್ಕಿಂತಲೂ ಮಿಗಿಲಾದ ನೂರಾರು ಕೆಲಸಗಳಿವೆ. ಯೋಚನೆಗಳಿವೆ.ತಿಂಗಳಾದ್ರೆ ಬಾಡಿಗೆ ಕಟ್ಟಬೇಕು. ಮಕ್ಕಳ ಫೀಸ್ ಕಟ್ಟಬೇಕು. ಕಾರ್ ಲೋನ್ ಕಟ್ಟಬೇಕು. ಏನಾದ್ರೂ ಅಛೀವ್ ಮಾಡಬೇಕು. ಇಂಥವೇ. ಆತ ತನ್ನ ಕುಟುಂಬ ಖುಷಿಯಾಗಿರಬೇಕು, ಇನ್ನೂ ಒಂದಿಷ್ಟು ಸಾಧಿಸಬೇಕು ಅಂತೆಲ್ಲಾ ಯೋಜನೆಗಳನ್ನ ಹಾಕಿಕೊಂಡಿರ್ತಾನೆ. ಕ್ವಾಲಿಟಿ ಮ್ಯಾರಿಯೇಜ್ ಬಗ್ಗೆ ಆತ ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ. ಕುಟುಂಬದ ಬೇಸಿಕ್ ಫುಲ್ ಫಿಲ್ಮೆಂಟೇ ಅವನ ಆದ್ಯತೆ ಆಗಿರುತ್ತೆ.  ಆದ್ರೆ ಮನೆಯಲ್ಲಿರುವ ಹೆಂಡ್ತಿ, ಅವಳದ್ದು ಮಾತ್ರ ನೂರಾ ಎಂಟು ರಗಳೆ. ಇವನ್ನ ಕಟ್ಕೊಂಡು ನಾನು ತಪ್ಪು ಮಾಡ್ದೆ ಅನ್ನೋ ಅನವರತ ರೋದನೆ.

“Take Back Your Marriage” ಅನ್ನುವ ಒಂದು ಇಂಟ್ರೆಸ್ಟಿಂಗ್ ಪುಸ್ತಕ ಬರೆದಿದ್ದಾನೆ ವಿಲಿಯಮ್ ಡೊಹರ್ಟಿ (William Doherty). ಆತ ಯೂನಿವರ್ಸಿಟಿ ಆಫ್ ಮಿನ್ನೆಸೋಟಾದಲ್ಲಿ ಸೈಕಾಲಜಿ ಪ್ರೊಫೆಸರ್. ಮದುವೆಯಿಂದ ಯಾವುದೇ ಬಯಕೆಗಳು ಪರಿಪೂರ್ಣವಾಗುವುದಿಲ್ಲ ಅಂತಾನೆ ಡೊಹರ್ಟಿ. ಬೇಸಿಕ್ ವ್ಯಾಲ್ಯೂಸ್ ಗೆ ಗೌರವ ಕೊಡುವ, ಪರಸ್ಪರ ಅಭಿಪ್ರಾಯಬೇಧವಿಲ್ಲದ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವಲ್ಲಿ ಬಹುತೇಕರು ಸೋಲ್ತಾರೆ ಅನ್ನೋ ಸತ್ಯವನ್ನ ವಿಲಿಯಮ್ ಪ್ರಸ್ತುತ ಪಡಿಸ್ತಾನೆ. ಅದಕ್ಕೆ ಕಾರಣ ಪ್ರತಿ ಸಂಗಾತಿಯಲ್ಲೂ ಇರುವ terrible, intolerable ಮತ್ತು unacceptable ಗುಣಗಳು. ಈ ಗುಣಗಳನ್ನ ಹೊರಹಾಕಿದ್ರೆ ಪ್ರತಿ ಸಂಸಾರವೂ ಹಿರಿಯರು ಹೇಳುವಂತೆ ಸುಖಸಂಸಾರ. ಇಲ್ಲ ಅಂದ್ರೆ  ದುಃಖ ಸಾಗರ.

ಇನ್ನೊಂದು ಬಹಳ ಮುಖ್ಯವಾದ ವಿಷಯ ಇದೆ. ಯಾವುದೇ ಗಂಡು ಹೆಣ್ಣಿಗೆ  ಮದುವೆ ಮಾಡುವಾಗ  ಜೋಡಿ ಸರಿಹೋಗುತ್ತಾ ಅಂತ ನೋಡ್ತೀವಿ. ಜ್ಯೋತಿಷಿಗಳ ಹತ್ರ ಜಾತಕ ಕೇಳ್ತೀವಿ. ಹಣ ಅಂತಸ್ತು, ಒಳ್ಳೆಯವನಾ ಕೆಟ್ಟವನಾ ಅಂತೆಲ್ಲಾ ನೋಡ್ತೀವಿ. ನಮ್ಮ ಭಾವನೆಗಳು ಮ್ಯಾಚ್ ಆಗುತ್ತವಾ ಅಂತ ಮೇಲ್ನೋಟಕ್ಕಷ್ಟೇ ನೋಡ್ತೀವಿ. ಆದರೆ ಗಮನಿಸಿ ಅದೆಲ್ಲಾ ಶುದ್ಧ ಲಟಕ್ ಪಿಟಕ್. ಲೆಕ್ಕಕ್ಕೆ ಸಿಗದ ರಾಂಗ್ ಕ್ಯಾಲ್ಕ್ಯುಲೇಷನ್ . ನಿಜವಾದ ಮ್ಯಾಚ್ ಶುರುವಾಗೋದು ಮದುವೆ ಆದಮೇಲೆ ಹೊರತು ಮದುವೆಗೆ ಮುಂಚೆ ನಾವು ನೀವು ನೋಡೋದೆಲ್ಲಾ ಅಂದುಕೊಂಡಿದ್ದೆಲ್ಲಾ ಜಸ್ಟ್  ನೀರಿನ ಮೇಲಿನ ಗುಳ್ಳೆ. ಅಲ್ಲಿ  ನಡೆಯುವ ಯಾವ ತೀರ್ಮಾನವೂ ಒಂದು ಅಂದಾಜಿನ ಮೇಲೆ ಆಗಿರುತ್ತೆ ಅಷ್ಟೆ. ಹುಡುಗ ಒಳ್ಳೆಯವನ ಥರ ಕಾಣ್ತಾನೆ ಅನ್ನೋದ್ರಿಂದ ಹಿಡಿದು ಹುಡುಗಿ ಹೊಂದಿಕೊಳ್ಳೋ ಹಾಗಿದ್ದಾಳೆ ಅನ್ನೋ ತನಕ. ಜಸ್ಟ್ ಒಂದು ನಂಬಿಕೆ ಕೆಲಸ ಮಾಡಿರುತ್ತೆ ಅಷ್ಟೆ. ಮದುವೆ ಅಂತ ಆದ್ಮೇಲೇ ಆ ನಂಬಿಕೆ ಉಲ್ಟಾ ಹೊಡೆಯೋದು. ಇದಕ್ಕೆ ಮನಶ್ಶಾಸ್ತ್ರಜ್ಞರು ಹೇಳೋದೇನಂದ್ರೆ ಮದುವೆ ಅನ್ನೋದು finding the right person ಅಲ್ಲವೇ ಅಲ್ಲ. Becoming the right person ಅಂತ.

ಮದುವೆ ಆಗುವಾಗ ಪರಸ್ಪರ ಸರಿಯಾಗಿ ಅರ್ಥ ಆಗದಿದ್ರೆ  ಆದ್ಮೇಲಾದ್ರೂ ಒಳ್ಳೇ ಜೋಡಿಯಾಗಿರಿ ಅನ್ನುತ್ತೆ ಸಮಾಜ. ಇದು ಮದುವೆಯ ಆಶಯ ಕೂಡ ಹೌದು. ಮದುವೆ ಆದ್ಮೇಲೆ ಸರಿ ಹೋಗ್ತಾರೆ ಅನ್ನೋ ನಂಬಿಕೆ ಇನ್ನೂ ನಮ್ಮ ಹಿರಿಯರಲ್ಲಿದೆ. ಆದ್ರೆ ನಂಬಿ, ಮದುವೆ ಆದ್ಮೇಲೆ ಬಹುತೇಕರ ಬದುಕು ಹಳ್ಳ ಹಿಡಿಯೋದು. ಸಂಸಾರ ಮೂರಾಬಟ್ಟೆ ಆಗೋದು. ಯಾಕೆಂದ್ರೆ ಮದುವೆ ಆದ್ಮೇಲೆ ತಾನೆ ಇಬ್ಬರೂ ಏನು ಅಂತ ಅರ್ಥ ಆಗೋದು. ಇದೊಂಥರ ಕೋಸಿನ ಎಲೆ ಬಿಡಿಸಿದ ಹಾಗೆ. ಒಳಗೆಷ್ಟು ಹುಳ ಇರುತ್ತೋ ಬಲ್ಲವರಾರು.ಅಂದ್ರೆ ಅರ್ಥ ಆಗೋಕು ಮೊದಲೇ ಮದುವೆ ಆಗಿರುತ್ತೆ. ಅರ್ಥವಾಗುವಷ್ಟರಲ್ಲಿ ವಿಚ್ಚೇದನದ ದಾರಿಗೆ ಬಂದು ನಿಂತಿರ್ತಾರೆ. ಆಕ್ಷ್ಯುಯಲ್ ಆಗಿ ಹೇಳೋದಾದ್ರೆ ಮೇಡ್ ಫಾರ್ ಈಚ್ ಅದರ್ ಅನ್ನೋ ಜೋಡಿಗಳೂ ಆಂತರ್ಯದಲ್ಲಿ ಮ್ಯಾಚ್ ಲೆಸ್ ಜೋಡಿಗಳೇ ಆಗಿರುತ್ತವೆ ಅಂತಾರೆ ಮನಶ್ಶಾಸ್ತ್ರಜ್ಞರು.

ಮದುವೆ ಆದ್ಮೇಲೆ ಒಂದು ಕಾಮನ್ blame ಇದ್ದೇ ಇರುತ್ತೆ. ‘ನಾನು ಪ್ರೀತಿಸಿದವನನ್ನೇ ಮದುವೆ ಆಗ್ತಿದ್ದೆ. ಅದನ್ನೂ ತಪ್ಪಿಸಿ ಇವನಿಗೆ ಗಂಟಾಕಿದ್ರಿ. ಈಗ ನೋಡು ನಾನು ಜೀವನ ಪೂರ್ತಿ ಸಾಯಬೇಕು’ ಅಂತ ಹುಡುಗಿ ಬಲವಂತವಾಗಿ ಅರೇಂಜ್ ಮ್ಯಾರೇಜ್ ಮಾಡಿಸಿದ ಅಪ್ಪಅಮ್ಮನ ಮುಂದೆ ಹಲುಬುತ್ತಾಳೆ. ಅಪ್ಪ ಅಮ್ಮನ ಮಾತು ಕೇಳ್ದೆ ಇಷ್ಟಪಟ್ಟು ಲವ್ ಮ್ಯಾರೇಜ್ ಮಾಡ್ಕೊಂಡವರದ್ದು ಇನ್ನೊಂದು ಗೋಳು. ಅವರಿಷ್ಟದಂತೆ ಮದ್ವೆ ಆಗಿರೋದ್ರಿಂದ ಯಾರನ್ನೂ ಬ್ಲೇಮ್ ಮಾಡೋ ಹಾಗೂ ಇಲ್ಲ. ಸ್ವಯಂಕೃತ ಅಪರಾಧಕ್ಕೆ ಮದ್ದೆಲ್ಲಿ? ಸಂಸಾರದ ಕೊಂಡ ಹಾಯಲೇಬೇಕು.

ನೀವು ಕೆಲವು ದಂಪತಿಯನ್ನ ಗಮನಿಸಿರಬಹುದು. ಎಂಬತ್ತೋ ತೊಂಬತ್ತೋ ವರ್ಷ ಆಗಿರುತ್ತೆ. ಇನ್ನೂ ಹದಿಹರಯದ ಹುಡುಗ ಹುಡುಗಿ ಥರ ರೊಮ್ಯಾಂಟಿಕ್ ಆಗಿರ್ತಾರೆ. ಒಬ್ಬರನ್ನೊಬ್ಬರು ಬಿಟ್ಟಿರಲ್ಲ. ಇಬ್ಬರೂ ಪರಸ್ಪರ ಗೌರವಿಸ್ತಾರೆ. ಇಬ್ಬರ ಬೇಕು ಬೇಡಗಳನ್ನ ಚೆನ್ನಾಗಿ ಅರಿತುಕೊಂಡಿರ್ತಾರೆ. ಹಾಗಂತ ಇಬ್ಬರ ನಡುವೆ ಮುನಿಸಿಲ್ಲ ಅಂತಿಲ್ಲ. ಆ ಮುನಿಸನ್ನೂ ಮುಳುಗಿಸುವಂಥ ಅದಮ್ಯ ಪ್ರೀತಿ ಅವರ ಎದೆಯಲ್ಲಿದೆ. ಅದು ಅವರ ಬಾಂಧವ್ಯಕ್ಕೆ ಅಡ್ಡಿ ಬಂದಿಲ್ಲ. ಮನಶ್ಶಾಸ್ತ್ರಜ್ಞರು ಹೇಳುವುದೂ ಇದೆ. ಪಾಲಿಗೆ ಬಂದಿದ್ದು ಪಂಚಾಮೃತ. ಅದನ್ನ ಸವಿಯಬೇಕು ಅಷ್ಟೆ. ಮನಸ್ಸಿಗೆ ಇವನು ನನಗೆ ಸರಿಯಾದ ಜೋಡಿಯಲ್ಲ ಅಂತ ಒಮ್ಮೆ ಬಂದುಬಿಟ್ರೆ…ಇವಳು ನನಗೆ ತಕ್ಕ ಹೆಂಡ್ತಿಯಲ್ಲ ಅನ್ನೋ ಹುಳ ತಲೆಯಲ್ಲಿ ಹೊಕ್ಕುಬಿಟ್ರೆ ಅಲ್ಲಿಗೆ ಇಬ್ಬರ ನಡುವೆ ಫೆವಿಕ್ವಿಕ್ ಹಾಕಿ ಅಂಟಿಸಿದ್ರೂ ಮನಸು ಕೂಡಲ್ಲ. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಅದೊಂದು ಒಡೆದ ಮಡಕೆ. ಎಲ್ಲಿ ಕೂಡೀತು ಅಲ್ವ.

ಮೀನೆಕ್ ಅನ್ನೋ ಒಬ್ಬಾತ Everybody Marries the Wrong Person ಅನ್ನೋ ಪುಸ್ತಕ ಬರೆದಿದ್ದಾನೆ. ಅವನ ಪ್ರಕಾರ ನಮ್ಮ ಸಂತೋಷವನ್ನ ನಾವೇ ಹುಡುಕಿಕೊಳ್ಳಬೇಕು. ಅದನ್ನ ನಮ್ಮ ಸಂಗಾತಿಯಿಂದ ಬಯಸೋದು ತಪ್ಪು. ನಿನ್ನಿಂದ ನನಗೆ ಸಂತೋಷ ಸಿಗಲಿಲ್ಲ. ಸುಖ ಸಿಗಲಿಲ್ಲ ಅಂತ ಪಾರ್ಟ್ ನರ್ ನ  ಬ್ಲೇಮ್ ಮಾಡೋದ್ರ ಬದಲು ನಮ್ಮ ಮನಸ್ಥಿತಿಯನ್ನ, ನಮ್ಮ ನಿಷ್ಠೆಯನ್ನ ನಾವೇ ಪ್ರಶ್ನಿಸಿಕೊಳ್ಳಬೇಕು. ಎಂಥದ್ದೇ ಸಮಸ್ಯೆ ಬಂದ್ರೂ ಒಟ್ಟಿಗೆ ಎದುರಿಸುತ್ತೇವೆ ಅಂತ ಅಗ್ನಿಸಾಕ್ಷಿಯಾಗಿ ಮದುವೆ ಆದವ್ರು ಮದುವೆ ಆದ ಮಾರನೆಗೆ ಮುನಿಸಿಕೊಂಡು ಕೂತ್ರೆ ಗತಿ ಏನು? ಶುರುವಿನಲ್ಲೇ ಯಾರ ಸಂಸಾರದಲ್ಲಿ ಅಪಸ್ವರ ಏಳುತ್ತೋ ಆ ಸಂಸಾರದ ದೋಣಿ ಕೊನೆ ತನಕ ಸಾಗೋದು ಕಷ್ಟ ಕಷ್ಟ.

ಸರಿ ತಾನೆ!

ರವಿ ಅಜ್ಜೀಪುರ

Please follow and like us: